Vijayapura News: ಸರಕಾರಿ ಶಾಲೆಗೂ ಅಭಿನಂದನ ಗ್ರಂಥ, ಆಲಮಟ್ಟಿ ಹಳೆ ವಿದ್ಯಾರ್ಥಿಗಳ ಅಭಿಮಾನದ ಕಾರ್ಯಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura News: ಸರಕಾರಿ ಶಾಲೆಗೂ ಅಭಿನಂದನ ಗ್ರಂಥ, ಆಲಮಟ್ಟಿ ಹಳೆ ವಿದ್ಯಾರ್ಥಿಗಳ ಅಭಿಮಾನದ ಕಾರ್ಯಕ್ರಮ

Vijayapura News: ಸರಕಾರಿ ಶಾಲೆಗೂ ಅಭಿನಂದನ ಗ್ರಂಥ, ಆಲಮಟ್ಟಿ ಹಳೆ ವಿದ್ಯಾರ್ಥಿಗಳ ಅಭಿಮಾನದ ಕಾರ್ಯಕ್ರಮ

Vijayapura news ವಿಜಯಪುರ ಜಿಲ್ಲೆ ಆಲಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲೊಂದು ವಿಶಿಷ್ಟ ಕಾರ್ಯಕ್ರಮ. ಶಾಲೆಗೆ ರೂಪಿಸಿರುವ ಅಭಿನಂದನಾ ಗ್ರಂಥ ಬಿಡುಗಡೆ ಕ್ಷಣ.

ಆಲಮಟ್ಟಿ ಸರ್ಕಾರಿ ಶಾಲೆ ಮೇಲೆ ರೂಪಿಸಿರುವ ಅಭಿನಂದನಾ ಗ್ರಂಥ,
ಆಲಮಟ್ಟಿ ಸರ್ಕಾರಿ ಶಾಲೆ ಮೇಲೆ ರೂಪಿಸಿರುವ ಅಭಿನಂದನಾ ಗ್ರಂಥ,

ವಿಜಯಪುರ: ಇದೊಂದು ವಿಶಿಷ್ಟ ಕಾರ್ಯಕ್ರಮ. ಅಭಿನಂದನಾ ಗ್ರಂಥಗಳು ವ್ಯಕ್ತಿಗತವಾಗಿ ಬಿಡುಗಡೆಯಾಗುತ್ತವೆ. ಅದರಲ್ಲಿ ವ್ಯಕ್ತಿಯ ಸಾಧನೆ, ಸಮಾಜದ ನೋಟ ಎಲ್ಲವೂ ಇರುವುದಂಟು. ಆದರೆ ಮೊದಲ ಬಾರಿಗೆ ಕರ್ನಾಟಕದ ಸರ್ಕಾರಿ ಪ್ರಾಥಮಿಕ ಶಾಲೆಗೂ ಅಭಿನಂದನಾ ಗ್ರಂಥವೊಂದು ಹೊರ ಬರುತ್ತಿದೆ. ಅದೂ ತಾವು ಓದಿದ ಸರ್ಕಾರಿ ಪ್ರಾಥಮಿಕ ಶಾಲೆ, ತಮಗೆ ಅತ್ಯುತ್ತಮ ಶಿಕ್ಷಣ ನೀಡಿ ಸಮಾಜದಲ್ಲಿ ಮಾದರಿ ಪ್ರಜೆಗಳು, ಗೌರವಯುತ ವ್ಯಕ್ತಿಗಳನ್ನಾಗಿ ರೂಪಿಸಿದ ಸಂಸ್ಥೆಗೆ ಹೀಗೊಂದು ಅಭಿನಂದನಾ ಗ್ರಂಥ ಹೊರ ಬರುತ್ತಿರುವುದು ವಿಶೇಷ. ವಿಜಯಪುರ ಜಿಲ್ಲೆಯ ಪ್ರಮುಖ ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳವಾಗಿರುವ ಆಲಮಟ್ಟಿಯ ಸರ್ಕಾರಿ ಶಾಲೆ ಹಾಗೂ ಮಂಜಪ್ಪ ಹರ್ಡೇಕರ ಪ್ರೇರಿತ ಎಂ.ಪಿ.ಎಸ್. ಮತ್ತು ಎಂ.ಹೆಚ್.ಎಂ. ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗ ಸೇರಿಕೊಂಡು ಸ್ಮರಣೀಯ ಚಟುವಟಿಕೆ ರೂಪಿಸಿದ್ದಾರೆ.

ವಿದ್ಯಾರ್ಥಿಗಳಿಲ್ಲದೇ ಸರಕಾರಿ ಶಾಲೆಗಳು ಮುಚ್ಚುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಸರಕಾರಿ ಶಾಲೆಗೆ ಅಭಿನಂದನ ಗ್ರಂಥ ಅರ್ಪಣೆಯಾಗುತ್ತಿರುವುದು ಬಹುಶಃ ರಾಜ್ಯದಲ್ಲಿ ಅಷ್ಟೇ ಅಲ್ಲ, ರಾಷ್ಟ್ರದಲ್ಲೇ ಮೊದಲು ಇರಬೇಕು. 230 ಪುಟಗಳ ಅಭಿನಂದನಾ ಗ್ರಂಥ ಬರೀ ಅಕ್ಷರ ರೂಪವಲ್ಲ.ಬದಲಿಗೆ ಅನುಭವಗಳ ತೋರಣ. ತಾವು ಕಲಿಯಲು ಶಿಕ್ಷಕರು ತೋರಿದ ಪ್ರೀತಿ, ಕಲಿಕೆಯ ಗುಣಮಟ್ಟ, ಶಿಕ್ಷಣದ ಗುಣಮಟ್ಟ, ಶಿಕ್ಷಣದಿಂದ ಆಗುವ ಪ್ರಯೋಜನ, ಹಲವರು ಸರ್ಕಾರಿ ಶಾಲೆಯಲ್ಲೇ ಶಿಕ್ಷಣ ಪಡೆದುಕೊಂಡು ರೂಪಿಸಿಕೊಂಡ ಬದುಕು, ಮುಂದಿನ ಪೀಳಿಗೆಗೆ ಆಗಬೇಕಾದ ಕಾರ್ಯಕ್ರಮಗಳ ಸಹಿತ ಹಲವು ವಿಚಾರಗಳಿವೆ.

ಶಾಲೆಯ ವಿಭಿನ್ನ ನೆನಪುಗಳು

1964ರಲ್ಲಿಆಲಮಟ್ಟಿಯಲ್ಲಿ ಆಣೆಕಟ್ಟು ನಿರ್ಮಾಣಕ್ಕೆ ಅಂದಿನ ಪ್ರಧಾನಿ ಲಾಲಬಹದ್ದೂರ ಶಾಸ್ತ್ರಿ ಅವರು ಅಡಿಗಲ್ಲು ಹಾಕಿದಾಗ ಸರಕಾರಿ ಅಧಿಕಾರಿಗಳು, ನೌಕರರು, ಕಾರ್ಮಿಕರು, ವ್ಯಾಪಾರಿಗಳು ಆಣೆಕಟ್ಟು ಸ್ಥಳದ ಕ್ಯಾಂಪ್‌ಗೆ ವಲಸೆ ಬರತೊಡಗಿದರು. ಹಾಗೆ ವಲಸೆ ಬಂದ ಮಕ್ಕಳಿಗಾಗಿ ಅದೇ ವರ್ಷ ಎಂ.ಪಿ.ಎಸ್. ಸ್ಥಾಪನೆ ಆಯಿತು.ಉನ್ನತ ಅಧಿಕಾರಿಗಳ ಮಕ್ಕಳಿಂದ ಹಿಡಿದು ಕಾರ್ಮಿಕರ ಮಕ್ಕಳೆಲ್ಲ ಒಟ್ಟಾಗಿ ಓದುತ್ತಿದ್ದ ಈ ಶಾಲೆಯಲ್ಲಿ ಒಂದು ಕಾಲಕ್ಕೆ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,300-1,500 ಇರುತ್ತಿತ್ತು. ಇದರೊಟ್ಟಿಗೆ ಎಂ.ಪಿ.ಎಸ್.ನಲ್ಲಿ ಏಳನೆಯ ತರಗತಿ ಉತ್ತೀರ್ಣರಾದ ನಂತರ ಆಗಿನ ವಿದ್ಯಾರ್ಥಿಗಳು, ಕರುನಾಡ ಗಾಂಧಿ ಮಂಜಪ್ಪ ಹರ್ಡೇಕರ ಅವರು 1927ರಲ್ಲಿ ಸ್ಥಾಪಿಸಿದ ಮಂಜಪ್ಪ ಹರ್ಡೇಕರ ಸ್ಮಾರಕ (ಎಂ.ಹೆಚ್.ಎಂ.) ಪ್ರೌಢಶಾಲೆಗೇ ಸೇರುತ್ತಿದ್ದರು. ಹಲವು ಏಳುಬೀಳುಗಳನ್ನು ಕಂಡು, ಈಗ ಗದಗಿನ ತೋಂಟದಾರ್ಯ ವಿದ್ಯಾಪೀಠದ ಅಧೀನದಲ್ಲಿ ಹೆಮ್ಮರವಾಗಿ ಬೆಳೆದಿದೆ. ಈ ಶಾಲೆಗೆ ಈಗ 97 ವರ್ಷ. ಈ ಉಭಯ ಶಾಲೆಗಳಲ್ಲಿ ಕಲಿತವರು ಈಗ ಅಮೆರಿಕ, ಇಂಗ್ಲಂಡ್, ಆಸ್ಟ್ರೇಲಿಯ, ಯು.ಎ.ಇ. ಸೇರಿದಂತೆ ನಾನಾ ದೇಶಗಳಲ್ಲಿ ವೈದ್ಯರಾಗಿ, ತಂತ್ರಜ್ಞರಾಗಿ, ವಿವಿಧ ಉದ್ಯೋಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ದಿಲ್ಲಿ, ಬೆಂಗಳೂರು, ಮುಂಬೈ, ಚಂಡಿಗಢ, ಹೈದರಾಬಾದ್‌ ಮುಂತಾದ ನಗರಗಳಲ್ಲಿ ಆಲಮಟ್ಟಿಯ ಪ್ರತಿಭೆಗಳು ಕಾಣಸಿಗುತ್ತವೆ. ಅನೇಕರು ಯು.ಪಿ.ಎಸ್.ಸಿ. ಮತ್ತು ಕೆ.ಪಿ.ಎಸ್.ಸಿ.ಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಉತ್ತೀರ್ಣರಾಗಿ ಸರಕಾರದ ಉನ್ನತ ಹುದ್ದೆಗಳಲ್ಲಿ ರಾರಾಜಿಸುತ್ತಿದ್ದಾರೆ.

ಸರಕಾರಿ ಶಾಲೆಗೆ 60ರ ಸಂಭ್ರಮ. ಎಂ.ಹೆಚ್.ಎಂ. ಈಗ ಶತಮಾನದ ಹೊಸ್ತಿಲಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಉಭಯ ಶಾಲೆಗಳ ಹಳೆಯ ವಿದ್ಯಾರ್ಥಿಗಳೆಲ್ಲ ಸೇರಿ 'ಮಂಜಪ್ಪ ಹರ್ಡೇಕರ ಪ್ರೇರಿತ ಎಂ.ಪಿ.ಎಸ್. ಹಾಗೂ ಎಂ.ಹೆಚ್.ಎಂ. ಶಾಲೆಗಳ ಹಳೆಯ ವಿದ್ಯಾರ್ಥಿಗಳ ಬಳಗ' ಎಂಬ ಸಂಘಟನೆಯೊಂದನ್ನು ಹುಟ್ಟುಹಾಕಿ, 'ಕಲಿತ ಶಾಲೆಗೆ ಅಕ್ಷರ ತೋರಣ' ಎಂಬ ಅಭಿನಂದನ ಗ್ರಂಥವನ್ನು ಸಿದ್ಧಪಡಿಸಿದ್ದಾರೆ. ನಾನಾ ಉದ್ಯೋಗಗಳಲ್ಲಿರುವ ವಿದ್ಯಾರ್ಥಿಗಳು ಎರಡೂ ಶಾಲೆಗಳಲ್ಲಿನ ತಮ್ಮ ಸವಿನೆನಪುಗಳ ಬಗ್ಗೆ, ತಮಗೆ ದಾರಿ ತೋರಿದ ಗುರುಗಳ ಬಗ್ಗೆ ಲೇಖನ-ಕವನಗಳನ್ನು ಈ ಕೃತಿಯಲ್ಲಿ ಬರೆದಿದ್ದಾರೆ. ಈ ಶಾಲೆಗಳಲ್ಲಿ ಕಲಿಸಿದ್ದ ಕೆಲವು ಶಿಕ್ಷಕ-ಶಿಕ್ಷಕಿಯರೂ ತಮ್ಮ ನೆನಪುಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಅಭಿನಂದನಾ ಗ್ರಂಥದ ಸಂಪಾದಕರು, ಹಿರಿಯ ಪತ್ರಕರ್ತರು, ಬರಹಗಾರರೂ ಆಗಿರುವ ಸಂಗಮೇಶ ಮೆಣಸಿನಕಾಯಿ, ಚಂದ್ರಶೇಖರ ಕೋಳೇಕರ ಹೇಳುತ್ತಾರೆ.

ಜೂನ್‌ 28ಕ್ಕೆ ಕಾರ್ಯಕ್ರಮ

ಇಂಥ ಅಪರೂಪದ ಕೃತಿ ಜೂನ್‌ 28ರ ಶುಕ್ರವಾರ ಆಲಮಟ್ಟಿ ಡ್ಯಾಂ ಸೈಟ್‌ನ ಸಮುದಾಯ ಭವನದಲ್ಲಿ ಬಿಡುಗಡೆ ಆಗಲಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮಿಗಳು, ನಿಷ್ಕಲ ಮಂಟಪ ಬೈಲೂರು, ತೋಂಟದಾರ್ಯಮಠ ಮುಂಡರಗಿ ಹಾಗೂ ಆಲಮಟ್ಟಿಶ್ರೀ ಅನ್ನದಾನೇಶ್ವರ ಪುರವರ ಹಿರೇಮಠದ ಡಾ ರುದ್ರಮುನಿ ಸ್ವಾಮೀಜಿ ವಹಿಸಲಿದ್ದಾರೆ.

ಗ್ರಂಥವನ್ನು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಬಿಡುಗಡೆಗೊಳಿಸಲಿದ್ದಾರೆ. ವಿದ್ಯಾರ್ಥಿ ಬಳಗವನ್ನುವ , ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ​ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ಬಿ.ಕೆ. ಹರಿಪ್ರಸಾದ, ಹಣಮಂತ ನಿರಾಣಿ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ,ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕ ಅರುಣ ಶಹಾಪುರ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ್ ಕೆ.ಪಿ., ಗದಗ ಜ.ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ, ಶಿವಾನಂದ ಪಟ್ಟಣಶೆಟ್ಟಿ ಮತ್ತಿತರರು ಆಗಮಿಸುವರು.ಇದೇ ಸಂದರ್ಭದಲ್ಲಿ ಎಂ.ಪಿ.ಎಸ್. ಹಾಗೂ ಎಂ.ಹೆಚ್.ಎಂ. ಶಾಲೆಗಳ 70 ನಿವೃತ್ತ ಹಾಗೂ ಹಾಲಿ ಸೇವೆಯಲ್ಲಿರುವ ಶಿಕ್ಷಕ-ಶಿಕ್ಷಕಿಯರು ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಸನ್ಮಾನ ನಡೆಯಲಿದೆ.

ಸಂವಾದ ವಿಶೇಷ

ಮಧ್ಯಾಹ್ನ 2.30ಕ್ಕೆ 'ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?' ವಿಷಯವಾಗಿ ಆಲಮಟ್ಟಿ ಸುತ್ತಮುತ್ತಲಿನ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗಾಗಿ ಸಂವಾದ ಏರ್ಪಡಿಸಲಾಗಿದೆ. ಈ ಸಂವಾದದಲ್ಲಿ ಹಳೆಯ ವಿದ್ಯಾರ್ಥಿಗಳಾದ ಡಾ ಅರುಣ ಉಳ್ಳಾಗಡ್ಡಿ, ಪ್ರಾಧ್ಯಾಪಕರು , ಜಯದೇವ ಹೃದ್ರೋಗ ಆಸ್ಪತ್ರೆ ‌ಬೆಂಗಳೂರು; ಶ್ರೀಮತಿ ಮಮತಾ ಹೊಸಗೌಡರ, KAS (ಹಿರಿಯ ಶ್ರೇಣಿ), ಯೋಜನಾ ನಿರ್ದೇಶಕರು, ಹಾವೇರಿ; ಶ್ರೀ ರಮೇಶ ರೊಟ್ಟಿ, ಪೊಲೀಸ್ ಇನ್ಸ್‌ಪೆಕ್ಟರ್, ಬೆಳಂದೂರು, ಬೆಂಗಳೂರು; ಶ್ರೀ ಸಚಿನ‌ ಚಲವಾದಿ, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಹುಣಸಗಿ, CA ವಾಣಿಶ್ರೀ ಅಮರಗೊಂಡ (ರೂಡಗಿ), ಚಾರ್ಟರ್ಡ್ ಅಕೌಂಟೆಂಟ್, ಪುಣೆ; ಶ್ರೀ ಸಂಗಮೇಶ ದಿಡಗಿನಾಳ, ಪೊಲೀಸ್ ಇನ್ಸಪೆಕ್ಟರ್, ವಿದ್ಯಾನಗರ, ಧಾರವಾಡ; ಡಾ. ಲೀಲಾ ಹೂಗಾರ, ಪ್ರಾಧ್ಯಾಪಕರು, ಬಿಎಲ್ ಡಿಇ ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾಲಯ ವಿಜಯಪುರ; ಡಾ ಸವಿತಾ ಪಾಟೀಲ, ಭಾಗ್ಯವಂತಿ ಆಸ್ಪತ್ರೆ ತಾಳಿಕೋಟೆ; ಹಾಗೂ ಇತರ ಸಾಧಕ ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅನುಭವ, ಪರೀಕ್ಷೆ ಎದುರಿಸುವ ಮಾರ್ಗದರ್ಶನ ನೀಡುವರು.

Whats_app_banner