ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಜ್ಞಾನವಿ ರಾಜ್ಯಕ್ಕೆ ಟಾಪರ್; ‘ನಾನು ಜಾಲತಾಣ, ಮೊಬೈಲ್‌ನಿಂದ ದೂರ ದೂರ’
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಸಲವೂ ಯುವತಿಯಲೇ ಮೇಲುಗೈ ಸಾಧಿಸಿದ್ದಾರೆ. ವಾಣಿಜ್ಯ ವಿಭಾಗದಿಂದ ಜ್ಞಾನವಿ ರಾಜ್ಯಕ್ಕೆ ಮೊದಲ ರ್ಯಾಂಕ್ ಬಂದಿದ್ದಾರೆ. 597 ಅಂಕ ಪಡೆದುಕೊಂಡಿದ್ದಾರೆ.
PU Commerce Result: ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಈ ಸಲವೂ ಯುವತಿಯಲೇ ಮೇಲುಗೈ ಸಾಧಿಸಿದ್ದಾರೆ. ಈ ಸಲದ ಎರಡನೇ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 6,81,079 ವಿದ್ಯಾರ್ಥಿಗಳು ಹಾಜರಾಗಿದ್ದರು. ಆ ಪೈಕಿ 5,52,690 ವಿದ್ಯಾರ್ಥಿಗಳು ಈ ಸಲದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇಕಡಾವಾರು ಪ್ರಮಾಣದಲ್ಲಿ ಹೋಲಿಕೆ ಮಾಡಿದರೆ, ಕಳೆದ ವರ್ಷ 74.67 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಈ ಸಲ ಶೇ. 6.48 ಹೆಚ್ಚಿಸಿಕೊಂಡು ಶೇ. 81.15ಕ್ಕೆ ಏರಿಕೆಯಾಗಿದೆ.
ಒಟ್ಟಾರೆಯಾಗಿ ಈ ಸಲದ 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಆ ಪೈಕಿ. 3.3 ಲಕ್ಷ ಬಾಲಕರು, 3.6 ಲಕ್ಷ ಬಾಲಕಿಯರು ತೇರ್ಗಡೆಯಾಗಿದ್ದಾರೆ. ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳ ಪೈಕಿ ವಾಣಿಜ್ಯ ವಿಭಾಗದಲ್ಲಿಯೂ ಯುವತಿಯರೇ ಮೇಲುಗೈ ಸಾಧಿಸಿದ್ದಾರೆ. ವಾಣಿಜ್ಯದಲ್ಲಿ ವಿಭಾಗದಲ್ಲಿ ಈ ಸಲ 1,74,315 ಲಕ್ಷ ವಿದ್ಯಾರ್ಥಿಗಳು ಈ ಸಲದ ಪರೀಕ್ಷೆ ಬರೆದಿದ್ದರು. ತುಮಕೂರಿನ ಜ್ಞಾನವಿ ಈ ಬಾರಿಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ಒಟ್ಟು 597 ಅಂಕ ಪಡೆದು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.
ಜಾಲತಾಣದಿಂದ ನಾನು ದೂರ..
ರಾಜ್ಯಕ್ಕೆ ಮೊದಲ ಸ್ಥಾನ ಬಂದ ಜ್ಞಾನವಿ, ಈ ಯಶಸ್ಸಿನ ಹಿಂದಿನ ಶ್ರಮ ಹೇಗಿತ್ತು ಎಂಬುದನ್ನು ಹೇಳಿಕೊಂಡಿದ್ದಾರೆ. "ಅರ್ಥಶಾಸ್ತ್ರ ನನ್ನ ಇಷ್ಟದ ವಿಷಯ. ನಾನು ಹಾಸ್ಟೆಲ್‌ನಲ್ಲಿದ್ದೆ. ಚೆನ್ನಾಗಿ ಸಿದ್ಧತೆ ಮಾಡಿಕೊಂಡಿದ್ದೆ. ತುಮಕೂರು ವಿದ್ಯಾನಿಧಿ ಕಾಲೇಜಿನ ವಿದ್ಯಾರ್ಥಿನಿ. ಸೋಷಿಯಲ್ ಮೀಡಿಯಾದಿಂದ, ಮೊಬೈಲ್‌ನಿಂದ ದೂರ ಇದ್ದೆ. ಬೆಳಿಗ್ಗೆ ಮತ್ತು ಸಂಜೆಗೆ ಕಾಲೇಜಿನಲ್ಲಿ ತರಗತಿ ಅವಧಿ ಮುಗಿದ ನಂತರವೂ ಓದುತ್ತಿದ್ದೆ. ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆಗಳನ್ನು ಮಾಡುತ್ತಿದ್ದರು. ಇದರಿಂದ ಸಹಾಯವಾಯಿತು. ಮುಂದೆ ಸಿಎ ಮಾಡಬೇಕು ಎನ್ನುವ ಆಸೆಯಿದೆ" ಎಂದಿದ್ದಾರೆ.
ಗಮನಸೆಳೆದ ಅಂಶಗಳು
ಒಟ್ಟಾರೆ ಶೇ 81.15 ಉತ್ತೀರ್ಣ ಪ್ರಮಾಣ
ಕಲಾ ವಿಭಾಗ: 1,28,448 ಉತ್ತೀರ್ಣರಾದವರು
ವಾಣಿಜ್ಯದಲ್ಲಿ 1.74,315 ಉತ್ತೀರ್ಣರಾದವರು
ವಿಜ್ಞಾನ ವಿಭಾಗ: 2,49,927 ಉತ್ತೀರ್ಣರಾದವರು
ಜಿಲ್ಲಾವಾರು ಉತ್ತೀರ್ಣ ಪ್ರಮಾಣ
1) ದಕ್ಷಿಣ ಕನ್ನಡ - 97.33
2) ಉಡುಪಿ - 96.8
3) ವಿಜಯಪುರ -94.89
4) ಉತ್ತರ ಕನ್ನಡ - 92.51
5) ಕೊಡಗು - 92.13
6) ಬೆಂಗಳೂರು ದಕ್ಷಿಣ - 89.57
7) ಬೆಂಗಳೂರು ಉತ್ತರ - 88.67
8) ಶಿವಮೊಗ್ಗ - 88.58
9) ಚಿಕ್ಕಮಗಳೂರು - 88.20
10) ಬೆಂಗಳೂರು ಗ್ರಾಮಾಂತರ - 87.55