School power guarantee: ಶಾಲೆಗಳಿಗೆ ಉಚಿತ ವಿದ್ಯುತ್‌ ಘೋಷಿಸಿದ ಸಿಎಂ, ಆದೇಶ ಮಾಡಿಸುವುದನ್ನೇ ಮರೆತರು: ಬಿಲ್‌ ಬವಣೆ ತಪ್ಪಿಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  School Power Guarantee: ಶಾಲೆಗಳಿಗೆ ಉಚಿತ ವಿದ್ಯುತ್‌ ಘೋಷಿಸಿದ ಸಿಎಂ, ಆದೇಶ ಮಾಡಿಸುವುದನ್ನೇ ಮರೆತರು: ಬಿಲ್‌ ಬವಣೆ ತಪ್ಪಿಲ್ಲ

School power guarantee: ಶಾಲೆಗಳಿಗೆ ಉಚಿತ ವಿದ್ಯುತ್‌ ಘೋಷಿಸಿದ ಸಿಎಂ, ಆದೇಶ ಮಾಡಿಸುವುದನ್ನೇ ಮರೆತರು: ಬಿಲ್‌ ಬವಣೆ ತಪ್ಪಿಲ್ಲ

Free power to schools ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡುವುದು ಇಂದಿನಿಂದಲೇ ಜಾರಿ ಎಂದು ಸಿಎಂ ಸಿದ್ದರಾಮಯ್ಯ( CM siddaramaiah) ಹೇಳಿಕೆ ನೀಡಿದ್ದರು. ಅದನ್ನು ಅವರೂ ಮರೆತರು. ಆದೇಶವೂ ಬರಲಿಲ್ಲ. ಬಿಲ್‌ ಬರುತ್ತಲೇ ಇದೆ.

ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡುವ ಘೋಷಣೆಯನ್ನೇನೋ ಸಿಎಂ ಮಾಡಿದರು. ಈವರೆಗೂ ಆದೇಶ ಮಾತ್ರ ಜಾರಿಯಾಗಿಲ್ಲ.
ಶಾಲೆಗಳಿಗೆ ಉಚಿತ ವಿದ್ಯುತ್‌ ನೀಡುವ ಘೋಷಣೆಯನ್ನೇನೋ ಸಿಎಂ ಮಾಡಿದರು. ಈವರೆಗೂ ಆದೇಶ ಮಾತ್ರ ಜಾರಿಯಾಗಿಲ್ಲ.

ಮಂಗಳೂರು: ಶಾಲೆಗಳ ವಿದ್ಯುತ್‌ ಬಿಲ್‌ ಮನ್ನಾ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು. ಇದು ಸರ್ಕಾರಿ ಆದೇಶ ಆಗಲಿಲ್ಲ. ಬಿಲ್‌ ಬರುವುದು ತಪ್ಪಲಿಲ್ಲ. ಶಾಲಾ ಮಕ್ಕಳು ಗ್ಯಾರಂಟಿ ಭಾಷಣವನ್ನು ಕೇಳಿದ್ದಷ್ಟೇ ಬಂತು !

ಸರಕಾರಿ ಶಾಲೆಗಳಿಗೆ ವಿದ್ಯುತ್ ಬಿಲ್ ಗಳು ಎಂದಿನಂತೆಯೇ ಬಂದಿವೆ. ಅವುಗಳನ್ನು ಕಟ್ಟುವ ಕೊನೆಯ ದಿನಾಂಕವನ್ನೂ ನಮೂದಿಸಲಾಗಿದೆ. ಮುಖ್ಯಮಂತ್ರಿಗಳು ನವೆಂಬರ್ 1ರಂದು ಘೋಷಣೆ ಮಾಡಿದ ‘ತಕ್ಷಣ ಜಾರಿ’ ಘೋಷಣೆ ಯಾವಾಗ ಆಗುತ್ತದೆ ಎಂಬುದನ್ನು ಸರಕಾರಿ ಶಾಲೆಗಳು ಕಾಯುತ್ತಿವೆ.

ನವೆಂಬರ್ 1ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸ್ಥಳೀಯರ ಪೋಷಕ ಸಮಿತಿಗೆ ಸಂತಸ ತರುವ ಮಾತಾಡಿದ್ದರು.

ಶಿಕ್ಷಣ ಇಲಾಖೆಯ ಹಲವು ವರ್ಷಗಳ ಮನವಿಯನ್ನು ಪುರಸ್ಕರಿಸಿ ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳಿಗೆ ತಕ್ಷಣದಿಂದಲೇ ಉಚಿತ ವಿದ್ಯುತ್ ಸಂಪರ್ಕ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ತಿಳಿಸಿದ್ದರು.

ರಾಜ್ಯ ಸರಕಾರ ನುಡಿದಂತೆ ನಡೆದಿದೆ, ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದಂತೆ ರಾಜ್ಯದಲ್ಲಿ ಐದು ಗ್ಯಾರಂಟಿಗಳ ಪೈಕಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದೆ, ಇದರ ಜತೆಗೆ ಶಿಕ್ಷಣ ಇಲಾಖೆಯ ಮನವಿಯನ್ನು ಪರಿಗಣಿಸಿ, ಸರಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗುವುದು. ಎಂದು ಅಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದರು. ಇದುವರೆಗೆ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡಿದ್ದ ಸಿಎಂ, ಇದನ್ನೂ ಜಾರಿ ಮಾಡಬಹುದು ಎಂಬ ಯೋಚನೆಯಲ್ಲಿ ಶಾಲೆಗಳು ಇದ್ದರೆ, ಆ ಹೇಳಿಕೆ ವೇದಿಕೆಗಷ್ಟೇ ಸೀಮಿತವಾಯಿತೇ ಎಂಬಂತಾಗಿದೆ.

ಎಸ್ಕಾಂಗಳಿಗೆ ವಿಷಯವೇ ಗೊತ್ತಿಲ್ಲ

ಈ ಕುರಿತು HTಕನ್ನಡ ಪ್ರತಿನಿಧಿ ಮೆಸ್ಕಾಂ (ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ)ದ ಎಂ.ಡಿ. ಡಿ.ಪದ್ಮಾವತಿ ಅವರನ್ನು ಸಂಪರ್ಕಿಸಿ ಯೋಜನೆ ಜಾರಿ ಕುರಿತು ಏನಾದರೂ ಪ್ರಗತಿಯಾಗಿದೆಯೇ ಎಂದು ಪ್ರಶ್ನಿಸಿದಾಗ, ಅವರು ಹೇಳಿದ್ದಿಷ್ಟು.. ‘’ಅಂಥ ಯಾವುದೇ ಸರ್ಕ್ಯುಲರ್ ನಮಗೆ ಬಂದಿಲ್ಲ’’

ಹಾಗಾದರೆ ಮುಖ್ಯಮಂತ್ರಿ ಹೇಳಿಕೆ ನೀಡಿ ಹಾಗೆಯೇ ಮರೆತುಬಿಟ್ಟರೇ? ಇದುವರೆಗೂ ಶಾಲೆಗಳಿಗೆ ವಿದ್ಯುತ್ ಮತ್ತು ನೀರು ಉಚಿತ ಸರಬರಾಜು ಜಾರಿಯ ಕುರಿತು ಯಾವುದೇ ಪ್ರಕ್ರಿಯೆಗಳು ಯಾಕೆ ಆಗಿಲ್ಲ ಎಂಬುದಕ್ಕೆ ಅವರೇ ಉತ್ತರಿಸಬೇಕು.

ಯಾಕೆ ಉಚಿತ ನೀಡಬೇಕು?

ಈಗಾಗಲೇ ಗೃಹಜ್ಯೋತಿ ವಿದ್ಯುತ್ ಜನಪ್ರಿಯವಾಗುತ್ತಿದೆ. ಸರಕಾರವನ್ನು ತೆಗಳುವವರೂ, ಗ್ಯಾರಂಟಿಯನ್ನು ಟೀಕಿಸುವವರೂ ಗೃಹಜ್ಯೋತಿಗೆ ಅರ್ಜಿ ಹಾಕಿ ಪಡೆದುಕೊಂಡಿದ್ದಾರೆ. ದುಡ್ಡಿದ್ದವರೂ ಇಲ್ಲದವರಿಗೂ ಸಮಾನವಾಗಿ ಈ ಯೋಜನೆ ಜಾರಿಯಾಗುತ್ತಿದೆ. ಆದರೆ ಸರಕಾರಿ ಶಾಲೆಗಳಿಗೆ ಕೊಟ್ಟರೆ ನಿಜವಾಗಿಯೂ ಅರ್ಹರಿಗೆ ದೊರೆತಂತಾಗುತ್ತದೆ. ಇಲ್ಲಿಗೆ ಬರುವ ಮಕ್ಕಳಲ್ಲಿ ಬಹುಪಾಲು ಬಡವರು. ಒಂದು ಪುಸ್ತಕ ಖರೀದಿಗೂ ಬೇಡುವ ಪರಿಸ್ಥಿತಿ. ಪೋಷಕರಲ್ಲೇ ಎಸ್.ಡಿ.ಎಂ.ಸಿ. ಆಯ್ಕೆಯಾಗುತ್ತದೆ. ಶಾಲೆಗಳಿಗೆ ಸರಕಾರ ನೀಡುವ ಅನುದಾನ ತೀರಾ ಕಡಿಮೆ. ಇವುಗಳಲ್ಲೇ ವಿದ್ಯುತ್ ಬಿಲ್ ಹೊಂದಾಣಿಕೆ ಮಾಡಬೇಕು. ಅದರಲ್ಲೂ ಕೆಲವೊಂದು ಸ್ವಯಂಸೇವಾ ಸಂಸ್ಥೆಗಳು, ಶಾಲೆಗಳ ಮೇಲಿನ ಪ್ರೀತಿಯಿಂದ ವಿದ್ಯುತ್ ಚಾಲಿತ ಉಪಕರಣಗಳನ್ನು ಒದಗಿಸುತ್ತಾರೆ. ಅವುಗಳನ್ನು ಚಾಲೂ ಮಾಡಬೇಕಾದರೆ, ಕರೆಂಟ್ ಬೇಕು. ಆದರೆ ಕರೆಂಟ್ ಕಟ್ಟಲೂ ಕಾಸಿಲ್ಲ ಎಂಬಂತಾಗಿದೆ ಸ್ಥಿತಿ.

ಬಹುತೇಕ ಶಾಲೆಗಳಲ್ಲಿ ಶಿಕ್ಷಕರೇ ಸ್ವಂತ ಹಣದಿಂದ ಕರೆಂಟ್ ಬಿಲ್ ಕಟ್ಟುವ ಪರಿಸ್ಥಿತಿ ಇದೆ. ಇಡೀ ಕರ್ನಾಟಕದಲ್ಲಿ 49,679 ಸರಕಾರಿ ಶಾಲೆಗಳಿವೆ. ಇವುಗಳ ಪೈಕಿ 21,045 ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು 22,086 ಹಿರಿಯ ಪ್ರಾಥಮಿಕ ಶಾಲೆಗಳು ಸೇರಿವೆ. ಇನ್ನು 6 ಸಾವಿರದಷ್ಟು ಪ್ರೌಢಶಾಲೆಗಳಿವೆ. ಇವುಗಳಿಗೆಲ್ಲಾ ಯೋಜನೆಯಿಂದ ಲಾಭವಾಗುತ್ತದೆ.

ಸಮುದಾಯದ ಸಹಭಾಗಿತ್ವದಿಂದ ಶಾಲೆ ಮುನ್ನಡೆಸಿ ಎಂಬ ಉಚಿತ ಸಲಹೆಗಳನ್ನು ಜನಪ್ರತಿನಿಧಿಗಳು ನೀಡುತ್ತಾರೆ. ಆದರೆ ಅವುಗಳನ್ನು ಜಾರಿ ಮಾಡುವುದು ಯಾವಾಗ ಎಂದು ಶಾಲೆಯವರು ಕಾಯುತ್ತಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

(ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)

Whats_app_banner