ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಕೆಲಸ ಹುಡುಕುತ್ತೀರಾ, ಹೆಚ್ಚು ವೇತನ ಒದಗಿಸಬಲ್ಲ 7 ಕೌಶಲಗಳಿವು

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಕೆಲಸ ಹುಡುಕುತ್ತೀರಾ, ಹೆಚ್ಚು ವೇತನ ಒದಗಿಸಬಲ್ಲ 7 ಕೌಶಲಗಳಿವು

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಕೆಲಸ ಹುಡುಕುತ್ತೀರಾ, ಅಥವಾ ಪಿಯುಸಿಗೆ ಪ್ರವೇಶ ಪಡೆಯುತ್ತೀರಾ? ಏನೇ ಆದರೂ, ಹೆಚ್ಚು ವೇತನ ಒದಗಿಸಬಲ್ಲ 7 ಕೌಶಲಗಳನ್ನು ಪ್ರತಿಯೊಬ್ಬರೂ ಅರಿತಿರಬೇಕು. ಎಲ್ಲವೂ ಅಲ್ಲದೇ ಹೋದರು ಕನಿಷ್ಠ ಮೂರು ಕೌಶಲಗಳು ಇರಲೇಬೇಕು. ಅವುಗಳ ವಿವರ ಇಲ್ಲಿದೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಕೆಲಸ ಹುಡುಕುತ್ತೀರಾದರೆ, ನಿಮಗೆ ಹೆಚ್ಚು ವೇತನ ಒದಗಿಸಬಲ್ಲ 7 ಕೌಶಲಗಳಿವು (ಸಾಂಕೇತಿಕ ಚಿತ್ರ)
ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಬಂದ ನಂತರ ಕೆಲಸ ಹುಡುಕುತ್ತೀರಾದರೆ, ನಿಮಗೆ ಹೆಚ್ಚು ವೇತನ ಒದಗಿಸಬಲ್ಲ 7 ಕೌಶಲಗಳಿವು (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ (Karnataka SSLC Result 2024)ವನ್ನು ಎದುರು ನೋಡುತ್ತಿರುವ ಸಂದರ್ಭ ಇದು. ಬಹುತೇಕ ವಿದ್ಯಾರ್ಥಿಗಳು ಎಸ್‌ ಎಸ್ ಎಲ್‌ ಸಿ ರಿಸಲ್ಟ್ (SSLC results) ಬಂದ ಕೂಡಲೇ ಪಿಯುಸಿ ವಿದ್ಯಾಭ್ಯಾಸಕ್ಕೆ ಹೋಗುವವರು ಅನೇಕರು. ಆದಾಗ್ಯೂ ಕೆಲವರು ಉದ್ಯೋಗದ ಕಡೆಗೆ, ಕೆಲಸಕ್ಕೆ ಹೋಗಬೇಕು ಎಂದು ಆಲೋಚಿಸಬಹುದು. ಅಂಥವರು ನೇರವಾಗಿ ಹೋದರೆ ಹೆಚ್ಚಿನ ವೇತನ ಪಡೆಯುವುದು ಸಾಧ್ಯವಾಗದು. ಕೆಲವು ಕೌಶಲಗಳನ್ನು ಕರಗತ ಮಾಡಿಕೊಂಡರೆ, ಉನ್ನತ ಶಿಕ್ಷಣ ಪಡೆದವರ ಹಾಗೆ ಹೆಚ್ಚಿನ ವೇತನ ಪಡೆಯುವ ಕೆಲಸಕ್ಕೆ ಸೇರಬಹುದು.

ಟ್ರೆಂಡಿಂಗ್​ ಸುದ್ದಿ

ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? 10ನೇ ತರಗತಿ ನಂತರ ಮುಂದೇನು? ಹೀಗೆ ಹಲವು ಪ್ರಶ್ನೆಗಳು ಕಾಡಬಹುದು. ಎಸ್‌ ಎಸ್‌ ಎಲ್‌ ಸಿ ಫಲಿತಾಂಶ ವಿದ್ಯಾರ್ಥಿಗಳ ಬದುಕಿನ ಅತ್ಯಂತ ಮಹತ್ವದ ಕಾಲಘಟ್ಟ. ಇಲ್ಲಿ ಹೆಚ್ಚಿನ ಶಿಕ್ಷಣಕ್ಕೆ ಹೋಗುವವರು, ಉದ್ಯೋಗಕ್ಕೆ ಹೋಗುವವರು ಹೀಗೆ ಬದುಕಿನ ಹಾದಿಯ ಕವಲು ದಾರಿಯಲ್ಲಿರುತ್ತಾರೆ ದಶಕದ ಸ್ನೇಹಿತರು.

ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ಜಗತ್ತಿನಲ್ಲಿ ಕಷ್ಟ ಪಡುವುದಕ್ಕಿಂತ ಸುಲಭವಾಗಿ ಹೆಚ್ಚು ಹಣ ಗಳಿಸುವುದರ ಕಡೆಗೆ ಎಲ್ಲರೂ ಗಮನಹರಿಸುತ್ತಿರುತ್ತಾರೆ. ಇದಕ್ಕೆ ಕೆಲವು ಕೌಶಲಗಳ ಅಗತ್ಯವಿದೆ. ಈ ವರ್ಷ ಹೆಚ್ಚು ಬೇಡಿಕೆಯಲ್ಲಿರುವ ಅಂತಹ 7 ಕೌಶಲ ಕೋರ್ಸ್‌ಗಳ ವಿವರ ಇಲ್ಲಿದೆ.

ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ನಂತರ ಕೆಲಸ ಹುಡುಕುವವರಿಗೆ ನೆರವಾಗಬಲ್ಲ ಕೌಶಲಗಳಿವು

1) ವೆಬ್‌ ಡೆವಲಪ್‌ಮೆಂಟ್‌ ಕೋರ್ಸ್

ಬಹುತೇಕ 10ನೇ ತರಗತಿ ವಿದ್ಯಾರ್ಥಿಗಳನ್ನು ಗಮನಿಸಿದರೆ ಅವರಿಗೆ ಮೊಬೈಲ್‌, ಇಂಟರ್‌ನೆಟ್ ಬಳಕೆ ಬಹಳ ಸಲೀಸು. ಇಂಟರ್‌ನೆಟ್ ಎಂಬುದು ನಮ್ಮೆಲ್ಲರ ಬದುಕಿನಲ್ಲಿ ಉಸಿರಿನಂತೆಯೇ ಒಂದಾಗಿ ಹೋಗಿದೆ. ಕೌಶಲ ಹೊಂದಿರುವ ವೆಬ್‌ಡೆವಲಪರ್‌ಗಳಿಗೆ ಈಗ ಭಾರಿ ಬೇಡಿಕೆ ಇದೆ. ವೆಬ್‌ ಡೆವಲಪ್‌ಮೆಂಟ್ ಕೋರ್ಸ್‌ಗೆ ಸೇರಿದರೆ, ಅದು ಆಸಕ್ತರಿಗೆ ವೆಬ್‌ಸೈಟ್‌ ವಿನ್ಯಾಸಕ್ಕೆ ಸಂಬಂಧಿಸಿದ ತಳಮಟ್ಟದ ತಿಳಿವಳಿಕೆ, ಕೌಶಲವನ್ನು ಒದಗಿಸುತ್ತದೆ. ಈ ಕೋರ್ಸ್ ಎಚ್‌ಟಿಎಂಎಲ್‌, ಜಾವಾ ಮುಂತಾದ ವಿವಿಧ ಕೋಡಿಂಗ್ ಭಾಷೆಗಳನ್ನು ಕಲಿಯಲು ಅವಕಾಶವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ ವೆಬ್ ಡೆವಲಪ್‌ಮೆಂಟ್‌ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವವರಿಗೆ ಸಹಕಾರಿ.

2) ಪ್ರೋಗ್ರಾಮಿಂಗ್ ಲ್ಯಾಂಗ್ವೇಜಸ್‌ -

ಇತ್ತೀಚಿನ ದಿನಗಳಲ್ಲಿ, ಪ್ರೋಗ್ರಾಮಿಂಗ್ ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿರುವುದು ಹೆಚ್ಚು ಮೌಲ್ಯಯುತ ಆಸ್ತಿಯಾಗಿ ಪರಿಗಣಿಸಲ್ಪಡುತ್ತದೆ. ಪ್ರತಿ ಉದ್ಯಮದಲ್ಲಿಯೂ ಸಾಫ್ಟ್‌ವೇರ್ ಅಭಿವೃದ್ಧಿ, ಎಐ- ಚಾಲಿತ ಅಪ್ಲಿಕೇಶನ್‌ಗಳನ್ನು ನಿರ್ಮಿಸುವುದು, ಮೊಬೈಲ್ ಅಪ್ಲಿಕೇಶನ್‌ಗಳನ್ನು ವಿನ್ಯಾಸಗೊಳಿಸುವುದು ಇತ್ಯಾದಿ ಪ್ರೋಗ್ರಾಮಿಂಗ್ ಕೌಶಲಗಳು ಹೆಚ್ಚು ಬೇಡಿಕೆಯಲ್ಲಿದೆ. ಇವನ್ನು ಕಲಿತರೆ ಉದ್ಯೋಗಕ್ಕಷ್ಟೇ ಅಲ್ಲ, ಕಲಿಕೆಯ ವೇಳೆ ಕೂಡ ಹೆಚ್ಚುವರಿ ಜ್ಞಾನ ಹೊಂದಿರುವುದು ಆ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ಅನುವು ಮಾಡಿಕೊಡುತ್ತದೆ.

3) ಹಣಕಾಸು ಸಾಕ್ಷರತೆ ಕೋರ್ಸ್ (Financial Literacy Certification)

ಹಣಕಾಸು ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ಅತ್ಯಂತ ಅಗತ್ಯ ಬೇಕಾದ ಕೌಶಲ. ಇದಕ್ಕಾಗಿ ಹಣಕಾಸು ಸಾಕ್ಷರತೆ ಕೋರ್ಸ್ (Financial Literacy Certification) ಮಾಡಬಹುದು. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲೇ ಹಣಕಾಸಿನ ನಿರ್ವಹಣೆಯ ಮೂಲಭೂತ ಅಂಶಗಳನ್ನು ಕಲಿಯಬೇಕಾದ್ದು ಅನಿವಾರ್ಯ. ಈ ಕೋರ್ಸ್ ಬಜೆಟ್, ಉಳಿತಾಯ, ನಿರ್ವಹಣೆ ವೆಚ್ಚಗಳು, ಹೂಡಿಕೆಗಳು ಮತ್ತು ಹೆಚ್ಚಿನವುಗಳ ಬಗ್ಗೆ ಒಳನೋಟವನ್ನು ನೀಡುತ್ತದೆ. ಇದು ತಿಳಿವಳಿಕೆಹೊಂದಿದ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಅದೇ ರೀತಿ ಹಣಕಾಸು ನಿರ್ವಹಣೆಯ ವೃತ್ತಿಯನ್ನು ಕೈಗೊಳ್ಳುವವರಿಗೆ ನೆರವಾಗುತ್ತದೆ.

4) ವಿದೇಶಿ ಭಾಷೆ ಕೋರ್ಸ್

ವಿದೇಶದಲ್ಲಿ ಅಧ್ಯಯನ ಮಾಡುವ ಅಥವಾ ಕೆಲಸ ಮಾಡುವ ಗುರಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಪರಿಪೂರ್ಣ ಕೋರ್ಸ್ ಆಗಿದೆ. ವಿದೇಶಿ ಭಾಷೆಯ ಕಲಿಕೆಯು ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ. ಇದು ವಿಭಿನ್ನ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಒಳನೋಟವನ್ನು ಸಹ ನೀಡುತ್ತದೆ. ವೃತ್ತಿ ಬದುಕಿನಲ್ಲಿ ಮುಂದೆ ಬರಬೇಕಾದರೆ ಮುಖ್ಯವಾಗಿ ಬೇಕಾದುದು ಸಂವಹನ. ಇಂಗ್ಲಿಷ್ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಬರಬೇಕಾದ್ದು ಈಗ ಅನಿವಾರ್ಯ. ಇದರ ಜೊತೆಗೆ ಫ್ರೆಂಚ್‌, ಸ್ಪ್ಯಾನಿಶ್‌ ಅಥವಾ ಜರ್ಮನ್ ಭಾಷೆಯನ್ನು ಕಲಿತರೆ ಅದು, ಸಂವಹನ ಕೌಶಲ ಹೆಚ್ಚಿಸುವುದಲ್ಲದೆ, ಜಗತ್ತಿನ ಮಾರುಕಟ್ಟೆಗೆ ತೆರೆದುಕೊಳ್ಳಲು ನಿಮಗೆ ನೆರವಾಗುತ್ತದೆ.

5) ವ್ಯಕ್ತಿತ್ವ ವಿಕಸನ ಮತ್ತು ಸಾರ್ವಜನಿಕ ಭಾಷಣ ಕೋರ್ಸ್

ಪರಿಣಾಮಕಾರಿ ಸಂವಹನವು ಇಂದಿನ ದಿನಗಳಲ್ಲಿ ಪ್ರಮುಖ ಕೌಶಲ. ಈ ಕೋರ್ಸ್ ನಿಮ್ಮ ಸಮಗ್ರ ವ್ಯಕ್ತಿತ್ವಕ್ಕೆ ಮೆರಗು ನೀಡುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಿಭಿನ್ನ ಬರವಣಿಗೆ ಮತ್ತು ಮಾತನಾಡುವ ಕೌಶಲ, ವೃತ್ತಿಪರ ಶಿಷ್ಟಾಚಾರ ಮತ್ತು ಪರಿಣಾಮಕಾರಿ ಸಂವಹನ ಕಲಿಕೆಗೆ ಈ ಕೋರ್ಸ್ ನೆರವು ನೀಡುತ್ತದೆ. ವೃತ್ತಿಪರವಾಗಿ, ಔದ್ಯೋಗಿಕವಾಗಿ ಮುನ್ನಡೆಯಲು ಈ ಕೌಶಲ ಇರಬೇಕಾದ್ದು ಅನಿವಾರ್ಯ.

6) ಛಾಯಾಗ್ರಹಣ ಅಥವಾ ವೀಡಿಯೋಗ್ರಫಿ ಕೋರ್ಸ್

ಛಾಯಾಗ್ರಹಣ, ವೀಡಿಯೋಗ್ರಫಿ ಮತ್ತು ಎಡಿಟಿಂಗ್ ಕೌಶಲಗಳು ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಶನ್‌ಗೆ ಹೆಚ್ಚು ಅಗತ್ಯ. ಸದ್ಯ ಇದಕ್ಕೆ ಬೇಡಿಕೆಯೂ ಹೆಚ್ಚು. ಅನೇಕ ವಿದ್ಯಾರ್ಥಿಗಳು ಈಗಾಗಲೇ ಸಕ್ರಿಯವಾಗಿ ಡಿಜಿಟಲ್ ಕಂಟೆಂಟ್‌ ರಚಿಸುತ್ತಿದ್ದಾರೆ. ಬ್ಲಾಗ್, ವ್ಲಾಗ್‌ ಮೂಲಕ ಸಾಮಾಜಿಕವಾಗಿ, ವೃತ್ತಿಪರವಾಗಿ ಗುರುತಿಸಿಕೊಳ್ಳುತ್ತಿದ್ದರೆ. ಈ ಕೌಶಲ ಇದ್ದರೆ ಕಥಾ ನಿರೂಪಣೆ, ವಿ‍ಷಯ ನಿರೂಪಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಬಹುದು. ಆ ಮಟ್ಟಿಗೆ ಈ ಕೋರ್ಸ್ ಸಹಕಾರಿ.

7) ಪಾಕಶಾಲೆಯ ಕೋರ್ಸ್ (Culinary Arts Course)

ಆಹಾರ ತಯಾರಿ, ಅನುಕರಣೀಯ ಭಕ್ಷ್ಯ ತಯಾರಿಸುವ ಆಸಕ್ತಿ ಹೊಂದಿದವರಿಗೆ ಇದು ಹೇಳಿ ಮಾಡಿಸಿದ ಕೋರ್ಸ್‌. ಪಾಕಶಾಲೆಯ ಕುರಿತಾದ ಪೂರ್ಣ ಚಿತ್ರಣ ಒದಗಿಸುವ ಈ ಕೋರ್ಸ್‌ನಲ್ಲಿ ಪಾಕಶಾಲೆಯಲ್ಲಿ ಅನುಸರಿಸುವ ತಂತ್ರಗಳು, ವಿಧಾನಗಳು, ಅಡುಗೆ ನಿರ್ವಹಣೆ ಮುಂತಾದ ಕೌಶಲ, ಜ್ಞಾನವನ್ನು ಒದಗಿಸಲಾಗುತ್ತದೆ. ಇದು ಹೋಟೆಲ್ ನಿರ್ವಹಣೆ (Hotel Management) ಗೆ ಬೇಕಾದ ಕೌಶಲವನ್ನು ಒದಗಿಸುತ್ತದೆ.

ಪ್ರತಿಯೊಬ್ಬರಿಗೂ ಬೇಕಾದ ಕೌಶಲಗಳಿವು

ಪಿಯುಸಿ, ಉನ್ನತ ಶಿಕ್ಷಣದ ಕಡೆಗೆ ಹೋಗುವವರ ಸಂಖ್ಯೆಗೆ ಹೋಲಿಸಿದರೆ 10ನೇ ತರಗತಿಗೆ ಓದು ನಿಲ್ಲಿಸಿ ಉದ್ಯೋಗದ ಕಡೆಗೆ ಒಲವು ತೋರುವವರು ಬಹಳ. ಆದಾಗ್ಯೂ, ಪಿಯುಸಿ ಶಿಕ್ಷಣಕ್ಕೆ ಸೇರುವವರು ಕೂಡ ಕಲಿಯಬಹುದಾದ, ಕಲಿಯಬೇಕಾದ ಕೌಶಲಗಳಿವು. ಈ ಪಟ್ಟಿಯಲ್ಲಿ ಪ್ರತಿಯೊಬ್ಬರಿಗೂ ಬೇಕಾದ ಕೌಶಲಗಳು ಎಂದು ಗುರುತಿಸುವುದಾದರೆ ಹಣಕಾಸಿನ ಸಾಕ್ಷರತೆ ಕೋರ್ಸ್, ಛಾಯಾಗ್ರಹಣ ಅಥವಾ ವೀಡಿಯೋಗ್ರಫಿ ಕೋರ್ಸ್, ವ್ಯಕ್ತಿತ್ವ ವಿಕಸನ ಮತ್ತು ಸಾರ್ವಜನಿಕ ಭಾಷಣ ಕೋರ್ಸ್, ವಿದೇಶಿ ಭಾಷೆ ಕೋರ್ಸ್ ಮುಖ್ಯವೆನಿಸುತ್ತವೆ. ಯಾವುದೇ ಉದ್ಯೋಗ, ವೃತ್ತಿ ಕೈಗೊಂಡರೂ ಇವು ಆದಾಯ ವೃದ್ಧಿಗೆ ನೆರವಾಗಬಲ್ಲ ಕೌಶಲಗಳು ಎಂಬುದರಲ್ಲಿ ಸಂದೇಹವೇ ಇಲ್ಲ.

ಶುಭವಾಗಲಿ.. ಕಲಿಕಾರ್ಥಿಗಳಿಗೆ ಒಳಿತಾಗಲಿ…

IPL_Entry_Point