ತುಮಕೂರು ವಿವಿ ಘಟಿಕೋತ್ಸವ: ಡಾಕ್ಟರೇಟ್ ಪ್ರದಾನ, ರ‍್ಯಾಂಕ್ ವಿಜೇತರಿಗೆ ಚಿನ್ನದ ಪದಕ ವಿತರಣೆ
ತುಮಕೂರು ವಿಶ್ವ ವಿದ್ಯಾನಿಲಯದ 17ನೇ ಘಟಿಕೋತ್ಸವದ ಭಾಷಣ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಿಶ್ರಾಂತ ಅಧ್ಯಕ್ಷ ಡಾ ಎ.ಎಸ್.ಕಿರಣ್ ಕುಮಾರ್, ನಿಮ್ಮ ಆಯ್ಕೆಗಳೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ ಎಂದು ಹೇಳಿದರು.
ತುಮಕೂರು: ಪ್ರತಿ ಕ್ಷೇತ್ರದಲ್ಲೂ ಶಿಕ್ಷಣ ಮಹತ್ವ ಪಡೆದಿದ್ದು, ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರವಾಗಿದೆ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು. ತುಮಕೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ಜರುಗಿದ ವಿಶ್ವ ವಿದ್ಯಾಲಯದ 17ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ಭಾರತ ದೇಶವನ್ನು ವಿಶ್ವಗುರು ಎಂದು ಕರೆಯಲಾಗುತ್ತಿತ್ತು, ನಳಂದ, ತಕ್ಷಶಿಲಾ, ವಿಕ್ರಮಶಿಲಾ ಮುಂತಾದ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿದ್ದವು ಎಂದು ನೆನಪಿಸಿಕೊಂಡರು.
ಈ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಲು ಭಾರತ ಮತ್ತು ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು, ತಾಂತ್ರಿಕ ಶಿಕ್ಷಣವು ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನುರಿತ ಮಾನವ ಸಂಪನ್ಮೂಲ ಸೃಷ್ಟಿಸುವ ಮೂಲಕ ಜನರ ಜೀವನದ ಗುಣಮಟ್ಟ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ತಂತ್ರಜ್ಞಾನವು ಊಹಿಸುವುದಕ್ಕಿಂತ ವೇಗವಾಗಿ ಬದಲಾಗುತ್ತಿದೆ. ಒನ್ ಇಂಡಿಯಾ, ಬೆಸ್ಟ್ ಇಂಡಿಯಾ ಮತ್ತು ಡೆವಲಪ್‌ಡ್ ಇಂಡಿಯಾಗಾಗಿ ಮೇಡ್ ಇನ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಗುರಿ ಸಾಧಿಸುವಲ್ಲಿ ಯುವ ಜನತೆ ಕೊಡುಗೆ ನೀಡಬೇಕಲ್ಲದೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವ ವಿದ್ಯಾಲಯದ ಸಹ- ಕುಲಾಧಿಪತಿ ಡಾ ಎಂ.ಸಿ.ಸುಧಾಕರ್ ಮಾತನಾಡಿ ಯಶಸ್ಸು ಸುಲಭವಾಗಿ ದೊರಕುವುದಿಲ್ಲ. ಸೋಲುಗಳನ್ನು ಜಯದ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಾಗ ಮಾತ್ರ ಯಶಸ್ಸು ಕಾಣಲು ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾರ್ಥಿ ಹಂತದಲ್ಲಿ ತಮ್ಮ ವೃತ್ತಿಯ ಗುರಿ ಹೊಂದಿರಬೇಕು ಎಂದರು.
ತುಮಕೂರು ವಿಶ್ವ ವಿದ್ಯಾನಿಲಯದ 17ನೇ ಘಟಿಕೋತ್ಸವದ ಭಾಷಣ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಿಶ್ರಾಂತ ಅಧ್ಯಕ್ಷ ಡಾ ಎ.ಎಸ್.ಕಿರಣ್ ಕುಮಾರ್, ನಿಮ್ಮ ಆಯ್ಕೆಗಳೇ ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತದೆ. ನಿಮ್ಮ ಕೌಶಲ್ಯ, ಕಾರ್ಯ ಕ್ಷಮತೆ ಮತ್ತು ವಿವೇಕದಿಂದ ಮುಂದಿನ ಭವಿಷ್ಯ ರೂಪಿಸಿಕೊಳ್ಳಬೇಕು. ತಮ್ಮ ಸುತ್ತಮುತ್ತಲು ನಡೆಯುತ್ತಿರುವ ಪ್ರಚಲಿತ ಘಟನೆಗಳ ಬಗ್ಗೆ ಅರಿತುಕೊಂಡಾಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕಲು ಸಾಧ್ಯ, ನೀವು ಕಲಿತಿರುವ ಜ್ಞಾನ ಮತ್ತು ಕೌಶಲ್ಯ ಬಳಸಿಕೊಳ್ಳುವ ಅವಕಾಶಗಳನ್ನು ಹುಡುಕಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಎಂ.ವೆಂಕಟೇಶ್ವರಲು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಪ್ರಭು ಜಿ., ಕುಲಸಚಿವೆ ನಾಹಿದಾ ಜಮ್ ಜಮ್, ಮೌಲ್ಯಮಾಪನ ಕುಲಸಚಿವ ಪ್ರಸನ್ನ ಕುಮಾರ್.ಕೆ. ಹಾಗೂ ಗಣ್ಯರು ಉಪಸ್ಥಿತರಿದ್ದರು.
ಗೌರವ ಡಾಕ್ಟರೇಟ್, ಚಿನ್ನದ ಪದಕ ಪ್ರದಾನ
ಘಟಿಕೋತ್ಸವದಲ್ಲಿ ಡಾ ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ರಾಮು ಎಂಬ ವಿದ್ಯಾರ್ಥಿಗೆ 6 ಚಿನ್ನದ ಪದಕ, ಸ್ನಾತಕೋತ್ತರ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಾಗೇಂದ್ರ ಅವರಿಗೆ 2 ಚಿನ್ನದ ಪದಕ, ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಗೋಪಾಲ ವೈ.ಆರ್. ಸೇರಿದಂತೆ 74 ವಿದ್ಯಾರ್ಥಿಗಳಿಗೆ 98 ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಕ್ರೀಡೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಜಲಕ್ರೀಡಾ ಸಾಹಸಿಗ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಸುಗ್ಗನಪಾಳ್ಯದ ಎಸ್.ಸಿ.ನಾಗಾನಂದ ಸ್ವಾಮಿ, ಸಮಾಜ ಸೇವಾ ವಿಭಾಗದಲ್ಲಿ ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ಹಾಗೂ 36 ಅಭ್ಯರ್ಥಿಗಳಿಗೆ ಪಿಎಚ್ಡಿ ಪ್ರದಾನ ಮಾಡಲಾಯಿತು.
3 ಅಭ್ಯರ್ಥಿಗಳಿಗೆ ಡಿಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 11,988 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.