Karnataka SSLC Exam 2024 : ಇಂದಿನಿಂದ ಏಪ್ರಿಲ್ 6ರ ತನಕ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಈ ಬಾರಿ 8.7 ಲಕ್ಷ ವಿದ್ಯಾರ್ಥಿಗಳು
SSLC Exam 2024: ಕರ್ನಾಟಕದಲ್ಲಿ ಇಂದಿನಿಂದ (ಮಾರ್ಚ್ 25) ಏಪ್ರಿಲ್ 6ರ ತನಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ. 8.7 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಪರೀಕ್ಷೆಯ ವೇಳಾಪಟ್ಟಿ ಮತ್ತು ಇತರೆ ವಿವರ ಈ ವರದಿಯಲ್ಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಸೋಮವಾರದಿಂದ (ಮಾರ್ಚ್ 25) ಏಪ್ರಿಲ್ 6ರ ತನಕ 2024ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ (Karnataka SSLC Exam 2024) ನಡೆಯಲಿದೆ. ರಾಜ್ಯದ 2750 ಪರೀಕ್ಷಾ ಕೇಂದ್ರಗಳಲ್ಲಿ ಈ ಬೋರ್ಡ್ ಪರೀಕ್ಷೆ (Borad Exam) ನಡೆಸಲು ಕರ್ನಾಟಕ ಪರೀಕ್ಷಾ ಮಂಡಳಿ ಸಿದ್ದತೆ ಪೂರ್ಣಗೊಳಿಸಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಇದೇ ಮೊದಲ ಸಲ ವೆಬ್‌ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಅಧಿಕಾರಿಗಳ ಕಚೇರಿಗೆ ಕನೆಕ್ಟ್ ಆಗಿದ್ದು, ಅಧಿಕಾರಿಗಳು ಕಚೇರಿಯಿಂದಲೇ ಪರೀಕ್ಷಾ ಕೇಂದ್ರಗಳ ಚಲನವಲನದ ಮೇಲೆ ನಿಗಾವಹಿಸಬಹುದು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸುವುದಕ್ಕಾಗಿ ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನಿರ್ದೇಶಕರು, ಸಹನಿರ್ದೇಶಕರ ವೃಂದದ ಅಧಿಕಾರಿಗಳನ್ನು ಪರೀಕ್ಷಾ ಮಂಡಳಿ ನೇಮಕ ಮಾಡಿದೆ. ಆಯಾ ಜಿಲ್ಲೆಗೆ ಜಿಲ್ಲಾ ವೀಕ್ಷಕರಾಗಿ ಡಯಟ್ ಪ್ರಾಂಶುಪಾಲರು ಇರಲಿದ್ದಾರೆ. ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣ ಜಾಗೃತ ದಳದ ಅಧಿಕಾರಿಗಳಾಗಿ ಡಯಟ್ ಉಪನ್ಯಾಸಕರು ಇರುತ್ತಾರೆ. ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ವೇಳಾಪಟ್ಟಿ
ಮಾರ್ಚ್ 25 - ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ ಎನ್‌ಸಿಇಆರ್‌ಟಿ, ಸಂಸ್ಕೃತ)
ಮಾರ್ಚ್ 27 -ಸಮಾಜ ವಿಜ್ಞಾನ (ಕೋರ್ ಸಬ್ಜೆಕ್ಟ್)
ಮಾರ್ಚ್ 30 - ವಿಜ್ಞಾನ, ರಾಜ್ಯಶಾಸ್ತ್ರ
ಏಪ್ರಿಲ್ 2- ಗಣಿತ, ಸಮಾಜ ಶಾಸ್ತ್ರ
ಏಪ್ರಿಲ್ 3 - ಅರ್ಥಶಾಸ್ತ್ರ
ಏಪ್ರಿಲ್ 4 - ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು).
ಏಪ್ರಿಲ್ 6 - ದ್ವಿತೀಯ ಭಾಷೆ (ಇಂಗ್ಲೀಷ್, ಕನ್ನಡ).
ಪರೀಕ್ಷಾ ಕೇಂದ್ರಗಳಿರುವಲ್ಲಿ 200 ಮೀಟರ್ ಸುತ್ತಳತೆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪಹರೆಗೆ ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಪರೀಕ್ಷಾ ದಿನಗಳಂದು ಪರೀಕ್ಷೆ ನಡೆಯುವ ಕೇಂದ್ರಗಳ ಸುತ್ತಲಿನ ಜೆರಾಕ್ಸ್, ಕಂಪ್ಯೂಟರ್, ಸೈಬರ್ ಸೆಂಟರ್‌ಗಳನ್ನು ಮುಚ್ಚಲಾಗುತ್ತದೆ. ಪರೀಕ್ಷಾ ಕೇಂದ್ರಗಳ ಬಳಿ ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಗಳ ಓಡಾಟ, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024; 8,69,968 ಪರೀಕ್ಷಾರ್ಥಿಗಳು
ಕರ್ನಾಟಕದಲ್ಲಿ ಈ ಸಲ ಒಟ್ಟು 8,69,968 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದಕ್ಕೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 4,28,058 ಬಾಲಕಿಯರು ಮತ್ತು 4,41,910 ಬಾಲಕರು. ಅದೇ ರೀತಿ, 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು. ಇನ್ನುಳಿದಂತೆ ವಿಭಿನ್ನ ಸಾಮರ್ಥ್ಯವುಳ್ಳ 5,424 ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ತಿಳಿಸಿದೆ.
ವಿದ್ಯಾರ್ಥಿಗಳು ಕನ್ನಡ, ಆಂಗ್ಲ, ಹಿಂದಿ, ತೆಲುಗು, ತಮಿಳು, ಉರ್ದು ಮತ್ತು ಮರಾಠಿ ಸೇರಿ ಒಟ್ಟು ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ತಡವಾಗಿ ತಲುಪಿದರೂ ಪರೀಕ್ಷಾ ಕೊಠಡಿಗೆ ಪ್ರವೇಶ ಇದೆ. ಆದರೆ 30 ನಿಮಿಷಕ್ಕಿಂತ ಹೆಚ್ಚು ತಡವಾದರೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಸಿಗಲ್ಲ.
ಈ ಸಲ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಗೋಡೆಗೆ ಮುಖ ಮಾಡಿಕೊಂಡು ಕುಳಿತು ಪರೀಕ್ಷೆ ಬರೆಯಬೇಕು. ಪ್ರತಿ ಕೇಂದ್ರಗಳಲ್ಲೂ ಗೋಡೆಯ ಕಡೆ ಮುಖ ಮಾಡಿ ಕುಳಿತುಕೊಳ್ಳುವಂತೆ ಡೆಸ್ಕ್‌ಗಳನ್ನು ಜೋಡಿಸಲಾಗಿದೆ. ಇನ್ನು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪ್ರವೇಶ ಪತ್ರ ತೋರಿಸಿದರೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಪರೀಕ್ಷೆ ಬರೆಯುವವರಿಗೆ ಶುಭವಾಗಲಿ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.