ಕನ್ನಡ ಸುದ್ದಿ  /  Karnataka  /  Education News Know About How Many Medical Colleges Are There In Karnataka How Many Medical Seats Available Mgb

ಕರ್ನಾಟಕದಲ್ಲಿ ಎಷ್ಟು ಮೆಡಿಕಲ್ ಕಾಲೇಜುಗಳಿವೆ? ಈ ವರ್ಷ ರಾಜ್ಯಕ್ಕೆ ಲಭ್ಯವಾದ ಮೆಡಿಕಲ್ ಸೀಟುಗಳು ಎಷ್ಟು? ಇಲ್ಲಿದೆ ಮಾಹಿತಿ

Medical Colleges in Karnataka: ಈ ವರ್ಷ ಮಡಿಕಲ್ ಸೀಟುಗಳಿಗೆ ಸ್ಪರ್ಧೆ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳ ತಯಾರಿ ಹೆಚ್ಚಾಗಿದೆ. ಬಹುತೇಕ ವಿದ್ಯಾರ್ಥಿಗಳು ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಪಿಯುಸಿ ತೇರ್ಗಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು (ಪ್ರಾತಿನಿಧಿಕ ಚಿತ್ರ)
ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಇಡೀ ಭಾರತದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ರಾಜ್ಯ ಎಂದರೆ ತಮಿಳುನಾಡು. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ, ನಾಲ್ಕನೇ ಸ್ಥಾನದಲ್ಲಿ ಮಹಾರಾಷ್ಟ್ರ ಮತ್ತು ತೆಲಂಗಾಣ ಐದನೇ ಸ್ಥಾನದಲ್ಲಿದ್ದು, ದೇಶದಲ್ಲಿ ಒಟ್ಟು 704 ವೈದ್ಯಕೀಯ ಕಾಲೇಜುಗಳಿವೆ.

ಟ್ರೆಂಡಿಂಗ್​ ಸುದ್ದಿ

ತಮಿಳುನಾಡಿನಲ್ಲಿ 74 ಮೆಡಿಕಲ್ ಕಾಲೇಜುಗಳಿದ್ದರೆ. ಕರ್ನಾಟಕದಲ್ಲಿ 70 ಮೆಡಿಕಲ್ ಕಾಲೇಜುಗಳಿವೆ. ಮೂರನೇ ಸ್ಥಾನದಲ್ಲಿರುವ ಉತ್ತರಪ್ರದೇಶದಲ್ಲಿ 68 ಕಾಲೇಜುಗಳು, ಮಹಾರಾಷ್ಟ್ರದಲ್ಲಿ 67 ಕಾಲೇಜುಗಳು ಮತ್ತು ತೆಲಂಗಾಣದಲ್ಲಿ 56 ಕಾಲೇಜುಗಳಿವೆ.

ಈ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕಕ್ಕೆ 11,745 ಮೆಡಿಕಲ್ ಸೀಟುಗಳು ಲಭ್ಯವಿವೆ. ಇದರಲ್ಲಿ ಆಲ್ ಇಂಡಿಯಾ ಕೋಟಾಗೆ 2,934 ಸೀಟುಗಳು, ಇಎಸ್ಐ ಕೋಟಾದಡಿಯಲ್ಲಿ 139 ಸೀಟುಗಳು ಲಭ್ಯವಾಗುತ್ತವೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಕಲಬುರಗಿ ಸೇರಿ ಎರಡು ಇಎಸ್‍ಐ ಮೆಡಿಕಲ್ ಕಾಲೇಜುಗಳಿವೆ. ಸುಮಾರು 8,600 ಸೀಟುಗಳು ಕೌನ್ಸೆಲಿಂಗ್ ಮೂಲಕ ಭರ್ತಿಯಾಗಲಿವೆ. ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೌನ್ಸೆಲಿಂಗ್ ನಡೆಸಲಿದೆ.

ಪ್ರಾಧಿಕಾರದ ಮೂಲಗಳ ಪ್ರಕಾರ ಈ ಶೈಕ್ಷಣಿಕ ವರ್ಷದಲ್ಲಿ 500-600 ಅನಿವಾಸಿ ಭಾರತೀಯ ಕೋಟಾ (ಎನ್ ಆರ್ ಐ)ದ ಖಾಲಿ ಉಳಿಯುವ ಸಾಧ್ಯತೆಗಳಿದ್ದು ಮ್ಯಾನೇಜ್‍ಮೆಂಟ್ ಕೋಟಾದಲ್ಲಿ ಭರ್ತಿ ಮಾಡಲಾಗುತ್ತದೆ.

ಈ ವರ್ಷದಲ್ಲಿ ಮಡಿಕಲ್ ಸೀಟುಗಳಿಗೆ ಸ್ಪರ್ಧೆ ಹೆಚ್ಚಾಗಲಿದೆ ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅಥವಾ ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳ ತಯಾರಿ ಹೆಚ್ಚಾಗಿದೆ. ಬಹುತೇಕ ವಿದ್ಯಾರ್ಥಿಗಳು ತರಬೇತಿ ಕೇಂದ್ರಗಳಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಪಿಯುಸಿ ತೇರ್ಗಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಬಹುಸಂಖ್ಯೆಯ ವಿದ್ಯಾರ್ಥಿಗಳು 500 ರಿಂದ 600 ಅಂಕಗಳನ್ನು ಗಳಿಸಿದ್ದು ಸ್ಪರ್ಧೆ ಹೆಚ್ಚಲು ಕಾರಣವಾಗಿದೆ. ಕಳೆದ ವರ್ಷ 565 ಅಂಕ ಗಳಿಸಿದ ವಿದ್ಯಾರ್ಥಿ ಮೆಡಿಕಲ್ ಸೀಟು ಗಳಿಸಿದ್ದರೆ ಈ ವರ್ಷ ಅಂಕಗಳ ಮಿತಿ ಇನ್ನೂ ಹೆಚ್ಚಾಗಲಿದೆ.

ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟುಗಳಿಗೆ ಒಟ್ಟಾಗಿ ಕೌನ್ಸೆಲಿಂಗ್ ನಡೆಸುವುದರಿಂದ ಗರಿಷ್ಟ ಅಂಕಗಳ ಮಿತಿ ಹೆಚ್ಚುತ್ತಿದೆ. ಮೊದಲ ಸುತ್ತಿನ ನಂತರ ಅಂಕಗಳ ಮಿತಿ ಇಳಿಯಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಮೆಡಿಕಲ್ ಮತ್ತು ಇಂಜಿನಿಯರಿಂಗ್ ಎರಡಕ್ಕೂ ದಾಖಲಾತಿ ಒಟ್ಟಿಗೆ ನಡೆಯುತ್ತದೆ. ಕೆಲವು ವಿದ್ಯಾರ್ಥಿಗಳು ಎರಡನ್ನೂ ಆಯ್ಕೆ ಮಾಡಿಕೊಳ್ಳುತ್ತಾರೆ. ಒಂದು ಬಾರಿ ಮೊದಲ ಸುತ್ತು ಪೂರ್ಣಗೊಂಡರೆ ಮಿತಿ ತಾನಾಗಿಯೇ ಇಳಿಯುತ್ತದೆ ಎನ್ನುತ್ತಾರೆ. ಈಗಷ್ಟೇ ಮೊದಲ ಸುತ್ತು ಪೂರ್ಣಗೊಂಡಿದ್ದು ಎರಡನೇ ಸುತ್ತು ಇನ್ನೂ ಆರಂಭಗೊಂಡಿಲ್ಲ.

2022ರಲ್ಲಿ ಕೌನ್ಸೆಲಿಂಗ್ ಗೆ 1.22 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರೆ ಈ ವರ್ಷ 1.31 ಲಕ್ಷ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆ ಇದೆ. ರಾಷ್ಟ್ರೀಯ ಮಟ್ಟದಲ್ಲಿ 700 ಅಂಕಗಳನ್ನು ಗಳಿಸಿದವರ ಸಂಖ್ಯೆ 145ಕ್ಕೆ ಏರಿದೆ. ಕಳೆದ ವರ್ಷ 99 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದರು. 650 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷ 4,700 ಇದ್ದು ಈ ವರ್ಷ 7000 ಕ್ಕೆ ಏರಿದೆ. ಇದೇ ರೀತಿ ಸುಮಾರು 9000 ವಿದ್ಯಾರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.

ಪ್ರತಿವರ್ಷ 10 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಪದವಿ ಪಡೆದ ವೈದ್ಯರು ಹೊರಬರುತ್ತಿದ್ದಾರೆ. ಇವರೆಲ್ಲರೂ ಸರ್ಕಾರಿ ವೆಚ್ಚದಲ್ಲಿ ಪದವಿ ಪಡೆದಿರುತ್ತಾರೆ. ಆದರೆ ಇವರ್ಯಾರೂ ಗ್ರಾಮೀಣ ಮಟ್ಟದಲ್ಲಿ ಕೆಲಸ ಮಾಡಲು ತಯಾರಿರುವುದಿಲ್ಲ. ದಂಡ ಸೇರಿದಂತೆ ಅನೇಕ ನಿರ್ಬಂಧಗಳನ್ನು ವಿಧಿಸಿದ್ದರೂ ರಂಗೋಲಿ ಕೆಳಗೆ ತೂರುವವರೇ ಹೆಚ್ಚಾಗಿದ್ದಾರೆ. ವಿಧಾನ ಮಂಡಲದಲ್ಲಿ ಹಲವಾರು ಬಾರಿ ಚರ್ಚೆ ನಡೆದಿದ್ದರೂ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ.

ವರದಿ: ಎಚ್.ಮಾರುತಿ