ಆಗಸ್ಟ್ 7ಕ್ಕೆ ತುಮಕೂರು ವಿವಿ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್, 36 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರದಾನ
ಈ ಬಾರಿ ಘಟಿಕೋತ್ಸವದಲ್ಲಿ 3 ಅಭ್ಯರ್ಥಿಗಳಿಗೆ ಡಿಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 11,988 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. (ವರದಿ: ಈಶ್ವರ್)
ತುಮಕೂರು: ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವ ಬುಧವಾರ (ಆಗಸ್ಟ್ 7) ಬೆಳಿಗ್ಗೆ 11.30 ಗಂಟೆಗೆ ಕುಲಪತಿ ಕಚೇರಿ ಮುಂಭಾಗದ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕುಲಪತಿ ಪ್ರೊ ಎಂ.ವೆಂಕಟೇಶ್ವರಲು ತಿಳಿಸಿದರು. ವಿಶ್ವವಿದ್ಯಾಲಯದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು.
ಕ್ರೀಡೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಜಲಕ್ರೀಡಾ ಸಾಹಸಿಗ ಮತ್ತು ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಸುಗ್ಗನಪಾಳ್ಯದ ಎಸ್.ಸಿ. ನಾಗಾನಂದ ಸ್ವಾಮಿ, ಸಮಾಜ ಸೇವಾ ವಿಭಾಗದಲ್ಲಿ ಕೈಗಾರಿಕೋದ್ಯಮಿ ಎಚ್.ಜಿ.ಚಂದ್ರಶೇಖರ್, ಆಧ್ಯಾತ್ಮಿಕ ಮತ್ತು ಸಾಮಾಜಿಕ ಸೇವಾ ವಿಭಾಗದಲ್ಲಿ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಹಾಗೂ 36 ಅಭ್ಯರ್ಥಿಗಳಿಗೆ ಪಿಎಚ್‌ಡಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕದ ರಾಜ್ಯಪಾಲ ಹಾಗೂ ತುಮಕೂರು ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ತುಮಕೂರು ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಡಾ ಎಂ.ಸಿ.ಸುಧಾಕರ್ ಉಪಸ್ಥಿತರಿರುತ್ತಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಶ್ರಾಂತ ಅಧ್ಯಕ್ಷ ಡಾ ಎ.ಎಸ್.ಕಿರಣ್ ಕುಮಾರ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಈ ಬಾರಿ ಘಟಿಕೋತ್ಸವದಲ್ಲಿ 3 ಅಭ್ಯರ್ಥಿಗಳಿಗೆ ಡಿಲಿಟ್ ಪದವಿ, 1758 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ 10,230 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 11,988 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು.
ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ‍್ಯಾಂಕ್, ಬಿಎ, ಬಿಎಸ್‌ಬ್ಲ್ಯೂ, ಬಿಎಸ್‌ಸಿ, ಬಿಕಾಂ, ಬಿಬಿಎಂ, ಬಿಇಡಿ (ಸೆಮಿಸ್ಟರ್ ಪದ್ಧತಿ) ಪದವಿಗಳಿಗೆ ತಲಾ 10, ಬಿಎಫ್ಎ, ಬಿವಿಎ, ಬಿಎ ಇಂಟಿಗ್ರೇಟೆಡ್ ಕನ್ನಡ ಪಂಡಿತ್‌ಗೆ ತಲಾ 1 ರ‍್ಯಾಂಕ್ ಘೋಷಿಸಲಾಗಿದೆ. ಒಟ್ಟು 74 ವಿದ್ಯಾರ್ಥಿಗಳಿಗೆ 98 ಚಿನ್ನದ ಪದಕ ಹಾಗೂ 8 ನಗದು ಬಹುಮಾನಗಳನ್ನು ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಗತಿ ಮಾಹಿತಿ ಹಂಚಿಕೊಂಡ ಅವರು, ಕಡಿಮೆ ಶುಲ್ಕದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸ್ನೇಹಿ ಪರೀಕ್ಷೆ ನಡೆಸುತ್ತಿದೆ. ನಿರ್ದಿಷ್ಟ ಅವಧಿಯೊಳಗೆ ಎಲ್ಲಾ ವಿಶ್ವವಿದ್ಯಾಲಯಗಳು ಶೈಕ್ಷಣಿಕ ವರ್ಷವನ್ನು ಮುಗಿಸುವಂತೆ ರಾಜ್ಯ ಸರ್ಕಾರದಿಂದ ನಿರ್ದೇಶನ ನೀಡಿದ್ದು, ಅದರಂತೆ ಸಕಾಲದಲ್ಲಿ ಪಠ್ಯಗಳನ್ನು ಪೂರ್ಣಗೊಳಿಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಹಾಗೂ ನೇಮಕಾತಿ ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ನಡೆದ ನಂತರ ಶೀಘ್ರವಾಗಿ ಫಲಿತಾಂಶ ನೀಡುವ ಉದ್ದೇಶದಿಂದ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರು ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ ಅವರು ಸ್ಥಳದ ಅಭಾವವಿರುವುದರಿಂದ ಹೊಸ ಕೋರ್ಸ್‌ಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಮಾಧ್ಯಮ ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಕುಲಸಚಿವೆ (ಆಡಳಿತ) ನಾಹಿದಾ ಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ ಕೆ.ಪ್ರಸನ್ನಕುಮಾರ್, ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಸಿಬಂತಿ ಪದ್ಮನಾಭ ಇತರರು ಇದ್ದರು.
ಇದನ್ನೂ ಓದಿ: ರಸ್ತೆಯಲ್ಲೇ ಸಸಿ ನಾಟಿ ಮಾಡಿ ಗ್ರಾಮಸ್ಥರ ಪ್ರತಿಭಟನೆ