ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ ಗೆಲುವಿನ ನಗೆ, ಇಬ್ಬರು ಪವರ್‌ಫುಲ್‌ ಸಚಿವರಿದ್ದೂ ಸೋತ ಮುದ್ದಹನುಮೇಗೌಡ- ವಿಶ್ಲೇಷಣೆ

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ ಗೆಲುವಿನ ನಗೆ, ಇಬ್ಬರು ಪವರ್‌ಫುಲ್‌ ಸಚಿವರಿದ್ದೂ ಸೋತ ಮುದ್ದಹನುಮೇಗೌಡ- ವಿಶ್ಲೇಷಣೆ

ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿ ಸೋಮಣ್ಣ ಗೆಲುವಿನ ನಗೆ ಬೀರಿದ್ದಾರೆ. ಇದೇ ವೇಳೆ ಇಬ್ಬರು ಪವರ್‌ಫುಲ್‌ ಸಚಿವರಿದ್ದೂ ಸೋತ ಮುದ್ದಹನುಮೇಗೌಡ. ಸೋಲು ಮತ್ತು ಗೆಲುವಿಗೆ ಹಲವು ಅಂಶಗಳು ಕಾರಣ. (ವಿಶ್ಲೇಷಣೆ - ಈಶ್ವರ್, ತುಮಕೂರು

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ(ಎಡ ಚಿತ್ರದಲ್ಲಿ ಬಿಜೆಪಿ ಶಾಲು ಹಾಕಿಕೊಂಡವರು) ಗೆಲುವಿನ ನಗೆ, ಇಬ್ಬರು ಸಚಿವರಿದ್ದೂ ಸೋತ ಮುದ್ದಹನುಮೇಗೌಡ (ಬಲಚಿತ್ರ)
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ವಿ ಸೋಮಣ್ಣ(ಎಡ ಚಿತ್ರದಲ್ಲಿ ಬಿಜೆಪಿ ಶಾಲು ಹಾಕಿಕೊಂಡವರು) ಗೆಲುವಿನ ನಗೆ, ಇಬ್ಬರು ಸಚಿವರಿದ್ದೂ ಸೋತ ಮುದ್ದಹನುಮೇಗೌಡ (ಬಲಚಿತ್ರ)

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಭರ್ಜರಿ ಜಯ ಗಳಿಸಿದ್ದಾರೆ, ಜಿದ್ದಾ ಜಿದ್ದಿನ ಕಣವೆನಿಸಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇ ಗೌಡ ಮಕಾಡೆ ಮಲಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಸೋಲುಣಿಸಿದ್ದ ತುಮಕೂರು ಕ್ಷೇತ್ರದಲ್ಲಿ ಮತ್ತೆ ಕಮಲ ಅರಳಿದೆ, ವಿಧಾನಸಭೆ ಚುನಾವಣೆಯಲ್ಲಿ ಎರಡು ಕಡೆ ಸ್ಪರ್ಧೆ ಮಾಡಿ ಸೋತಿದ್ದ ವಿ.ಸೋಮಣ್ಣ ಇದೀಗ ಗೆಲುವಿನ ನಗೆ ಬೀರುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ.

ಬಿಜೆಪಿಯ ವಿ ಸೋಮಣ್ಣ 72046 ಮತ ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ 545352 ಗಳಿಸಿದ್ದಾರೆ, ಬಿಜೆಪಿ ಅಭ್ಯರ್ಥಿ 175594 ಗಳ ಅಂತರದಿಂದ ಗೆಲ್ಲುವ ಮೂಲಕ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

1) ಮೋದಿ ಅಲೆ ಮ್ಯಾಜಿಕ್

ತುಮಕೂರು ಕ್ಷೇತ್ರ ಮೊದಲಿನಿಂದಲೂ ಬಿಜೆಪಿ ಭದ್ರ ಕೋಟೆ ಎನಿಸಿಕೊಂಡಿದೆ, ಹಿಂದೆ ಕೂಡ ಬಿಜೆಪಿಯಿಂದ ಜಿ.ಎಸ್.ಬಸವರಾಜು ಗೆದ್ದು ಸಂಸದರಾಗಿದ್ದರು, ಇದೀಗ ಸೋಮಣ್ಣ ಗೆದ್ದು ಬೀಗಿದ್ದಾರೆ, ಇವರ ಗೆಲುವಿಗೆ ಮೋದಿ ಅಲೆ ಕೂಡ ಕೆಲಸ ಮಾಡಿದೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು, ಅವರಿಂದ ದೇಶದ ಅಭಿವೃದ್ಧಿ ಎಂದು ಮೋದಿ ಸರ್ಕಾರದ ಸಾಧನೆಗಳನ್ನೇ ಬಿಜೆಪಿ ಪ್ರಚಾರದಲ್ಲಿ ಬಿಂಬಿಸಿತ್ತು, ಬಿಜೆಪಿ ಗೆದ್ದರೆ ನನ್ನ ಗೆಲುವಲ್ಲ, ಮೋದಿ ಗೆಲುವು ಎಂದು ಸೋಮಣ್ಣ ಪ್ರಚಾರ ಮಾಡಿದರು, ಇದು ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿ ಗೆಲುವಿಗೆ ಮುನ್ನುಡಿಯಾಗಿದೆ.

2) ಬಿಜೆಪಿ ನಾಯಕರ ಒಗ್ಗಟ್ಟು

ಸೋಮಣ್ಣ ಹೊರಗಿನವರು ಎಂಬ ಕಾಂಗ್ರೆಸ್ ಆರೋಪಕ್ಕೆ ಸರಿಯಾಗಿ ತಿರುಗೇಟು ಕೊಡುತ್ತಲೇ ಕ್ಷೇತ್ರದಲ್ಲಿ ಸೋಮಣ್ಣ ಹಾಗೂ ಬಿಜೆಪಿ ನಾಯಕರು ಮಿಂಚಿನ ಸಂಚಾರ ಮಾಡಿ ಮತದಾರರ ಮನ ಮುಟ್ಟುವ ಕೆಲಸ ಮಾಡಿದರು, ಮಾಜಿ ಸಚಿವ ಮಾಧುಸ್ವಾಮಿ ಅಸಮಾಧಾನ ಬಿಟ್ಟರೆ ಸೋಮಣ್ಣಗೆ ಕ್ಷೇತ್ರದಲ್ಲಿ ಬಿಜೆಪಿ ನಾಯಕರಿಂದ ಅಂತಹ ವಿರೋಧ ಕಾಣಲಿಲ್ಲ, ದೇವೇಗೌಡರು, ಬಿಎಸ್‌ವೈ, ವಿಜಯೇಂದ್ರ, ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಕ್ಷೇತ್ರಕ್ಕೆ ಬಂದು ಸೋಮಣ್ಣ ಪರ ಪ್ರಚಾರ ಮಾಡಿ ಕಾರ್ಯಕರ್ತರ ಸಂಘಟಿಸಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಅದಕ್ಕೆ ಪ್ರತಿಫಲ ಎಂಬಂತೆ ಇದೀಗ ಗೆಲುವಿನ ಸಿಹಿ ಬಿಜೆಪಿಗೆ ದಕ್ಕಿದೆ.

3) ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಗೆ ಲೀಡ್

ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ಸೋಮಣ್ಣ ಭರ್ಜಿರಿಯಾಗಿ ಲೀಡ್ ಗಳಿಸಿದ್ದಾರೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರ ಕೊರಟಗೆರೆ ಕ್ಷೇತ್ರದಲ್ಲಿ 25541 ಮತಗಳ ಲೀಡ್ ಪಡೆದರೆ, ಸಹಕಾರ ಸಚಿವ ಕೆ.ಎನ್.ರಾಜಣ್ಣರ ಮಧುಗಿರಿ ಕ್ಷೇತ್ರದಲ್ಲಿ 12802 ಮತಗಳ ಲೀಡ್ ಪಡೆದಿದ್ದಾರೆ, ಗುಬ್ಬಿಯಲ್ಲಿ 26490, ತುಮಕೂರು ಗ್ರಾಮಾಂತರದಲ್ಲಿ 28820, ತಿಪಟೂರು ಕ್ಷೇತ್ರದಲ್ಲಿ 22700, ಚಿಕ್ಕನಾಯಕನ ಹಳ್ಳಿಯಲ್ಲಿ 6409, ತುಮಕೂರು ನಗರದಲ್ಲಿ 6919 ಹಾಗೂ ತುರುವೇಕೆರೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 43964 ಮತಗಳ ಲೀಡ್ ಪಡೆಯುವ ಮೂಲಕ ಸೋಮಣ್ಣ ಗೆಲುವಿನ ಕೇಕೆ ಹಾಕಿದ್ದಾರೆ.

4) ಬಿಜೆಪಿಗೆ ಒಲವು ತೋರಿದ ಮತದಾರ

ಇನ್ನು ಕ್ಷೇತ್ರದಲ್ಲಿ ಬಿಜೆಪಿ ಬಿರುಗಾಳಿ ಬೀಸಿದೆ, ಜಾತಿವಾರು ಲೆಕ್ಕಾಚಾರದಲ್ಲೂ ಬಿಜೆಪಿ ಎಲ್ಲಾ ವರ್ಗದವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ, ಲಿಂಗಾಯಿತರು ಎಂಬ ಕಾರಣಕ್ಕೆ ಆ ಸಮುದಾಯದ ಮತಗಳು ಸೋಮಣ್ಣ ತೆಕ್ಕೆಗೆ ಜಾರಿವೆ, ಇನ್ನು , ದೇವೇಗೌಡರು ಹಾಗೂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಪ್ರಚಾರ ಮಾಡಿ ಒಕ್ಕಲಿಗ ಮತಗಳನ್ನು ಸೋಮಣ್ಣ ಪರ ಸೆಲೆಯುವಲ್ಲಿ ಯಶಸ್ವಿಯಾಗಿದ್ದಾರೆ, ಇನ್ನು ಎಸ್‌ಸಿ, ಎಸ್‌ಟಿ ಮತಗಳನ್ನು ಸೋಮಣ್ಣ ಸೆಳೆದಿದ್ದಾರೆ, ಸಣ್ಣ ಸಣ್ಣ ಸಮುದಾಯಗಳ ಮುಖಂಡರನ್ನು ಭೇಟಿಯಾಗಿ ಮತ ಗಳಿಸುವ ಕೆಲಸವನ್ನು ಸೋಮಣ್ಣ ಮಾಡಿದ್ದರು, ಇದೆಲ್ಲವೂ ಸೋಮಣ್ಣ ಗೆಲುವಿಗೆ ಕಾರಣ ಎನ್ನಲಾಗಿದೆ.

5) ಇಬ್ಬರು ಪವರ್‌ಫುಲ್‌ ಸಚಿವರಿದ್ದೂ ಸೋತ ಮುದ್ದಹನುಮೇಗೌಡ

ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದು, ಅದರಲ್ಲೂ ಪವರ್‌ಪುಲ್ ಖಾತೆಯನ್ನೇ ಹೊಂದಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿಗೆ ದೊಡ್ಡ ಶಕ್ತಿಯಾಗಿ ಮುದ್ದಹನುಮೇಗೌಡರನ್ನು ಗೆಲ್ಲಿಸುತ್ತಾರೆ ಎಂಬ ನಿರೀಕ್ಷೆ ಇತ್ತು, ಆದರೆ ಗೃಹ ಸಚಿವ ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮತದಾರರನ್ನು ಸೆಲೆಯುವ ನಿಟ್ಟಿನಲ್ಲಿ ದಕ್ಷವಾಗಿ ಕೆಲಸ ಮಾಡದೆ ಸಪ್ಪೆ ಎನಿಸಿಬಿಟ್ಟಿದ್ದಾರೆ, ಇದೆಲ್ಲವೂ ಬಿಜೆಪಿ ಅಭ್ಯರ್ಥಿ ಪಾಲಿಗೆ ಪ್ಲಸ್ ಆಗಿದೆ, ಸಚಿವರಿಬ್ಬರು ತಮ್ಮ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ, ಆ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಇಲ್ಲ ಶ್ರಮವೇ ಇಲ್ಲದಂತಾಗಿದೆ, ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬಂದ ಮುದ್ದಹನುಮೇಗೌಡ ಅಂತಿಮವಾಗಿ ಕೈ ಸುಟ್ಟುಕೊಂಡಿದ್ದಾರೆ, ಈ ಸೋಲು ಮುದ್ದಹನುಮೇಗೌಡರ ಪಾಲಿಗೆ ರಾಜಕೀಯ ನಿವೃತ್ತಿ ಎಂದೇ ಹೇಳಲಾಗುತ್ತಿದೆ.

ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತುಮಕೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಡೆಲ್ಲಿಗೆ ಹೊರಟಿದ್ದಾರೆ, ಚುನಾವಣೆ ಗೆದ್ದಾಗಿದೆ, ಮುಂದೆ ಬೀಗುವಂತಿಲ್ಲ, ಕೊಟ್ಟಿರುವ ಭರವಸೆ ಈಡೇಸುವ ಕೆಲಸ ಮಾಡಬೇಕಿದೆ, ಹೊರಗಿನವರು ಎಂಬ ಹಣೆ ಪಟ್ಟಿ ಕಟ್ಟಿದರೂ ಮತದಾರ ಕೈ ಹಿಡಿದಿದ್ದಾನೆ, ಕಲಮ ಕಿಲಕಿಲ ಎನ್ನುವಂತೆ ಮಾಡಿದ್ದಾನೆ, ಇನ್ನು ಮತದಾರರ ಸೇವೆ, ಉತ್ತಮ ಕೆಲಸ ಮಾಡುವ ಮೂಲಕ ಅವರ ಋಣ ತೀರಿಸುವ ಕೆಲಸ ಆಗಬೇಕಿದೆ.

(ವಿಶ್ಲೇಷಣೆ - ಈಶ್ವರ್, ತುಮಕೂರು)

👉🏻 ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್

ಟಿ20 ವರ್ಲ್ಡ್‌ಕಪ್ 2024