ಯುವಕರಿಗಲ್ಲ, ಹಿರಿಯ ನಾಗರಿಕರಿಗೆ ಉದ್ಯೋಗಾವಕಾಶ; 60ರ ಹರೆಯದಲ್ಲಿ ಕೆಲಸ ಮಾಡುವ ಮನಸಿದ್ದರೆ ನಿಮಗಾಗಿ ಉದ್ಯೋಗ ಮೇಳ
ಉದ್ಯಾನ ನಗರಿ ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗಾಗಿ ಉದ್ಯೋಗ ಮೇಳ ನಡೆಯುತ್ತಿದೆ. 60 ಹರೆಯದಲ್ಲಿಯೂ ಕೆಲಸ ಮಾಡುವ ಉತ್ಸಾಹ ಹಾಗೂ ಸಾಮರ್ಥ್ಯವಿದ್ದರೆ ನೀವು ಈ ಮೇಳದಲ್ಲಿ ಭಾಗಿಯಾಗಬಹುದು.
ಬೆಂಗಳೂರು: ಶಿಕ್ಷಣ ಮುಗಿಸಿ ಉದ್ಯೋಗ ಅರಸುತ್ತಿರುವವರಿಗಾಗಿ ಹಲವಾರು ಉದ್ಯೋಗ ಮೇಳಗಳು ನಡೆಯುತ್ತಿರುತ್ತವೆ. ಯುವಕರು ಉದ್ಯೋಗ ಮೇಳದಲ್ಲಿ ಭಾಗಿಯಾಗಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸಾಮಾನ್ಯ. ಆದರೆ, ಹಿರಿಯ ನಾಗರಿಕರಿಗಾಗಿ ಉದ್ಯೋಗ ಮೇಳೆ ನಡೆಯುವುದು ಅಪರೂಪ. ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗಾಗಿ ಜಾಬ್ ಫೇರ್ ನಡೆಯುತ್ತಿದೆ. ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವ ಆಸಕ್ತ ಸೀನಿಯರ್ ಸಿಟಿಜನ್‌ಗಳು ಇದರಲ್ಲಿ ಭಾಗಿಯಾಗಬಹುದು. ಅಲ್ಲದೆ, ಈ ಹಿಂದೆ ಕೆಲಸ ಮಾಡಿ ನಿವೃತ್ತಿ ಪಡೆದಿರುವ ಹಾಗೂ ಮುಂದೆ ಮತ್ತಷ್ಟು ಸಮಯ ಉದ್ಯೋಗ ಮಾಡಲು ಇಚ್ಛಿಸುವ ಹಿರಿಯ ನಾಗರಿಕರು ಕೂಡಾ ಭಾಗಿಯಾಗಬಹುದು. ಉದ್ಯಾನ ನಗರಿಯಲ್ಲಿ ಆಗಸ್ಟ್ 25ರಂದು ಉದ್ಯೋಗ ಮೇಳ ನಡೆಯುತ್ತಿದ್ದು, ಹೆಚ್ಚಿನ ವಿವರ ಇಲ್ಲಿದೆ.
ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್, ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ ಮತ್ತು ರೋಟರಿ ಬೆಂಗಳೂರು ವೆಸ್ಟ್ ಸಹಯೋಗದೊಂದಿಗೆ ಈ ಜಾಬ್ ಫೇರ್ ನಡೆಯುತ್ತಿದೆ. ಹಿರಿಯ ನಾಗರಿಕರ ಸಬಲೀಕರಣದ ಉದ್ದೇಶದಿಂದ ಉಚಿತ ಉದ್ಯೋಗ ಮೇಳವನ್ನು ಆಯೋಜಿಸಲಾಗುತ್ತಿದೆ.
ಎಲ್ಲಿ? ಯಾವಾಗ?
ಬೆಂಗಳೂರಿನ ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಆಗಸ್ಟ್ 25ರ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಮೇಳ ನಡೆಯುತ್ತಿದೆ.
ಯಾವೆಲ್ಲಾ ಉದ್ಯೋಗಗಳನ್ನು ಪಡೆಯಬಹುದು?
ಆಡಳಿತ, ವಿಮೆ, ಇಂಜಿನಿಯರಿಂಗ್, ಟೆಲಿಕಾಲಿಂಗ್, ವಾರ್ಡನ್, ಜಾಹೀರಾತು, ಪಿಆರ್, ಡೇಟಾ ಎಂಟ್ರಿ, ಕನ್ಸಲ್ಟಿಂಗ್, ಮೇಲ್ವಿಚಾರಣಾ ಕೆಲಸಗಳು, ರಿಸೆಪ್ಷನ್, ಅಂಗಡಿ ಸಿಬ್ಬಂದಿ, ಸಮಾಜ ಕಾರ್ಯ, ಅಕೌಂಟ್ಸ್, ಎಚ್‌ಆರ್, ಟೀಚಿಂಗ್, ಮಾರ್ಕೆಟಿಂಗ್, ಸೇಲ್ಸ್, ಫ್ರೀಲ್ಯಾನ್ಸ್ ಉದ್ಯೋಗಗಳು ಸೇರಿದಂತೆ ಇನ್ನಿತರ ಕೆಲಸಗಳನ್ನು ಪಡೆಯಲು ಇಚ್ಛಿಸುವವರು ಇದರಲ್ಲಿ ಭಾಗಿಯಾಗಬಹುದು.
ಯಾರೆಲ್ಲಾ ಭಾಗವಹಿಸಬಹುದು?
- 55ರಿಂದ 70 ವರ್ಷ ವಯಸ್ಸಿನ ಹಿರಿಯ ನಾಗರಿಕರು.
- ದೈಹಿಕವಾಗಿ ಫಿಟ್ ಆಗಿದ್ದು ಕೆಲಸ ಮಾವಂತಿರಬೇಕು.
- ಪಿಂಚಣಿ ಪಡೆಯದ ಹಿರಿಯ ನಾಗರಿಕರಿಗೆ ಆದ್ಯತೆ.
ನೋಂದಣಿ ಹೇಗೆ?
ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆನ್‌ಲೈನ್ ಫಾರ್ಮ್ ಭರ್ತಿ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಇಲ್ಲಿ ಕೊಡಲಾಗಿರುವ ಲಿಂಕ್ ಮೂಲಕ ನೋಂದಾಯಿಸಿಕೊಂಡು, ಜಾಬ್ ಫೇರ್ ನಡೆಯುವ ದಿನದಂದು ನಿಮ್ಮ ರೆಸ್ಯೂಮ್‌ನ 3 ಪ್ರತಿಗಳನ್ನು ತರಬೇಕು.
ನೋಂದಣಿಗೆ ಆನ್‌ಲೈನ್ ಫಾರ್ಮ್ ಲಿಂಕ್‌ಗೆ ಇಲ್ಲಿ ಕ್ಲಿಕ್ ಮಾಡಿ
ನೋಂದಣಿಯು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಹೆಚ್ಚಿನ ಮಾಹಿತಿಗಾಗಿ 9243737214 / 080 42426565 ಸಂಖ್ಯೆಗೆ ಸಂಪರ್ಕಿಸಬಹುದು.