ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡ; ಯುಜಿಸಿ ತೀರ್ಮಾನಕ್ಕೆ ವಿವಿಗಳ, ಶಿಕ್ಷಣ ತಜ್ಞರ ವಿರೋಧ: ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡ; ಯುಜಿಸಿ ತೀರ್ಮಾನಕ್ಕೆ ವಿವಿಗಳ, ಶಿಕ್ಷಣ ತಜ್ಞರ ವಿರೋಧ: ವರದಿ

ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡ; ಯುಜಿಸಿ ತೀರ್ಮಾನಕ್ಕೆ ವಿವಿಗಳ, ಶಿಕ್ಷಣ ತಜ್ಞರ ವಿರೋಧ: ವರದಿ

ಭಾರತದಾದ್ಯಂತ ಪಿಎಚ್‌ಡಿ ಪ್ರವೇಶಕ್ಕೆ ಎಲ್ಲ ವಿವಿಗಳಲ್ಲಿ ಪ್ರವೇಶ ಪರೀಕ್ಷೆ ನಡೆಸುವ ಬದಲು ನೆಟ್‌ ಸ್ಕೋರ್ ಅನ್ನೇ ಮಾನದಂಡವಾಗಿ ಪರಿಗಣಿಸುವುದಕ್ಕೆ ಯುಜಿಸಿ ಆದೇಶ ನೀಡಿದೆ. ಯುಜಿಸಿ ತೀರ್ಮಾನಕ್ಕೆ ವಿವಿಗಳ, ಶಿಕ್ಷಣ ತಜ್ಞರ ವಿರೋಧ ವ್ಯಕ್ತವಾಗಿದ್ದು, ವಿವರ ವರದಿ ಇಲ್ಲಿದೆ.

ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡವನ್ನಾಗಿ ಪರಿಗಣಿಸಿ ಯುಜಿಸಿ ತಗೊಂಡ ತೀರ್ಮಾನಕ್ಕೆ ವಿವಿಗಳ ವಿರೋಧ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)
ಪಿಎಚ್‌ಡಿ ಪ್ರವೇಶಕ್ಕೆ ನೆಟ್‌ ಸ್ಕೋರ್‌ ಮಾನದಂಡವನ್ನಾಗಿ ಪರಿಗಣಿಸಿ ಯುಜಿಸಿ ತಗೊಂಡ ತೀರ್ಮಾನಕ್ಕೆ ವಿವಿಗಳ ವಿರೋಧ ವ್ಯಕ್ತವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಭಾರತಾದ್ಯಂತ ಡಾಕ್ಟರೇಟ್ ಆಫ್ ಫಿಲಾಸಫಿ (ಪಿಎಚ್‌ಡಿ) ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (NET) ಯ ಅಂಕವನ್ನು ಪರಿಗಣಿಸುವ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಇತ್ತೀಚಿನ ನಿರ್ಧಾರವನ್ನು ಕರ್ನಾಟಕದ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಸೇರಿ ವಿಶ್ವವಿದ್ಯಾನಿಲಯಗಳು ವಿರೋಧಿಸಿವೆ.

ಪಿಎಚ್‌ಡಿ ಪ್ರವೇಶಕ್ಕಾಗಿ ನೆಟ್ ಅಂಕಗಳನ್ನು ಪರಿಗಣಿಸುವ ಯುಜಿಸಿಯ ನಿರ್ಧಾರದಿಂದ ವಿದ್ಯಾರ್ಥಿಗಳು ಹಲವು ಪರೀಕ್ಷೆ ಬರೆಯುವುದನ್ನು ತಪ್ಪಿಸುತ್ತದೆ. ಪಿಎಚ್‌ಡಿ ಪ್ರವೇಶಕ್ಕಾಗಿ ಪ್ರತಿಯೊಂದು ವಿವಿಯ ಪ್ರವೇಶ ಪರೀಕ್ಷೆ ಬರೆಯಬೇಕಾಗಿಲ್ಲ ಎಂದು ಯುಜಿಸಿ ತನ್ನ ನಿಲುವನ್ನು ಸಮರ್ಥಿಸಿಕೊಂಢಿದೆ. ಮಾರ್ಚ್ 13ರಂದು ನಡೆದ ಸಭೆಯಲ್ಲಿ ಯುಜಿಸಿ ಈ ತೀರ್ಮಾನವನ್ನು ಪ್ರಕಟಿಸಿತ್ತು.

ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಅವರು, “ಯುಜಿಸಿ ತೀರ್ಮಾನಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರವು ಶೀಘ್ರದಲ್ಲೇ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಮಧ್ಯಸ್ಥಗಾರರನ್ನು ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಸಂಗ್ರಹಿಸಲಿದೆ. ಯುಜಿಸಿಯ ಕ್ರಮವು ಬಹಳ ಗಂಭೀರವಾದುದು. ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಹೀಗಾಗಿ ಯುಜಿಸಿಯ ಸಾರ್ವಜನಿಕ ಅಧಿಸೂಚನೆಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತದೆ” ಎಂದು ಹೇಳಿದರು.

ಪಿಎಚ್‌ಡಿ ಪ್ರವೇಶಕ್ಕೆ ನೆಟ್ ಅಂಕ; ವಿವಿಗಳ, ಶಿಕ್ಷಣ ತಜ್ಞರ ವಿರೋಧ ಯಾಕೆ

"ಯುಜಿಸಿಯ ನಿರ್ಧಾರವು ಸಂಶೋಧನೆಗೆ ಅನುಕೂಲವಾಗುವುದು ಎಂಬ ವಾದ ಸರಿ. ಆದರೆ ಅದು ವಿಶ್ವವಿದ್ಯಾಲಯಗಳ ಸ್ವಾಯತ್ತೆಯನ್ನು ಹಾಳುಮಾಡುತ್ತದೆ. ಅನುದಾನ ನೀಡುತ್ತದೆ ಎಂಬ ಕಾರಣಕ್ಕೆ ಯುಜಿಸಿ ವಿವಿಗಳ ಮೆಲೆ ಸವಾರಿ ಮಾಡಬಾರದು. ಪಿಎಚ್‌ಡಿ ಸೇರಿ ಯಾವುದೇ ಕೋರ್ಸ್‌ನ ಪ್ರವೇಶ ಪರೀಕ್ಷೆಗಳು, ಶುಲ್ಕ ಮತ್ತು ಇತರ ವಿಷಯಗಳನ್ನು ನಿರ್ಧರಿಸುವ ಅಧಿಕಾರವನ್ನು ಆಯಾ ವಿಶ್ವವಿದ್ಯಾಲಯಗಳಿಗೆ ಬಿಡಬೇಕು” ಎಂದು ವಿಶ್ವವಿದ್ಯಾಲಯದ ಉಪಕುಲಪತಿಯೊಬ್ಬರು ತಿಳಿಸಿರುವುದಾಗಿ ದ ಹಿಂದೂ ವರದಿ ಮಾಡಿದೆ.

“ಕೇಂದ್ರ ಸರ್ಕಾರವು ವಿದ್ಯಾರ್ಥಿಗಳ ಅಡ್ಮಿಷನ್‌ಗೆ ಸಂಬಂಧಿಸಿದಂತೆ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಎಲ್ಲಾ ಸ್ವಾಯತ್ತ ಸಂಸ್ಥೆಗಳನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ನೆಟ್‌ ಅಂಕಗಳು ಪಿಎಚ್‌ಡಿ ಪ್ರವೇಶಕ್ಕೆ ಮಾನದಂಡವಾಗಿ ಮಾಡಿಕೊಂಡರೆ, ವಿಶ್ವವಿದ್ಯಾಲಯಗಳು ಸಂಶೋಧನಾ ಚಟುವಟಿಕೆಗಳ ಮೇಲೆ ತಮ್ಮ ಸ್ವಾಯತ್ತೆಯನ್ನು ಕಳೆದುಕೊಳ್ಳುತ್ತವೆ” ಎಂಬುದನ್ನು ಇನ್ನೊಬ್ಬ ಉಪ ಕುಲಪತಿ ವಿವರಿಸಿದ್ದಾಗಿ ವರದಿ ವಿವರಿಸಿದೆ.

ವರ್ಷಕ್ಕೆ ಎರಡು ನಡೆಯುತ್ತೆ ನೆಟ್ ಪರೀಕ್ಷೆ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಮೂಲಕ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಪ್ರತಿ ವರ್ಷ ಎರಡು ಬಾರಿ ನೆಟ್‌ ಅನ್ನು ನಡೆಸುತ್ತದೆ. ಇದರ ಫಲಿತಾಂಶವನ್ನು ಅಂದರೆ ಅಂಕಗಳನ್ನು ಜೂನಿಯರ್ ರಿಸರ್ಚ್ ಫೆಲೋಶಿಪ್ (ಜೆಆರ್‌ಎಫ್) ನೀಡಲು ಮತ್ತು ಸ್ನಾತಕೋತ್ತರ ಪದವಿ ಹೊಂದಿರುವವರಿಗೆ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿಗೆ ಅರ್ಹತೆಯಾಗಿ ಬಳಸಲಾಗುತ್ತದೆ. ಆದಾಗ್ಯೂ, ವಿಶ್ವವಿದ್ಯಾಲಯಗಳು ಪಿಎಚ್‌ಡಿ ಪ್ರವೇಶಕ್ಕಾಗಿ ಸ್ವತಂತ್ರ ಪ್ರವೇಶ ಪರೀಕ್ಷೆಗಳನ್ನು ನಡೆಸುತ್ತವೆ.

ಪಿಎಚ್‌ಡಿ ಪ್ರವೇಶಕ್ಕಾಗಿ ನೆಟ್ ಅಂಕಗಳನ್ನು ಪರಿಗಣಿಸುವ ನಿರ್ಧಾರವು ವಿದ್ಯಾರ್ಥಿಗಳಿಗೆ ಒಂದು ಪ್ರವೇಶ ಪರೀಕ್ಷೆಯು ಬಹು ಉದ್ದೇಶಗಳಿಗೆ ಒಂದು ಮಾನದಂಡವಾಗಿ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ವಿದ್ಯಾರ್ಥಿಗಳು ಪ್ರತಿ ವಿಶ್ವವಿದ್ಯಾಲಯದಲ್ಲಿ ಅನೇಕ ಪ್ರವೇಶ ಪರೀಕ್ಷೆಗಳನ್ನು ಬರೆಯುವ ಅಗತ್ಯವಿಲ್ಲ. ಇದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ-2020) ಅನುಷ್ಠಾನದ ಭಾಗವಾಗಿದೆ. ಇದು 2024-25ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner