SSLC Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 19 ರಿಂದ 7ನೇ ಸ್ಥಾನಕ್ಕೆ ಜಿಗಿತ ಮೈಸೂರು; ಸುದೀಕ್ಷಗೆ 620 ಅಂಕ
karnataka sslc result 2024: ಮೇ 9ರ ಗುರುವಾರ ಪ್ರಕಟವಾದ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೈಸೂರು ಉತ್ತಮ ಸಾಧನೆ ಮಾಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 19ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಮೈಸೂರು: ನಿರೀಕ್ಷೆಯಂತೆ ಇಂದು (ಮೇ 9, ಗುರುವಾರ) ಎಸ್‌ಎಸ್‌ಎಲ್‌ಸಿ ಫಲಿತಾಂಶ (Karnataka SSLC Result 2024) ಪ್ರಕಟವಾಗಿದ್ದು, ಸಾಂಸ್ಕೃತಿ ನಗರಿ ಮೈಸೂರು ಜಿಲ್ಲೆ (Mysore SSLC Result) ಉತ್ತಮ ಸಾಧನೆ ಮಾಡಿದೆ. 2023ರ ಫಲಿತಾಂಶದಲ್ಲಿ 19ನೇ ಸ್ಥಾನದಲ್ಲಿದ್ದ ಮೈಸೂರು 2024ರ ಫಲಿತಾಂಶದಲ್ಲಿ 7ನೇ ಸ್ಥಾನಕ್ಕೆ ಬರುವ ಮೂಲಕ ಗಮನ ಸೆಳೆದಿದೆ. ಒಟ್ಟಾರೆಯಾಗಿ 12 ಸ್ಥಾನಗಳ ಮೇಲೇರಿರುವುದು ಭಾರಿ ಮೆಚ್ಚುಗೆಗೆ ಕಾರಣವಾಗಿದೆ.
ಮೈಸೂರು ಜಿಲ್ಲೆಯಾದ್ಯಂತ ಒಟ್ಟು 38,175 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 32, 639 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಒಟ್ಟಾರೆಯಾಗಿ ಮೈಸೂರು ಜಿಲ್ಲೆಗೆ ಶೇಕಡಾ 85.5 ರಷ್ಟು ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಉಪನಿರ್ದೇಶಕ ಹೆಚ್ ಕೆ ಪಾಂಡು ಮಾಹಿತಿ ನೀಡಿದ್ದಾರೆ. ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಅಗ್ರ 10 ಜಿಲ್ಲೆಗಳಲ್ಲಿ ಮೈಸೂರು ಸ್ಥಾನ ಪಡೆದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಬಾರಿ ಮೈಸೂರು ಜಿಲ್ಲೆಯನ್ನು ಮತ್ತಷ್ಟು ಉತ್ತುಂಗ ಸ್ಥಾನಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತೇವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಉಪನಿರ್ದೇಶಕ ಹೆಚ್ ಕೆ ಪಾಂಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
625ಕ್ಕೆ 620 ಅಂಕ ಗಳಿಸಿದ ಸುದೀಕ್ಷ ಉತ್ತಮ ಸಾಧನೆ
ಇಂದು (ಮೇ 9, ಗುರುವಾರ) ಪ್ರಕಟವಾದ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೈಸೂರಿನ ಸುದೀಕ್ಷಗೆ 625ಕ್ಕೆ 620 ಅಂಕಗಳನ್ನು ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. ಕನ್ನಡ ಸೇರಿ 5 ವಿಷಯದಲ್ಲಿ ಶೇಕಡ 100ರಷ್ಟು ಅಂಕ ಗಳಿಸಿರುವ ಸುದೀಕ್ಷ ಎಂ ಡಿ ಮೈಸೂರಿನ ದಿನೇಶ್ ಎಂಬುವರ ಪುತ್ರಿ. ಸಂಸ್ಕೃತ 125, ಇಂಗ್ಲಿಷ್ 100, ಕನ್ನಡ 100, ವಿಜ್ಞಾನ 100, ಸಮಾಜ 100, ಗಣಿತದಲ್ಲಿ 95 ಅಂಕ ಗಳಿಸಿದ್ದಾರೆ. ಸುದೀಕ್ಷ ಮೈಸೂರಿನ ವಿಜಯ ವಿಠ್ಠಲ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದಾರೆ.
ಮೈಸೂರಿನ ಅಂಧಮಕ್ಕಳ ಸರ್ಕಾರಿ ಶಾಲೆಗೆ ಶೇಕಡಾ 100ರಷ್ಟು ಫಲಿತಾಂಶ
ಈ ಬಾರಿಯ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಅಂಧಮಕ್ಕಳ ಸರ್ಕಾರಿ ಶಾಲೆ ಅತ್ಯುತ್ತಮ ಸಾಧನೆ ಮಾಡಿದೆ.ಮೈಸೂರಿನ ತಿಲಕ್ ನಗರದಲ್ಲಿರುವ ಅಂಧಮಕ್ಕಳ ಸರ್ಕಾರಿ ಶಾಲೆಗೆ ಈ ಬಾರಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಾ ಬಂದಿರುವ ಅಂಧಮಕ್ಕಳ ಸರ್ಕಾರಿ ಶಾಲೆ ಈ ಬಾರಿಯೂ ಆ ಸಾಧನೆಯನ್ನು ಮುಂದುವರಿಸಿದೆ. ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ 8 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಈ ಕುರಿತು ಅಂಧಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕ ಸತೀಶ್ ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ತಮ್ಮ ಖುಷಿಯನ್ನು ಹಂಚಿಕೊಂಡರು. ಭವಿಷ್ಯದಲ್ಲಿ ಪಿಡಿಒ ಆಗುವುದಾಗಿ ಓರ್ವ ವಿದ್ಯಾರ್ಥಿ ಹೇಳಿದರೆ, ಮತ್ತೋರ್ವ ವಿದ್ಯಾರ್ಥಿ ಡ್ಯಾನ್ಸರ್ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಇನ್ನೋರ್ವ ವಿದ್ಯಾರ್ಥಿ ಮಾತನಾಡಿ ,ನಾನು ಉನ್ನತ ವಿದ್ಯಾಭ್ಯಾಸ ಮಾಡಿ, ಇದೇ ಅಂಧಮಕ್ಕಳ ಶಾಲೆಗೆ ಅಧೀಕ್ಷಕನಾಗಿ ಬಂದು ಸೇವೆ ಸಲ್ಲಿಸುವುದಾಗಿ ಆಸೆಯನ್ನು ವ್ಯಕ್ತಪಡಿಸಿದರು.