ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9, 11ನೇ ತರಗತಿ ಬೋರ್ಡ್ ಎಕ್ಸಾಂ ತೀರ್ಪಿಗಾಗಿ ಹೆಚ್ಚುತ್ತಿರುವ ನಿರೀಕ್ಷೆ, ಕಳೆದ ವರ್ಷ ತೀರ್ಪು ಹೀಗಿತ್ತು
ಕರ್ನಾಟಕ ಬೋರ್ಡ್ ಪರೀಕ್ಷೆ; ವಿಶೇಷವಾಗಿ ಕರ್ನಾಟಕ ಸರ್ಕಾರ ಈ ಬಾರಿ ನಡೆಸಲು ಉದ್ದೇಶಿಸಿದ್ದ 5,8,9, 11ನೇ ತರಗತಿ ಬೋರ್ಡ್ ಎಕ್ಸಾಂ ಕುರಿತು ಕರ್ನಾಟಕ ಹೈಕೋರ್ಟ್ ನೀಡುವ ತೀರ್ಪಿಗಾಗಿ ನಿರೀಕ್ಷೆ ಹೆಚ್ಚಾಗಿದೆ. ಕಳೆದ ವರ್ಷವೂ ಇತ್ತು ಇದೇ ಸಮಸ್ಯೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯದ ಪಠ್ಯಕ್ರಮ ಅನುಸರಿಸುವ ಸರ್ಕಾರಿ, ಅನುದಾನಿತ ಮತ್ತು ಮತ್ತು ಅನುದಾನ ರಹಿತ ಶಾಲೆಗಳ 5,8,9, 11ನೇ ತರಗತಿ ಕರ್ನಾಟಕ ಬೋರ್ಡ್ ಪರೀಕ್ಷೆ ಕುರಿತಾದ ಕರ್ನಾಟಕ ಹೈಕೋರ್ಟ್ ತೀರ್ಪು ಯಾವಾಗ ಬರಬಹುದು ಎಂಬ ನಿರೀಕ್ಷೆ ಹೆಚ್ಚಾಗಿದೆ. ಗೊಂದಲ ಆತಂಕಗಳ ನಡುವೆ ಪಾಲಕರು ವಿದ್ಯಾರ್ಥಿಗಳು, ಶಿಕ್ಷಕರು ಏನಾಗುವುದೋ ಎಂಬ ಕಳವಳದಲ್ಲಿದ್ದಾರೆ.
ವಿಶೇಷ ಎಂದರೆ 5,8,9, 11ನೇ ತರಗತಿ ಬೋರ್ಡ್ ಪರೀಕ್ಷೆಗೆ ಸಂಬಂಧಿಸಿದ ಈ ಗೊಂದಲ, ಸಮಸ್ಯೆ ಕಳೆದ ವರ್ಷವೂ ಇತ್ತು. ಅಂದು ಕೂಡ "ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ' ಹಾಗೂ “ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ' ಶಾಲಾ ಶಿಕ್ಷಣ ಇಲಾಖೆಯ ನಿರ್ಧಾರ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದವು. ಅಂದಿನ ಸಮಸ್ಯೆ ಕಡೆಗೊಂದು ನೋಟ ಇಲ್ಲಿದೆ.
5 ಮತ್ತು8 ನೇ ತರಗತಿಗೆ ಬೋರ್ಡ್ ಪರೀಕ್ಷೆ; ಕಳೆದ ವರ್ಷ ಎದುರಾಗಿತ್ತು ಇದೇ ಸಮಸ್ಯೆ
ಕರ್ನಾಟಕದಲ್ಲಿ ಕಳೆದ ವರ್ಷವೂ 5 ಮತ್ತು 8ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಎದುರಾಗಿತ್ತು ಇದೇ ಸಮಸ್ಯೆ. ಹೌದು, ಶಾಲಾ ಶಿಕ್ಷಣ ಇಲಾಖೆಯು 5 ಮತ್ತು 8ನೇ ತರಗತಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಗೆ ನಿಗದಿಪಡಿಸಿ 'ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ-2009 ರ ಪ್ರಕಾರ, ಬೋರ್ಡ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿತ್ತು. ಆ ಅಧಿಸೂಚನೆಯನ್ನೂ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ' (ರುಪ್ಪಾ) ಹಾಗೂ “ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ' (ಅವರ್ ಸ್ಕೂಲ್) ಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.
ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದ ಕಾರಣ, ಅದರ ವಿಚಾರಣೆ ನಡೆಸಿ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಅವರ ನ್ಯಾಯಪೀಠವು 2023ರ ಫೆಬ್ರವರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಸೂಚನೆಯನ್ನು ರದ್ದುಗೊಳಿಸಿತು. ಕರ್ನಾಟಕ ಸರ್ಕಾರ, ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿತು. ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆಗೆ ಎತ್ತಿಕೊಂಡಿತು. ಅಂದು ಪರೀಕ್ಷೆಗೆ ಎರಡು-ಮೂರು ದಿನಗಳಷ್ಟೇ ಇದ್ದ ಕಾರಣ ಪರೀಕ್ಷೆಗಳು ನಡೆಯಲಿ. ಆದರೆ, ಫಲಿತಾಂಶ ಮೇಲ್ಮನವಿಗೆ ಸಂಬಂಧಿಸಿ ನ್ಯಾಯಾಲಯದ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ವಿಭಾಗೀಯ ನ್ಯಾಯಪೀಠ ಹೇಳಿತ್ತು. ಈ ಮಧ್ಯೆ ಮೇಲ್ಮನವಿಯನ್ನು ಸರ್ಕಾರ ವಾಪಸ್ ಪಡೆದುಕೊಂಡಿತ್ತು.
ಮಾರ್ಚ್ 6 ರ ತೀರ್ಪು ಕಳೆದ ವರ್ಷದ ತೀರ್ಪಿಗೆ ಕೊಟ್ಟಿದೆ ಅಂತಿಮ ಸ್ವರೂಪ
ಈಗ 2024ರ ಮಾ.6 ರಂದು ನೀಡಿರುವ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ ತೀರ್ಪಿನ ಮೂಲಕ ಕಳೆದ ವರ್ಷ ಫೆಬ್ರವರಿಯಲ್ಲಿ ನೀಡಿದ್ದ ತೀರ್ಪು ಸಹ ಅಂತಿಮ ಸ್ವರೂಪ ಪಡೆದುಕೊಂಡಂತಾಗಿತ್ತು ಎಂದು ಶಿಕ್ಷಣ ಪರಿಣತರು ಹೇಳಿದ್ದಾರೆ.
ಆದರೆ ವಿಭಾಗೀಯ ಪೀಠ ಇದನ್ನು ರದ್ದುಗೊಳಿಸಿದೆ. ಪ್ರಕರಣ ಸುಪ್ರೀಂ ಕೋರ್ಟ್‌ಗೆ ಹೋಗಿ ಪುನಃ ಹೈಕೋರ್ಟ್ ವಿಭಾಗೀಯ ಪೀಠದಲ್ಲೇ ವಿಚಾರಣೆ ಮುಗಿಸಿದೆ. ತೀರ್ಪಿಗಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ.
(This copy first appeared in Hindustan Times Kannada website. To read more like this please logon to kannada.hindustantimes.com)