KSET 2023: ಜ 13ರ ಕೆಸೆಟ್‌ಗೆ ವಸ್ತ್ರ ಸಂಹಿತೆ, ಮಾರ್ಗಸೂಚಿ ಪ್ರಕಟ; ಕಾಲುಂಗುರ, ಮಾಂಗಲ್ಯ ಸರ ಇರಲಿ, ಬೇಕು ಬೇಡಗಳ ವಿವರ ಹೀಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Kset 2023: ಜ 13ರ ಕೆಸೆಟ್‌ಗೆ ವಸ್ತ್ರ ಸಂಹಿತೆ, ಮಾರ್ಗಸೂಚಿ ಪ್ರಕಟ; ಕಾಲುಂಗುರ, ಮಾಂಗಲ್ಯ ಸರ ಇರಲಿ, ಬೇಕು ಬೇಡಗಳ ವಿವರ ಹೀಗಿದೆ

KSET 2023: ಜ 13ರ ಕೆಸೆಟ್‌ಗೆ ವಸ್ತ್ರ ಸಂಹಿತೆ, ಮಾರ್ಗಸೂಚಿ ಪ್ರಕಟ; ಕಾಲುಂಗುರ, ಮಾಂಗಲ್ಯ ಸರ ಇರಲಿ, ಬೇಕು ಬೇಡಗಳ ವಿವರ ಹೀಗಿದೆ

ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್ ಪರೀಕ್ಷೆ) ಜನವರಿ 13ರಂದು ನಡೆಯಲಿದ್ದು, ವಸ್ತ್ರಸಂಹಿತೆ ಮತ್ತು ಮಾರ್ಗಸೂಚಿ ಪ್ರಕಟವಾಗಿದೆ. ವಸ್ತ್ರಸಂಹಿತೆ ಪ್ರಕಾರ ಮಾಂಗಲ್ಯ ಸರ, ಕಾಲುಂಗುರಕ್ಕೆ ಅಡ್ಡಿ ಇಲ್ಲ. ಆದರೆ ಇನ್ನೊಂದಿಷ್ಟು ನಿಯಮ, ನಿಬಂಧನೆಗಳಿವೆ. ಅವುಗಳ ವಿವರ ಇಲ್ಲಿದೆ ಗಮನಿಸಿ.

ಕೆಸೆಟ್‌ ಪರೀಕ್ಷೆಗೆ ಡ್ರೆಸ್‌ ಕೋಡ್‌ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕೆಸೆಟ್‌ ಪರೀಕ್ಷೆಗೆ ಡ್ರೆಸ್‌ ಕೋಡ್‌ ಪ್ರಕಟಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (PC: Unsplash)

ಬೆಂಗಳೂರು: ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್ ಪರೀಕ್ಷೆ) ಜನವರಿ 13ರಂದು ನಡೆಯಲಿದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಇದಕ್ಕೆ ಸಂಬಂಧಿಸಿದ ವಸ್ತ್ರಸಂಹಿತೆ ಮತ್ತು ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಕೆ-ಸೆಟ್ ಪರೀಕ್ಷೆ ಸಂದರ್ಭದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಸುತ್ತೋಲೆ ಹೊರಡಿಸಿದ್ದಾರೆ.

ಕರ್ನಾಟಕದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಜನವರಿ 13 ರ (ಶನಿವಾರ) ಪರೀಕ್ಷೆ ನಡೆಯುತ್ತಿದ್ದು, ಬೆಳಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ಮೊದಲ ಪ್ರಶ್ನೆ ಪತ್ರಿಕೆ ಪರೀಕ್ಷೆ ಇರಲಿದ್ದು, ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಎರಡನೇ ಪ್ರಶ್ನೆಪತ್ರಿಕೆಯ ಪರೀಕ್ಷೆ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ (kea.kar.nic.in)ಗೆ ಭೇಟಿ ನೀಡಿ ಅಲ್ಲಿರುವ ನಿಗದಿತ ಲಿಂಕ್ ಕ್ಲಿಕ್ ಮಾಡಿ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಬಹುದು.

ಅದೇ ರೀತಿ ಅಭ್ಯರ್ಥಿಗಳಿಗೆ ನೀಡಲಾಗಿರುವ ಸೂಚನೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಮಾರ್ಗದರ್ಶನಗಳನ್ನು / ಕಾರ್ಯವಿಧಾನಗಳನ್ನು ತಪ್ಪದೆ ಅನುಸರಿಸಬೇಕು. ಪ್ರವೇಶ ಪತ್ರದಲ್ಲಿ ಮುದ್ರಿಸಿರುವ ಎಲ್ಲ ವಿವರಗಳನ್ನು ಓದಿಕೊಂಡ ಅರ್ಥಮಾಡಿಕೊಳ್ಳಬೇಕು. ಪರೀಕ್ಷಾ ನಿಯಮ ಪಾಲಿಸುತ್ತ ನಿಗದಿತ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗಬೇಕು ಎಂದು ಪ್ರಾಧಿಕಾರ ಸೂಚಿಸಿದೆ.

ಕೆ-ಸೆಟ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಪ್ರಾಧಿಕಾರದ ಸೂಚನೆಗಳು

ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಗಮನಿಸಿ

1. ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ತಲುಪಬೇಕು. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬಹಳ ಮುನ್ನೆಚ್ಚರಿಕೆಯಿಂದಲೇ ಮಾಡಿಕೊಳ್ಳಬೇಕು.

2. ನಿಗದಿತ ಪರೀಕ್ಷಾ ಕೇಂದ್ರವನ್ನು ಹೊರತುಪಡಿಸಿ ಬೇರೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯಲು ಅವಕಾಶ ಇರಲ್ಲ.

3. ಕಡ್ಡಾಯವಾಗಿ ಪ್ರವೇಶ ಪತ್ರ ಮತ್ತು ಮಾನ್ಯತೆ ಇರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.

4. ಎರಡನೇ ಅವಧಿಯ ಪರೀಕ್ಷೆಯು ಮಧ್ಯಾಹ್ನ 12 ರಿಂದ ಪ್ರಾರಂಭವಾಗುವ ಕಾರಣ ಅಭ್ಯರ್ಥಿಗಳು ಮೊದಲನೆ ಅವಧಿ ಪರೀಕ್ಷೆ ಮುಗಿದ ನಂತರ ಕೇಂದ್ರದಿಂದ ಹೊರಗೆ ಹೋಗಲು ಅವಕಾಶವಿಲ್ಲ.

5. ಪ್ರಾಧಿಕಾರದ ಲಿಂಕ್‌ನಲ್ಲಿ ಲಿಪಿಕಾರರ ಮಾಹಿತಿಗಳನ್ನು ನೀಡಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಅವರ ಲಿಪಿಕಾರರ ಮಾಹಿತಿಯನ್ನೂ ಸಹ ಪ್ರವೇಶ ಪತ್ರದಲ್ಲಿ ಮುದ್ರಿಸಲಾಗಿದ್ದು ಗಮನಿಸಬೇಕು.

ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದ ವಿಚಾರ ಗಮನಿಸಿ

1. ಅಭ್ಯರ್ಥಿಯು ಓಎಂಆರ್ ಉತ್ತರ ಪತ್ರಿಕೆಯಲ್ಲಿ ನೋಂದಣಿ ಸಂಖ್ಯೆಯನ್ನು ಬರೆದು ಸಂಬಂಧಿಸಿದ ವೃತ್ತಗಳನ್ನು ಶೇಡ್ ಮಾಡಬೇಕು.

2. ಪ್ರಶ್ನೆಪತ್ರಿಕೆಯ ವರ್ಷನ್ ಕೋಡ್ ಅನ್ನು ತಪ್ಪಿಲ್ಲದೆ ಬರೆದು ಸಂಬಂಧಿಸಿದ ವೃತ್ತಗಳನ್ನು ಶೇಡ್ ಮಾಡಬೇಕು.

3. ನೋಂದಣಿ ಸಂಖ್ಯೆ, ಕೇಂದ್ರ ಸಂಖ್ಯೆ ಮತ್ತು ವಿಷಯ ಸಂಕೇತವನ್ನು ತಪ್ಪಾಗಿ ಬರೆಯುವ ಅಭ್ಯರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಮಾಡಲ್ಲ.

4. ಓಎಂಆರ್​ನಲ್ಲಿನ ನಿಗದಿತ ಜಾಗದಲ್ಲಿ ಕಡ್ಡಾಯವಾಗಿ ಸಹಿ ಮಾಡಬೇಕು.

5. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗುವಂತೆ ಇಲ್ಲ. ಕೊನೆಯ ಬೆಲ್‌ ಸಂದರ್ಭದಲ್ಲಿ ಕೊಠಡಿ ಮೇಲ್ವಿಚಾರಕರು ಉತ್ತರ ಪತ್ರಿಕೆ ಕೇಳಿದಾಗ ಕೊಟ್ಟು ನಂತರ ಹೊರಗೆ ಹೋಗಬೇಕು.

ಕೆ ಸೆಟ್‌ ಬರೆಯುವ ಪುರುಷ ಅಭ್ಯರ್ಥಿಗಳು ಗಮನಿಸಬೇಕಾದ ವಸ್ತ್ರ ಸಂಹಿತೆಯ ಅಂಶ

1. ಪರೀಕ್ಷೆಯ ದಿನ ಪೂರ್ಣ ತೋಳಿನ ಶರ್ಟ್‌ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಬೇಡಿ. ಅರ್ಧ ತೋಳಿನ ಶರ್ಟ್‌ ಧರಿಸಿಯೇ ಹೋಗಿ.

2. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬು ಇಲ್ಲದ / ಕಡಿಮೆ ಜೇಬು ಇರುವ) ಅನ್ನು ಪುರುಷ ಅಭ್ಯರ್ಥಿಗಳು ಧರಿಸಿಕೊಂಡು ಹೋಗಲು ಅವಕಾಶವಿದೆ. ಕುರ್ತಾ ಪೈಜಾಮು, ಜೀನ್ಸ್ ಪ್ಯಾಂಟ್ ಧರಿಸಿ ಹೋಗಲ ಅನುಮತಿ ಇಲ್ಲ.

3. ಪುರುಷ ಅಭ್ಯರ್ಥಿಗಳ ಉಡುಪು ಹಗುರವಾಗಿರಬೇಕು. ಜಿಪ್ ಪಾಕೆಟ್‌, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ಹೆಚ್ಚು ಕಸೂತಿ ಇರುವ ಬಟ್ಟೆ ಧರಿಸಿ ಹೋಗಲು ಅವಕಾಶ ಇಲ್ಲ.

4. ಪರೀಕ್ಷಾ ಹಾಲ್ ಒಳಗೆ ಶೂ ಧರಿಸಿ ಹೋಗುವಂತೆ ಇಲ್ಲ. ಅಭ್ಯರ್ಥಿ ತೆಳು ಅಡಿಭಾಗ ಇರುವ ಸಾಮಾನ್ಯ ಚಪ್ಪಲಿ, ಪಾದರಕ್ಷೆ ಧರಿಸಬಹುದು.

5. ಕತ್ತಿನ ಸುತ್ತ ಯಾವುದೇ ಲೋಹದ ಆಭರಣ ಧರಿಸುವಂತೆ ಇಲ್ಲ. ಕಿವಿಯೋಲೆ, ಉಂಗುರ, ಕಡಗ ಧರಿಸುವುದಕ್ಕೂ ಅವಕಾಶ ಇಲ್ಲ.

ಮಹಿಳಾ ಅಭ್ಯರ್ಥಿಗಳು ಗಮನಿಸಬೇಕಾದ ವಸ್ತ್ರ ಸಂಹಿತೆಯ ಅಂಶಗಳು

1. ಹೆಚ್ಚಿನ ಕಸೂತಿ, ಹೂಗಳು, ಬಟನ್‌ಗಳು ಹೊಂದಿರುವ ಉಡುಪು ಧರಿಸುವಂತೆ ಇಲ್ಲ. ಪೂರ್ಣ ತೋಳಿನ ಉಡುಪು/ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಹೋಗಬಾರದು.

2. ಮುಜುಗರಕ್ಕೆ ಎಡೆಯಾಗದಂತೆ ಅರ್ಧ ತೋಳಿನ ಉಡುಪು ಧರಿಸಬಹುದು. ಪರೀಕ್ಷಾ ನಿಯಮಕ್ಕೆ ಅಡ್ಡಿಯಾಗದಂತೆ ಉಡುಪು ಧರಿಸುವುದು ಮುಖ್ಯ.

3. ಎತ್ತರ ಹಿಮ್ಮಡಿಯ ಶೂ. ಚಪ್ಪಲಿ ಮತ್ತು ದಪ್ಪ ಅಡಿ ಭಾಗದ ಶೂ / ಚಪ್ಪಲಿ ಧರಿಸಬಾರದು.

4. ಪರೀಕ್ಷಾ ಹಾಲ್ ಒಳಗೆ ಹೋಗುವಾಗ ತೆಳು ಅಡಿಭಾಗದ ಚಪ್ಪಲಿಗಳು ಧರಿಸುವುದು ಕಡ್ಡಾಯ.

5. ಯಾವುದೇ ಲೋಹದ ಆಭರಣ ಧರಿಸಬಾರದು. ಮಂಗಳಸೂತ್ರ ಮತ್ತು ಕಾಲುಂಗುರಕ್ಕೆ ನಿರ್ಬಂಧ ಇಲ್ಲ.

ಕೆ ಸೆಟ್‌ 2023ರ ಪರೀಕ್ಷಾ ಹಾಲ್‌ನಲ್ಲಿ ಇವುಗಳ ಬಳಕೆಗೆ ಇಲ್ಲ ಅವಕಾಶ

1. ಎಲೆಕ್ಟ್ರಾನಿಕ್ ವಸ್ತು, ಮೊಬೈಲ್ ಫೋನ್‌, ಪೆನ್​ಡ್ರೈವ್‌, ಇಯರ್ ಫೋನ್‌, ಮೈಕ್ರೋಫೋನ್‌, ಬ್ಲೂ ಟೂಥ್ ಸಾಧನ ಮತ್ತು ಕೈ ಗಡಿಯಾರ

2. ಪರೀಕ್ಷಾ ಕೊಠಡಿಯೊಳಗೆ ತಿನ್ನುವುದಕ್ಕೆ ಅವಕಾಶ ಇಲ್ಲ. ತಿನ್ನಬಹುದಾದ ಪದಾರ್ಥ ತೆಗೆದುಕೊಂಡು ಹೋಗುವಂತೆ ಇಲ್ಲ.

3. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್​ ಮತ್ತು ಲಾಗ್ ಟೇಬಲ್​ ತರುವಂತಿಲ್ಲ.

4. ತಲೆಯ ಮೇಲೆ ಟೋಪಿ/ ಹ್ಯಾಟ್‌ ಧರಿಸಿಬಾರದು. ಯಾವುದೇ ರೀತಿಯ ಮಾಸ್ಕ್‌ ಧರಿಸುವಂತಿಲ್ಲ.

ಕೆ ಸೆಟ್‌ 2023ರ ಪರೀಕ್ಷಾ ಹಾಲ್‌ಗೆ ತಪ್ಪದೇ ಕೊಂಡೊಯ್ಯಬೇಕಾದ ವಸ್ತುಗಳಿವು

1. ಪರೀಕ್ಷೆಯ ದಿನ ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕು.

2. ಪಾಸ್‌ಪೋರ್ಟ್‌ ಗಾತ್ರದ ಇತ್ತೀಚಿನ 2 ಫೋಟೋಗಳು

3. ಸರ್ಕಾರ ಮಾನ್ಯ ಮಾಡಿದ ಫೋಟೋ ಗುರುತಿನ ಚೀಟಿ

Whats_app_banner