ಕನ್ನಡ ಸುದ್ದಿ  /  ಕರ್ನಾಟಕ  /  Sslc Results 2024: ಚರ್ಚೆಗೆ ಗ್ರಾಸವಾದ ಬೆಂಗಳೂರು ನಗರ, ಸುತ್ತಮುತ್ತಲ ಜಿಲ್ಲೆಗಳ ಕಳಪೆ ಸಾಧನೆ, ಇಲ್ಲಿದೆ ಅಂಕಿಅಂಶ

SSLC Results 2024: ಚರ್ಚೆಗೆ ಗ್ರಾಸವಾದ ಬೆಂಗಳೂರು ನಗರ, ಸುತ್ತಮುತ್ತಲ ಜಿಲ್ಲೆಗಳ ಕಳಪೆ ಸಾಧನೆ, ಇಲ್ಲಿದೆ ಅಂಕಿಅಂಶ

ಎಸ್‌ಎಸ್‌ಎಲ್‌ಸಿ ಫಲಿತಾಂಶ 2024: ಬೆಂಗಳೂರು ನಗರದಲ್ಲಿ ಹಲವು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿವೆ. ದೇಶ ವಿದೇಶಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿಗೆ ಒದಲು ಬರುತ್ತಾರೆ. ಆದರೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮಾತ್ರ ಬೆಂಗಳೂರು ಹಿಂದೆ ಏಕೆ?

ಚರ್ಚೆಗೆ ಗ್ರಾಸವಾದ ಬೆಂಗಳೂರು ನಗರ, ಹಲವು ಜಿಲ್ಲೆಗಳ ಕಳಪೆ ಸಾಧನೆ (ಪ್ರಾತಿನಿಧಿಕ ಚಿತ್ರ)
ಚರ್ಚೆಗೆ ಗ್ರಾಸವಾದ ಬೆಂಗಳೂರು ನಗರ, ಹಲವು ಜಿಲ್ಲೆಗಳ ಕಳಪೆ ಸಾಧನೆ (ಪ್ರಾತಿನಿಧಿಕ ಚಿತ್ರ) (PTI)

ಬೆಂಗಳೂರು: ಉನ್ನತ ಶಿಕ್ಷಣಕ್ಕಾಗಿ ದೇಶ, ವಿದೇಶಗಳ ವಿದ್ಯಾರ್ಥಿಗಳು ಕರ್ನಾಟಕ ರಾಜಧಾನಿ ಬೆಂಗಳೂರಿಗೆ ಆಗಮಿಸುತ್ತಾರೆ. ಸಾವಿರಾರು ಪೋಷಕರು ಮಕ್ಕಳ ವಿಧ್ಯಾಭ್ಯಾಸಕ್ಕಾಗಿಯೇ ಬೆಂಗಳೂರಿಗೆ ಬಂದು ನೆಲೆಸುತ್ತಾರೆ. ಆದರೆ ಬೆಂಗಳೂರು ಮತ್ತು ಸುತ್ತಮುತ್ತಲಿನ.ಜಿಲ್ಲೆಗಳು ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಮಾತ್ರ ಇತರ ಜಿಲ್ಲೆಗಳಿಗಿಂತ ಹಿಂದುಳಿದಿರುತ್ತವೆ. ಕಾರಣಗಳಾದರೂ ಏನು?

ಟ್ರೆಂಡಿಂಗ್​ ಸುದ್ದಿ

ಈ ಬಾರಿಯ ಎಸ್ಎಸ್ಎಲ್‌ಸಿ ಫಲಿತಾಂಶ ಇಡೀ ರಾಜ್ಯದಲ್ಲಿ ನಿರಾಶೆಯನ್ನು ಮೂಡಿಸಿದೆಯಾದರೂ ಗ್ರಾಮೀಣ ಪ್ರದೇಶಗಳ ಜಿಲ್ಲೆಗಳು ತಮ್ಮ ಸೀಮಿತ ಸೌಕರ್ಯಗಳಲ್ಲೇ ಮುನ್ನಡೆ ಸಾಧಿಸಿವೆ. ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಹಾಸನ, ಮೈಸೂರು ಮೊದಲಾದ ಜಿಲ್ಲೆಗಳಲ್ಲಿ ಫಲಿತಾಂಶ ಆಶಾದಾಯಕವಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಜಿಲ್ಲೆಗಳ ಫಲಿತಾಂಶ ನಿರಾಸೆ ಮೂಡಿಸಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ರಾಮನಗರ, ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಫಲಿತಾಂಶವೂ ಪ್ರಗತಿ ಕಂಡಿಲ್ಲ.

ಜಿಲ್ಲಾವಾರು ಫಲಿತಾಂಶದಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆ 9ನೇ ಸ್ಥಾನದಲ್ಲಿದೆ. 14,223 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11,900 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 83.67 ರಷ್ಟು ಫಲಿತಾಂಶ ಬಂದಿದ್ದು ಕಳೆದ ವರ್ಷ 4ನೇ ಸ್ಥಾನದಲ್ಲಿದ್ದ ಈ ಜಿಲ್ಲೆ ಈ ವರ್ಷ 9ನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 63,186 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 49,916 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ 79ರಷ್ಟು ಫಲಿತಾಂಶ ಬಂದಿದ್ದು, 12ನೇ ಸ್ಥಾನಕ್ಕೆ ಏರಿದೆ. ಕಳೆದ ವರ್ಷ ಈ ಜಿಲ್ಲೆಯು ಕೊನೆಯ ಸ್ಥಾನದಲ್ಲಿತ್ತು.

ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 49,444 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 38,117 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 77.09 ರಷ್ಟು ಫಲಿತಾಂಶ ಪ್ರಕಟವಾಗಿದ್ದು 32 ನೇ ಸ್ಥಾನದಿಂದ ಈ ವರ್ಷ 14 ನೇ ಸ್ಥಾನಕ್ಕೆ ಏರಿದೆ. ರಾಮನಗರ ಜಿಲ್ಲೆಯಲ್ಲಿ 13,088 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 9,100 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2023ರಲ್ಲಿ 21 ನೇ ಸ್ಥಾನದಲ್ಲಿದ್ದ ಈ ಜಿಲ್ಲೆ ಈ ಬಾರಿ 26ನೇ ಸ್ಥಾನಕ್ಕೆ ಕುಸಿದಿದೆ. ಮಂಡ್ಯ ಜಿಲ್ಲೆಯಲ್ಲಿ 20,529 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 15,108 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶೇ 73.59 ರಷ್ಟು ಫಲಿತಾಂಶ ಬಂದಿದ್ದು, 19ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿತ್ತು.

ಕೋಲಾರ ಜಿಲ್ಲೆಯಲ್ಲಿ 19,719 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 14,503 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 73.57 ರಷ್ಟು ಫಲಿತಾಂಶ ಪ್ರಕಟವಾಗಿದ್ದು 6 ನೇ ಸ್ಥಾನದಿಂದ ಈ ವರ್ಷ 20 ನೇ ಸ್ಥಾನಕ್ಕೆ ಕುಸಿದಿದೆ. ಶೂನ್ಯ ಫಲಿತಾಂಶಕ್ಕೂ ಬೆಂಗಳೂರು ಕೊಡುಗೆ ನೀಡಿದೆ. ಬೆಂಗಳೂರು ಉತ್ತರ ಜಿಲ್ಲೆಯ ಮೂರು ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಪ್ರಕಟವಾಗಿದೆ. ಇಡೀ ರಾಜ್ಯದಲ್ಲಿ ಕೃಪಾಂಕಗಳನ್ನು ನೀಡಿಯೂ ಕಡಿಮೆ ಫಲಿತಾಂಶ ಹೊರ ಬಿದ್ದಿರುವುದು ಆತಂಕಕಾರಿಯಾದ ವಿಷಯವಾಗಿದೆ. ಶಿಕ್ಷಕರು, ಪೋಷಕರು ವಿಶೇಷವಾಗಿ ಚಿಂತನೆ ಮಾಡಬೇಕಾಗಿದೆ.

ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ. ರ‍್ಯಾಂಕ್‌ಗಳ ವಿಷಯದಲ್ಲಿ ಬೆಂಗಳೂರು ಮುಂದಿದೆ. ನಾಲ್ವರು ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿರುವುದು ಹೆಮ್ಮೆಯ ಸಂಗತಿ. ಶಿರಸಿಯ ನಾಲ್ವರು ವಿದ್ಯಾರ್ಥಿಗಳು ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದಾರೆ.

ವರದಿ: ಎಚ್.ಮಾರುತಿ

IPL_Entry_Point