ಕನ್ನಡ ಸುದ್ದಿ  /  Karnataka  /  Education News Karnataka Govt To Resume Board Exams For Classes 5 8 9 From March 25 Rupsa To Move Sc Uks

ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಬೋರ್ಡ್ ಎಕ್ಸಾಂ ಮಾರ್ಚ್ 25ರಿಂದ ಮತ್ತೆ ಶುರು; ಸುಪ್ರೀಂ ಕೋರ್ಟ್‌ಗೆ ರುಪ್ಸಾ

ಕರ್ನಾಟಕದ 5,8,9 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅನುಮತಿ ನೀಡಿದ್ದು, ನಾಳೆ (ಮಾರ್ಚ್ 25) ಪರೀಕ್ಷೆ ಮತ್ತೆ ಶುರುವಾಗಲಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಇದು ನಡೆಯುತ್ತಿದೆ. ಈ ನಡುವೆ, ರುಪ್ಸಾ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದು, ಅದರ ವಿಚಾರಣೆ ಈಗ ಮತ್ತೆ ಕುತೂಹಲ ಕೆರಳಿಸಿದೆ.

ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಬೋರ್ಡ್ ಎಕ್ಸಾಂ ಮಾರ್ಚ್ 25ರಿಂದ ಮತ್ತೆ ಶುರುವಾಗಲಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕ ಬೋರ್ಡ್ ಪರೀಕ್ಷೆ; 5,8,9 ನೇ ತರಗತಿ ಬೋರ್ಡ್ ಎಕ್ಸಾಂ ಮಾರ್ಚ್ 25ರಿಂದ ಮತ್ತೆ ಶುರುವಾಗಲಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ನಾಳೆಯಿಂದ (ಮಾರ್ಚ್ 25) 5,8, 9 ಮತ್ತು 11ನೇ ತರಗತಿಯ ಬಾಕಿ ಉಳಿದಿರುವ ಬೋರ್ಡ್ ಪರೀಕ್ಷೆಗಳು ನಡೆಯಲಿವೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿ ಪ್ರಕಾರ ಮಾರ್ಚ್ 25ರಿಂದ 28ರ ನಡುವೆ ಪರೀಕ್ಷೆಗಳು ನಡೆಯಲಿವೆ.

ಹೈಕೋರ್ಟ್‌ ವಿಭಾಗೀಯ ಪೀಠ ನೀಡಿರುವ ತೀರ್ಪಿನ ಪ್ರಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆ ನಡೆಸಲು ಸಜ್ಜಾಗಿದೆ. ಈ ನಡುವೆ , “ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ” (ರುಪ್ಸಾ) ಹಾಗೂ “ಅನುದಾನ ರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆ' (ಅವರ್ ಸ್ಕೂಲ್) ಸುಪ್ರೀಂ ಕೋರ್ಟ್‌ನಲ್ಲಿ ವಿಭಾಗೀಯ ಪೀಠದ ತೀರ್ಪು ಪ್ರಶ್ನಿಸಲು ಮುಂದಾಗಿವೆ.

5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿ

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾ ನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿರುವ ಪರಿಷ್ಕೃತ ವೇಳಾಪಟ್ಟಿ ಹೀಗಿದೆ.

ಕರ್ನಾಟಕದ ರಾಜ್ಯ ಪಠ್ಯಕ್ರಮ ಅನುಸರಿಸುವ 5ನೇ ತರಗತಿಗೆ ಬಾಕಿ ಇರುವ ಪರಿಸರ ಅಧ್ಯಯನ ಪರೀಕ್ಷೆ ಮಾ.25ಕ್ಕೆ, ಗಣಿತ ಪರೀಕ್ಷೆ ಮಾ.26ಕ್ಕೆ ನಡೆಯಲಿದೆ. 8 ಮತ್ತು 9ನೇ ತರಗತಿಗೆ ಬಾಕಿ ಇರುವ ವಿಷ ಯಗಳಲ್ಲಿ ಮಾ.25ಕ್ಕೆ ತೃತೀಯ ಭಾಷೆ, ಮಾ.26ರಂದು ಗಣಿತ, ಮಾ.27 ವಿಜ್ಞಾನ ಮತ್ತು ಮಾ.28ರಂದು ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗಳು ನಡೆಯಲಿವೆ. ಮಾ.25ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೂಡ ಆರಂಭವಾಗುತ್ತಿವೆ. ಹಾಗಾಗಿ ಎಸೆಸೆಲಿ ಪರೀಕ್ಷೆ ಇರುವ ಮಾ.25 ಮತ್ತು 27ರಂದು ಈ 3 ತರಗತಿ ಮಕ್ಕಳಿಗೆ ಮ. 2.30 ರಿಂದ 5.15ರವರೆಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲದಿದ ಮಾ.26, 28ರ ಬೆಳಗ್ಗೆ 10 ರಿಂದ 1.15ರ ವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ.

ಮಾ.31ರವರೆಗೆ ಪರೀಕ್ಷೆ ಬೇಡ ಎಂದು ಆಯುಕ್ತರಿಗೆ ವಕೀಲರ ಪತ್ರ

ಕರ್ನಾಟಕ ಹೈಕೋರ್ಟ್‌ ವಿಭಾಗೀಯ ಪೀಠ ನೀಡಿದ ತೀರ್ಪು ಆಧರಿಸಿ ತತ್‌ಕ್ಷಣವೇ ಪರೀಕ್ಷೆ ನಡೆಸಲು ಮುಂದಾಗಬಾರದು. ಮಾ. 31ರವರೆಗೆ ಪರೀಕ್ಷೆ ಮರುನಿಗದಿಪಡಿಸುವುದನ್ನು ಮುಂದೂಡಬೇಕು ಎಂದು ಕೋರಿ ಕರ್ನಾಟಕದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಆರ್‌ಟಿಇ ಮಕ್ಕಳು ಮತ್ತು ಪೋಷಕರ ಸಂಘದ ಪರ ವಕೀಲ ಎ.ವೇಲನ್ ಪತ್ರ ಬರೆದಿದ್ದಾರೆ.

ಹೈಕೋರ್ಟ್ ವಿಭಾಗೀಯ ಪೀಠ ನೀಡಿರುವ ತೀರ್ಪು ರಾಜ್ಯದ ಶಿಕ್ಷಣ ವ್ಯವಸ್ಥೆ ಮತ್ತು ಆರ್‌ಟಿಇ, ಮಕ್ಕಳು-ಪೋಷಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದ್ದರಿಂದ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಉದ್ದೇಶಿಸಲಾಗಿದೆ. ಸುಪ್ರೀಂ ಕೋರ್ಟ್‌ಗೆ ಇಂದಿನಿಂದ ಮಾ.31ರ ತನಕ ರಜೆಯಿದೆ. ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಲಾಗುವುದು. ಆದ್ದರಿಂದ ಮಾ. 31 ರವರೆಗೆ ಪರೀಕ್ಷೆ ನಿಗದಿಪಡಿಸುವ ಪ್ರಕ್ರಿಯೆ ಮುಂದೂಡಬೇಕು ಎಂದು ವಕೀಲರು ಆಯುಕ್ತರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪರೀಕ್ಷೆ ನಡೆಸಲು ಅನುಮತಿ ನೀಡಿರುವ ಹೈಕೋರ್ಟ್ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಅವರ್ ಸ್ಕೂಲ್ಸ್ ಮತ್ತು ರುಪ್ಸಾ ಕರ್ನಾಟಕ ತಿಳಿಸಿವೆ. ಮಾಹಿತಿ ಪ್ರಕಾರ, ಶಾಲಾ ಸಂಘಟನೆಗಳ ಪರ ವಕೀಲ ಕೆ.ವಿ.ಧನಂಜಯ್ ಅವರು ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿನ ಕುರಿತು ಶುಕ್ರವಾರವೇ ತ್ವರಿತ ವಿಚಾರಣೆಗೆ ಗಮನಸೆಳೆದಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದರೆ ಬಹುಶಃ ನಾಳೆಯೇ (ಮಾರ್ಚ್‌ 25) ಇದರ ವಿಚಾರಣೆ ನಡೆಯಬಹುದು.