ಭಾನುವಾರದ ಜಿಜ್ಞಾಸೆ, ಯಾವುದು ವಿದ್ಯೆ; ಶಿಲ್ಪಿ ಅರುಣ್ ಯೋಗಿರಾಜ್ ಕಲಿಕಾ ನೆಲೆಗಟ್ಟಲ್ಲಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಚಿಂತನೆ
ಕನ್ನಡ ಸುದ್ದಿ  /  ಕರ್ನಾಟಕ  /  ಭಾನುವಾರದ ಜಿಜ್ಞಾಸೆ, ಯಾವುದು ವಿದ್ಯೆ; ಶಿಲ್ಪಿ ಅರುಣ್ ಯೋಗಿರಾಜ್ ಕಲಿಕಾ ನೆಲೆಗಟ್ಟಲ್ಲಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಚಿಂತನೆ

ಭಾನುವಾರದ ಜಿಜ್ಞಾಸೆ, ಯಾವುದು ವಿದ್ಯೆ; ಶಿಲ್ಪಿ ಅರುಣ್ ಯೋಗಿರಾಜ್ ಕಲಿಕಾ ನೆಲೆಗಟ್ಟಲ್ಲಿ ಲೇಖಕ ರಂಗಸ್ವಾಮಿ ಮೂಕನಹಳ್ಳಿ ಅವರ ಚಿಂತನೆ

Sunday Inquisitive Thoughts: ಅಯೋಧ್ಯೆ ರಾಮಮಂದಿರದಲ್ಲಿ ವಿರಾಜಮಾನನಾದ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದವರು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್. ಕತ್ತನೆ ಕಾರ್ಯ ಅವರಿಗೆ ಪಾರಂಪರಿಕವಾಗಿ ಕರಗತವಾದುದು. ಅವರು ಕಲಿತದ್ದು ಎಂಬಿಎ. ಈ ವಿಚಾರವೇ ಲೇಖಕ ರಂಗಸ್ವಾಮಿ ಮೂಕನಹಳ್ಳಿಯವರ ಭಾನುವಾರದ ಜಿಜ್ಞಾಸೆಗೆ ಕಾರಣವಾಗಿದ್ದು…

ಲೇಖಕ ರಂಗಸ್ವಾಮಿ ಮೂಕನಹಳ್ಳಿಯವರ ಭಾನುವಾರದ ಜಿಜ್ಞಾಸೆ - ಯಾವುದು ವಿದ್ಯೆ? (ಸಾಂಕೇತಿಕ ಚಿತ್ರ)
ಲೇಖಕ ರಂಗಸ್ವಾಮಿ ಮೂಕನಹಳ್ಳಿಯವರ ಭಾನುವಾರದ ಜಿಜ್ಞಾಸೆ - ಯಾವುದು ವಿದ್ಯೆ? (ಸಾಂಕೇತಿಕ ಚಿತ್ರ)

ಅಯೋಧ್ಯೆ ರಾಮ ಮಂದಿರ (Ayodhya Ram Mandir) ದಲ್ಲಿ ವಿರಾಜಮಾನನಾದ ಬಾಲರಾಮನ ಮೂರ್ತಿ ಕೆತ್ತನೆ ಮಾಡಿದ್ದು ನಮ್ಮ ಮೈಸೂರಿನವರೇ ಆದ ಶಿಲ್ಪಿ ಅರುಣ್ ಯೋಗಿರಾಜ್ (Arun yogiraj). ಕೆತ್ತನೆ ಕಲೆ ಅವರಿಗೆ ಪರಂಪರಾಗತವಾಗಿ ಕರಗತವಾದುದು. ಶಿಕ್ಷಣವಾಗಿ ಅವರಿಗೆ ದಕ್ಕಿದ್ದು ಎಂಬಿಎ. ಇದನ್ನೆಲ್ಲ ಗಮನಿಸುತ್ತ ಲೇಖಕ ರಂಗಸ್ವಾಮಿ ಮೂಕನಹಳ್ಳಿ (Rangaswamy Mookanahalli) ಯವರಿಗೆ ಭಾನುವಾರದ ಜಿಜ್ಞಾಸೆಯಾಗಿ ಕಾಡಿದ್ದು ಯಾವುದು ವಿದ್ಯೆ ಎಂಬ ವಿಚಾರ. ಅವರದ್ದೇ ಪದಗಳಲ್ಲಿ ಅದನ್ನು ಗಮನಿಸೋಣ.

ಭಾನುವಾರದ ಬೆಳಗಿನ ಜಿಜ್ಞಾಸೆ - ಯಾವುದು ವಿದ್ಯೆ ?

ನಮ್ಮ ಕಾಲ ಮೇಲೆ ಯಾವುದು ನಮ್ಮನ್ನು ನಿಲ್ಲುವಂತೆ ಮಾಡುತ್ತದೆ ಅದೇ ವಿದ್ಯೆ. ಅಂದರೆ ಯಾವುದರ ಮೂಲಕ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ, ಯಾವುದು ನಮ್ಮನ್ನು ಇತರರ ಮುಂದೆ ದೇಹಿ ಎಂದು ಕೈಚಾಚದಂತೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ ಅದನ್ನು ನಾವು ವಿದ್ಯೆ ಎನ್ನಬಹುದು.

ಉದಾಹರಣೆ ನೋಡೋಣ , ನಮ್ಮ ಮೈಸೂರಿನ ಅರುಣ್ ಯೋಗಿರಾಜ್ ಎಂಬಿಎ ಪದವಿಯನ್ನು ಪಡೆದವರು , ಕೆತ್ತನೆಯನ್ನು ಪೂರ್ಣ ವೃತ್ತಿಯನ್ನಾಗಿ ಆಯ್ದು ಕೊಳ್ಳುವ ಮುಂಚೆ ಖಾಸಗಿ ಸಂಸ್ಥೆಯಲ್ಲಿ ದುಡಿದವರು. ಆದರೆ ಇಂದು ಅವರಿಗೆ ವಿಶ್ವ ಮಟ್ಟದ ಪ್ರಸಿದ್ದಿ ತಂದುಕೊಟ್ಟದ್ದು ಯಾವುದು ? ಅದು ಅವರ ಕುಲ ಕಸುಬು.

ಬ್ರಿಟಿಷರು ಭಾರತಕ್ಕೆ ಬರುವ ಮುನ್ನ ನಮ್ಮಲ್ಲಿ ತಲೆತಲಾಂತರದಿಂದ ಬಂದ ವೃತ್ತಿಯನ್ನು ಶ್ರದ್ದೆ ಮತ್ತು ಉತ್ಸಾಹದಿಂದ ಮಾಡಿಕೊಂಡು ಬರುತ್ತಿದ್ದೆವು. ಸಮಾಜದಲ್ಲಿ ಸಾಮರಸ್ಯವಿತ್ತು. ಜನರು ಮಾಡುವ ಕೆಲಸದಲ್ಲಿ ನೈಪುಣ್ಯ ಇತ್ತು. ಬೇಕೋ ಬೇಡವೋ ಮನೆಯ ವಾತಾವರಣ, ವಂಶವಾಹಿಗಳ ಕೊಡುಗೆಯ ಕಾರಣ ಕೆಲಸದಲ್ಲಿ ಆ ಮಟ್ಟದ ವೃತ್ತಿಪರತೆ , ನೈಪುಣ್ಯ ಕಾಣಲು ಸಿಗುತ್ತಿತ್ತು. ಒಂದು ತಲೆಯಿಂದ ಇನ್ನೊಂದು ತಲೆಮಾರಿಗೆ ಮನೆಯ ಹಿರಿಯ ಕೆಲಸವನ್ನು ಪ್ರೀತಿ ಮತ್ತು ಶ್ರದ್ದೆಯಿಂದ ವರ್ಗಾಯಿಸುತ್ತಿದ್ದ ಕಾರಣ ಕಿರಿಯರು ಅದನ್ನು ಕಲಿಯುತ್ತಿದ್ದರು. ಈ ಕಾರಣ ಕೆಲಸದಲ್ಲಿ ಒತ್ತಡ , ಸ್ಪರ್ಧೆ ಇರುತ್ತಿರಲಿಲ್ಲ , ಸಹಜವಾಗೇ ಆರೋಗ್ಯ ಚನ್ನಾಗಿರುತಿತ್ತು. ಬಿಪಿ , ಶುಗರ್ ಅವುಗಳನ್ನು ನಿಯಂತ್ರಣದಲ್ಲಿಡಲು ಮಾತ್ರೆ ಯಾವುದೋ ಬೇಕಿರಲಿಲ್ಲ.

ಸಮಾಜದಲ್ಲಿ ಈ ಮಟ್ಟದ ನೆಮ್ಮದಿಯ ಬದುಕನ್ನು ಕಂಡು ಬ್ರಿಟಿಷರಿಗೆ ತಲೆ ಕೆಟ್ಟು ಹೋಗುತ್ತದೆ. ಹೀಗೆ ಒಂದು ಹಳ್ಳಿ , ಒಂದು ಸಮುದಾಯ ಬದುಕಲು ಬೇಕಾದ ಎಲ್ಲ ಇಕೋ ಸಿಸ್ಟಮ್ ಕಟ್ಟಿಕೊಂಡು ನೆಮ್ಮದಿಯಾಗಿದ್ದ ಜನರನ್ನು ಕಂಡು ತಾವೇ ಶ್ರೇಷ್ಠ ಎನ್ನುವ ಅಹಮ್ಮಿನ ಬ್ರಿಟಿಷರಿಗೆ ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ವ್ಯವಸ್ಥಿತವಾಗಿ ನಮ್ಮ ಸಮಾಜವನ್ನು, ನಮ್ಮ ವ್ಯವಸ್ಥೆಯನ್ನು ಒಡೆಯಲು ಶುರು ಮಾಡುತ್ತಾರೆ. ಅದೇಕೆ ಬಡಗಿ ಮಾತ್ರ ಮರದ ಕೆಲಸ ಮಾಡಬೇಕು? ಅದೇಕೆ ಚಮ್ಮಾರ ಮಾತ್ರ ಚಪ್ಪಲಿ ಹೊಲಿಯಬೇಕು ? ಅದೇಕೆ ಪುರೋಹಿತ ಮಾತ್ರ ಪೂಜೆ ಮಾಡಬೇಕು? ಹೀಗೆ ಎಲ್ಲದಕ್ಕೂ ವಿತಂಡವಾದವನ್ನು, ನಿರೀಶ್ವರವಾದವನ್ನು ಬಿತ್ತಲು ಶುರು ಮಾಡಿದರು.

ಇದು ಹೇಗಾಯ್ತು ಗೊತ್ತ? ಕೋಗಿಲೆಯೇ ಏಕೆ ಹಾಡಬೇಕು? ಅದೇನು ಹಾಡಲು ಪೇಟೆಂಟ್ ಪಡೆದಿದೆಯೇ? ಅದೇಕೆ ನವಿಲು ಮಾತ್ರ ನೃತ್ಯ ಮಾಡಬೇಕು? ನೃತ್ಯದ ಹಕ್ಕು ಅದಕ್ಕೆ ಮಾತ್ರ ಸೀಮಿತವೇ? ಅದೇಕೆ ಮಂಗ ಮಾತ್ರ ಮರದಿಂದ ಮರಕ್ಕೆ ಜಿಗಿಯಬೇಕು? ಆನೆಯೇಕೆ ಜಿಗಿಯಬಾರದು? ಜಿಂಕೆ, ಚಿರತೆ ಮಾತ್ರ ಏಕೆ ವೇಗವಾಗಿ ಓಡಬೇಕು? ಕರಡಿಯೂ ಪ್ರಯತ್ನಪಟ್ಟರೆ ಅವಕ್ಕಿಂತ ಹೆಚ್ಚು ವೇಗವಾಗಿ ಓಡಲು ಸಾಧ್ಯವಿಲ್ಲವೇ? ಇಂತಹ ಅಪ್ರಬುದ್ಧ ಚಿಂತನೆಗಳನ್ನು ಸಮಾಜದಲ್ಲಿ ಹರಡುವುದರ ಮೂಲಕ, ಕಸುಬುಗಳಲ್ಲಿ ಜಾತಿಯನ್ನು, ಅದರಲ್ಲಿ ಶ್ರೇಷ್ಠ ಮತ್ತು ನಿಕೃಷ್ಟ ಎನ್ನುವ ಬೇಧವನ್ನು ಹುಟ್ಟುಹಾಕುತ್ತಾರೆ. ಸಮಾಜದ ಶಾಂತಿಯನ್ನು, ಸಾಮರಸ್ಯವನ್ನು ಕದಡುವುದರಲ್ಲಿ ಗೆಲ್ಲುತ್ತಾರೆ. ಅವರ ಮಂತ್ರ ಬಹಳ ಸಿಂಪಲ್ - ಡಿವೈಡ್ ಅಂಡ್ ರೂಲ್. ಒಟ್ಟಾಗಿರುವ ಸಮಾಜವನ್ನು ಒಡೆಯುವುದು ಸುಲಭವಲ್ಲ ಎನ್ನುವುದು ಅವರಿಗೆ ತಿಳಿದಿತ್ತು.

ಕಸುಬಿಗೆ ತಕ್ಕಂತೆ ಆ ಮನೆತನವನ್ನು ಗುರುತಿಸಲಾಗುತ್ತು. ಮನೆತನಕ್ಕೆ ಆ ಕಸುಬಿನ ಹೆಸರು ಹಿಂದೆಯೋ ಮುಂದೆಯೋ ಸೇರಿಕೊಳ್ಳುತ್ತಿತ್ತು. ಸಾವಿರಾರು ವರ್ಷದಿಂದ ಬಂದ ಈ ವ್ಯವಸ್ಥೆಯಲ್ಲಿ ಶಾಂತಿಯಿತ್ತು. ದುಗುಡಕ್ಕೆ , ಒತ್ತಡಕ್ಕೆ ಜಾಗವಿರಲಿಲ್ಲ. ಯಾವಾಗ ಸಮಾಜದಲ್ಲಿ ವಿತಂಡ ವಾದವನ್ನು ಬಿತ್ತಲಾಯಿತು ಆಗ ಸಮಾಜ ಬದಲಾಯ್ತು. ಕಸುಬು ಜಾತಿಯ ರೂಪವನ್ನು ಅದರಲ್ಲಿ ಮೇಲುಕೀಳುಗಳ ಆಟವನ್ನು ಪಡೆದುಕೊಂಡವು, ನಿಧಾನವಾಗಿ ನಾವು ಇಂದು ಕಾಣುತ್ತಿರುವ ಸಮಾಜವಾಗಿ ನಿಂತು ಬಿಟ್ಟೆವು. ಇದು ತಪ್ಪು ಎಂದು ಹೇಳುವ ಕ್ಷಮತೆಯನ್ನು ನಾವು ಬೆಳಸಿಕೊಳ್ಳುತ್ತಿಲ್ಲ. ಪುಟಾಣಿ ಮಗು , ಐದಾರು ವರ್ಷದ ಮಗು ಲತಾ ಮಂಗೇಶ್ಕರ್ ಮೀರಿಸುವಂತೆ ಹಾಡುತ್ತದೆ, ಆ ಮಗುವಿನಲ್ಲಿ ಆ ದೈವತ್ವ ಎಲ್ಲಿಂದ ಬಂತು? ಬ್ರಿಟಿಷರು ವಂಶಪಾರಂಪರಿಕವಾಗಿ ಬರುವುದು ಖಾಯಿಲೆ ಮಾತ್ರ ಎಂದು ಬುರುಡೆ ಬಿಟ್ಟರು ನಾವು ಅದನ್ನು ನಂಬಿದೆವು. ಇಲ್ಲ ಸ್ವಾಮಿ ಅದು ಸುಳ್ಳು, ವಂಶಪಾರಂಪರಿಕವಾಗಿ ಮನೆಯಲ್ಲಿ ಇದ್ದ ಕಲೆ, ಸಾಹಿತ್ಯ, ಸಂಗೀತ ಅಥವಾ ಇನ್ನೇನೋ ಅದು ನಮ್ಮಲ್ಲಿ ಬಂದಿರುತ್ತದೆ. ಆದರೆ ನಾವು ಅದನ್ನು ಗಮನಿಸದೆ ಎಂಬಿಎ ಮಾಡುವ ಆತುರಕ್ಕೆ ಬೀಳುತ್ತೇವೆ.

ಒಂದು ಗೆರೆ ಎಳೆದು ಅಲ್ಲಿ ಹುಲಿ, ಸಿಂಹ, ಆನೆ, ಜಿಂಕೆ, ಕರಡಿ ಹೀಗೆ ಎಲ್ಲ ಪ್ರಾಣಿಗಳನ್ನೂ ಸಾಲಿನಲ್ಲಿ ನಿಲ್ಲಿಸಿ ವಿಷಲ್ ಹೊಡೆದು ಸ್ಟಾರ್ಟ್, ಓಡಲು ಶುರು ಮಾಡಿ ಎಂದರೆ ಹೇಗಿರುತ್ತೆ ? ಇವತ್ತಿನ ನಮ್ಮ ಸಮಾಜ ಮಾಡುತ್ತಿರುವುದು ಇದನ್ನೇ! ನಮ್ಮ ಶಿಕ್ಷಣ ವ್ಯವಸ್ಥೆ ಇರುವುದು ಹೀಗೆ. ಓಟದಲ್ಲಿ ಸೋತ ಆನೆಯ ಸಂಕಟವನ್ನು ಬಣ್ಣಿಸುವುದು ಹೇಗೆ? ಅದರ ಶಕ್ತಿಯ ಅರಿವು ಮೂಡಿಸುವುದರ ಬದಲು ಓಟದಲ್ಲಿ ನೀನು ನಪಾಸು ಎಂದರೆ ಅದು ಸಮ್ಮತವೆ? 2008ರಲ್ಲಿ ಅರುಣ್ ಯೋಗಿರಾಜ್ ತಮ್ಮ ಕೆಲಸಕ್ಕೆ ಗುಡ್ ಬಾಯ್ ಹೇಳಿ ಮೂಲವೃತ್ತಿಯ ಶಿಲ್ಪಿಯಾಗದಿದ್ದರೆ ಇಂದಿನ ಈ ದಿನವನ್ನು ಅವರು ಕಾಣಲು ಸಾಧ್ಯವಾಗುತ್ತಿತ್ತೇ?

ನಮ್ಮ ಶಕ್ತಿಯೇನು? ನಮ್ಮ ಮೂಲ ಕಸುಬು ಯಾವುದು ಎನ್ನುವುದನ್ನು ನಾವು ಇಂದು ಮರೆತಿದ್ದೇವೆ . ವಾರ್ಷಿಕ 3 ಅಥವಾ 4 ಲಕ್ಷ ವರಮಾನ ಇರುವ ಜನರು ಕೂಡ ತಮ್ಮ ಮಕ್ಕಳನ್ನು ಕಣ್ಣು ಮುಚ್ಚಿ ವಾರ್ಷಿಕ 2 ಅಥವಾ 3 ಲಕ್ಷ ಸುರಿದು ಕಾಲೇಜಿಗೆ ಸೇರಿಸುತ್ತಿದ್ದಾರೆ. ಶಿಕ್ಷಣ ವ್ಯಾಪಾರವಾಗಿದೆ ಬಿಟ್ಟಿದೆ. ಹೋಗಲಿ ಆ ಮಗುವಿಗೆ ಈ ಕೋರ್ಸ್ ಏಕೆ ಸೇರಿದ್ದೇನೆ ಎನ್ನುವ ಕನಿಷ್ಠ ಪರಿಜ್ಞಾನವಿದೆಯೇ ? ಅದೂ ಇಲ್ಲ. ನನ್ನ ಫ್ರೆಂಡ್ ಸೇರಿದ್ದಾನೆ ಅಂಕಲ್ ಅದಕ್ಕೆ ಸೇರಿದೆ ಎನ್ನುವ ಸಿದ್ದ ಉತ್ತರ ಸಿಗುತ್ತದೆ.

ಮೊನ್ನೆ ನಾನು ರಮ್ಯ ಒಂದು ಕಾಲೇಜಿಗೆ ಹೋಗಿದ್ದೆವು. ಒಬ್ಬ ಆಟೋ ಡ್ರೈವರ್ ಮಗಳ ಫೀಸ್ ಕಟ್ಟಲು ಬಂದಿದ್ದರು. ಮಗಳಿಗೆ ತಾನು ಬಂದಿರುವ ವಿಷಯ ತಿಳಿಸಿದ್ದಾರೆ ಅನ್ನಿಸುತ್ತದೆ , ಒಂದೆರೆಡು ನಿಮಿಷದಲ್ಲಿ ಒಳ್ಳೆ ಮಾಡಲ್ ತರಹ ಬಟ್ಟೆ ಧರಿಸಿದ್ದ 17/18 ರ ಪೋರಿಯೊಬ್ಬಳು ಬಂದಳು, ಬಂದವಳೇ ಅವರಪ್ಪನನ್ನು ಕೈ ಹಿಡಿದು ದರದರ ಹೊರಕ್ಕೆ ಎಳೆದೊಯ್ದಳು. ಅಪ್ಪ ಖಾಕಿ ಡ್ರೆಸ್‌ನಲ್ಲಿ ಬಂದಿರುವುದು ಅವಳಿಗೆ ಡೈಜೆಸ್ಟ್ ಆಗಿರಲಿಲ್ಲ ಎನ್ನುವುದು ಬೇಡವೆಂದರೂ ಅವಳಾಡುತ್ತಿದ್ದ ಮಾತಿನಿಂದ ತಿಳಿಯಿತು. ಯಾವುದು ಶಿಕ್ಷಣ ?

ನಿಮಗೆಲ್ಲ ಗೊತ್ತಿರಲಿ , ಇಂದಿಗೆ ಜರ್ಮನಿ ದೇಶದಲ್ಲಿ ಪದವಿ ಓದಬೇಕು ಎನ್ನುವ ಕಡ್ಡಾಯವಿಲ್ಲ. ಜನ ಸಾಮಾನ್ಯ ತನ್ನ ಅಭಿರುಚಿಗೆ ತಕ್ಕಂತೆ ಇಷ್ಟವಾದ ಕೋರ್ಸ್, ಜಾಬ್ ಓರಿಯೆಂಟೆಡ್ ಕೋರ್ಸ್ ಆಯ್ಕೆ ಮಾಡಿಕೊಳ್ಳುತ್ತಾನೆ. ಒಂದೆರೆಡು ವರ್ಷ ಅದನ್ನು ಕಲಿಯುತ್ತಾನೆ ಅಷ್ಟೇ ನಂತರದ್ದು ದುಡಿಮೆಯ ಜೊತೆಗೆ ಕಲಿಕೆ. ಪದವಿ ಪಡೆದ ಮಾತ್ರಕ್ಕೆ ಇಲ್ಲಿ ಉನ್ನತ ಹುದ್ದೆ ಸಿಕ್ಕುವುದಿಲ್ಲ! ನಿಮ್ಮ ಅನುಭವ ಮತ್ತು ನೈಪುಣ್ಯಕ್ಕೆ ಇಲ್ಲಿ ಹೆಚ್ಚು ಮಾನ್ಯತೆ . ಇದನ್ನೇ ಅಲ್ಲವೇ ನಾವು ಭಾರತದಲ್ಲಿ ಶತಮಾನಗಳಿಂದ ಮಾಡಿಕೊಂಡು ಬಂದದ್ದು .

ಇಂದಿಗೆ ಯಾವುದೊ ಅಚಾನಕ್ಕಾಗಿ ಬದಲಾಗುವುದಿಲ್ಲ. ಬದಲಾವಣೆಗೆ ನಾವು ಪ್ರಯತ್ನ ಶುರು ಮಾಡಬೇಕು. ನೀರಿಳಿಯದ ಗಂಟಲಿನಲ್ಲಿ ಕಡುಬು ತುರುಕುವ ಪ್ರಯತ್ನ ಬಿಡಬೇಕು. ಮಕ್ಕಳ ಬೇಕು, ಬೇಡ ಅವರ ಇಷ್ಟ, ಅನಿಷ್ಟಗಳ ಲೆಕ್ಕಾಚಾರ ಹಾಕಿ ಅವರ ಮುಂದಿನ ಭವಿಷ್ಯದ ನಿರ್ಧಾರ ಮಾಡಬೇಕು. ಇಲ್ಲದಿದ್ದರೆ ಕಾಡಿನ ಎಲ್ಲಾ ಪ್ರಾಣಿಗಳನ್ನು ಸಾಲಿನಲ್ಲಿ ನಿಲ್ಲಿಸಿ, ಒನ್, ಟು , ಥ್ರೀ .. ಗೋ ಎಂದು ಓಟಕ್ಕೆ ಹಚ್ಚಿದಂತೆ ಆಗುತ್ತದೆಯೇ ವಿನಾ ಅದರಿಂದ ಯಾವುದೇ ಪ್ರಯೋಜವಿಲ್ಲ .

  • ರಂಗಸ್ವಾಮಿ ಮೂಕನಹಳ್ಳಿ

Whats_app_banner