ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ –2: ಮೇ 26 ರಿಂದ ಆರಂಭ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ, ಇನ್ನಿತರ ವಿವರ
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕ ಸುಧಾರಣೆಗೆ ಅವಕಾಶ ಕಲ್ಪಿಸುವ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2 ಮೇ 26ರಿಂದ ಆರಂಭವಾಗಲಿದೆ. ಈ ಪರೀಕ್ಷೆ ಜೂನ್ 2ವರೆಗೆ ನಡೆಯಲಿದೆ. ಇದರ ಸಂಪೂರ್ಣ ವೇಳಾಪಟ್ಟಿ ಸಹಿತ ಇನ್ನಿತರ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ನಡೆಸುವ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ–2 ಮೇ 26 ಸೋಮವಾರದಿಂದ ಜೂನ್ 2 ಸೋಮವಾರದವರೆಗೆ ನಡೆಯಲಿದೆ. ಕೆಎಸ್‌ಇಎಬಿ ಪ್ರಕಟಿಸಿದ ವೇಳಾಪಟ್ಟಿಯ ಸಂಪೂರ್ಣ ವಿವರ ಇಲ್ಲಿದೆ.
ಪರೀಕ್ಷೆಯ ವೇಳಾಪಟ್ಟಿ kseab.karnataka.gov.in ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಎಸ್‌ಎಸ್‌ಎಲ್‌ಸಿ–2 ಪರೀಕ್ಷೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿದೆ. ಎರಡನೇ ಮತ್ತು ಮೂರನೇ ಭಾಷೆಯ ಪತ್ರಿಕೆಗಳು ಸಹ ಬೆಳಗಿನ ಪಾಳಿಯಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ನಡೆಯುತ್ತವೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ –2 ವೇಳಾಪಟ್ಟಿ
ಮೇ 26- ಪ್ರಥಮ ಭಾಷೆ - ಕನ್ನಡ, ಇಂಗ್ಲಿಷ್, ಹಿಂದಿ, ಇತರೆ.
ಮೇ 27 - ಗಣಿತ
ಮೇ 28 - ದ್ವಿತೀಯ ಭಾಷೆ - ಇಂಗ್ಲಿಷ್, ಕನ್ನಡ.
ಮೇ 29 - ಸಮಾಜ ವಿಜ್ಞಾನ
ಮೇ 30 - ತೃತೀಯ ಭಾಷೆ - ಹಿಂದಿ / ಕನ್ನಡ / ಇಂಗ್ಲಿಷ್ ಮತ್ತು ಇತರೆ ಭಾಷೆಗಳು
ಮೇ 31 - ವಿಜ್ಞಾನ
ಜೂನ್ 2 - ಜೆಟಿಎಸ್ ವಿಷಯಗಳು
ಸಂಗೀತ ಮತ್ತು ಪ್ರಾಯೋಗಿಕ ಪರೀಕ್ಷೆಗಳು
ಹಿಂದೂಸ್ತಾನಿ ಸಂಗೀತ ಮತ್ತು ಕರ್ನಾಟಕ ಸಂಗೀತದ ಪ್ರಾಯೋಗಿಕ ಪರೀಕ್ಷೆಗಳು ಮಧ್ಯಾಹ್ನ 2:00 ರಿಂದ ಸಂಜೆ 5:15 ರವರೆಗೆ ಪ್ರತ್ಯೇಕವಾಗಿ ನಡೆಯಲಿವೆ. ಇದರ ಥಿಯರಿ ಪರೀಕ್ಷೆಗಳು ಮಧ್ಯಾಹ್ನ 2:00 ರಿಂದ ಮಧ್ಯಾಹ್ನ 3:45 ರವರೆಗೆ, ನಂತರ ಮಧ್ಯಾಹ್ನ 3:45 ರಿಂದ ಸಂಜೆ 5:15 ರವರೆಗೆ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ. ಹೆಚ್ಚುವರಿಯಾಗಿ, JTS ವಿಷಯಗಳಿಗೆ (ವಿಷಯಗಳು 56, 57, 58 ಮತ್ತು 59) ಹಾಜರಾಗುವ ವಿದ್ಯಾರ್ಥಿಗಳು ಜೂನ್ 3, 2025 ರಂದು ತಮ್ಮ ಪ್ರಾಯೋಗಿಕ ಮತ್ತು ಮೌಖಿಕ ಪರೀಕ್ಷೆಗಳಿಗೆ ಹಾಜರಾಗುತ್ತಾರೆ.
ವೇಳಾಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?
ಹಂತ 1: kseab.karnataka.gov.in ನಲ್ಲಿ KSEAB ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: “ಕರ್ನಾಟಕ SSLC ಪರೀಕ್ಷೆ 2 ಡೇಟ್‌ಶೀಟ್ 2025” ಎಂಬ ಶೀರ್ಷಿಕೆಯ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನಂತರ ತೆರೆಯವ ಹೊಸ ಪುಟದಲ್ಲಿ ವೇಳಾಪಟ್ಟಿಯನ್ನು ನೀವು ನೋಡಬಹುದು.
ಹಂತ 4: ಭವಿಷ್ಯದ ಉಲ್ಲೇಖಕ್ಕಾಗಿ ಡೇಟ್‌ಶೀಟ್ ಅನ್ನು ಡೌನ್‌ಲೋಡ್ ಮಾಡಿ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1 ರ ಫಲಿತಾಂಶ
ಕೆಎಸ್‌ಇಎಬಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರ ಫಲಿತಾಂಶವನ್ನು ಏಪ್ರಿಲ್ 30 ರಂದು ಪ್ರಕಟಿಸಿತು. ಪರೀಕ್ಷೆ ಬರೆದ 8,42,173 ಅಭ್ಯರ್ಥಿಗಳಲ್ಲಿ 5,24,984 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 4,00,579 ಹುಡುಗಿಯರಲ್ಲಿ 2,96,438 ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರೆ, 3,90,311 ಹುಡುಗರಲ್ಲಿ 2,26,637 ಹುಡುಗರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ 1 ರಲ್ಲಿ ಉತ್ತೀರ್ಣರಾಗದ ಅಥವಾ ತಮ್ಮ ಅಂಕಗಳನ್ನು ಸುಧಾರಿಸಲು ಬಯಸುವ ವಿದ್ಯಾರ್ಥಿಗಳು ಈಗ ಪರೀಕ್ಷೆ 2 ಮತ್ತು ಪರೀಕ್ಷೆ 3 ರಲ್ಲಿ ಹಾಜರಾಗಲು ಅವಕಾಶವನ್ನು ಹೊಂದಿರುತ್ತಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿರ್ಬಂಧ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 2 ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಉತ್ತರ ಶೈಕ್ಷಣಿಕ ಜಿಲ್ಲಾ ವ್ಯಾಪ್ತಿಯ 50 ಪರೀಕ್ಷಾ ಕೇಂದ್ರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ವ್ಯಾಪ್ತಿಯ 53 ಸೇರಿ 103 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳನ್ನು ಸುಗಮವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿರ್ಬಂಧಿತ ಪ್ರದೇಶವೆಂದು ಘೋಷಿಸಲಾಗಿದೆ. ಝೆರಾಕ್ಸ್, ಸೈಬರ್ ಹಾಗೂ ಕಂಪ್ಯೂಟರ್ ಸೆಂಟರ್ ಮುಚ್ಚುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆ – 3ರ ವೇಳಾಪಟ್ಟಿಯು ಪ್ರಕಟವಾಗಿದ್ದು, ಜೂನ್ 23 ರಿಂದ ಜೂನ್ 30ರವರೆಗೆ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯ ವೇಳಾಪಟ್ಟಿಯು ಕೆಎಸ್‌ಇಎಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.