2288 ಶಾಲೆಗಳಿಗೆ ಶೇ 100 ಫಲಿತಾಂಶ, ಶೂನ್ಯ ಫಲಿತಾಂಶ ಪಡೆದ ಶಾಲೆಗಳೆಷ್ಟು? ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸಮಗ್ರ ವರದಿ
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಫಲಿತಾಂಶ ಕಡಿಮೆಯಾಗಲು ಕಾರಣಗಳೇನು? ಶೇಕಡ 100 ಸಾಧನೆ, ಶೂನ್ಯ ಫಲಿತಾಂಶ ಪಡೆದ ಶಾಲೆಗಳ ವಿವರ, ಗ್ರಾಮೀಣ, ನಗರ ವಿದ್ಯಾರ್ಥಿಗಳ ಸಾಧನೆ, ಕನ್ನಡ-ಇಂಗ್ಲಿಷ್ ಮಾಧ್ಯಮವಾರು ಸಾಧನೆ ಸೇರಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸಮಗ್ರ ವರದಿ ಇಲ್ಲಿದೆ.

ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿದೆ. 625ಕ್ಕೆ 625 ಅಂಕ ಪಡೆಯುವ ಮೂಲಕ ಬಾಗಲಕೋಟೆಯ ಅಂಕಿತಾ ಕೊನ್ನೂರು ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಈ ಬಾರಿ ತೇರ್ಗಡೆಯಾದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಸಂಖ್ಯೆ, ಉತ್ತೀರ್ಣರಾದ ಕನ್ನಡ ಮಾಧ್ಯಮ, ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳ ಸಂಖ್ಯೆ, ಎಸ್‌ಎಸ್‌ಎಲ್‌ಸಿಯಲ್ಲಿ ಶೂನ್ಯ ಫಲಿತಾಂಶ ಪಡೆದ ಶಾಲೆಗಳು, ಶೇಕಡ 100ರಷ್ಟು ಫಲಿತಾಂಶ ಪಡೆದ ಶಾಲೆಗಳು ಸೇರಿದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದ ಸಮಗ್ರ ವರದಿ ಇಲ್ಲಿದೆ.
ಈ ಬಾರಿ ಒಟ್ಟು 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡ 73.40 ಫಲಿತಾಂಶ ಬಂದಿದೆ.
ಫಲಿತಾಂಶ ಕಡಿಮೆಯಾಗಲು ಏನು ಕಾರಣ?
ಈ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕಡಿಮೆ ಆಗಲು ವೆಬ್‌ಕಾಸ್ಟಿಂಗ್ ಕಾರಣ. ರಾಜ್ಯದ ಎಲ್ಲೆಡೆ ವೆಬ್‌ಕಾಸ್ಟಿಂಗ್ ಮಾಡಲು ಪ್ರಯತ್ನಿಸಿದ್ದೇವೆ. ಪರೀಕ್ಷೆಯನ್ನು ಪ್ರಾಮಾಣಿಕವಾಗಿ ನಡೆಸಿದ್ದೇವೆ. ಇದನ್ನು ಎಲ್ಲ ಪೋಷಕರು, ಶಿಕ್ಷಕರು ಸ್ವಾಗತಿಸಿದ್ದಾರೆ ಎಂದು ಪರೀಕ್ಷೆ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. "ಪ್ರಪ್ರಥಮ ಬಾರಿಗೆ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿಗಳ ಮೂಲ ವೆಬ್‌ಕಾಸ್ಟಿಂಗ್ ಮಾಡುವ ಹೊಸ ಪದ್ಧತಿ ಪರಿಚಯಿಸಲಾಗಿದೆ. ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿತ್ತು. ಇದು ಪರೀಕ್ಷೆಯ ಸಮಗ್ರತೆಯನ್ನು ಪುನರ್‌ಸ್ಥಾಪಿಸಲು ನೆರವಾಗಿದೆ ಎಂದು ಶಿಕ್ಷಣ ಮಂಡಳಿ ತಿಳಿಸಿದೆ.
ಈ ಬಾರಿಯೂ ವಿದ್ಯಾರ್ಥಿನಿಯರ ಮೇಲುಗೈ
ಈ ಬಾರಿ 4,36,138 ಬಾಲಕರಲ್ಲಿ 2,87,416 ಬಾಲಕರು ಉತ್ತೀರ್ಣರಾಗಿ ಶೇಕಡ 65.90 ಫಲಿತಾಂಶ ಬಂದಿದೆ. ಇದೇ ಸಮಯದಲ್ಲಿ 4,23,829 ಬಾಲಕಿಯರಲ್ಲಿ 3,43,788 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇಕಡ 81.11ರಷ್ಟು ಫಲಿತಾಂಶ ಬಂದಿದೆ.
ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ 2024ರ ಫಲಿತಾಂಶದಲ್ಲಿ ನಗರ ಪ್ರದೇಶ 3.59 ಲಕ್ಷ ಮಂದಿ ಅಂದರೆ ಶೇಕಡ 72.83 ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದ 2.71 ಲಕ್ಷ ಅಂದರೆ ಶೇಕಡ 74.17 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಸರ್ಕಾರಿ ಶಾಲೆಯ 2.43 ಲಕ್ಷ ಮಂದಿ ಅಂದರೆ ಶೇಕಡಾ 72.46 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅನುದಾನಿತ 1.50 ಲಕ್ಷ ಮಂದಿ ಅಂದರೆ ಶೇಕಡಾ 72.22 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಅನುದಾನರಹಿತ ಶಿಕ್ಷಣ ಸಂಸ್ಥೆಗಳ 2.23 ಲಕ್ಷ ವಿದ್ಯಾರ್ಥಿಗಳು ಅಂದರೆ ಶೇಕಡಾ 86.46 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.
ಶೂನ್ಯ ಫಲಿತಾಂಶ ಪಡೆದ ಶಾಲೆಗಳು
ಈ ಬಾರಿ 3 ಸರಕಾರಿ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ. 13 ಅನುದಾನಿತ ಮತ್ತು 62 ಅನುದಾನರಹಿತ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.
ಶೇಕಡ 100 ಫಲಿತಾಂಶ ಪಡೆದ ಶಾಲೆಗಳು
ಈ ಬಾರಿ 785 ಸರಕಾರಿ ಶಾಲೆಗಳು ಶೇಕಡ 100 ಫಲಿತಾಂಶ ಪಡೆದಿವೆ. 206 ಅನುದಾನಿತ ಮತ್ತು 1297 ಅನುದಾನರಹಿತ ಶಾಲೆಗಳು ಶೇಕಡ 100 ಫಲಿತಾಂಶ ಪಡೆದಿವೆ.
ಇಂಗ್ಲಿಷ್ ಮೀಡಿಯಾಂ ವಿದ್ಯಾರ್ಥಿಗಳು ಮುಂದು
ಈ ಬಾರಿಯ ಫಲಿತಾಂಶದಲ್ಲಿ ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳು ತುಸು ಹೆಚ್ಚು ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೇಕಡ 69.34ರಷ್ಟು, ಆಂಗ್ಲ ಮಾಧ್ಯಮದ ಶೇಕಡ 88.29 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಎಸ್‌ಎಸ್‌ಎಲ್‌ಸಿ ಫಲಿತಾಂಶ: ಜಿಲ್ಲಾವಾರು ರಾಂಕಿಂಗ್
ಈ ಬಾರಿ ಶೇಕಡ 94 ಫಲಿತಾಂಶ ಪಡೆದ ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆದಿವೆ. ನಂತರದ ಸ್ಥಾನಗಳನ್ನು ಅನುಕ್ರಮವಾಗಿ ಶಿವಮೊಗ್ಗ ಶೇ 88.67 , ಕೊಡಗು ಶೇ 88.67, ಉತ್ತರ ಕನ್ನಡ ಶೇ 86.54, ಹಾಸನ ಶೇ 86.28, ಮೈಸೂರು ಶೇ 85.5 , ಶಿರಸಿ ಶೇ 84.64, ಬೆಂಗಳೂರು ಗ್ರಾಮಾಂತರ ಶೇ 83.67 , ಚಿಕ್ಕಮಗಳೂರು ಶೇ 83.39 , ವಿಜಯಪುರ ಶೇ 79.82 ,ಬೆಂಗಳೂರು ದಕ್ಷಿಣ ಶೇ 79 , ಬಾಗಲಕೋಟೆ ಶೇ 77.92 , ಬೆಂಗಳೂರು ಉತ್ತರ ಶೇ 77.09, ಹಾವೇರಿ ಶೇ 75. 85, , ತುಮಕೂರು ಶೇ 75.16, ಗದಗ ಶೇ 74.76, ಚಿಕ್ಕಬಳ್ಳಾಪುರ ಶೇ 73.61, ಮಂಡ್ಯ ಶೇ 73.59, ಕೋಲಾರ ಶೇ 73.57, ಚಿತ್ರದುರ್ಗ ಶೇ 72.85, ಧಾರವಾಡ ಶೇಕಡ 72.67 , ದಾವಣಗೆರೆ ಶೇ 72.49, ಚಾಮರಾಜನಗರ-71.59, ಚಿಕ್ಕೋಡಿ ಶೇ 69.82, ರಾಮನಗರ ಶೇ 69.53, ವಿಜಯನಗರ ಶೇ 65.61, ಬಳ್ಳಾರಿ ಶೇ 64.99, ಬೆಳಗಾವಿ ಶೇ 64.93, ಮಧುಗಿರಿ ಶೇ 62.44, ರಾಯಚೂರು ಶೇ 61.2 , ಕೊಪ್ಪಳ ಶೇ 61.16 , ಬೀದರ್-57.52, ಕಲಬುರಗಿ ಶೇ 53.04 ಮತ್ತು ಕೊನೆ ಸ್ಥಾನವನ್ನು ಶೇ 50.59 ಫಲಿತಾಂಶದ ಮೂಲಕ ಯಾದಗಿರಿ ಜಿಲ್ಲೆ ಪಡೆದಿದೆ.
