ಕನ್ನಡ ಸುದ್ದಿ / ಕರ್ನಾಟಕ /
Recruitment : ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮೇ 4 ಕೊನೆ ದಿನ
ಕರ್ನಾಟಕದಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆಯಾಗಿದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಶುರುವಾಗಿದೆ.
ಬೆಂಗಳೂರು: ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ 1,000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗಾಗಿ ಏಪ್ರಿಲ್ 5ರಿಂದ ಮೇ 4ರವರೆಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಅವರು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಸಂಬಂಧಿಸಿದ ಅರ್ಜಿ ಶುಲ್ಕ ಪಾವತಿಸಲು ಮೇ 7ರ ಬ್ಯಾಂಕ್ ಅವಧಿಯವರೆಗೆ ಅವಕಾಶವಿರುತ್ತದೆ ಎಂದಿದ್ದಾರೆ. ಈ ಮುಂಚೆ, ಫೆ.20ರಂದು ಅಧಿಸೂಚನೆ ಹೊರಡಿಸಿ, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಏಪ್ರಿಲ್ 3ರವರೆಗೆ ಅವಕಾಶ ಕೊಡಲಾಗಿತ್ತು. ಆದರೆ ಆನ್‌ಲೈನ್ ಅರ್ಜಿಯಲ್ಲಿ ಆದ ಕೆಲವು ಬದಲಾವಣೆಗಳ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ, ಈಗ ಪರಿಷ್ಕೃತ ದಿನಾಂಕವನ್ನು ಪ್ರಕಟಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಅಭ್ಯರ್ಥಿಗಳಿಗೆ ಪ್ರಾಧಿಕಾರ ನೀಡಿರುವ ಸೂಚನೆಗಳು ಏನೇನು?
- ಕನಿಷ್ಠ 18 ವರ್ಷ ತುಂಬಿರಬೇಕು, ಗರಿಷ್ಠ ವಯಸ್ಸನ್ನು ವರ್ಗ ಆಧರಿಸಿ ನಿಗದಿಪಡಿಸಲಾಗಿದೆ.
- ಪಿಯುಸಿ ಪಾಸಾದವರು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಅರ್ಜಿ ಸಲ್ಲಿಸಲು ಅವಕಾಶ
- ಐಟಿಐ, ಡಿಪ್ಲೊಮಾ ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು.
- ಯಾವುದಾದರು ಒಂದು ಜಿಲ್ಲೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು. ಹೆಚ್ಚು ಕಡೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
- ಶುಲ್ಕ ಸಾಮಾನ್ಯ, ಹಿಂದುಳಿದ ವರ್ಗದವರಿಗೆ 750 ರೂ. ಎಸ್ಸಿ ಎಸ್ಟಿ, ವಿಕಲಚೇತನರಿಗೆ 500 ರೂ. ನಿಗದಿಪಡಿಸಲಾಗಿದೆ.
- ಸ್ಪರ್ಧಾತ್ಮಕ ಪರೀಕ್ಷೆಯನ್ನು ಪರೀಕ್ಷಾ ಪ್ರಾಧಿಕಾರ ನಡೆಸಲಿದ್ದು. ಪರೀಕ್ಷೆಯಲ್ಲಿ ಆಯ್ಕೆಯಾಗಬೇಕು
- ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಡೆದ ಅಂಕ ಆಧರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.
- ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ವೇತನ ಶ್ರೇಣಿ 21400 ರಿಂದ 42000 ರೂ. ನಿಗದಿಪಡಿಸಲಾಗಿದೆ.
ಅರ್ಜಿ ಹೀಗೆ ಸಲ್ಲಿಸಿ
- kea.kar.nic ವೆಬ್‌ಸೈಟ್ ಕ್ಲಿಕ್ ಮಾಡಿ
- ಅಲ್ಲಿ ಗ್ರಾಮ ಅಡಳಿತಾಧಿಕಾರಿ ಹುದ್ದೆಗೆ ನೇಮಕಾತಿ ಎನ್ನುವ ಸಾಲು ಕಾಣಲಿದೆ.
- ಅದರ ಮೇಲೆ ಕ್ಲಿಕ್ ಮಾಡಿದರೆ ಸಂಪೂರ್ಣ ವಿವರಗಳು ಸಿಗಲಿದೆ.
- ಜಿಲ್ಲಾವಾರು, ಹುದ್ದೆಗಳ ಲಭ್ಯತೆ, ಮೀಸಲಾತಿವಾರು ಸೀಟುಗಳ ಹಂಚಿಕೆಯನ್ನು ಮಾಡಲಾಗಿದ್ದು ಅದರ ಸಂಪೂರ್ಣ ವಿವರ ಕಾಣಲಿದೆ.
- ಇದರಲ್ಲಿ ಅರ್ಜಿ ಸಲ್ಲಿಸುವ ಮಾರ್ಗದ ವಿವರ ಇದೆ.
- ಅಲ್ಲಿಗೆ ತೆರಳಿ ನಿಮ್ಮ ಹೆಸರು, ವಿಳಾಸ, ವಿದ್ಯಾರ್ಹತೆ, ಯಾವ ಜಿಲ್ಲೆ ಎನ್ನುವ ಅಂಶವನ್ನು ನಮೂದಿಸಬೇಕು.
- ಆನಂತರ ಶುಲ್ಕವನ್ನು ಭರ್ತಿ ಮಾಡಿದ ಮಾಹಿತಿಯನ್ನೂ ಅದರಲ್ಲಿ ಉಲ್ಲೇಖಿಸಬೇಕು.
- ಇದಾದ ನಂತರ ಮುಂದಿನ ದಿನಗಳಲ್ಲಿ ನಿಮ್ಮ ಅರ್ಜಿ ಸ್ವೀಕೃತಗೊಂಡು ಪರೀಕ್ಷೆ ಪ್ರವೇಶ ಪತ್ರವೂ ಬರಲಿದೆ.
- ಅದನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಿ.
- ಪರೀಕ್ಷಾ ದಿನಾಂಕ, ಕೇಂದ್ರಗಳ ವಿವರವನ್ನು ಆನಂತರ ಪ್ರಕಟಿಸಲಾಗುತ್ತದೆ.
- ಮಾಹಿತಿಗೆ 080 23460460 ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.