Kalaburagi Bandh: ವಿದ್ಯುತ್ ದರ ಹೆಚ್ಚಳ; ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಲಬುರಗಿ ವರ್ತಕರು
ಕನ್ನಡ ಸುದ್ದಿ  /  ಕರ್ನಾಟಕ  /  Kalaburagi Bandh: ವಿದ್ಯುತ್ ದರ ಹೆಚ್ಚಳ; ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಲಬುರಗಿ ವರ್ತಕರು

Kalaburagi Bandh: ವಿದ್ಯುತ್ ದರ ಹೆಚ್ಚಳ; ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಲಬುರಗಿ ವರ್ತಕರು

Electricity price hike: ಕೋವಿಡ್-19 ಕಾಲದಿಂದ ವಾಣಿಜ್ಯ ಮತ್ತು ಕೈಗಾರಿಕೆಗಳು ತಮ್ಮ ಉಳಿವಿಕೆಗಾಗಿ ಸೆಣಸಾಡುತ್ತಿದ್ದು, ಪ್ರಸಕ್ತ ಹೆಚ್ಚಿದ ವಿದ್ಯುತ ದರಗಳು ಅವುಗಳಿಗೆ ಹಾಗೂ ವಿಶೇಷವಾಗಿ ಎಂಎಸ್ಎಂಇ ವಲಯಕ್ಕೆ ಒಂದು ಮಾರಣಾಂತಿಕ ಕ್ರಮವಾಗಿರುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು.

ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಲಬುರಗಿ ವರ್ತಕರು
ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಲಬುರಗಿ ವರ್ತಕರು

ಕಲಬುರಗಿ: ವಿದ್ಯುತ್ ದರ ಹೆಚ್ಚಳ (power tariff hike) ಮಾಡಿರುವುದನ್ನು ಖಂಡಿಸಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಕಾ ಸಂಸ್ಥೆಯ ನೇತೃತ್ವದಲ್ಲಿ ನಗರದ ವಿವಿಧ ವ್ಯಾಪಾರಿಗಳು, ವರ್ತಕರು ತಮ್ಮ ಅಂಗಡಿ, ಮುಂಗಟ್ಟು, ಕೈಗಾರಿಕೆಗಳನ್ನು ಬಂದ್ ಮಾಡಿ ಇಂದು (ಜೂನ್​ 22, ಗುರುವಾರ) ಕಲಬುರಗಿ ಬಂದ್‌ಗೆ ಕರೆ ನೀಡಿ ನಗರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.

ನಗರದ ಕಿರಣಾ ಬಂಜಾರದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮತ್ತು ಆ ಬಳಿಕ ಜೆಸ್ಕಾಂ ಕಚೇರಿಗೆ ತೆರಳಿ ಎಂಡಿಯ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ ಕಳೆದ ಏಪ್ರಿಲ್ ತಿಂಗಳಲ್ಲಿ ಹೊರಡಿಸಿ ಆದೇಶದನ್ವಯ ಜೆಸ್ಕಾಂ ಕಲಬುರಗಿಯನ್ನೊಳಗೊಂಡ ಎಲ್ಲಾ ಎಸ್ಕಾಂಗಳ ಪ್ರಸ್ತಾವನೆಯನ್ನು ಅನುಮೋದಿಸಿ ಗೃಹಬಳಕೆ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆಗೆ ಬಳಸಲಾಗುವ ವಿದ್ಯುಚ್ಚಕ್ತಿಯ ಎಫ್.ಪಿ.ಪಿ.ಸಿ.ಎ. ವಿದ್ಯುತ್​ ದರ ಹಾಗೂ ಇತರೆ ದರಗಳನ್ನು 01-04-2023ರಿಂದ ಪೂರ್ವಾನ್ವಯವಾಗುವಂತೆ ಅನುಮೋದಿಸಿದೆ. ಈ ತರಹದ ನ್ಯಾಯಸಮತ್ತವಲ್ಲದ ವಿದ್ಯುಚ್ಚಕ್ತಿ ದರಗಳ ಏರಿಕೆಯಿಂದಾಗಿ ಗೃಹ ಬಳಕೆಯ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾವಲಯದ ಜೂನ್ ತಿಂಗಳ ವಿದ್ಯುಚ್ಚಕ್ತಿಯ ಬಿಲ್‌ಗಳು ಕಳೆದ ತಿಂಗಳ ವಿದ್ಯುಚ್ಚಕ್ತಿ ಬಿಲ್‌ಅನ್ನು ಹೊಲಿಸಿದರೆ ದುಪ್ಪಟ್ಟಾಗಿ ಬಂದಿದೆ ಎಂದು ಆರೋಪಿಸಿದರು.

ವಾಣಿಜ್ಯ ಮತ್ತು ಕೈಗಾರಿಕೆಗಳು ಪರಿಷ್ಕೃತ ದರಗಳಿಂದಾಗಿ ಶೇಕಡಾ 30 ರಿಂದ ಶೇಕಡಾ 70ರವರೆಗೆ ಹೆಚ್ಚಿನ ಬಿಲ್‌ಅನ್ನು ಭರಿಸಬೇಕಾಗುತ್ತದೆ. ಕೋವಿಡ್-19 ಕಾಲದಿಂದ ವಾಣಿಜ್ಯ ಮತ್ತು ಕೈಗಾರಿಕೆಗಳು ತಮ್ಮ ಉಳಿವಿಕೆಗಾಗಿ ಸೆಣಸಾಡುತ್ತಿದ್ದು, ಪ್ರಸಕ್ತ ಹೆಚ್ಚಿದ ವಿದ್ಯುತ ದರಗಳು ಅವುಗಳಿಗೆ ಹಾಗೂ ವಿಶೇಷವಾಗಿ ಎಂಎಸ್ಎಂಇ ವಲಯಕ್ಕೆ ಒಂದು ಮಾರಣಾಂತಿಕ ಕ್ರಮವಾಗಿರುತ್ತದೆ ಎಂದರು.

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ವತಿಯಿಂದ ಕಳೆದ 8 ರಂದು ಕಲಬುರಗಿಯ ಜೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಹಾಗೂ ವಿಳಂಬವಾಗಿ ಪಾವತಿಸಲಾಗುವ ವಿದ್ಯುಚ್ಚಕ್ತಿ ಬಿಲ್‌ಗಳ ಮೇಲೆ ದಂಡ ಶುಲ್ಕವನ್ನು ಅಥವಾ ದಂಡ ಕ್ರಮವನ್ನು ಕೈಕೊಳ್ಳಬಾರದೆಂದು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ ಇಲ್ಲಿಯವರೆವಿಗೂ ಯಾವುದೇ ತರಹದ ಪರಿಹಾರ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ ಅಸಮಾಧಾನ ವ್ಯಕ್ತಪಡಿಸಿದರು.

ನ್ಯಾಯಸಮ್ಮತವಲ್ಲದ ವಿದ್ಯುಚ್ಚಕ್ತಿ ದರಗಳ ಏರಿಕೆಯನ್ನು ವಿರೋಧಿಸಿ ಹಾಗೂ ಅವುಗಳನ್ನು ಹಿಂಪಡೆಯಲು ಒತ್ತಾಯಿಸಿ ಈ ಮಧ್ಯೆ, ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳು ಒಂದು ದಿನದ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ನಗರದ ಎಲ್ಲ ವ್ಯಾಪಾರಿಗಳು ಎಲ್ಲ ಅಂಗಡಿ, ಮುಂಗಟ್ಟು, ಕೈಗಾರಿಕೆಗಳು ಬಂದ್ ಮಾಡಿ ಹೋರಾಟಕ್ಕಿಳಿದಿದ್ದು, ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಜೆಸ್ಕಾಂ ಕಲಬುರಗಿ ಹಾಗೂ ಅನ್ಯ ಎಸ್ಕಾಂಗಳಿಗೆ ನಿರ್ದೇಶನ ನೀಡಿ ಹೆಚ್ಚಿಸಲಾಗಿರುವ ವಿದ್ಯುಚ್ಚಕ್ತಿ ದರಗಳನ್ನು ವಿದ್ಯುಚ್ಚಕ್ತಿ ತೆರಿಗೆಯನ್ನು ಶೇ.9 ರಿಂದ ರಿಂದಶೇ.3 ವರೆಗೆ ಇಳಿಸಿ ಹಾಗೂ ಎಸ್ಕಾಂಗಳ ಆದಾಯ ಮತ್ತು ಖರ್ಚಿನಲ್ಲಿ ಇರುವ ಅಂತರವನ್ನು ಸಬ್ಸಿಡಿ ನೀಡಿ ವೈಜ್ಞಾನಿಕವಾಗಿ ನಿಗದಿಪಡೆಸುವವರೆಗೆ/ಸರಿದೂಗಿಸುವವರೆಗೆ ಸ್ಥಗಿತಗೊಳಿಸಬೇಕೆಂದು ನಿರ್ದೇಶನ ನೀಡಬೇಕೆಂದು ಆಗ್ರಹಿಸಿದರು.

ಬಂದ್ ಹಿನ್ನೆಲೆಯಲ್ಲಿ ಕೇವಲ ಅಂಗಡಿ, ಮುಂಗಟ್ಟು, ಕೈಗಾರಿಕೆಗಳು ಬಂದ್ ಆಗಿದ್ದವು ಹೊರತು ಎಂದಿನಂತೆ ಬಸ್, ಆಟೋ ಸಂಚಾರಕ್ಕೆ ಯಾವುದೇ ತೊಂದರೆ ಕಂಡು ಬರಲಿಲ್ಲ. ಈ ಕಡೆ ವ್ಯಾಪಾರಿಗಳು ಪ್ರತಿಭಟನಾ ರ‍್ಯಾಲಿ ಹೋಗುತ್ತಿದ್ದಂತೆ ಕೆಲವು ಅಂಗಡಿಗಳು ತೆರೆದು ವ್ಯಾಪಾರಕ್ಕಿಳಿದಿರುವುದು ಕಂಡು ಬಂತು. ಮಧ್ಯಾಹ್ನದ ಬಳಿಕ ಬಹುತೇಕ ಅಂಗಡಿ, ಮುಂಗಟ್ಟುಗಳು ತೆರೆದು ವ್ಯಾಪಾರಕ್ಕೆ ಅಣಿಯಾದರು.

ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶಶಿಕಾಂತ ಬಿ.ಪಾಟೀಲ್, ಗೌರವ ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಉದ್ಯಮಿಗಳಾದ ರಾಘವೇಂದ್ರ ಮೈಲಾಪುರ ಸೇರಿದಂತೆ ನೂರಾರು ಕೈಗಾಗಿಕಾದ್ಯಮಿಗಳು, ವ್ಯಾಪಾರಿಗಳು, ವರ್ತಕರು ಭಾಗವಹಿಸಿದರು.

ವರದಿ: ಬಾಬುಶಂಕರ ರೆಡ್ಡಿ

Whats_app_banner