Employment Bill: ಕರ್ನಾಟಕ ಖಾಸಗಿ ಉದ್ಯೋಗ ಮೀಸಲು ಮಸೂದೆ, ಫೋನ್ ಪೇ ಸಿಇಒ ಸಮೀರ್ ನಿಗಮ್ ಹೇಳೋದೇನು?
Bangalore News ಕನ್ನಡಿಗರಿಗೆ ಖಾಸಗಿ ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ನೀಡುವ ಮಸೂದೆ ಜಾರಿಗೆ ಉದ್ಯಮ ವಲಯದಿಂದ ವಿರೋಧವೇ ಕಂಡು ಬರುತ್ತಿದೆ.

ಬೆಂಗಳೂರು: ಕರ್ನಾಟಕದ ಖಾಸಗಿ ವಲಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಕೋಟಾ ಮಸೂದೆಯನ್ನು ಟೀಕಿಸಿರುವ ಫೋನ್ ಪೇ ಸಿಇಒ ಮತ್ತು ಸಹ ಸಂಸ್ಥಾಪಕ( Phone pay ) ಸಮೀರ್ ನಿಗಮ್( Sameer Nigam) , 'ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ?' ಎಂದು ಪ್ರಶ್ನಿಸಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಎಲ್ಲಾ ನಿರ್ವಹಣಾ ಉದ್ಯೋಗಗಳಲ್ಲಿ ಶೇ. 50 ಮತ್ತು ಎಲ್ಲಾ ನಿರ್ವಹಣೆಯೇತರ ಉದ್ಯೋಗಗಳಲ್ಲಿ ಶೇ ನ70 ಸ್ಥಳೀಯರಿಗೆ ಮೀಸಲಿಡಬೇಕು ಎಂದು ವಿವಾದಾತ್ಮಕ ಮಸೂದೆ ಹೇಳಿದೆ. ಉದ್ಯಮ ವಲಯದಿಂದ ತೀವ್ರ ವಿರೋಧ ಬಂದ ಬೆನ್ನಲ್ಲಿಯೇ ಕರ್ನಾಟಕದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ಮಸೂದೆಗೆ ತಡೆ ನೀಡಲಾಗಿದೆ.
ನನಗೆ ಈಗ 46 ವರ್ಷ ವಯಸ್ಸು. 15ಕ್ಕೂ ಹೆಚ್ಚು ವರ್ಷಗಳ ಕಾಲ ಯಾವುದೇ ರಾಜ್ಯದಲ್ಲಿ ವಾಸಿಸಲಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ಹುಟ್ಟು ಹಾಕಿದ್ದೇನೆ, ಭಾರತದಾದ್ಯಂತ 25000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದ್ದೇನೆ. ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಎಂದು ಸಮೀರ್ ನಿಗಮ್ ತಮ್ಮ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಇವರೊಂದಿಗೆ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಸಹಿತ ಹಲವರು ಈ ಮಸೂದೆಯನ್ನು ವಿರೋಧ ವ್ಯಕ್ತಪಡಿಸಿದ್ದಾರೆ. ಹಲವಾರು ಸಂಸ್ಥೆಗಳೂ ಕೂಡ ವಿರೋಧದ ದನಿಯನ್ನು ಹೊರ ಹಾಕಿವೆ.
ಆದರೆ ನಿಗಮ್ ಅವರ ಪೋಸ್ಟ್‌ಗೆ ಭಿನ್ನ ಅಭಿಪ್ರಾಯ ವ್ಯಕ್ತವಾಗಿವೆ.
"ನೀವು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲ ಎಂದು ಯಾರು ಹೇಳುತ್ತಾರೆ? ನೀವು ಮಾಡಬೇಕಾಗಿರುವುದು ಭಾಷೆಯನ್ನು ಕಲಿಯುವುದು. ಇಷ್ಟೊಂದು ಗದ್ದಲ ಮತ್ತು ಕೂಗು ಏಕೆ?" ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿರುವ ನಿಗಮ್, "ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಜನರು ಮಾತ್ರ ಇಲ್ಲ. ಎಲ್ಲರೂ ಇದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ನಾನು ಬಯಸುವ ಯಾವುದೇ ಭಾಷೆಯನ್ನು ನಾನು ಕಲಿಯಬಹುದು. ಭಾರತದ ಸಂವಿಧಾನವು ನನಗೆ ಈ ಹಕ್ಕುಗಳನ್ನು ನೀಡಿದೆ. ಇದು ನನ್ನ ಆಯ್ಕೆ ಎಂದು ಹೇಳಿದಾರೆ.
ಇದು ತುಂಬಾ ನಿಜ. ಉತ್ತಮ ಭವಿಷ್ಯಕ್ಕಾಗಿ ಬೆಂಗಳೂರಿಗೆ ಬಂದ ಜನರು ನಗರದ ಮತ್ತು ಅದರ ಜನರ ಸೌಂದರ್ಯವನ್ನು ಒಪ್ಪಿಕೊಂಡಿದ್ದರೆ ಮತ್ತು ನಗರವನ್ನು ತಮ್ಮ ಮನೆಯನ್ನಾಗಿ ಮಾಡಲು ಸಣ್ಣ ರೀತಿಯಲ್ಲಿ ಅಳವಡಿಸಿಕೊಂಡಿದ್ದರೆ ಈ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು. ಹೆಚ್ಚಿನವರು ಹಾಗೆ ಮಾಡದಿರುವುದಕ್ಕೆ ವಿಷಾದವಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಭಾರತದ ಎಲ್ಲಾ ರಾಜ್ಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು. ಸದ್ಯಕ್ಕೆ ಅದು ಕರಡು ರೂಪದಲ್ಲಿ ಉಳಿಯುತ್ತದೆ ಎಂದು ತೋರುತ್ತಿದೆ ಎನ್ನುವುದು ಇನ್ನೊಬ್ಬರ ಪ್ರತಿಕ್ರಿಯೆ. ಬಹುತೇಕರು ನಿಗಮ್ ಅಭಿಪ್ರಾಯಕ್ಕೆ ಆಕ್ರೋಶವನ್ನೇ ಹೊರ ಹಾಕಿದ್ದಾರೆ.
ಖಾಸಗಿ ವಲಯದ ಕಂಪನಿಗಳು, ಕೈಗಾರಿಕೆಗಳು ಮತ್ತು ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಉದ್ದೇಶದ ಕರಡು ಮಸೂದೆ ಇನ್ನೂ ಸಿದ್ಧತೆಯ ಹಂತದಲ್ಲಿದೆ.ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
