ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕ ಪ್ರಕಟಣೆ ಕಡ್ಡಾಯ, ಕರ್ನಾಟಕದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕಡಕ್ ಸೂಚನೆ, ಶಿಕ್ಷಣ ಇಲಾಖೆ ಸುತ್ತೋಲೆ
ಕನ್ನಡ ಸುದ್ದಿ  /  ಕರ್ನಾಟಕ  /  ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕ ಪ್ರಕಟಣೆ ಕಡ್ಡಾಯ, ಕರ್ನಾಟಕದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕಡಕ್ ಸೂಚನೆ, ಶಿಕ್ಷಣ ಇಲಾಖೆ ಸುತ್ತೋಲೆ

ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕ ಪ್ರಕಟಣೆ ಕಡ್ಡಾಯ, ಕರ್ನಾಟಕದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕಡಕ್ ಸೂಚನೆ, ಶಿಕ್ಷಣ ಇಲಾಖೆ ಸುತ್ತೋಲೆ

ಕರ್ನಾಟಕದಲ್ಲಿ ಹೊಸ ಶೈಕ್ಷಣಿಕ ವರ್ಷ ಶುರುವಾಗುತ್ತಿದ್ದು, ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕ ಪ್ರಕಟಿಸುವುದು ಕಡ್ಡಾಯ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕಡಕ್ ಸೂಚನೆ ನೀಡಿ, ಶಿಕ್ಷಣ ಇಲಾಖೆ ಸುತ್ತೋಲೆ ರವಾನಿಸಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)

ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕ ಪ್ರಕಟಣೆ ಕಡ್ಡಾಯ ಎಂದು ಕರ್ನಾಟಕದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕಡಕ್ ಸೂಚನೆ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. (ಸಾಂಕೇತಿಕ ಚಿತ್ರ)
ಶಾಲಾ ನೋಟಿಸ್ ಬೋರ್ಡ್‌ನಲ್ಲಿ ಶುಲ್ಕ ಪ್ರಕಟಣೆ ಕಡ್ಡಾಯ ಎಂದು ಕರ್ನಾಟಕದ ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಕಡಕ್ ಸೂಚನೆ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. (ಸಾಂಕೇತಿಕ ಚಿತ್ರ) (PC - Change_petition/ Canva)

ಬೆಂಗಳೂರು: ಖಾಸಗಿ ಶಾಲೆಗಳು ನಿಗದಿಪಡಿಸಿರುವ ಪ್ರವೇಶ ಹಾಗೂ ಇತರೆ ಶುಲ್ಕಗಳ ವಿವರಗಳನ್ನು ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಶಾಲೆಯ ಸೂಚನಾ ಫಲಕ ಹಾಗೂ ಇಲಾಖಾ ಜಾಲತಾಣದಲ್ಲಿ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ.

ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ 2024-25 ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಶುಲ್ಕ ವಸೂಲಾತಿ ಪ್ರಕ್ರಿಯೆ ಆರಂಭವಾಗಿರುತ್ತದೆ. ಶಿಕ್ಷಣ ಹಕ್ಕು ಕಾಯಿದೆ ಪ್ರಕಾರ ಎಲ್ಲ ಶಾಲೆಗಳ ಆಡಳಿತ ಮಂಡಳಿಗಳು ತಾವು ನಿಗದಿಪಡಿಸುವ ಶುಲ್ಕದ ವಿವರ, ವಿದ್ಯಾರ್ಥಿಗಳ ದಾಖಲಾತಿ, ವಸೂಲಾದ ಶುಲ್ಕದ ಮಾಹಿತಿಯನ್ನು ಶಾಲೆಯ ಜಾಲತಾಣ, ಸೂಚನಾ ಫಲಕ ಮತ್ತು ಇಲಾಖಾ ಜಾಲತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು.

ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸುವುದು ಕಡ್ಡಾಯವಾಗಿರುತ್ತದೆ. ಯಾವುದೇ ಶಾಲೆಗಳು ನಿಯಮಗಳನ್ನು ಪಾಲಿಸದೇ ದೂರು ದಾಖಲಾದ ಸಂದರ್ಭದಲ್ಲಿ ಕರ್ನಾಟಕ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣ ನಿಯಮಗಳ ಅಡಿಯಲ್ಲಿ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಹುತೇಕ ಖಾಸಗಿ ಶಾಲೆಗಳು ಶೇ. 20 0 ರಿಂದ 40ರಷ್ಟು ಶುಲ್ಕವನ್ನು ಹೆಚ್ಚಿಸಿದ್ದವು. ಖಾಸಗಿ ಶಾಲೆಗಳ ಈ ಕ್ರಮದಿಂದ ಪೋಷಕರಿಗೆ ಹೊರೆಯಾಗಿತ್ತು. ಈ ಕುರಿತು ಹಲವು ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

1 ರಿಂದ 10 ನೇ ತರಗತಿಗಳಿಗೆ ಕಲಿ-ನಲಿ ಮತ್ತು ಸೇತುಬಂಧ ಕಾರ್ಯಕ್ರಮ ಅನುಷ್ಠಾನಕ್ಕೆ ಸುತ್ತೋಲೆ

2024-25ನೇ ಸಾಲಿಗೆ ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು 1 ರಿಂದ 3 ನೇ ತರಗತಿಗಳಿಗೆ (ಕಲಿ-ನಲಿ) ಶಾಲಾ ಪ್ರಾರಂಭದ ಮೊದಲ 30 ದಿನಗಳು ಹಾಗೂ 4 ರಿಂದ 10 ನೇ ತರಗತಿಗಳಿಗೆ ಮೊದಲ 15 ದಿನಗಳನ್ನು ನಿಗದಿಪಡಿಸಲಾಗಿದೆ, ಈ ಹಿನ್ನಲೆಯಲ್ಲಿ 1 ರಿಂದ 10 ನೇ ತರಗತಿವರೆಗೆ ತರಗತಿವಾರು ಮತ್ತು ವಿಷಯವಾರು ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಹಾಗೂ ಪಥಮ ಭಾಷೆಗಳಾದ ಉರ್ದು, ಮರಾಠಿ, ತೆಲುಗು ಮತ್ತು ತಮಿಳಿಗೆ ಸಂಬಂಧಿಸಿದ ಕಲಿಕಾ ಸಾಮಗ್ರಿಯು DSERT ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಇವುಗಳನ್ನು ಬಳಸಿಕೊಂಡು ಸೇತುಬಂಧ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಇಲಾಖೆ ಸೂಚಿಸಿದೆ.

ಸೇತುಬಂಧ ಕಾರ್ಯಕ್ರಮದ ಅನುಷ್ಠಾನ ಕಾರ್ಯತಂತ್ರಗಳು

2024 25ನೇ ಶೈಕ್ಷಣಿಕ ಸಾಲಿಗೆ ಪೂರಕವಾಗಿ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿ ತರಗತಿಗಳಿಗೆ ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ವಿದ್ಯಾ ಪ್ರವೇಶ ಹಾಗೂ ಸೇತುಬಂಧ ಚಟುವಟಿಕೆಗಳನ್ನು ಸಿದ್ಧಪಡಿಸಿ ನೂತನ ಅಭ್ಯಾಸ ಸಹಿತ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ.

ಕಲಿ-ನಲಿ ಪಠ್ಯಕ್ರಮ ಅನುಸರಿಸುತ್ತಿರುವ 1 ರಿಂದ 3 ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಭಾಷೆಗಳ ಸೇತುಬಂಧ ಸಾಹಿತ್ಯ DSERT ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಾಹಿತ್ಯವನ್ನು ಬಳಸಿಕೊಳ್ಳಬಹುದು. 4 ರಿಂದ 10 ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದ ಹಾಗೂ ಉರ್ದು, ಮರಾಠಿ, ತೆಲುಗು ಮತ್ತು ತಮಿಳು ಪ್ರಥಮ ಭಾಷೆಗಳ ಸೇತುಬಂಧ ಸಾಹಿತ್ಯ DSERT ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಸಾಹಿತ್ಯವನ್ನು ಬಳಸಬೇಕು.

2024 25 ನೇ ಸಾಲಿನಲ್ಲಿ 8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ, ಆಂಗ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಮರು ಸಿಂಚನ ಕಾರ್ಯಕ್ರಮದಡಿ ಸಿದ್ಧಪಡಿಸಿರುವ ವಿದ್ಯಾರ್ಥಿ ಕೈಪಿಡಿಗಳನ್ನು DSERT ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸದರಿ ಸಾಹಿತ್ಯದ ಬುನಾದಿ ಹಂತದ ಚಟುವಟಿಕೆಗಳನ್ನು ಈ ಸುತ್ತೋಲೆಗೆ ಲಗತ್ತಿಸಿರುವ ಅನುಬಂಧದಂತೆ ಅಗತ್ಯಾನುಸಾರ ಸೇತುಬಂಧ ಕಾರ್ಯಕ್ರಮಕ್ಕೆ ಬಳಸಬಹುದು ಎಂದು ಇಲಾಖೆ ತಿಳಿಸಿದೆ.

(ವರದಿ- ಎಚ್. ಮಾರುತಿ, ಬೆಂಗಳೂರು)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner