Ganeshotsav 2024: ಪಿಒಪಿ ಗಣೇಶನ ಮಾರಾಟ ಮಾಡೀರೀ ಜೋಕೆ, ಬೆಂಗಳೂರಿನಲ್ಲಿ ಮೂರ್ತಿ ತಯಾರಕರ ಮೇಲೆ ಬಿದ್ದಿವೆ ಕ್ರಿಮಿನಲ್ ಮೊಕದ್ದಮೆ
Pop Ganesha ಪರಿಸರಕ್ಕೆ ಹಾನಿ ಮಾಡುವ ಪಿಒಪಿ ಗಣೇಶ ಮೂರ್ತಿ ಬಳಸದಂತೆ ಕಟ್ಟೆಚ್ಚರ ವಹಿಸಲು ಕರ್ನಾಟಕ ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಡಿಸಿಗಳಿಗೆ ಸೂಚಿಸಿದ್ದಾರೆ.
ಬೆಂಗಳೂರು: ಗಣೇಶನ ಹಬ್ಬದ ಸಡಗರಕ್ಕೆ ಎಲ್ಲೆಡೆ ತಯಾರಿಗಳು ಈಗಾಗಲೇ ಶುರುವಾಗಿವೆ. ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್( POP) ಗಣೇಶ ಮೂರ್ತಿಗಳ ಉತ್ಪಾದನೆ, ಮಾರಾಟ ಹಾಗೂ ಬಳಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಿದ್ದರೂ ಉತ್ಪಾದಿಸಿ ಮಾರಾಟ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆಯನ್ನೂ ಈ ಬಾರಿಯೂ ಹೂಡಲು ಕರ್ನಾಟಕ ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆ ಮುಂದಾಗಿದೆ. ಕಳೆದ ವರ್ಷವೂ ಇಂತಹ ಗಣೇಶನ ತಯಾರಿ ಮಾಡಿದ್ದವರ ಮೇಲೆಯೇ ಮೊಕದ್ದಮೆ ದಾಖಲಿಸಲಾಗಿತ್ತು.ಸರ್ಕಾರ ಪಿಓಪಿ ಗಣೇಶ ಮೂರ್ತಿಗಳ ತಯಾರಿಕೆ, ಸಾಗಾಟ, ಮಾರಾಟ, ದಾಸ್ತಾನು ನಿಷೇಧಿಸಿದ್ದು, ಹೊರರಾಜ್ಯದಿಂದ ಪಿಓಪಿ ಗಣಪತಿ ಬಾರದಂತೆ ವಾಣಿಜ್ಯ ತೆರಿಗೆ, ಸಾರಿಗೆ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಸಂಘಟಿತ ಕ್ರಮ ಕೈಗೊಳ್ಳುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
ಪಿಓಪಿ ಗಣೇಶ ವಿಗ್ರಹಗಳನ್ನು ಕ್ಯಾಲ್ಸಿಯಂ, ಸಲ್ಫೇಟ್ ಹೆಮಿಹೈಡ್ರೇಟ್ ಯುಕ್ತ ಪುಡಿಯಿಂದ ಮಾಡಲಾಗುತ್ತದೆ. ಇದರಲ್ಲಿ ಸಲ್ಫರ್, ಜಿಪ್ಸಮ್, ರಂಜಕ ಮತ್ತು ಮೆಗ್ನೀಸಿಯಮ್ ಸೇರಿದಂತೆ ಅನೇಕ ಅಂಶ ಇರುತ್ತದೆ. ಇವುಗಳಿಗೆ ಕ್ಯಾಡ್ಮಿಯಂ, ಪಾದರಸ, ಆರ್ಸೆನಿಕ್, ಸೀಸ ಮತ್ತು ಇಂಗಾಲವನ್ನು ಒಳಗೊಂಡ ರಾಸಾಯನಿಕ ಬಣ್ಣ ಲೇಪಿಸಲಾಗುತ್ತದೆ. ಇದನ್ನು ನದಿ, ಕೆರೆ, ಕಟ್ಟೆಯಲ್ಲಿ ವಿಸರ್ಜಿಸಿದರೆ ಜಲಚರಗಳು ಸಾವಿಗೀಡಾಗುತ್ತವೆ. ಜನ, ಜಾನುವಾರುಗಳು ಕಾಯಿಲೆ ಬೀಳುತ್ತಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಪರಿಸರ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇಷ್ಟು ವರ್ಷ ಸುತ್ತೋಲೆ ಮಾತ್ರ ಹೊರಡಿಸಲಾಗುತ್ತಿತ್ತು. ಕಳೆದ ವರ್ಷ ಸರ್ಕಾರ ಆದೇಶವನ್ನೇ ಹೊರಡಿಸಿದೆ. ಇದನ್ನು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರಬೇಕು ಎನ್ನುವುದು ಅರಣ್ಯ,ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕಳಕಳಿ.
ಈ ಹಿನ್ನೆಲೆಯಲ್ಲಿಯೇ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗುರುವಾರ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಆಯೋಜಿಸಲಾಗಿದ್ದ ವಿಡಿಯೋ ಕಾನ್ಷರೆನ್ಸ್ ನಲ್ಲಿ ಗಣೇಶ ಆಚರಣೆ, ಪರಿಸರದ ವಿಚಾರವಾಗಿ ಹಲವಾರು ವಿಷಯಗಳನ್ನು ಈಶ್ವರ ಖಂಡ್ರೆ ಅವರು ಚರ್ಚಿಸಿ ಸೂಚನೆಗಳನ್ನು ನೀಡಿದರು.
ಮುಚ್ಚಳಿಕೆ ಬರೆಸಿಕೊಳ್ಳಲು ಸೂಚನೆ
ವರು, ಭಾದ್ರಪದ ಶುಕ್ಲ ಚೌತಿಯ ದಿನ ಆಚರಿಸುವ ಸಿದ್ಧಿವಿನಾಯಕ ವ್ರತ ಕಥೆಯಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನ ಗಣೇಶ ಮೂರ್ತಿಯನ್ನು ಪೂಜಿಸುವಂತೆ ತಿಳಿಸಲಾಗಿದೆ. ಆದರೆ ಪರಿಸರಕ್ಕೆ ಹಾನಿ ಆಗುವ ಪಿಓಪಿ ಗಣೇಶ ಮೂರ್ತಿಗಳ ವ್ಯಾಪಕ ಬಳಕೆ ಆಗುತ್ತಿದ್ದು, ಪರಿಸರ ಉಳಿಸಲು ಜನ ಜಾಗೃತಿ ಮೂಡಿಸಬೇಕು
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಅನುಮತಿ ನೀಡುವಾಗ ಪಿಓಪಿ ಗಣಪತಿ ಪೂಜಿಸಿ, ವಿಸರ್ಜಿಸುವುದಿಲ್ಲ, ಶಬ್ದ ಮಾಲಿನ್ಯ, ವಾಯು ಮಾಲಿನ್ಯಉಂಟು ಮಾಡುವ ಪಟಾಕಿ ಸಿಡಿಸುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಳ್ಳಿ ಎಂದು ಈಶ್ವರ ಖಂಡ್ರೆ ಸಲಹೆ ಮಾಡಿದರು.
ಪರಿಸರ ಸ್ನೇಹಿ ಗಣಪತಿ ಮೂರ್ತಿ ಮತ್ತು ಹಸಿರು ಪಟಾಕಿ ಮಾತ್ರ ಉತ್ತೇಜಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಪರಿಸರ ಮಾಲಿನ್ಯ ಉಂಟು ಮಾಡುವ ಪಿಓಪಿ ಗಣಪತಿ ಮತ್ತು ಪಟಾಕಿಗೆ ಕಡಿವಾಣ ಹಾಕುವಂತೆ ಸೂಚಿಸಿದರು.
ಗಜ ಮುಖ ಗಣಪನ ಪೂಜಿಸಿ ಜಲ ಚರಗಳ ಸಾವಿಗೆ ಕಾರಣವಾಗುವುದು ಎಷ್ಟು ಸರಿ?
ಗಜಮುಖ ಗಣಪನ ಪೂಜಿಸಿ, ಜಲಚರಗಳ ಸಾವಿಗೆ ಕಾರಣವಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಈಶ್ವರ ಖಂಡ್ರೆ, ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ- ಗಣಪತಿಯನ್ನೇ ಪೂಜೆ ಮಾಡಬೇಕು. ಪರಿಸರ ಉಳಿಸಬೇಕು. ಎಷ್ಟೇ ಕಾನೂನು ಇದ್ದರೂ, ಜನ ಜಾಗೃತಿ ಮೂಡಿಸಿದಾಗ ಮಾತ್ರ ಇದು ಯಶಸ್ಸು ಕಾಣುತ್ತದೆ. ಈ ನಿಟ್ಟಿನಲ್ಲಿ ವಿವಿಧ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘಗಳ ವಾಟ್ಸ್ ಅಪ್ ಗ್ರೂಪ್ ಗಳಲ್ಲಿ ಸಂದೇಶ ಕಳುಹಿಸಿ, ಕಸ ಸಾಗಿಸುವ ವಾಹನಗಳಲ್ಲಿ ಧ್ವನಿ ಪ್ರಚಾರ (ಜಿಂಗಲ್) ಹಾಕುವ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ 50 ರಿಂದ 1000ಕ್ಕೂ ಹೆಚ್ಚು ಮನೆಗಳಿರುವ ಸಮುಚ್ಛಯಗಳೂ ಇವೆ. ಈ ಸಮುಚ್ಛಯಗಳಲ್ಲಿ ಪಿಓಪಿ ಗಣೇಶ ಮೂರ್ತಿ ನಿಷೇಧಿಸುವಂತೆ ಅಲ್ಲಿನ ಸಂಘಟನೆಗಳಿಗೆ ತಿಳಿಸಿ ಎಂದೂ ಖಂಡ್ರೆ ತಿಳಿಸಿದರು.
ಬೆಂಗಳೂರಿನಲ್ಲಿ ಲಕ್ಷಾಂತರ ಪಿಓಪಿ ಗಣೇಶ ಮೂರ್ತಿ ತಯಾರಿಸುತ್ತಿದ್ದ ಘಟಕದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ ಅವರು, ಹಸಿರು ನ್ಯಾಯಮಂಡಳಿ (ಪ್ರಧಾನ ಪೀಠ)ಯು ಪಿಓಪಿ ಮತ್ತು ಬಣ್ಣ ಲೇಪಿತ ಗಣಪತಿ ವಿಸರ್ಜನೆಯಿಂದ ಜಲ ಮೂಲಗಳು ಕಲುಷಿತವಾಗುತ್ತಿದ್ದು, ಜಲ (ಮಾಲಿನ್ಯ ನಿಯಂತ್ರಣ)ಕಾಯಿದೆ ಕಂ 33 (ಎ) ಅಡಿಯಲ್ಲಿ ಕ್ರಮ ಜರುಗಿಸಲು ಸೂಚಿಸಿದೆ. ಹೀಗಾಗಿ ಸರ್ಕಾರ 2023ರ ಸೆಪ್ಟೆಂಬರ್ 15ರಂದು ಈ ಆದೇಶ ಹೊರಡಿಸಿದೆ ಎನ್ನುವುದು ಸಚಿವರ ವಿವರಣೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡಕ್ಕೆ ಶ್ಲಾಘನೆ
ಉತ್ತರ ಕನ್ನಡ,ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶೇ.95ರಷ್ಟು ಪರಿಸರ ಸ್ನೇಹಿ ಗಣಪತಿ ಪೂಜಿಸುತ್ತಾರೆ. ಈ ಮೂರೂ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಲ್ಲಿ ಜಾಗೃತಿ ಇದೆ. ಇದೇ ರೀತಿಯ ಅರಿವು ರಾಜ್ಯದ ಇತರ ಜಿಲ್ಲೆಗಳಲ್ಲೂ ಮೂಡಿಸಲು ಶ್ರಮಿಸಿ ಎಂದು ಈಶ್ವರ ಖಂಡ್ರೆ ತಿಳಿಸಿದರು.
ಗಣಪತಿಯಲ್ಲಿ ಬೀಜಾಂಕುರ
ಬಣ್ಣ ರಹಿತ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳಲ್ಲಿ ಔಷಧೀಯ ಗಿಡಗಳ ಬೀಜವನ್ನು ಸೇರಿಸಲಾಗಿದ್ದು, ಈ ಗಣಪತಿ ನೀರಲ್ಲಿ ಕರಗಿದ ಬಳಿಕ ಅದನ್ನು ಗಿಡಗಳಿಗೆ ಹಾಕಿದರೆ, ಅಲ್ಲಿ ಔಷಧೀಯ ಸಸ್ಯಗಳು ಬೆಳೆಯುತ್ತದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ಮಾಹಿತಿ ನೀಡಿದರು. ಈ ವಿನೂತನ ಪ್ರಯತ್ನಕ್ಕೆ ಸಚಿವ ಈಶ್ವರ ಖಂಡ್ರೆ ಅಭಿನಂದನೆ ಸಲ್ಲಿಸಿದರು.
ಪಟಾಕಿಗೂ ಕಡಿವಾಣ
ಸರ್ವೋನ್ನತ ನ್ಯಾಯಾಲಯ 31.10.2010 ಮತ್ತು 23.10.2018ರ ತನ್ನ ಆದೇಶದಲ್ಲಿ ರಾತ್ರಿ 8ರಿಂದ 10ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸಲು, 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಹೊರಹೊಮ್ಮುವ ಮತ್ತು ಸರ ಪಟಾಕಿ ಹಚ್ಚುವುದನ್ನು ನಿಷೇಧಿಸಲು ನಿರ್ದೇಶನ ನೀಡಿದೆ. ಹೀಗಾಗಿ ಪಟಾಕಿ ಮಾರಾಟ ಮಳಿಗೆ ತೆರೆಯುವವರಿಗೆ ಕಡ್ಡಾಯವಾಗಿ ಹಸಿರು ಪಟಾಕಿ ಮಾತ್ರ ಮಾರುವುದಾಗಿ ಮುಚ್ಚಳಿಕೆ ಬರೆಸಿಕೊಂಡು ಮಾರಾಟಕ್ಕೆ ಅನುಮತಿ ನೀಡಲು ಸೂಚಿಸಿದರು.
ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪರಿಸರ ಸ್ನೇಹಿ ಗಣಪತಿ ಕೂರಿಸಿ, ಪೂಜಿಸಿ ಮಾದರಿಯಾಗುವ 3 ಗಣೇಶೋತ್ಸವ ಸಮಿತಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ನೀಡುವ ಮತ್ತು ಮಣ್ಣಿನ ಗಣಪತಿ ಮಾಡುವವರಿಂದ ಶಾಲಾ, ಕಾಲೇಜು ಮಕ್ಕಳಿಗೆ ಹಾಗೂ ಯುವಕರಿಗೆ ತರಬೇತಿ ಕೊಡಿಸುವ ಯೋಜನೆ ಜಾರಿಗೆ ತರಬೇಕು ಎನ್ನುವ ಸಲಹೆಯನ್ನು ನೀಡಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು, ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಭಾಗಿಯಾಗಿದ್ದರು.