ಹತ್ತು ಪುಸ್ತಕ ಓದುವ ಬದಲು ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಇಶಿಕಾ ಸಿಂಗ್‌ ಸಲಹೆ
ಕನ್ನಡ ಸುದ್ದಿ  /  ಕರ್ನಾಟಕ  /  ಹತ್ತು ಪುಸ್ತಕ ಓದುವ ಬದಲು ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಇಶಿಕಾ ಸಿಂಗ್‌ ಸಲಹೆ

ಹತ್ತು ಪುಸ್ತಕ ಓದುವ ಬದಲು ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಇಶಿಕಾ ಸಿಂಗ್‌ ಸಲಹೆ

ಹುಬ್ಬಳ್ಳಿ ನಿವಾಸಿಯಾಗಿರುವ ಇಶಿಕಾ ಸಿಂಗ್‌, ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್‌ ಪಡೆದಿದ್ದಾರೆ. ಸಂದರ್ಶನದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಪಡೆದ ಅವರು ತಮ್ಮ ಓದಿನ ಕುರಿತು ಹೇಳಿಕೊಂಡಿದ್ದು, ಪರೀಕ್ಷಾರ್ಥಿಗಳಿಗೆ ಸಲಹೆಯನ್ನು ಹಂಚಿಕೊಂಡಿದ್ದಾರೆ.

ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಇಶಿಕಾ ಸಿಂಗ್ (ಸಾಂದರ್ಭಿಕ ಚಿತ್ರ)
ಒಂದು ಪುಸ್ತಕವನ್ನು 10 ಬಾರಿ ಓದಿ; ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದ ಇಶಿಕಾ ಸಿಂಗ್ (ಸಾಂದರ್ಭಿಕ ಚಿತ್ರ) (Pixabay)

ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸ್‌ ಆಗುವುದು ಹಲವರ ಕನಸು. ಹಾಗಂತಾ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವದು ಹಾಗೂ ರ‍್ಯಾಂಕ್‌ ಪಡೆಯುವುದು ಅಷ್ಟು ಸುಲಭವಲ್ಲ. ಇದಕ್ಕೆ ನಿರಂತ ಓದು ಹಾಗೂ ಸತತ ಪ್ರಯತ್ನ ಅಗತ್ಯ. ಹುಬ್ಬಳ್ಳಿಯವರಾದ ಡಾ.ಇಶಿಕಾ ಸಿಂಗ್‌ ಅವರು, ಯುಪಿಎಸ್‌ಸಿ ಪರೀಕ್ಷೆಯಲ್ಲಿ 206ನೇ ರ‍್ಯಾಂಕ್‌ ಪಡೆದಿದ್ದಾರೆ. ಅಲ್ಲದೆ ಸಂದರ್ಶನದಲ್ಲಿ ದೇಶಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಉನ್ನತ ಸಾಧನೆ ಮಾಡಿರುವ ಇಶಿಕಾ ಸಿಂಗ್, ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ಕೆಲವೊಂದು ಟಿಪ್ಸ್‌ ಹಂಚಿಕೊಂಡಿದ್ದಾರೆ.

ಕರ್ನಾಟಕ ವಾಣಿಜ್ಯ ನಗರಿ ಹುಬ್ಬಳ್ಳಿಯ ಅಕ್ಷಯ ಕಾಲೊನಿಯ ನಿವಾಸಿಯಾಗಿರುವ ಇಶಿಕಾ ಸಿಂಗ್‌, ಮೂಲತಃ ಜಾರ್ಖಂಡ್‌ನ ಜೆಮ್‌ಶೆಡ್‌ಪುರದವರು. ಕಳೆದ 28 ವರ್ಷಗಳಿಂದ ಇವರ ಕುಟುಂಬ ಹುಬ್ಬಳ್ಳಿಯಲ್ಲಿಯೇ ವಾಸಿಸುತ್ತಿದೆ. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಬಿಬಿಎಸ್‌ ಪದವಿ ಪಡೆದಿರುವ ಇಶಿಕಾ, ಬಾಲ್ಯದಿಂದಲೂ ಓದಿದ್ದು ಹುಬ್ಬಳ್ಳಿಯಲ್ಲೇ. ಇಲ್ಲಿಂದಲೇ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿರುವ ಅವರು ನೀಡಿರುವ ಕೆಲವೊಂದು ಅಮೂಲ್ಯ ಸಲಹೆಗಳು ಇಲ್ಲಿವೆ.

ಪರೀಕ್ಷೆಗೆ ಪೂರ್ವಸಿದ್ಧತೆ ಕುರಿತು ಮಾತನಾಡಿದ ಇಶಿಕಾ, ತಮ್ಮ ತಂದೆ ತಾಯಿಯ ಸಹಕಾರ ಹಾಗೂ ಬೆಂಬಲದ ಕುರಿತು ಖುಷಿ ಪಟ್ಟಿದ್ದಾರೆ. ಪೂರ್ವಭಾವಿ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ಒಂದಷ್ಟು ಏರಿಳಿತಗಳು ಎದುರಾದವು. ಓದುವುದು ಎಂದರೆ ನನಗಿಷ್ಟ. ಹೀಗಾಗಿ ಓದಿನಲ್ಲಿ ಒಂದು ಸ್ಥಿರತೆ ಕಾಯ್ದುಕೊಂಡಿದ್ದೆ. ಸ್ಮಾರ್ಟ್‌ ಓದು ಅನುಸರಿಸಿದೆ ಎನ್ನುತ್ತಾರೆ ಇಶೀತಾ. ಮುಖ್ಯ ಪರೀಕ್ಷೆಗೆ ಟೆಸ್ಟ್‌ ಸೀರೀಸ್‌ ತೆಗೆದುಕೊಂಡು ಅದರ ಪ್ರಕಾರ ವೇಳಾಪಟ್ಟಿ ರಚಿಸಿ ಓದುತ್ತಾ ಬಂದೆ. ಆಗಾಗ ಓದನ್ನು ಪುನರಾವರ್ತನೆ ಮಾಡಿಕೊಂಡೆ. ಅಗತ್ಯ ಮಾಹಿತಿ, ಅಂಕಿ-ಅಂಶಗಳನ್ನು ಕಲೆ ಹಾಕಿಕೊಂಡೆ. ಪ್ರತಿಕ್ರಿಯೆಗಳನ್ನು ಪಡೆದೆ. ಆಗಾಗ ಪುನರ್ಮನನ ನನಗೆ ನೆರವಾಯ್ತು ಎನ್ನುತ್ತಾರೆ ಇಶಿಕಾ.

8-10 ಅಣಕು ಸಂದರ್ಶನ

ಸಂದರ್ಶನಕ್ಕೆ ಸಿದ್ಧತೆಯಾಗಿ ನಾನು ದೆಹಲಿಗೆ ಹೋದೆ.‌ ಪ್ರಚಲಿತ ವಿದ್ಯಮಾನದ ಕುರಿತ ಉಪನ್ಯಾಸ ಕೇಳಿಸಿಕೊಂಡೆ. ನನ್ನ ಹೆತ್ತವರ ರಾಜ್ಯವಾದ ಜಾರ್ಖಂಡ್ ಹಾಗೂ ನಾನು ಬೆಳೆದ ರಾಜ್ಯದ ಕುರಿತು ತಿಳಿದುಕೊಂಡೆ. ನಾನು, ನನ್ನ ವೃತ್ತಿ, ಪೋಷಕರು, ಶಿಕ್ಷಣ, ಹಿನ್ನೆಲೆ, ಹವ್ಯಾಸ ಹೀಗೆ ಎಲ್ಲದರ ಬಗ್ಗೆಯೂ ತಿಳಿದುಕೊಂಡು ಟಿಪ್ಪಣಿ ಮಾಡಿಕೊಂಡಿದ್ದೆ. ಆ ನಂತರ ಎಂಟರಿಂದ ಹತ್ತು ಅಣಕು ಸಂದರ್ಶನವನ್ನೂ ಕೊಟ್ಟೆ. ಅಲ್ಲಿ ಬಂದ ಪ್ರತಿಕ್ರಿಯೆಯ ಮೇಲೆ ನನ್ನ ಸಿದ್ಧತೆ ಸುಧಾರಿಸಿಕೊಂಡೆ.

ಮೊದಲ ಬಾರಿಗೆ ಸಂದರ್ಶನ ಎದುರಿಸಿದ್ದ ಕಾರಣದಿಂದ ಸ್ವಲ್ಪ ಭಯ ಇತ್ತು. ‌ ನನಗೆ ಕೇಳಿದ 90 ಶೇಕಡಕ್ಕಿಂತ ಹೆಚ್ಚು ಹೆಚ್ಚು ಪ್ರಶ್ನೆಗಳು ವೈದ್ಯಕೀಯ ಕ್ಷೇತ್ರದ ಕುರಿತಾಗಿಯೇ ಇತ್ತು. ವಾಣಿಜ್ಯ ನಗರಿ ಹುಬ್ಬಳ್ಳಿ ಕುರಿತು, ಇಲ್ಲಿನ ಆರೋಗ್ಯ ಕ್ಷೇತ್ರ ಮತ್ತು ಮಹಿಳಾ ಸಬಲೀಕರಣದ ಕುರಿತು ಪ್ರಶ್ನೆಗಳು ಇದ್ದವು. ನನಗೆ ಕೇಳಿದ ಪ್ರಶ್ನೆಗಳು ಬಹುತೇಕ ಎಲ್ಲವೂ ವಿಶ್ಲೇಷಣಾತ್ಮಕವಾಗಿದ್ದರಿಂದ ನನ್ನ ಅಭಿಪ್ರಾಯಗಳನ್ನೇ ಕೇಳುತ್ತಿದ್ದರು. ಚೆನ್ನಾಗಿ ಎದುರಿಸಿದ್ದರಿಂದ ನನಗೆ ಸಂದರ್ಶನದಲ್ಲಿ ದೇಶದಲ್ಲೇ ಎರಡನೇ ಸ್ಥಾನ ಸಿಕ್ಕಿತು. ಯುಪಿಎಸ್‌ಸಿ ಸಿದ್ಧತೆಗೆ ನನ್ನ ಎಂಬಿಬಿಎಸ್ ಓದು ನೆರವಾಯ್ತು. ವೈದ್ಯಕೀಯ ಕ್ಷೇತ್ರದ ಬಗ್ಗೆ ಓದಿದ್ದರಿಂದ ನನಗೆ ಸುಲಭವಾಯ್ತು ಎಂದಿದ್ದಾರೆ ಇಶಿತಾ.

ನಮ್ಮ ಮೇಲೆ ಹತೋಟಿ ಇರಬೇಕು, ಸೋಷಿಯಲ್‌ ಮೀಡಿಯಾ ಬೇಡ

ಬಾಲ್ಯದಿಂದಲೂ ಬೆಳಗ್ಗೆ 5 ಗಂಟೆಗೆ ಏಳುವುದು ನನಗೆ ಅಭ್ಯಾಸ. ಪುನರ್ಮನನ, ದಿನಪತ್ರಿಕೆ ಓದುವುದು, ತರಗತಿಗಳಿಗೆ ಹಾಜರಾಗುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಹಾಗಂತಾ ಬರೀ ಓದಿನಲ್ಲೇ ಇರುತ್ತಿರಲಿಲ್ಲ. ನಿತ್ಯ 7-8 ಗಂಟೆ ಕಡ್ಡಾಯವಾಗಿ ಮಲಗುತ್ತಿದ್ದೆ. ಮನೆಯವರು ಹಾಗೂ ಸ್ನೇಹಿತರ ಜೊತೆಗೆ ಸಮಯ ಕಳೆಯುತ್ತಿದ್ದೆ. ಹೊರಗೆ ಸುತ್ತಾಡುತ್ತಿದ್ದೆ. ಸೋಷಿಯಲ್‌ ಮೀಡಿಯಾದಿಂದ ದೂರ ಇರುತ್ತಿದ್ದೆ. ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಬಳಸುತ್ತಲೇ ಇರಲಿಲ್ಲ. ವಾಟ್ಸಾಪ್‌ ಹಾಗೂ ಟೆಲಿಗ್ರಾಮ್‌ ಬಳಸುತ್ತಿದ್ದೆ. ಟೆಲಿಗ್ರಾಮ್‌ನಲ್ಲಿ ಓದಿಗೆ ಬೇಕಾದ ಹಲವು ಮಾಹಿತಿ ಸಿಗುತ್ತಿತ್ತು. ನಮ್ಮ ಮೇಲೆ ನಮಗೆ ಹತೋಟಿ ಇರಬೇಕು. ಪರೀಕ್ಷೆ ಮುಗಿದ ಮೇಲೆ ಸೋಷಿಯಲ್‌ ಮೀಡಿಯಾ ಬಳಸಬಹುದು. ಆದರೆ, ಪರೀಕ್ಷೆ ಸಿದ್ದತೆ ಸಮಯದಲ್ಲಿ ಅದರಿಂದ ಸಂಪೂರ್ಣ ದೂರವಿದ್ದರೆ ಒಳ್ಳೆಯದು ಎಂದು ಇಶಿಕಾ ಸಲಹೆ ನೀಡುತ್ತಾರೆ.

ಯುಪಿಎಸ್‌ಸಿ ಯಶಸ್ಸಿಗೆ ಇಶಿಕಾ ಅವರ ಸಪ್ತಸೂತ್ರಗಳು

  • ಹತ್ತು ಪುಸ್ತಕ ಒಮ್ಮೆಲೇ ಓದುವ ಬದಲು ಒಂದು ಪುಸ್ತಕವನ್ನು 10 ಸಲ ಓದಿ.
  • ಸೋಷಿಯಲ್‌ ಮೀಡಿಯಾದಿಂದ ಆದಷ್ಟು ದೂರವಿರಿ.
  • ಪ್ರತಿದಿನ ನಿತ್ಯ 7-8 ಗಂಟೆ ಕಡ್ಡಾಯವಾಗಿ ನಿದ್ದೆ ಮಾಡಿ.
  • ಕೋಚಿಂಗ್‌ ನಮಗೆ ನೆರವಾಗುತ್ತದೆ ಹೌದು. ಆದರೆ ಕೋಚಿಂಗ್‌ ಅನಿವಾರ್ಯ ಅಲ್ಲ.
  • ದಿನಪತ್ರಿಕೆಗಳನ್ನು ಓದುವ ಅಭ್ಯಾದ ಪುಸ್ತಕ ಓದುವಷ್ಟೇ ಅಗತ್ಯ. ಯುಪಿಎಸ್‌ಸಿ ಪ್ರಯಾಣದಲ್ಲಿ ಇದು ಅಗತ್ಯ ಭಾಗ.
  • ಯಾವುದೇ ಕೆಲಸ ಮಾಡುವಾಗ ಸಮರ್ಪಣಾ ಭಾವ ಮತ್ತು ಸ್ಥಿರತೆ ಮುಖ್ಯ. ಯುಪಿಎಸ್‌ಸಿ ಪರೀಕ್ಷಾರ್ಥಿಗಳಿಗೆ ಇದು ಮುಖ್ಯ.
  • ನಾಳೆ ಎಂಬ ನಿಲುವು ಒಳ್ಳೆಯದಲ್ಲ. ಇವತ್ತಿನ ಕೆಲಸ ಇವತ್ತೇ ಮಾಡಿ.

ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.