ಎಚ್‌ಎಸ್ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆ ಡೆಪಾಸಿಟ್ ದುಬಾರಿ; ಬೆಂಗಳೂರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಲಿಸಿದ ಉದ್ಯಮಿ
ಕನ್ನಡ ಸುದ್ದಿ  /  ಕರ್ನಾಟಕ  /  ಎಚ್‌ಎಸ್ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆ ಡೆಪಾಸಿಟ್ ದುಬಾರಿ; ಬೆಂಗಳೂರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಲಿಸಿದ ಉದ್ಯಮಿ

ಎಚ್‌ಎಸ್ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆ ಡೆಪಾಸಿಟ್ ದುಬಾರಿ; ಬೆಂಗಳೂರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಲಿಸಿದ ಉದ್ಯಮಿ

ಭಾರತ ಮೂಲದ ಉದ್ಯಮಿಯೊಬ್ಬರು ಬೆಂಗಳೂರು ಮತ್ತು ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋ ನಗರಗಳ ನಡುವೆ ಹೋಲಿಕೆ ಮಾಡಿದ್ದಾರೆ. ಉದ್ಯಾನ ನಗರಿಯಲ್ಲಿ ಮನೆ ಬಾಡಿಗೆಗೆ ಠೇವಣಿ ತುಂಬಾ ಹೆಚ್ಚು ಎಂದು ದೂರಿದ್ದಾರೆ.

ಬೆಂಗಳೂರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಲಿಸಿದ ಉದ್ಯಮಿ
ಬೆಂಗಳೂರನ್ನು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಹೋಲಿಸಿದ ಉದ್ಯಮಿ (PTI Photo)

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದ ಅನಿವಾಸಿ ಭಾರತೀಯರೊಬ್ಬರು, ನಂತರ ಮತ್ತೆ ಭಾರತಕ್ಕೆ ಮರಳಿ ಉದ್ಯಾನ ನಗರಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಉದ್ಯಮಿಯಾಗಿರುವ ಹರ್ದೀಪ್ ಗಂಭೀರ್, ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಲು ಕೊಡಬೇಕಾದ ವಿಪರೀತ ಅಡ್ವಾನ್ಸ್ ಕೇಳಿ ಅಚ್ಚರಿಗೊಂಡಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತದ ಬೆಂಗಳೂರು ಹಾಗೂ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಎರಡು ನಗರಗಳ ನಡುವೆ ಹೋಲಿಕೆ ಮಾಡುವ ಮೂಲಕ, ಸಿಲಿಕಾನ್‌ ಸಿಟಿಯಲ್ಲಿ ಬಾಡಿಗೆ ವಸತಿಗಾಗಿ ಕೊಡಬೇಕಾದ ವಿಪರೀತ ಭದ್ರತಾ ಠೇವಣಿ ಕುರಿತು ಗಮನ ಸೆಳೆದಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರತಿ ತಿಂಗಳು ಮನೆ ಬಾಡಿಗೆಗೆ ಗಂಭೀರ್ ಅವರು ಮಾಸಿಕವಾಗಿ 2,500 ಡಾಲರ್ (2,08,000 ರೂಪಾಯಿ) ವೆಚ್ಚ ಮಾಡುತ್ತಿದ್ದರು. ಇದೇ ವೆಚ್ಚ ಬೆಂಗಳೂರಿನಲ್ಲಿ ಕಡಿಮೆ. ಅಂದರೆ ತಿಂಗಳಿಗೆ 900 ಡಾಲರ್‌ಗೆ (75,000 ರೂಪಾಯಿ) ಇಳಿಕೆಯಾಗಿದೆ. ಆದರೂ, ಉದ್ಯಾನ ನಗರಿಯಲ್ಲಿ ಬಾಡಿಗೆ ವಸತಿ ಪಡೆಯಲು ಭದ್ರತಾ ಠೇವಣಿ ತುಂಬಾ ಹೆಚ್ಚು ಕೊಡಬೇಕಾಗುತ್ತದೆ ಎಂದು ಟೆಕ್ಕಿ ದೂರಿದ್ದಾರೆ.

ಬೆಂಗಳೂರಿನಲ್ಲಿ ನನಗೆ ಇಷ್ಟಪಡದ ವಿಷಯಗಳಲ್ಲಿ ವಿಪರೀತ ಸೊಳ್ಳೆಗಳ ಕಾಟ ಮತ್ತು ಬಾಡಿಗೆಗೆ ವಿಪರೀತ ಭದ್ರತಾ ಠೇವಣಿಗಳು ಸೇರಿವೆ ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಪ್ರೊಪ್ಟೆಕ್ ಯುನಿಕಾರ್ನ್ ನೋಬ್ರೋಕರ್ ಪ್ರಕಾರ, ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಬಾಡಿಗೆಗೆ ಸರಾಸರಿ ಸುರಕ್ಷತಾ ಠೇವಣಿ ಮೊತ್ತವು 5-10 ತಿಂಗಳ ಬಾಡಿಗೆಯ ನಡುವೆ ಬದಲಾಗುತ್ತದೆ. ಭೂಮಾಲೀಕರ ಆದ್ಯತೆ ಮತ್ತು ಆಯಾ ಸ್ಥಳದ ಪ್ರೀಮಿಯಂ ಸ್ಥಿತಿಯ ಆಧಾರದ ಮೇಲೆ ಈ ಮೊತ್ತ ಬದಲಾಗುತ್ತದೆ.

ಬೆಂಗಳೂರಿನ ಕೋರಮಂಗಲ ಆಸುಪಾಸಿನಲ್ಲಿ ಸಂಪೂರ್ಣ ಸುಸಜ್ಜಿತ 1 ಬಿಎಚ್‌ಕೆ ಮನೆಯ ಸರಾಸರಿ ಮಾಸಿಕ ಬಾಡಿಗೆ ಮೌಲ್ಯವು 28,000 ರೂಪಾಯಿ ಆಗಿರುತ್ತದೆ. ದಕ್ಷಿಣ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ 19,000 ರೂಪಾಯಿ ಆಗಿದ್ದರೆ, ವೈಟ್‌ಫೀಲ್ಡ್‌ನಲ್ಲಿ 28,000 ರೂಪಾಯಿ ಇದೆ.

ಗಂಭೀರ್ ಅವರು ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಅನ್ನು ಸ್ಯಾನ್ ಫ್ರಾನ್ಸಿಸ್ಕೋದ ಹೇಯ್ಸ್ ವ್ಯಾಲಿಗೆ ಹೋಲಿಸಿದ್ದಾರೆ. “ಒಮ್ಮೆ ನೀವು ಸ್ಟಾರ್ಟ್ಅಪ್ ಲೋಕಕ್ಕೆ ಎಂಟ್ರಿಕೊಟ್ಟ ನಂತರ, ನೀವು ಜನಪ್ರಿಯ ಸ್ಥಳಗಳಲ್ಲಿ ಜನರನ್ನು ಆಗಾಗ ಭೇಟಿಯಾಗುತ್ತೀರಿ. ಒಂದು ತಿಂಗಳಲ್ಲಿ, ನಾನು ಇಲ್ಲಿ ಹಲವು ಬಿಲ್ಡರ್‌ಗಳನ್ನು ಭೇಟಿಯಾಗಿದ್ದೇನೆ” ಎಂದು ಅವರು ಹೇಳಿದರು.

ಕ್ಯಾಲಿಫೋರ್ನಿಯಾದ ಹೇಯ್ಸ್ ವ್ಯಾಲಿಯು ಪ್ರವರ್ಧಮಾನಕ್ಕೆ ಬರುತ್ತಿರುವ ಟೆಕ್ ಪ್ರಪಂಚದ ಕೇಂದ್ರಬಿಂದುವಾಗಿದೆ. ಇದು ಟೆಕ್ಕಿಗಳ ದೊಡ್ಡ ಸಮುದಾಯಕ್ಕೆ ನೆಲೆಯಾಗಿದೆ. ಅಂತೆಯೇ, ಬೆಂಗಳೂರಿನ ಆಗ್ನೇಯ ಭಾಗದಲ್ಲಿರುವ ಎಚ್ಎಸ್ಆರ್ ಲೇಔಟ್ ಇತ್ತೀಚಿನ ದಿನಗಳಲ್ಲಿ ನಗರದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಗಮನ ಸೆಳೆದಿದೆ.

ನಮ್ಮ ಎಚ್ಎಸ್ಆರ್

ಆರಂಭದಲ್ಲಿ ವಸತಿ ಪ್ರದೇಶವೆಂದು ಕರೆಯಲ್ಪಡುತ್ತಿದ್ದ ಎಚ್ಎಸ್ಆರ್ ಲೇಔಟ್, ಇಂದು ಸ್ಟಾರ್ಟ್ಅಪ್ ನೆಲೆಯಾಗಿ ಗಮನಸೆಳೆದಿದೆ. ಈ ಪ್ರದೇಶ ಹಲವಾರು ಬ್ರಾಂಡ್‌ಗಳಿಗೆ ನೆಲೆಯಾಗಿದೆ. ಇಂದಿರಾನಗರ ಮತ್ತು ಕೋರಮಂಗಲದಂಥ ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕ ಹೊಂದಿರುವ ಎಚ್ಎಸ್ಆರ್ ಪ್ರದೇಶವು ಟೆಕ್ಕಿಗಳ ಅನುಕೂಲಕರ ಆಯ್ಕೆಯಾಗಿದೆ. ಎಚ್ಎಸ್ಆರ್ ಲೇಔಟ್ ಔಟರ್‌ ರಿಂಗ್‌ ರೋಡ್‌ಗೆ ಹತ್ತಿರದಲ್ಲಿದೆ. ಮೆಟ್ರೋ ನಿಲ್ದಾಣಗಳಿಗೂ ತ್ವರಿತ ಸಂಪರ್ಕ ಹೊಂದಿದೆ.

ವಾಣಿಜ್ಯ ಆಸ್ತಿ ಬೆಲೆಗಳು ಇಂದು ಎಚ್ಎಸ್ಆರ್‌ ಪ್ರದೇಶದಲ್ಲಿ ಚದರ ಅಡಿಗೆ 35,000ದಿಂದ 60,000 ರೂಪಾಯಿಯವರೆಗಿದೆ. ಕೋರಮಂಗಲದಲ್ಲಿ ಈ ಬೆಲೆ 38ರಿಂದ 45,000 ರೂಪಾಯಿಯವರೆಗಿದೆ. ಸುಮಾರು ಒಂದು ದಶಕದ ಹಿಂದೆ, ಎಚ್ಎಸ್ಆರ್‌ನಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಕೋರಮಂಗಲದ ಅರ್ಧದಷ್ಟಿತ್ತು. ಈಗ ಎಚ್ಎಸ್ಆರ್‌ ಭಾಗದಲ್ಲಿ ಬೆಲೆ ಹೆಚ್ಚುತ್ತಲೇ ಇವೆ ಎಂದು ಸ್ಕ್ವೇರ್ ಯಾರ್ಡ್ಸ್‌ನ ಪ್ರಧಾನ ಪಾಲುದಾರರಾಗಿರುವ ಸುಧಾಂಶು ಮಿಶ್ರಾ ಮಿಶ್ರಾ ಹೇಳಿದ್ದಾರೆ.