Election issue in Bengaluru: ಬೆಂಗಳೂರಿನ ಸ್ಲಮ್‌ಗಳಲ್ಲಿ ಮತದಾರನ ಮಾತು, ನಿರ್ಧಾರ ಸ್ಪಷ್ಟ; ಹಿಂದುಸ್ತಾನ್ ಟೈಮ್ಸ್ ಅವಲೋಕನ ವರದಿ ಹೀಗಿದೆ
Election issue in Bengaluru: ಬೆಂಗಳೂರಿನಲ್ಲಿ ಚುನಾವಣಾ ವಿಷಯಗಳೇನು? ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ವಿಶೇಷವಾಗಿ ಕೊಳಚೆ ಪ್ರದೇಶಗಳ ವಿಚಾರ ಚುನಾವಣಾ ಪ್ರಚಾರದ ವಿಷಯವಾಗಲಿಲ್ಲವೇಕೆ ಎಂಬುದನ್ನು ಅವಲೋಕಿಸಿದ್ದಾರೆ ಹಿಂದುಸ್ತಾನ್ ಟೈಮ್ಸ್‌ನ ದೀಪಂಕರ್ ಘೋಷ್.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈಗ ವಿಧಾನಸಭಾ ಚುನಾವಣೆಯ ಕಾವು ಏರಿದೆ.̇ 28 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರಿನಲ್ಲಿ ಚುನಾವಣಾ ವಿಷಯಗಳೇನು? ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ವಿಶೇಷವಾಗಿ ಕೊಳಚೆ ಪ್ರದೇಶಗಳ ವಿಚಾರ ಚುನಾವಣಾ ಪ್ರಚಾರದ ವಿಷಯವಾಗಲಿಲ್ಲವೇಕೆ ಎಂಬುದನ್ನು ಅವಲೋಕಿಸಿದ್ದಾರೆ ಹಿಂದುಸ್ತಾನ್ ಟೈಮ್ಸ್‌ನ ದೀಪಂಕರ್ ಘೋಷ್.
ಜನಸಂಖ್ಯೆ ವಿಚಾರಕ್ಕೆ ಬಂದರೆ 2019-21ರ ಎನ್‌ಎಫ್‌ಎಚ್‌ಎಸ್ ಅಂಕಿಅಂಶಗಳ ಪ್ರಕಾರ, ಭಾರತದ ಅತ್ಯಂತ ಶ್ರೀಮಂತ 20 ಪ್ರತಿಶತದಷ್ಟು ಜನಸಂಖ್ಯೆಯ ಆಧಾರದ ಮೇಲೆ ಜಿಲ್ಲೆಗಳನ್ನು ಶ್ರೇಣೀಕರಿಸಿದೆ. ಇದರಲ್ಲಿ ಬೆಂಗಳೂರು ನಗರವು ರಾಷ್ಟ್ರವ್ಯಾಪಿ 707 ಜಿಲ್ಲೆಗಳಲ್ಲಿ 38 ನೇ ಸ್ಥಾನದಲ್ಲಿದೆ. ಈ ಬ್ರಾಕೆಟ್‌ನೊಳಗೆ 59 ಪ್ರತಿಶತ ಜನಸಂಖ್ಯೆಯನ್ನು ಹೊಂದಿದೆ. ಭಾರತದ ಅಗ್ರ 40 ಪ್ರತಿಶತದಷ್ಟು ಜನರು ವಾಸಿಸುವ ಜಿಲ್ಲೆಗಳ ಪೈಕಿ 21 ನೇ ಸ್ಥಾನದಲ್ಲಿದೆ.
ಆದರೂ ಬೆಂಗಳೂರು ಎಂದಾಗ ನೆನಪಾಗುವ ಇನ್ನೊಂದು ವಿಚಾರ ಇದೆ. ಬೆಂಗಳೂರಿನಲ್ಲಿರುವ ಮತ್ತೊಂದು ಜನಸಮೂಹ. ಕಂಡರೂ ಕಾಣದಂತೆ ಇರುವ ಈ ಜನಸಮೂಹ ಸೇವಾ ವಲಯದ ಶ್ರಮಿಕ ವರ್ಗ. ವರ್ಷದ ಬಹುಪಾಲು ಸಾರ್ವಜನಿಕ ನಿರೂಪಣೆಯಲ್ಲಿ ಇವರ ಉಲ್ಲೇಖ ಬಹಳ ವಿರಳ. ಈಗ ಚುನಾವಣೆಯ ಸಂದರ್ಭ. ಬೆಂಗಳೂರು ಮತ್ತು ಕರ್ನಾಟಕದ ಭವಿಷ್ಯವನ್ನು ನಿರ್ಧರಿಸುವ ಸಮಯ. ಚುನಾವಣಾ ವಿಚಾರವಾಗದ ಕೊಳಚೆ ಪ್ರದೇಶದ ವಿಚಾರವನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇವೆ.
ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು 2021 ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 2,804 ಕೊಳಚೆ ಪ್ರದೇಶಗಳಿವೆ. ಅದರಲ್ಲಿ 597 ಬೆಂಗಳೂರು ನಗರದಲ್ಲಿವೆ. ಕರ್ನಾಟಕದ ಈ ಕೊಳೆಗೇರಿಗಳಲ್ಲಿ ವಾಸಿಸುವ ಜನಸಂಖ್ಯೆಯು 4.5 ಮಿಲಿಯನ್ ಅಥವಾ ರಾಜ್ಯದ ನಗರ ಜನಸಂಖ್ಯೆಯ 22.56 ಪ್ರತಿಶತ ಎಂದು ಅಂದಾಜಿಸಲಾಗಿದೆ.
ಫ್ರೇಸರ್ ಟೌನ್, ಡಿಜೆ ಹಳ್ಳಿಗಳ ಒಳಗೊಂದು ಸುತ್ತು…
ಬೆಂಗಳೂರಿನ ಈಶಾನ್ಯದಲ್ಲಿರುವ ಪಟ್ಟಣ ಫ್ರೇಸರ್ ಟೌನ್. ಹಿಂದೊಮ್ಮೆ ಮೈಸೂರು ಮಹಾರಾಜರ ಬೋಧಕರಾಗಿದ್ದ ಸ್ಟುವರ್ಟ್ ಮಿಟ್‌ಫೋರ್ಡ್ ಫ್ರೇಸರ್ ಅವರ ಹೆಸರನ್ನು ಈ ಪಟ್ಟಣಕ್ಕೆ ಇಡಲಾಗಿದೆ. ಇದನ್ನು 1900ರ ದಶಕದ ಆರಂಭದಲ್ಲಿ ಬೆಂಗಳೂರು ಕಂಟೋನ್ಮೆಂಟ್‌ನ ವಿಸ್ತರಣೆಯಾಗಿ ರೂಪಿಸಲಾಗಿದೆ. ಮರಗಳಿಂದ ಕೂಡಿದ ರಸ್ತೆಗಳ ಎರಡೂ ಬದಿಗಳಲ್ಲಿ ವಸತಿ ಬಂಗಲೆಗಳು ಮತ್ತು ಫ್ಲಾಟ್‌ಗಳಿವೆ. ಸಾಂದರ್ಭಿಕವೆನಿಸುವಂತೆ ಅಲ್ಲಲ್ಲಿ ಶಾಪಿಂಗ್ ಆರ್ಕೇಡ್ ಅಥವಾ ಬಹು-ಮಹಡಿ ಆಭರಣ ಅಂಗಡಿಗಳೂ ಗೋಚರಿಸುತ್ತವೆ. ಇದು ಶ್ರೀಮಂತರ ವಸತಿ ಪ್ರದೇಶವೆನ್ನುವಂತೆ ಕಂಡುಬರುತ್ತದೆ.
ಆದರೆ ಐದು ನಿಮಿಷ ಮುಂದೆ ಪ್ರಯಾಣಿಸಿದರೆ, ರಸ್ತೆ ಸಂಚಾರದ ಸ್ವರೂಪ ಬದಲಾಗುತ್ತದೆ. ಸೆಡಾನ್‌ನ ಶಬ್ದ ಮರೆಯಾಗಿ, ರಿಕ್ಷಾ, ದ್ವಿಚಕ್ರವಾಹನಗಳ ಶಬ್ದ ಹೆಚ್ಚಾಗುತ್ತದೆ. ಸಪೂರ ಮಾರ್ಗದಲ್ಲಿ ಸಂಚರಿಸುವುದೇ ಕಷ್ಟವೆನಿಸುವಷ್ಟು ಸಂಚಾರ ದಟ್ಟಣೆ ಅನುಭವಕ್ಕೆ ಬರುತ್ತದೆ. ಅಲ್ಲಿ ರಸ್ತೆ ಬದಿಗೆ ಚಿಕ್ಕಪುಟ್ಟ ಅಂಗಡಿಗಳು, ಒತ್ತಟ್ಟಾಗಿರುವ ಗುಡಿಸಲುಗಳೊಂದಿಗೆ ಕಿಷ್ಕಿಂದೆಯ ಚಿತ್ರಣ ಕಂಡುಬರುತ್ತದೆ. ಉದ್ಯಾನ ನಗರಿಯ ಗುರುತಾಗಿರುವ ಮರಗಳು ಇಲ್ಲಿ ಕಾಣಸಿಗುವುದು ವಿರಳ.
''ದೇವರಜೀವನಹಳ್ಳಿಯಲ್ಲಿ ಮರಗಳಿಗೆ ಜಾಗವಿಲ್ಲ. ಬೆಂಗಳೂರಿನ ದೊಡ್ಡ ಕೊಳೆಗೇರಿ ಇದು. ಇಲ್ಲಿ ವಾಸಿಸುವವರಿಗೆ ಪ್ರತಿ ಚದರ ಇಂಚು ಭೂಮಿ ಕೂಡ ಅಮೂಲ್ಯ. ಮರವೂ ಭರಿಸಲಾಗದ ಐಷಾರಾಮಿ ”ಎಂದು ಲಕ್ಷ್ಮಣ ಎಸ್ ಎಂಬುವವರು ತಮ್ಮ ಗುಡಿಸಲಿನ ಎದುರು ಕುಕ್ಕುರು ಕುಳಿತುಕೊಂಡೇ ಹೇಳುತ್ತಾರೆ.
ಬೆಂಗಳೂರು ಅಂದ್ರೆ ಲೇಕ್‌ಗಳು ಕೂಡ ನೆನಪಾಗುತ್ತವೆ. ಹೌದು ಇದು ಉದ್ಯಾನ ನಗರಿ ಎಂಬಂತೆಯೇ ಸರೋವರಗಳ ನಗರಿ ಕೂಡಾ ಆಗಿತ್ತು. ಈಗ ಅವುಗಳಲ್ಲಿ ಹಲವು ನಿರ್ಜೀವವಾಗಿವೆ. ಇನ್ನು ಕೆಲವು ಕೊಳಚೆ ನೀರು ಸೇರಿ ನೊರೆಕಾರುತಿವೆ. ಕಬ್ಬನ್ ಪಾರ್ಕ್, ಐಟಿ ಸಿಟಿ, ಸಿಲಿಕಾನ್ ವ್ಯಾಲಿ ಹೀಗೆ ಹಲವು ವಿಶೇಷಣಗಳನ್ನು ಹೊಂದಿರುವ ಬೆಂಗಳೂರು ಮೂಲಸೌಕರ್ಯದ ವಿಚಾರದಲ್ಲಿ ಹೆಣಗಾಡುತ್ತಿದ್ದು, ಜನರು ಉಸಿರುಗಟ್ಟಿಕೊಂಡು ಸಂಚಾರ ದಟ್ಟಣೆ ಕುರಿತು ಮಾತನಾಡುತ್ತಿದ್ದಾರೆ.
ತನ್ನ ಎರಡು ಕೋಣೆಗಳ ಗುಡಿಸಲಿನ ಹೊರಗೆ, 63 ವರ್ಷದ ಲಕ್ಷ್ಮಣ ಎಸ್ ನಿರಂತರವಾಗಿ ಆಕಾಶದತ್ತ ನೋಡುತ್ತ ನಾಟಕೀಯವಾಗಿ ಮಾತನಾಡುತ್ತಾನೆ. ಮಾತಿನ ನಡುವೆ ನಿಮಿಷ ನಿಮಿಷಕ್ಕೆ ಕೋಪಗೊಳ್ಳುತ್ತಾನೆ. ಮಳೆ ಬರುವುದೇ ಎಂದು ಆಗಸ ನೋಡುತ್ತಿರುತ್ತಾನೆ. ಮಳೆ ಬಂತೆಂದರೆ ಟಾರ್ಪಾಲಿನ್ ಶೀಟ್ ಎಳೆದು ತನ್ನ ವೃತ್ತಿ ಸಾಮಗ್ರಿಗಳನ್ನು ಮುಚ್ಚಿ ಬೇರೆಡೆಗೆ ಓಡುತ್ತಾನೆ. ಈತ ಮಾತಿಗೆ ಸಿಕ್ಕು ಹೇಳಿದ್ದು ಹೀಗೆ -
"ನಾವು ಅದೃಶ್ಯ ಜನರು. ಭಾರೀ ಮಳೆಯಾದಾಗ ಮತ್ತು ಪ್ರವಾಹ ಬಂದಾಗ, ಎಲ್ಲ ದೂರದರ್ಶನ ಮತ್ತು ಪತ್ರಿಕೆಗಳು ಕೆಲವು ರಸ್ತೆಗಳ ಪ್ರವಾಹದ ಬಗ್ಗೆ ಮಾತನಾಡುತ್ತವೆ. ಪ್ರಯಾಣಿಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸುತ್ತವೆಯೇ ಹೊರತು, ಈ ಸ್ಲಮ್‌ನಲ್ಲಿ ಬದುಕುತ್ತಿರುವ ನಮ್ಮ ಬದುಕಿನ ವಿವರಣೆ ನೀಡುವುದಿಲ್ಲ. ಪ್ರತಿ ಮಳೆಗಾಲವೂ ನಮಗೆ ಅಪಾಯಕಾರಿಯೇ. ಕೆಲವೊಮ್ಮೆ ಜೀವ ಉಳಿಸಲು ಸ್ಥಳಾಂತರವಾಗಬೇಕಾದ ಅನಿವಾರ್ಯತೆ" ಎಂದು ಲಕ್ಷ್ಮಣ ಹೇಳುತ್ತಾರೆ.
ಅವರ ಮನೆಯ ಒಂದು ಕೋಣೆಯ ಒಂದು ಮೂಲೆಯಲ್ಲಿ, ಒಂದು ಹಾಸಿಗೆ ಮತ್ತು ಬಟ್ಟೆಗಳನ್ನು ಜೋಡಿಸಲಾಗಿದೆ. ಅಲ್ಲೇ ಪಕ್ಕದಲ್ಲಿ ಕಬ್ಬಿಣದ ಪೆಟ್ಟಿಗೆ ಇದೆ. ಅದರಲ್ಲೇ ಅವರ ಕೆಲವು ಬಟ್ಟೆಗಳು, ಸರ್ಕಾರಿ ದಾಖಲೆಗಳಿವೆ.
ದೇವರಜೀವನಹಳ್ಳಿ ಅಥವಾ ಡಿಜೆ ಹಳ್ಳಿಯಲ್ಲಿ ಒಂದೆರಡು ರಸ್ತೆ ದಾಟಿದ ಕೂಡಲೇ ಮಾತಿಗೆ ಸಿಕ್ಕವರು ಮಂಜುನಾಥ ಪಾಟೀಲ್. ಅವರು ಬೆಳಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗುವವರು. ತಿಂಗಳಿಗೆ 12,000 ರೂಪಾಯಿ ಸಂಪಾದನೆ. ವೈಟ್‌ಫೀಲ್ಡ್‌ನ ಕಟ್ಟಡಗಳ ಮುಂಭಾಗದ ಗಾಜಿನ ಗೋಡೆಗಳನ್ನು ಹಗ್ಗ ಕಟ್ಟಿ ನೇತಾಡುತ್ತ ಸ್ವಚ್ಛಗೊಳಿಸುವುದು ಅವರ ಕೆಲಸ. ಬೆಳಗ್ಗೆ 5ರಿಂದ ಅಪರಾಹ್ನ 3ರ ತನಕ ನಡೆಯುತ್ತೆ ಈ ಕೆಲಸ. ಸೆಕೆಂಡ್ ಹ್ಯಾಂಡ್ ಹೋಂಡಾ ಸ್ಕೂಟರ್‌ನಲ್ಲಿ ಪ್ರಯಾಣ. ರಸ್ತೆಗುಂಡಿಗಳಿಂದ ಕೆಟ್ಟು ಹೋಗಿರುವ ರಸ್ತೆಯಲ್ಲಿ ನಿತ್ಯ ಪ್ರಯಾಣಿಸುವ ಪಾಟೀಲ್‌ಗೆ ಈ ಚುನಾವಣೆಯಲ್ಲಿ ಅವರ ಆಯ್ಕೆ ಬಹಳ ಸ್ಪಷ್ಟವಾಗಿದೆ.
“ಎಲ್ಲದರಲ್ಲೂ ಭ್ರಷ್ಟಾಚಾರ. ಕೇಂದ್ರ ಸರ್ಕಾರವು ಹಣವನ್ನು ನೀಡುತ್ತದೆ. ಆದರೆ ರಾಜ್ಯಮಟ್ಟದಲ್ಲಿ ಸರ್ಕಾರವು ಬಹಳ ಕಡಿಮೆ ಕೆಲಸ ಮಾಡುತ್ತದೆ. ಅವರು ಕೇವಲ ಯೋಜನೆ ಮಾಡುತ್ತಾರೆ. ಆದರೆ ಏನನ್ನೂ ಕಾರ್ಯಗತಗೊಳಿಸುವುದಿಲ್ಲ. ಅವರಿಗೆ ಐದು ವರ್ಷಗಳಾಗಿವೆ. ಈಗ ಬದಲಾವಣೆಯ ಸಮಯ ಬಂದಿದೆ ಎಂದು ಪಾಟೀಲ್ ಹೇಳುತ್ತಾರೆ.
ಮೂರು ಸ್ಲಂಗಳಲ್ಲಿ ಕೇಳಿ ಬಂದ ವಿಚಾರಗಳಿವು…
ಬೆಂಗಳೂರಿನ ಡಿಜೆ ಹಳ್ಳಿ, ಶ್ರೀರಾಂಪುರ ಮತ್ತು ರಾಜೇಂದ್ರ ನಗರ ಎಂಬ ಮೂರು ಸ್ಲಂ ಕ್ಲಸ್ಟರ್‌ಗಳಲ್ಲಿ ಸಂಚರಿಸಿದಾಗ ಅನುರಣನಗೊಂಡ ವಿಚಾರಗಳಿವು.
ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇನ್ನೂ ನಂಬಿಕೆ ಇದೆ. ಆದರೆ ಅಧಿಕಾರದಲ್ಲಿರುವ ಬಸವರಾಜ ಬೊಮ್ಮಾಯಿ ಸರ್ಕಾರದ ಮೇಲೆ 40 ಪರ್ಸೆಂಟ್ ಸರ್ಕಾರ ಎಂಬ ಹಣೆಪಟ್ಟಿಯನ್ನು ಕಾಂಗ್ರೆಸ್ ಅಂಟಿಸಿದೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಿದರೂ 40 ಪರ್ಸೆಂಟ್ ಕಮಿಷನ್ ಕಬಳಿಸಲಾಗುತ್ತಿದೆ ಎಂಬ ರಾಜ್ಯದ ಗುತ್ತಿಗೆದಾರರ ಆರೋಪವನ್ನು ಇದಕ್ಕಾಗಿ ಅದು ಬಳಸಿಕೊಂಡಿದೆ. ಅದು ಜನರ ಮನಸ್ಸಿನಲ್ಲಿ ಅಚ್ಚೊತ್ತಿದೆ.
“ಈ ರಾಜ್ಯ ಸರ್ಕಾರವು ಬಡವರಿಗಾಗಿ ಕೆಲಸ ಮಾಡುವುದಿಲ್ಲ ಮತ್ತು ಅದರ ಮೇಲೆ ಅವರು ಭ್ರಷ್ಟರಾಗಿದ್ದಾರೆ. ಮುಂದಿನ ಮುಖ್ಯಮಂತ್ರಿ (ಬಿಎಸ್) ಯಡಿಯೂರಪ್ಪ ಆಗಿದ್ದರೆ, ಅವರು ರಾಜ್ಯದ ಜನರ ಬಗ್ಗೆ ಕಾಳಜಿ ವಹಿಸುವ ಕಾರಣ ನನ್ನ ಆಲೋಚನೆಯೇ ಬೇರೆ ರೀತಿಯಲ್ಲಿ ಇರುತ್ತಿತ್ತು. ಆದರೆ ಇದೀಗ, ಬದಲಾವಣೆಯೇ ಅತ್ಯುತ್ತಮ ಆಯ್ಕೆ" ಎಂದು ಮಂಜುನಾಥ್ ಪಾಟೀಲ್ ವಿವರಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಕ್ಷೇತ್ರಗಳು ನಿರ್ಣಾಯಕ
ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಭವಿಷ್ಯ ಬಹಳ ನಿರ್ಣಾಯಕ. ಇಲ್ಲಿ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲುವುದೆಂಬ ಲೆಕ್ಕಾಚಾರ ಮೇಲೆ ಸ್ಪಷ್ಟ ಬಹುಮತ ಅಥವಾ ಅತಂತ್ರ ಅಸೆಂಬ್ಲಿ ನಿರ್ಣಯವಾಗುವುದು ಸಾಧ್ಯವಿದೆ. ರಾಜ್ಯ ವಿಧಾನಸಭೆಯು 224 ಸ್ಥಾನಗಳನ್ನು ಹೊಂದಿದೆ. ಬೆಂಗಳೂರು 28 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. 2008 ರಲ್ಲಿ, ಬಿಜೆಪಿ ಅಧಿಕಾರದ ಹಾದಿಯಲ್ಲಿ 28 ಸ್ಥಾನಗಳಲ್ಲಿ 17 ರಲ್ಲಿ ಗೆದ್ದಿತ್ತು. ಕಾಂಗ್ರೆಸ್ 10 ಗೆದ್ದಿತ್ತು. 2013 ರಲ್ಲಿ, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ, ಬಿಜೆಪಿಗೆ 12, ಕಾಂಗ್ರೆಸ್ 13 ಸಿಕ್ಕಿತ್ತು. 2018 ರಲ್ಲಿ, ಬಿಜೆಪಿ 11 ಸ್ಥಾನಗಳಿಗೆ ಕುಸಿಯಿತು. ಆದಾಗ್ಯೂ, ಅದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ 113 ಬಹುಮತ ಸಿಕ್ಕಿರಲಿಲ್ಲ. ಕಾಂಗ್ರೆಸ್ 15 ಸ್ಥಾನಗಳನ್ನು ಗೆದ್ದುಕೊಂಡರೆ, ಜೆಡಿಎಸ್ ಒಂದನ್ನು ಗೆದ್ದುಕೊಂಡಿತ್ತು. 2019 ರ ಉಪಚುನಾವಣೆಯಲ್ಲಿ ಬಿಜೆಪಿ 15 ಸ್ಥಾನಗಳಿಗೆ ಏರಿದೆ.
ಇದು ರಾಜಕೀಯ ಪಕ್ಷಗಳ ಲೆಕ್ಕಾಚಾರ
ಚುನಾವಣಾ ಪ್ರಚಾರ ಇಲ್ಲೂ ನಡೆಯುತ್ತಿದೆ. ಎಲ್ಲ ಪಕ್ಷಗಳವರದ್ದೂ ಕ್ಯಾಂಪೇನ್ ಆಗುತ್ತಿದೆ. ಅದರ ಚಿತ್ರಣ ಹೀಗಿದೆ.
“ನಮ್ಮ ವಿರುದ್ಧ ಆಡಳಿತ ವಿರೋಧಿ ಅಲೆ ಕೆಲಸ ಮಾಡುತ್ತಿರುವುದು ನಿಜ. ಟಿಕೆಟ್‌ಗಾಗಿ ಉಂಟಾಗಿರುವ ಅಸಮಾಧಾನವೂ ಹೆಚ್ಚಾಗಿದೆ. ಇಷ್ಟಾಗ್ಯೂ, ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಜನಮಾನಸದಲ್ಲಿ ಉಳಿದಿದೆ. ಅವರು ಕರ್ನಾಟಕ, ಬೆಂಗಳೂರಿನ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದಾರೆ. ಇದು ಜನರಿಗೂ ಅರ್ಥ ಆಗಿದೆ. ಹೀಗಾಗಿ ಅವರನ್ನೇ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದ್ದೇವೆ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳುವಂತೆ ಮೋದಿಯವರ ಕೈ ಬಲಪಡಿಸುವ ಕೆಲಸವನ್ನು ಕರ್ನಾಟಕದಿಂದಲೇ ಮಾಡಬೇಕು. ಇದು ಜನರಿಗೂ ಅರ್ಥವಾಗಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.
“ಪ್ರಧಾನಿ ನರೇಂದ್ರ ಮೋದಿಯವರು ಹೊಸ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದರು. ನಾವು ಈಗ ಸ್ಯಾಟಲೈಟ್ ರಿಂಗ್ ರೋಡ್ ಮಾಡುತ್ತಿದ್ದೇವೆ. ಸ್ಮಾರ್ಟ್ ಸಿಟಿ ಯೋಜನೆಗೆ ಈಗಾಗಲೇ 5 ಸಾವಿರ ಕೋಟಿ ರೂಪಾಯಿ ನೀಡಿದ್ದು, ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು. ರಾಜ್ಯ ಸರ್ಕಾರ ಮಾತ್ರವಲ್ಲ, ಕೇಂದ್ರ ಸರ್ಕಾರವೂ ಪ್ರಮುಖ ನಗರಗಳ ಬಗ್ಗೆ ಹೆಚ್ಚು ನಿರ್ದಿಷ್ಟವಾಗಿದೆ ಎಂದು ಬೆಂಗಳೂರಿನ ಬಿಜೆಪಿ ಸಂಘಟನೆ ಉಸ್ತುವಾರಿ ಗೋಪಿನಾಥ್ ರೆಡ್ಡಿ ಏಪ್ರಿಲ್ 4 ರಂದು ಹಿಂದುಸ್ತಾನ್ ಟೈಮ್ಸ್‌ಗೆ ತಿಳಿಸಿದ್ದರು.
ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿಶಾಲವಾದ ಹೊಡೆತಗಳ ಆಚೆಗೆ, ಜಾತಿ ಸೇರಿ ಸ್ಥಳೀಯ ಅಂಶಗಳ ಮೇಲೆ ಅವಲಂಬಿತವಾಗುವುದು ಸಹಜವಾಗಿಯೇ ಇದೆ. ಒಕ್ಕಲಿಗರು ನಗರದಲ್ಲಿ ಅತ್ಯಂತ ಪ್ರಭಾವಿ ಸಮುದಾಯ. 28 ಹಾಲಿ ಶಾಸಕರಲ್ಲಿ 13 ಜನ ಈ ಸಮುದಾಯದವರೇ ಇದ್ದಾರೆ. ಡಿ.ಜೆ.ಹಳ್ಳಿ ಬರುವ ಪುಲಕೇಶಿನಗರ ಸೇರಿ ನಾಲ್ಕು ಮೀಸಲು ಸ್ಥಾನಗಳು ಪರಿಶಿಷ್ಟ ಜಾತಿಗಿವೆ. ಆ ಸ್ಥಾನದಲ್ಲಿ, 2018 ರ ಚುನಾವಣೆಯಲ್ಲಿ ರಾಜ್ಯದಲ್ಲಿ 82,000 ಮತಗಳ ಅಂತರದಿಂದ ಗೆದ್ದಿದ್ದ ಹಾಲಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿಲ್ಲ. 2018 ರ ಚುನಾವಣೆಯಲ್ಲಿ ಮಹದೇವಪುರದಿಂದ ಸ್ಪರ್ಧಿಸಿ ಸೋತ ಎಸಿ ಶ್ರೀನಿವಾಸ ಅವರಿಗೆ ಟಿಕೆಟ್ ನೀಡಿದೆ. ಅಖಂಡ ಮೂರ್ತಿ ವಿಧಾನಸಭೆಗೆ ರಾಜೀನಾಮೆ ನೀಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸುವ ಅವಕಾಶವನ್ನು ಅವರು ನಿರಾಕರಿಸಿದರು. 2020ರ ಆಗಸ್ಟ್ ತಿಂಗಳಲ್ಲಿ ಅಖಂಡ ಮೂರ್ತಿ ಅವರ ಸಂಬಂಧಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ ಪೋಸ್ಟ್ ಕಾರಣಕ್ಕೆ ಅಲ್ಲಿ ಕೋಮು ಗಲಭೆ ಉಂಟಾಗಿತ್ತು.
ಕೊನೆಯ ಮಾತು
ಡಿ.ಜೆ.ಹಳ್ಳಿ ಸುತ್ತಮುತ್ತಲಿನ ಪ್ರದೇಶ ಸುತ್ತಿ ಬಂದಾಗ ಅಪರಾಹ್ನ 3 ಗಂಟೆ ಆಗಿತ್ತು. ಮಳೆಯ ಅಬ್ಬರ ಕಡಿಮೆ ಆಗಿತ್ತು. ಲಕ್ಷ್ಮಣ ಎಸ್ ತಮ್ಮ ಉಪಕರಣಗಳ ಟಾರ್ಪಾಲಿನ್ ತೆರೆದು ಕುಳಿತರು. ಅವರು ಅಲ್ಲೇ ಎದುರಿಗೆ ಇದ್ದ ಟೀ ಸ್ಟಾಲ್‌ನಲ್ಲಿ 5 ರೂಪಾಯಿಯ ಒಂದು ಕಪ್ ಚಹಾ ಸೇವಿಸಲು ಹೊರಟರು. ಅಲ್ಲೇ ಪಕ್ಕದಲ್ಲಿ ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಇದೆ. ಅದರಲ್ಲೊಂದು ಫಲಕ ಇದೆ. ಕೇಂದ್ರ ರೈಲ್ವೆ ಸಚಿವರಾಗಿದ್ದ ಸಿಕೆ ಜಾಫರ್ ಷರೀಫ್ ಪ್ರಾಯೋಜಿಸಿದ್ದರು ಎಂಬ ಉಲ್ಲೇಖವಿದೆ.
“ಅದನ್ನು ನಿರ್ಮಿಸಿದಾಗ ನಾನು ಯುವಕನಾಗಿದ್ದೆ ಮತ್ತು ದಲಿತನಾಗಿ, ಅಂಬೇಡ್ಕರ್ ಅವರು ನಾನು ಮೆಚ್ಚಿದ ಏಕೈಕ ರಾಜಕಾರಣಿ. ಈಗಲೂ ಪ್ರತಿ ಬಾರಿ ಕೆಲಸಕ್ಕೆಂದು ಹೊರಗೆ ಹೋದಾಗ ಪ್ರತಿಮೆಗೆ ತಲೆ ಬಾಗುತ್ತೇನೆ. ಅವರು ಬದುಕಿದ್ದರೆ ನಮ್ಮ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಮುಂದೊಂದು ದಿನ ಅವರಂತೆ ನಮ್ಮನ್ನು ನೋಡಿ ನಮಗಾಗಿ ದುಡಿಯುವ ಮತ್ತೊಬ್ಬ ನಾಯಕ ಬರುತ್ತಾನೆ. ಅಲ್ಲಿಯವರೆಗೆ, ನಾವು ಒಂದು ಭ್ರಷ್ಟ ಸರ್ಕಾರವನ್ನು ಇನ್ನೊಂದಕ್ಕೆ ಮತ ಹಾಕುತ್ತೇವೆ" ಎಂದು ಹೇಳುತ್ತ ಲಕ್ಷ್ಮಣ್ ನಿಟ್ಟುಸಿರು ಬಿಟ್ಟರು.
ಅವಲೋಕನ - ದೀಪಂಕರ್ ಘೋಷ್, ಹಿಂದುಸ್ತಾನ್ ಟೈಮ್ಸ್ ಬೆಂಗಳೂರು
(ಅನುವಾದ - ಉಮೇಶ್ ಕುಮಾರ್ ಶಿಮ್ಲಡ್ಕ, ಹಿಂದುಸ್ತಾನ್ ಟೈಮ್ಸ್ ಕನ್ನಡ)
ಮೂಲ ಲೇಖನವನ್ನು ಇಂಗ್ಲಿಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ | Bengaluru’s silenced slums may hold unlikely Karnataka poll key