ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ; ಕೈ ಮುಗಿದು ಒಳಗೆ ಬನ್ನಿ ಅಲ್ಲ, ಚರ್ಚೆಗೀಡಾಗಿದೆ ವಸತಿ ಶಾಲೆಗಳ ಪ್ರವೇಶ ದ್ವಾರದ ಘೋಷ ವಾಕ್ಯ
ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ; ಕೈ ಮುಗಿದು ಒಳಗೆ ಬನ್ನಿ ಅಲ್ಲ. ಕರ್ನಾಟಕ ಸರ್ಕಾರದ ವಸತಿ ಶಾಲೆಗಳ ಪ್ರವೇಶ ದ್ವಾರದ ಘೋಷ ವಾಕ್ಯ ಚರ್ಚೆಗೀಡಾಗಿದೆ. ಕೈ ಮುಗಿದು ಒಳಗೆ ಬನ್ನಿ ಎಂಬ ಪದಗಳನ್ನು ತೆಗೆದುಹಾಕಿರುವುದು ಚರ್ಚೆಗೆ ಒಳಗಾಗಿದ್ದು, ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರಿ ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿಈ ಹಿಂದೆ ಇದ್ದ ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಘೋಷವಾಕ್ಯದ ಜಾಗದಲ್ಲಿ “ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಘೋಷವಾಕ್ಯ ಸ್ಥಾನ ಪಡೆದುಕೊಂಡಿದೆ. ಅದರ ಜೊತೆಗೆ ಶಿಕ್ಷಕರನ್ನು ಗೌರವಿಸಿ ಎಂಬ ಘೋಷ ವಾಕ್ಯವೂ ಗಮನಸೆಳೆದಿದೆ.
ಕೈ ಮುಗಿದು ಒಳಗೆ ಬನ್ನಿ ಎಂಬ ಹಳೆಯ ಘೋಷವಾಕ್ಯದ ಭಾಗಕ್ಕೆ ಕತ್ತರಿ ಪ್ರಯೋಗ ಆಗಿರುವುದು, ಹೊಸ ಘೋಷ ವಾಕ್ಯ ಬಳಕೆ ವ್ಯಾಪಕ ಚರ್ಚೆಗೆ ಒಳಗಾಗಿದೆ. ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿನ ಘೋಷವಾಕ್ಯವನ್ನು ಸದ್ದಿಲ್ಲದೆ ಬದಲಾಯಿಸಲಾಗಿದೆ.
ಈ ವಸತಿ ಶಾಲಾ-ಕಾಲೇಜುಗಳ ಪ್ರವೇಶ ದ್ವಾರದಲ್ಲಿ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ' ಎಂಬ ಘೋಷವಾಕ್ಯ ಹಲವಾರು ವರ್ಷಗಳಿಂದ ಇದ್ದು, ಎಲ್ಲರಿಗೂ ಅದು ರೂಢಿಯಾಗಿತ್ತು. ಆದರೆ, ಈಗ ಅದನ್ನು 'ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ' ಎಂದು ಬದಲಾಯಿಸಲಾಗಿದೆ. ಇಲಾಖೆಯ ಈ ಕ್ರಮ ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳಿಂದ ಪ್ರೇರಣೆ ಹಿಂದಿನ ಘೋಷವಾಕ್ಯವನ್ನು ಆಯ್ಕೆ ಮಾಡಲಾಗಿತ್ತು.
ವಿಶೇಷ ಎಂದರೆ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂಬ ಘೋಷವಾಕ್ಯದ ಜತೆಗೆ ಶಿಕ್ಷಕರನ್ನು ಗೌರವಿಸಿ ಎಂಬ ಘೋಷ ವಾಕ್ಯವೂ ಇರುವುದು ಚರ್ಚೆಗೆ ಇನ್ನಷ್ಟು ಗ್ರಾಸವನ್ನು ಒದಗಿಸಿದೆ.
ವಸತಿ ಶಾಲೆಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು ಇರುವ ಗ್ರೂಪ್‌ನಲ್ಲೇನು ನಡೆಯಿತು ಚರ್ಚೆ
ವಸತಿ ಶಾಲೆಗಳ ಪ್ರವೇಶದ್ವಾರದಲ್ಲಿರುವ ಘೋಷ ವಾಕ್ಯ ಬದಲಾವಣೆಗೆ ಮುನ್ನ ವಸತಿ ಶಾಲೆಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು ಮತ್ತು ಇಲಾಖೆಯ ಉನ್ನತಾಧಿಕಾರಿಗಳು ಇರುವ ಗ್ರೂಪ್‌ನಲ್ಲಿ ಚರ್ಚೆ ನಡೆಯಿತು. ಕೈ ಮುಗಿದು ಒಳಗೆ ಬಾ ಎಂಬುದು ಗುಲಾಮಿತನವನ್ನು ಬಿಂಬಿಸುವ ಸಾಲು ಎಂಬುದು ಚರ್ಚೆಯ ಕೇಂದ್ರಬಿಂದುವಾಗಿತ್ತು.
ಈ ಚರ್ಚೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಕ್ಯಾಪ್ಟನ್ ಮಣಿವಣ್ಣನ್ ಅವರು ಬಹಳ ಚರ್ಚೆಯ ಬಳಿಕ ಒಬ್ಬರು ಶಿಕ್ಷಕರು ಸೂಚಿಸಿದ್ದ “ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಘೋಷ ವಾಕ್ಯವನ್ನು ಅಂತಿಮಗೊಳಿಸಿದ್ದರು. ಇದರಂತೆ, ಶಾಲೆಯ ಪ್ರವೇಶದ್ವಾರದ ಘೋಷವಾಕ್ಯ ಬದಲಾಯಿಸುವುದನ್ನು ವಸತಿ ಶಾಲೆಗಳ ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು ಖಾತರಿಗೊಳಿಸಿದ್ದರು.
ರಾಘವೇಂದ್ರ ಸ್ವಾಮಿ ಅವರು ನೀಡಿದ ಘೋಷ ವಾಕ್ಯವನ್ನು ಕ್ಯಾಪ್ಟನ್ ಮಣಿವಣ್ಣನ್ ಅಂತಿಮಗೊಳಿಸಿದ್ದು, ಗೌರವ ಎನ್ನುವುದು ಕೇಳಿ ಪಡೆಯುವಂಥದ್ದಲ್ಲ. ಅದು ಅದಾಗಿಯೇ ಬರಬೇಕು. ನನಗೆ ಇದು ಇಷ್ಟವಾಯಿತು ಎಂಬ ಟಿಪ್ಪಣಿಯನ್ನು ಗ್ರೂಪ್‌ನಲ್ಲಿ ಶೇರ್ ಮಾಡಿದ್ದರು.
ಕೈ ಮುಗಿದು ಒಳಗೆ ಬಾ ಎಂಬ ವಾಕ್ಯದ ಕುರಿತಾದ ಚರ್ಚೆಯಲ್ಲಿ ಕ್ಯಾಪ್ಟನ್ ಮಣಿವಣ್ಣನ್ ಅವರು, ಮುಖ್ಯಶಿಕ್ಷಕರೊಬ್ಬರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ನೀವು ಹೇಳಿದ್ದು ಸರಿಯಾಗಿದೆ. ಶಾಲೆ ಎಂಬುದು ಜ್ಞಾನ ದೇಗುಲ. ಪ್ರಶ್ನಿಸುವುದಕ್ಕೆ ಅವಕಾಶ ಇರಬೇಕು, ಚರ್ಚೆ ನಡೆಯಬೇಕು ಆಗ ಮಾತ್ರವೇ ಜ್ಞಾನ ವೃದ್ಧಿ ಸಾಧ್ಯವಾಗುತ್ತದೆ. ನಮ್ಮ ಮಕ್ಕಳ ಜ್ಞಾನ ವೃದ್ಧಿಯಾಗಬೇಕು. ಇದು ನಮ್ಮ ಉದ್ದೇಶ ಎಂದು ಟಿಪ್ಪಣಿ ಹಾಕಿರುವುದು ಕಂಡುಬಂದಿದೆ.
ಮತ್ತೊಬ್ಬರು ಶಿಕ್ಷಕರು “ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ” ಎಂಬ ಘೋಷವಾಕ್ಯಕ್ಕೆ “ಶಿಕ್ಷಕರನ್ನು ಗೌರವಿಸಿ” ಎಂದು ಸೇರಿಸಿ ಸುಧಾರಣೆಗೆ ಸಲಹೆ ನೀಡಿದ್ದರು. ಅದನ್ನು ಗಮನಿಸಿದ ಕ್ಯಾಪ್ಟನ್ ಮಣಿವಣ್ಣನ್ ಮೆಚ್ಚುಗೆ ಸೂಚಿಸಿದ್ದಲ್ಲದೆ, ಎಲ್ಲರೂ “ಜ್ಞಾನದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಶಿಕ್ಷಕರನ್ನು ಗೌರವಿಸಿ” ಘೋಷ ವಾಕ್ಯ ಬಳಕೆ ಮಾಡಲು ಸೂಚಿಸಿರುವುದು ಕಂಡುಬಂದಿದೆ.
ವಿಜಯಪುರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಿಂದ ಸ್ಪಷ್ಟೀಕರಣ
ಕ್ರೈಸ್ ಅಧೀನ ಇರುವಂತಹ ವಸತಿ ಶಾಲೆಗಳ ಪ್ರವೇಶದ್ವಾರದ ಘೋಷ ವಾಕ್ಯ ಚರ್ಚೆಗೀಡಾದ ಬೆನ್ನಿಗೆ, ವಿಜಯಪುರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುಂಡಲೀಕ ಮಾನವರ ಟಿವಿ ಮಾಧ್ಯಮಗಳ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಒಟ್ಟು 23 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿವೆ. ಈ ಪೈಕಿ ಎರಡು ಶಾಲೆಗಳಲ್ಲಿ ಮಾತ್ರ ಘೋಷವಾಕ್ಯ ಬದಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರ ಸೂಚನೆ ಮೇರೆಗೆ ಈ ಬದಲಾವಣೆ ಆಗುತ್ತಿದೆ. ಅವರು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಟೆಲಿಗ್ರಾಂ ಗ್ರೂಪ್‌ನಲ್ಲಿ ಎಲ್ಲರೊಂದಿಗೆ ಚರ್ಚಿಸಿ ನೀಡಿರುವ ಸೂಚನೆ ಮೇರೆಗೆ ವಸತಿ ಶಾಲೆಯ ಪ್ರಾಂಶುಪಾಲರು ಈ ಕ್ರಮ ತೆಗೆದುಕೊಂಡಿದ್ದಾರೆ. ಕುವೆಂಪು ಮತ್ತು ಅವರ ಸಾಹಿತ್ಯದ ಕುರಿತು ಅಪಾರ ಗೌರವ ಎಲ್ಲರಿಗೂ ಇದೆ. ಅವರಿಗೆ ಅಗೌರವ ತರುವ ಉದ್ದೇಶ ಇದರಲ್ಲಿ ಇಲ್ಲ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)