Karnataka Elections: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ: ಚುನಾವಣಾ ಮೂಡ್‌ನಲ್ಲಿ ಕರ್ನಾಟಕ
ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು (ಮಾ.29-ಬುಧವಾರ) ದಿನಾಂಕ ಘೋಷಣೆ ಆಗಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಕೇಂದ್ರ ಚುನಾವಣಾ ಆಯೋಗ ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಲಿದೆ.
ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು (ಮಾ.29-ಬುಧವಾರ) ದಿನಾಂಕ ಘೋಷಣೆ ಆಗಲಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಕೇಂದ್ರ ಚುನಾವಣಾ ಆಯೋಗ ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಲಿದ್ದು, ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಲಿದೆ.
ಬೆಳಗ್ಗೆ 11.30ಕ್ಕೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಲಿದ್ದು, ಚುನಾವಣೆಯ ವೇಳಾಪಟ್ಟಿಯನ್ನು ಘೋಷಣೆ ಮಾಡಲಿದ್ದಾರೆ. ಎಷ್ಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂಬುದು ಚುನಾವಣಾ ಆಯೋಗದ ಸುದ್ದಿಗೋಷ್ಠಿ ಬಳಿಕ ಸ್ಪಷ್ಟವಾಗಲಿದೆ.
2018ರ ಮೇ 12 ರಂದು ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಮತದಾನ ನಡೆದು ಮೂರು ದಿನಗಳ ನಂತರ ಫಲಿತಾಂಶಗಳನ್ನು ಘೋಷಿಸಲಾಗಿತ್ತು.
2018ರ ವಿಧಾನಸಭೆ ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆಯುವ ಮೂಲಕ, ಭಾರತೀಯ ಜನತಾ ಪಕ್ಷ(ಬಿಜೆಪಿ) ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಅಧಿಕಾರಕ್ಕೇರಲು ಒಂಬತ್ತು ಸ್ಥಾನಗಳ ಕೊರತೆ ಎದುರಿಸಿತು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು 78 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ಮತ್ತು 37 ಸ್ಥಾನಗಳನ್ನು ಗೆದ್ದಿದ್ದ ಜೆಡಿ (ಎಸ್) ಮೈತ್ರಿ ಸರ್ಕಾರ ರಚಿಸಿದವು.
ಆದರೆ ಜೂನ್ 2020 ರಲ್ಲಿ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ ಕಂಡಿತು. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಿಜೆಪಿಗೆ ಹಾರಿದ ಹದಿನೇಳು ಶಾಸಕರು, ಕೇಸರಿ ಪಕ್ಷ ಅಧಿಕಾರಕ್ಕೇರುವಲ್ಲಿ ನೆರವಾದರು.
ಇದೀಗ ರಾಜ್ಯದಲ್ಲಿ ಮತ್ತೆ ಚುನಾವಣಾ ಕಾವು ಜೋರಾಗಿದ್ದು, ಪೂರ್ಣ ಬಹುಮತದೊಂದಿಗೆ ಮರಳಿ ಅಧಿಕಾರ ಪಡೆಯಲು ಬಿಜೆಪಿ ಉತ್ಸುಕವಾಗಿದೆ. ಚುನಾವಣೆಗೆ ಮುನ್ನ ಪಕ್ಷದ ರಾಜ್ಯವ್ಯಾಪಿ “ವಿಜಯ ಸಂಕಲ್ಪ ಯಾತ್ರೆ” ಅಂತ್ಯಗೊಂಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕರ್ನಾಟಕಕ್ಕೆ ಸರಣಿ ಭೇಟಿಗಳನ್ನು ನೀಡುತ್ತಿದ್ದಾರೆ.
ಇತ್ತ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂ ಚುನಾವಣೆಗೆ ಸಿದ್ಧವಾಗಿದ್ದು ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿರುವ ಕಾಂಗ್ರೆಸ್, ಭ್ರಷ್ಟಾಚಾರ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದೆ.
ಈಗಾಗಲೇ ಹವು ಗ್ಯಾರಂಟೀ ಯೋಜನೆಗಳನ್ನು ಘೋಷಿಸಿರುವ ಕಾಂಗ್ರೆಸ್, ಪ್ರಜಾಧ್ವನಿ ಯಾತ್ರೆಯ ಮೂಲಕ ರಾಜ್ಯದ ಮತದಾರರ ಮನಗೆಲ್ಲುವ ಪ್ರಯತ್ನ ಮಾಡುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಇದೆ ಎನ್ನಲಾದ ಭಿನ್ನಾಭಿಪ್ರಾಯವನ್ನು ಮೀರಿ ಕಾಂಗ್ರೆಸ್ ರಾಜ್ಯದ ಜನರನ್ನು ತಲುಪಬೇಕಿದೆ.
ಅಂತೆಯೇ ಜೆಡಿಎಸ್ ಕೂಡ ಚುನಾವಣೆಗೆ ಸಿದ್ಧವಾಗಿದ್ದು, ಪಂಚರತ್ನ ರಥ ಯಾತ್ರೆಯ ಮೂಲಕ ಕಾರ್ಯಕರ್ತರಲ್ಲಿ ನವೋತ್ಸಾಹ ಮೂಡಿಸಿದೆ. ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ರಾಜ್ಯದ ಮೂಲೆ ಮೂಲೆಗೂ ಸಂಚರಿಸುತ್ತಿದ್ದು, ಪ್ರಾದೇಶಿಕ ಪಕ್ಷಕ್ಕೆ ಆಶೀರ್ವಾದ ಮಾಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಈ ಚುನಾವಣೆಯ ಪ್ರಮುಖ ಹೈಲೆಟ್ಸ್‌ಗಳಲ್ಲಿ ಒಂದು.
ತಮ್ಮ ಶಿಕಾರಿಪುರ ಕ್ಷೇತ್ರವನ್ನು ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಬಿಟ್ಟು ಕೊಟ್ಟಿರುವ ಬಿಎಸ್‌ವೈ, ರಾಜ್ಯಾದ್ಯಂತ ಸಂಚರಿಸಿ ಬಿಜೆಪಿ ಪರ ಅಲೆ ಸೃಷ್ಟಿಸುವಲ್ಲಿ ಮಗ್ನರಾಗಿದ್ದಾರೆ.
ಒಟ್ಟಿನಲ್ಲಿ ಕರ್ನಟಕ ವಿಧಾನಸಭೆ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಶೀಘ್ರದಲ್ಲೇ ಪ್ರಕಟಿಸಲಿದ್ದು, ರಾಷ್ಟ್ರ ರಾಜಕಾರಣದ ದಿಕ್ಕನ್ನು ನಿರ್ಧರಿಸಿರುವ ಸಾಮರ್ಥ್ಯ ಹೊಂದಿರುವ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ದೇಶದ ದೃಷ್ಟಿ ನೆಟ್ಟಿದೆ ಎಂದು ಹೇಳಬಹುದು.
ವಿಭಾಗ