ಕನ್ನಡ ಸುದ್ದಿ  /  ಕರ್ನಾಟಕ  /  Jamun:ಮಾರುಕಟ್ಟೆಗೆ ಬಂದ ಆರೋಗ್ಯಪೂರ್ಣ ನೇರಳೆಹಣ್ಣು , ಇದನ್ನು ಸೇವಿಸಿದರೆ ಏನು ಲಾಭ?

Jamun:ಮಾರುಕಟ್ಟೆಗೆ ಬಂದ ಆರೋಗ್ಯಪೂರ್ಣ ನೇರಳೆಹಣ್ಣು , ಇದನ್ನು ಸೇವಿಸಿದರೆ ಏನು ಲಾಭ?

ನೇರಳೆ ಹಣ್ಣಿನ( Jamun Fruit) ಹಿನ್ನೆಲೆ, ವಿಶೇಷತೆ ಹಾಗೂ ಆರೋಗ್ಯದ ಮಹತ್ವವನ್ನು ಹಿರಿಯ ಲೇಖಕ ಡಾ.ಟಿ.ಎಸ್.ಚನ್ನೇಶ್‌ ವಿವರಿಸಿದ್ದಾರೆ.

ನೇರಳೆ ಹಣ್ಣಿನ ಆರೋಗ್ಯ ಮಹತ್ವ ಅಪಾರ.
ನೇರಳೆ ಹಣ್ಣಿನ ಆರೋಗ್ಯ ಮಹತ್ವ ಅಪಾರ.

ಈಗ ರಾಜ್ಯದಲ್ಲೆಲ್ಲೂ ನೇರಳೆ ಮರಗಳು ಹಣ್ಣು ಬಿಟ್ಟು ನಳನಳಿಸುತ್ತಿವೆ. ರಸ್ತೆ ಬದಿಯಲ್ಲಿ, ಪಾರ್ಕುಗಳ ಮೂಲೆಗಳಲ್ಲಿ, ಊರಾಚೆಗಿನ ಗೋಮಾಳಗಳ ಬದುಗಳಲ್ಲಿ ಎಲ್ಲೆಲ್ಲಿ ನೇರಳೆ ಮರಗಳಿವೆಯೋ ಅದರ ಕೆಳಗೆ ಈಗ ಹಣ್ಣುಗಳು ಬಿದ್ದ ನೆಲವು ಒಂದಷ್ಟು ಬಣ್ಣ ಚೆಲ್ಲಿದಂತಾ ದೃಶ್ಯ ಕಾಣುತ್ತದೆ. ನೇರಳೆಯು ಮಾರ್ಚ್‍ ಹಾಗೂ ಏಪ್ರಿಲ್ ತಿಂಗಳಲ್ಲಿ ಹೂವಾಡುತ್ತದೆ. ಮೇ ಕೊನೆಗೆ ಹಾಗೂ ಜೂನ್ ಹಾಗೂ ಜುಲೈನ ಇಡೀ ತಿಂಗಳುಗಳು ಹಣ್ಣುಗಳ ಸಂಭ್ರಮ. ಜಾಮೂನ್ ಎಂದೂ ಕರೆಯುವ ಈ ಹಣ್ಣಿನ ಬಣ್ಣವನ್ನೂ ನೇರಳೆ ಬಣ್ಣವೆಂದೇ ಕರೆಯಲಾಗುತ್ತದೆ. ಇಂಗ್ಲೀಶಿನ Purple ಪದಕ್ಕೆ ಸಮನಾಂತರವಾದುದು. ಕೆನ್ನೀಲಿ, ಎಂದರೂ ಆದೀತು. ಕಪ್ಪು ಮತ್ತು ನೀಲಿ ಮಿಶ್ರಿತ ಸಿಪ್ಪೆಯನ್ನೂ ಹಾಗೂ ಕೆಂಪು-ನೀಲಿ ಮಿಶ್ರಿತ ತಿರುಳು, ಜೊತೆಗೆ ರಸದ ಬಣ್ಣದ ಪುಟ್ಟ-ಪುಟ್ಟ ಹಣ್ಣಿನ ಪರಿಮಳ ಮರದ ಕೆಳಗೆಲ್ಲಾ ಹರಡಿರುತ್ತದೆ. ಮರವು ಸದಾ ಹಸಿರಾಗಿದ್ದು ವರ್ಷವಿಡಿ ದಟ್ಟ ಹಸಿರಿನ ಛಾವಣೆಯನ್ನು ಆಗಸಕ್ಕೆ ಹರಡಿರುತ್ತದೆ. ಎತ್ತರಕ್ಕೆ ಬೆಳೆಯುವ ನೇರಳೆ ಮರಗಳು ಹೆಚ್ಚೂ ಕಡಿಮೆ 100 ಅಡಿಗಳಷ್ಟು ಇರುವುದುಂಟು. ಹಾಗೆಯೇ ಇವುಗಳ ಆಯುಷ್ಯವೂ ಸಹಾ ನೂರಾರು ವರ್ಷಗಳಿಗೂ ಹೆಚ್ಚು. ಸಾಮಾನ್ಯವಾಗಿ ನಾಟಿ ಮಾಡಿದ ಒಂದೆರಡು ವರ್ಷಗಳಲ್ಲೇ ಹಣ್ಣು ಬಿಡದ ಮರಗಳು ಸಾಕಾಣಿಯ ದೃಷ್ಟಿಯಿಂದ ಹೆಚ್ಚು ಆಸಕ್ತವಾದುವಲ್ಲ. ಆರೆಂಟು ವರ್ಷಗಳ ವಯಸ್ಸಾಗುವವರೆಗೂ ಮರಗಳಿಂದ ಹಣ್ಣುಗಳ ಸುಳಿವು ಸಿಗುವುದಿಲ್ಲ.

ಹಾಗೇ ತಿನ್ನುವುದಕ್ಕಲ್ಲದೇ, ಪಾನಕ, ಜಾಮ್, ವೈನ್ ಮತ್ತು ಔಷಧಗಳ ತಯಾರಿಯಲ್ಲೂ ಇಂಡಿಯನ್ ಬ್ಲಾಕ್ ಬೆರ್ರಿ ಅಥವಾ ನೇರಳೆಯ ಬಳಕೆಯು ಸಹಜವಾಗಿದೆ. ತೀರಾ ಇತ್ತೀಚೆಗೆ ಈ ಹಣ್ಣುಗಳ ವಹಿವಾಟು ಜೋರಾಗಿ ಕಾಣಬರುತ್ತಿದೆ. ಇದಕ್ಕೆಲ್ಲಾ ಮೂಲ ಕಾರಣ ಹಣ್ಣಿನಲ್ಲಿರುವ ಸಕ್ಕರೆಯ ಹಾಗೂ ಟ್ಯಾನಿನ್-ಗಳ ಹದವಾದ ಮಿಶ್ರಣ. ಇದರ ಜೊತೆಗೆ ಮತ್ತಿತರ ಹಲವು ರಾಸಾಯನಿಕ ಕಾರಣದಿಂದಾಗಿ ಹಣ್ಣಿನ ಔಷಧಿಯ ಗುಣವನ್ನು ಸೇರಿಸಿ ಇದರ ಮೌಲ್ಯವನ್ನು ಹೆಚ್ಚಿಸಿದೆ. ಆದಾಗ್ಯೂ ಈ ಹಣ್ಣುಗಳ ಬಳಕೆಯು ಇನ್ನೂ ಅಷ್ಟಕ್ಕಷ್ಟೆ! ಹಣ್ಣಿನ ವರ್ಣತಂತುವಿನಲ್ಲಿರುವ ವಿಶಿಷ್ಟವಾದ “ಅಂತೊಸಯಾನಿನ್” ಗಳಿಂದಾಗಿ ಹಣ್ಣಿಗೆ ಆಕರ್ಷಕ ಬಣ್ಣ. ಇದೇ ಬಣ್ಣದ ಪಾನಕ/ರಸವು ಅದರ ಪೋಷಕಾಂಶಗಳ ಮತ್ತು ಔಷಧೀಯ ಗುಣಗಳಿಂದಾಗಿ ಜನಪ್ರಿಯವಾಗಿದೆ. ಇತ್ತೀಚೆಗಿನ ಆರೋಗ್ಯದ ಸಂಗತಿಗಳ ಜನಪ್ರಿಯತೆಯಲ್ಲಿ ನೇರಳೆಯು ಒಂದಷ್ಟು ಚಾಲ್ತಿಗೆ ಬಂದಿದೆ. ಈಗ್ಗೆ ಸುಮಾರು ಒಂದೆರಡು ದಶಕಗಳ ಹಿಂದೆ ಇಷ್ಟೊಂದು ಮಾರಾಟದ ಹಣ್ಣಾಗಿರಲಿಲ್ಲ. ನನ್ನ ಸಮಕಾಲೀನರಿಗೆ, ನನಗಿಂತಾ ಹಿರಿಯರಿಗೆ ಬಾಲ್ಯದಲ್ಲಿ ತಮ್ಮ ಶಾಲಾ ಆವರಣದಲ್ಲಿ ಹತ್ತೋ ಇಪ್ಪತ್ತು ಪೈಸೆಯನ್ನು ಕೊಟ್ಟು ಕೊಂಡ ನೆನಪಿರಬಹುದು. ಕಿರು ಅರಣ್ಯ ಉತ್ಪಾದನೆಗಳ ಪಟ್ಟಿಯಲ್ಲಿ ಈ ಹಣ್ಣು ಈಗಲೂ ಇದೆ. ಹಿಂದೆಲ್ಲಾ ವನ್ಯಸಂಗ್ರಹದಿಂದ ಆಯ್ದು ಬುಟ್ಟಿಯಲ್ಲಿ ತಂದು ಪುಟ್ಟ “ಪಾವು” ಎಂಬಳತೆಯಲ್ಲಿ ಈ ಹಣ್ಣನ್ನು ಮಾರುತ್ತಿದ್ದರು. ಒಂದೆರಡು ಹಣ್ಣು ತಿಂದು ಬಾಯೆಲ್ಲಾ ನೇರಳೆಯಾಗಿಸಿ ನಲಿದಿದ್ದೇವೆ. ಈಗಲೂ ಮಕ್ಕಳು ಹಾಗೆಯೇ ಆಡುವುದನ್ನೂ ನೋಡಿರಲು ಸಾಕು. ಇನ್ನೂ ಈಗಲೂ -ಮತ್ತೆ ಹಿಂದಂತೂ ದೃಢವಾಗಿ- ಆಯ್ದು ತಂದ ನೇರಳೆಯ ರುಚಿಯೇ ಬೇರೆ.

ನೇರಳೆ ಮರದ ನೋಟ ತುಂಬಾ ಸಹಜವಾದ ಇತರೇ ಮರಗಳಂತಲ್ಲ. ಅದು ತನ್ನ ಇರುವನ್ನು ನಿಶ್ಚಿತವಾಗಿ ಅಭಿವ್ಯಕ್ತಿಸುತ್ತದೆ. ನೀಳವಾದ ಕಾಂಡ, ತುಸು ಮೇಲಕ್ಕೆ ಹೋದ ಮೇಲೆ ದಟ್ಟವಾದ ಛಾವಣೆ! ಆಕರ್ಷಕ ಪರಿಮಳ, ವಿಶೇಷವಾದ ಹಸಿರಾದ ಎಲೆಗಳ ಬಣ್ಣ. ಕಾಂಡವು ಛಾವಣೆಯ ದಟ್ಟ ಬಣ್ಣಕ್ಕೆ ವಿರುದ್ಧವಾದ ಹೊಳೆಪುಳ್ಳ ಮಾಸಲು ಬಿಳಿಯದು. ಚಕ್ಕಳಗಟ್ಟಿದ ತೊಗಟೆ. ಮಿರ್ಟೇಸಿಯೆ ಕುಟುಂಬದ ಇತರೆಯಂತೆ ಸೀಳಿಕೊಂಡಂತೆ ಅಲ್ಲ. ಅಂಟಿಕೊಂಡೂ ಉದುರದೇ ಅರ್ಧ ತೆರೆದು-ಸುಲಿದಂತೆ ಕಾಣುವ ತೊಗಟೆ. ಇಂತಹಾ ನೋಟದಿಂದಲೇ ತನ್ನ ಮೊಟ್ಟ ಮೊದಲ ವಿವರಣೆಯ ದಾಖಲೆಯಲ್ಲೂ ವಿಶಿಷ್ಟವಾದ ಆದರೂ ಸಂಪೂರ್ಣತೆಯನ್ನು ಕಟ್ಟಿ ಕೊಡದ ಕಥನವನ್ನೇ ಹೊಂದಿದೆ. ಅದೇನು ನಿಜಕ್ಕೂ ನೇರಳೆಗೆ ಸೇರಿದ್ದೋ -ಅಲ್ಲವೋ ಅನ್ನಿಸಿದರೂ ಅದರ ಸಂಕುಲದ ಹೆಸರಾದ “ಸೈಜಿಜಿಯಂ” (Syzygium ) ಎಂದು ಕರೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಮ್ಮ ನೇರಳೆ -Syzygium cumini- ಯು ಮಿರ್ಟೇಸಿಯೆ (Myrtaceae) ಕುಟುಂಬದ ಮರ. ಈ ಕುಟುಂಬದ ವಿಶೇಷತೆ ಎಂದರೆ, ಪುಷ್ಪಪಾತ್ರೆಯು ಕಪ್(Cup)ನಂತೆ ಇದ್ದು ಅದರೊಳಗೆ ಕೇಸರಗಳನ್ನು ತುಂಬಿಕೊಂಡು ದಳಗಳನ್ನು ಅದಕ್ಕೆ ಮುಚ್ಚಿಕೊಂಡಂತೆ ಇಟ್ಟು ಮರೆಯಾಗಿಸಿರುತ್ತದೆ. ಶಂಕಾಕಾರದ ಈ ಕಪ್ (Cup) ಗಳನ್ನು ಇದೇ ಕುಟುಂಬದ ಮರವಾದ ಯೂಕಲಿಪ್ಟಸ್ ನಲ್ಲಿ ವಿಶೇಷವಾಗಿ ಕಾಣಬಹುದು. ನೀಲಗಿರಿ ಮರದ ಕೆಳಗೆ ಬಿದ್ದ ಶಂಕಾಕಾರದ ಕಪ್ಪುಗಳನ್ನು ಖಂಡಿತಾ ಕಂಡಿರುತ್ತೀರಿ. ಇನ್ನು ಇದರ ಹಣ್ಣುಗಳ ವಿಶೇಷತೆ ಎಂದರೆ ಅದರೊಳಗಿನ ಸಕ್ಕರೆ, ಆಮ್ಲತೆ ಆಗೂ ಟ್ಯಾನಿನ್‍-ಗಳನ್ನು ಸಮತೂಕದಲ್ಲಿ ಹೊಂದಿರುವುದು. ಇದರಿಂದಾಗಿ ಇದರ ಆರೋಗ್ಯದ ಹಿತದಲ್ಲಿ ತುಂಬಾ ಜನಪ್ರಿಯತೆಯನ್ನು ಪಡೆದಿದೆ. ಅದರಲ್ಲೂ ಸಕ್ಕರೆಯ ಕಾಯಿಲೆಯವರಿಗೆ ಸುಲಭವಾಗಿ ತಿನ್ನಬಹುದಾದ ಹಣ್ಣು ಎಂದೇ ಶಿಫಾರಸ್ಸನ್ನು ಪಡೆದಿದೆ. ಅದಕ್ಕಿಂತಾ ಹೆಚ್ಚಾಗಿ ಇದರ ಬೀಜವು ರಕ್ತದಲ್ಲಿನ ಸಕ್ಕರೆಯ ಉಪಶಮನದಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುವ ಮದ್ದಾಗಿದೆ. ಹಾಗಾಗಿ ಸಿದ್ಧ, ಆಯುರ್ವೇದ ಹಾಗೂ ಯುನಾನಿ ಮೂರೂ ಪೌರ್ಯಾತ್ಯ ಚಿಕಿತ್ಸೆಗಳಲ್ಲಿ ಸ್ಥಾನವನ್ನು ಪಡೆದ ಹಣ್ಣು -ನೇರಳೆ. ಸಾಲದಕ್ಕೆ ಇಡೀ ಮರ ತನ್ನ ಎಲೆಗಳು, ತೊಗಟೆ, ಬೇರುಗಳಲ್ಲಿಯೂ ವಿಶೇಷವಾದ ರಾಸಾಯನಿಕಗಳಿಂದ ತುಂಬಿಕೊಂಡಿದೆ. ಅದರ ಕೆಲವು ಸೂಕ್ಷ್ಮ ವಿವರಗಳನ್ನು ಮುಂದೆ ನಂತರದಲ್ಲಿ ನೋಡೋಣ.

ಸಾಮಾನ್ಯವಾಗಿ 5-6 ಗ್ರಾಂ ತೂಕದ ಪ್ರತೀ ಹಣ್ಣಿನಲ್ಲೂ ಬೀಜವು ದೊಡ್ಡದು. ಕೆಲವು ಸ್ಥಳೀಯ ತಳಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಗಾತ್ರವು ಬೀಜವನ್ನು ಆವರಿಸಿದರೆ, ಕೆಲವುಗಳಲ್ಲಿ 30-40% ಭಾಗ ಇರುತ್ತದೆ. ತಿರುಳಿನಿಂದ ತಯಾರಾದ ಶರಭತ್ತು ಅಥವಾ ಜ್ಯೂಸ್ ಎರಡೂ ಅಲ್ಲದೆ ಅದನ್ನು ಆಲ್ಕೋಹಾಲಾಗಿಸಿದ ವೈನ್ ಕೂಡ ಜನಪ್ರಿಯ. ಹಣ್ಣಿಗಿಂತಲೂ ಅದರ ತಿರುಳಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚು. ಏಕೆಂದರೆ ಹಣ್ಣು ತಿನ್ನಲು ಬಾಯೊಳಗಿಟ್ಟರೆ, ತಿರುಳು ಸ್ವಲ್ಪವೇ ಇದ್ದು, ಬೇಗ ಮುಗಿದು ಬರೀ ಬೀಜ ಬಾಯೆಲ್ಲಾ ತುಂಬಿಕೊಂಡಿರುತ್ತದೆ. ಒಂದೋ-ಎರಡೋ ಹಣ್ಣು ತಿಂದರೂ ಬಾಯೆಲ್ಲಾ ಬಣ್ಣ ಬಳಿದುಕೊಂಡು ಅದೆಷ್ಟು ತಿಂದಿದ್ದಾರೋ ಎನ್ನಿಸುತ್ತದೆ. ಇದೇ ಕುಟುಂಬದ ಮತ್ತೊಂದು ಜನಪ್ರಿಯ ಹಣ್ಣಾದ ಪೇರಲೆಯು ಹೆಚ್ಚೂ ಕಡಿಮೆ ತುಂಬಾ ಸಮಯದಲ್ಲಿ ಸಿಕ್ಕರೂ ನೇರಳೆ ಮಾತ್ರ ಜೂನ್-ಜುಲೈನ ಆಚೀಚೆ ಮಾತ್ರ!

ನೇರಳೆಯ ವಿವಿಧ ಭಾಗಗಳು ವಿವಿಧ ರಾಸಾಯನಿಕಗಳಿಂದ ತುಂಬಿರುವುದೆಂದು ಹಿಂದೆಯೇ ತಿಳಿದಿದ್ದೇವಲ್ಲವೇ? ಆ ರಾಸಾಯನಿಕಗಳಿಂದ ವಿವಿಧ ಉಪಯೋಗಗಳನ್ನೂ ಮಾನವಕುಲವು ಪಡೆಯುತ್ತಲಿದೆ. ಹಣ್ಣುಗಳು ಸಕ್ಕರೆಯ ಜೊತೆಗೆ, ಸಿಟ್ರಿಕ್ ಆಮ್ಲ, ಮಾಲಿಕ್ ಆಮ್ಲ ಮತ್ತು ಗ್ಯಾಲಿಕ್ ಆಮ್ಲವನ್ನಲ್ಲದೆ ಆಂತೋಸಯಿನಿನ್‍-ಗಳನ್ನು ಹೊಂದಿವೆ. ಹಣ್ಣಿನ ಸ್ವಲ್ಪ ಒಗರು ಮಿಶ್ರಿತ ಹುಳಿಯು ಗ್ಯಾಲಿಕ್ ಆಮ್ಲದ ಕೊಡುಗೆಯಾದರೆ, ಅದರ ಬಣ್ಣ ಆಂತೋಸಯಾನಿನ್ ಕೊಡುಗೆ. ಹಣ್ಣು ಪ್ರೊಟೀನ್, ಕೊಬ್ಬಿನ ಜೊತೆಗೆ ಕ್ಯಾಲ್ಸಿಯಂ ಹಾಗೂ ಮ್ಯಾಗ್ನಿಸಿಯಂ ಅನ್ನೂ ಕೂಡ ಹೊಂದಿದೆ. ಅದಲ್ಲದೆ ಇನ್ನೂ ಕೆಲವು ಖನಿಜಾಂಶಗಳನ್ನೂ, ಜೊತೆಗೆ ವಿಟಮಿನ್ಗಳನ್ನೂ ಹೊಂದಿದೆ. ಹಾಗಾಗಿ ಹಣ್ಣು ಬಹು ಬಗೆಯ ಉಪಶಮನಗಳಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿದೆ. ಹಣ್ಣಿನ ತಿರುಳಿನಿಂದ ಭಟ್ಟಿ ಇಳಿಸಿ ಪಡೆದ ಕಷಾಯಕ್ಕೆ ಕ್ಯಾನ್ಸರ್ ನಿವಾರಕ ಗುಣವಿರುವುದಾಗಿ ತಿಳಿದುಬಂದಿದೆ. ಇದನ್ನು ಕೆಲವು ಬಗೆಯ ಟ್ಯೂಮರ್ಗಳ ಉಪಶಮನಕ್ಕೆ ಸಹಕಾರಿ ಎಂಬುದಾಗಿ ಹಲವಾರು ಅಧ್ಯಯನಗಳು ದಾಖಲಿಸಿವೆ. ಕರುಳಿನ ಜೀವಿಕೋಶಗಳಲ್ಲಿ ಕ್ಯಾನ್ಸರ್ ಗಡ್ಡೆಗಳಾಗುವ ಪ್ರಕ್ರಿಯೆಗೆ ತಡೆಯೊಡ್ಡಬಲ್ಲ ಗುಣವನ್ನು ಆವಿಷ್ಕರಿಸಲಾಗಿದೆ. ಅದೇ ರೀತಿ ನೇರಳೆಯಿಂದ ತಯಾರಿಸಿದ ಆಹಾರದಿಂದಲೂ ಕೆಲವೊಂದು ಉಪಯುಕ್ತ ಲಾಭಗಳನ್ನು ಕಂಡುಕೊಳ್ಳಲಾಗಿದೆ. ಒಟ್ಟಾರೆ ನೇರಳೆಯ ವಿವಿಧ ಕಷಾಯಗಳು ಬಗೆ ಬಗೆಯ ಟ್ಯೂಮರ್ಗಳನ್ನು ನಿಯಂತ್ರಿಸುವ ಸಂಗತಿಗಳು ಇದೀಗ ಕಾಣುತ್ತಿವೆ. ಬೀಜದಿಂದ ತಯಾರಿಸಿದ ಕಷಾಯವಂತೂ ಮಧುಮೇಹಕ್ಕೆ ಉಪಶಮನಕಾರಿಯಾಗಿ ಇರುವುದು ತಿಳಿದಿದೆ.

ನೇರಳೆಯ ಎಲೆಗಳು ಗ್ಲೈಕೊಸೈಡ್, ಮಿರಿಸ್ಟಿನ್ ಹಾಗೂ ಟ್ಯಾನಿನ್‍-ಗಳಿಂದ ಸಮೃದ್ಧವಾಗಿವೆ. ಜೊತೆಗೆ ಎಲೆಗಳಲ್ಲಿ ಕೆಲವು ಉಪಯುಕ್ತವಾದ ಎಣ್ಣೆಯ ಅಂಶಗಳಿವೆ. ಈ ಸಸ್ಯದ ಎಳೆಯ ಎಲೆಗಳ ರಸವನ್ನು ಮಾವಿನ ಎಲೆಯ ರಸದೊಂದಿಗೆ ಬೆರೆಸಿ, ಆಡಿನ ಹಾಲು ಮತ್ತು ಜೇನುತುಪ್ಪವನ್ನು ಬೆರೆಸಿ ಬಳಸುವುದರಿಂದ ಅತಿಭೇದಿಯನ್ನು ತಡೆಗಟ್ಟಬಹುದಾಗಿದೆ. ಮಕ್ಕಳಿಗಂತೂ ಇದರ ಎಳೆಯ ಎಲೆಗಳ ರಸ ಜೊತೆಗೆ ಸ್ವಲ್ಪ ಎಲಕ್ಕಿ ಅಥವಾ ಚಕ್ಕೆಯನ್ನು ಬೆರೆಸಿ ಭೇದಿ ತಡೆಗಟ್ಟಲು ಬಳಸಬಹುದಾಗಿದೆ. ಈ ಸಸ್ಯದ ಬೇರೂ ಸಹಾ ಫ್ಲೇವಿನಾಯ್ಡ್, ಗ್ಲೈಕೊಸೈಡ್ ಗಳಂತಹಾ ರಾಸಾಯನಿಕಗಳನ್ನು ಹೊಂದಿದೆ. ಕಾಂಡದ ತೊಗಟೆಯು ಕೆಲವೊಂದು ಇಂಗಾಲಾಮ್ಲ ಹಾಗೂ ಸ್ಟಿರಾಲ್ ಗಳಿಂದ ಕೂಡಿದೆ. ಕೊಬ್ಬು ಮತ್ತು ಟ್ಯಾನಿನ್ಗಳೂ ಸಹಾ ತೊಗಟೆಯಲ್ಲಿ ತುಂಬಿಕೊಂಡಿವೆ. ಹೂವುಗಳೂ ಸಹಾ ಮಿರಿಸ್ಟಿನ್, ಒಲಿಯಿಕ್ ಆಮ್ಲ, ಟಪಿ೯ನಾಯ್ಡ್ಗಳಂತಹಾ ರಾಸಾಯನಿಕಗಳನ್ನು ಹೊಂದಿದೆ. ಹೀಗೆ ಅನೇಕ ಬಗೆಯ ರಾಸಾಯನಿಕಗಳ ಮಿಶ್ರಣವನ್ನು ನೇರಳೆಯು ಹೊಂದಿರುವುದರಿಂದ ರಕ್ತದ ಒತ್ತಡ ಜೊತೆಗೆ ಮಧುಮೇಹ ನಿಯಂತ್ರಣ ಹಾಗೂ ಟ್ಯೂಮರ್‍-ಗಳಾಗುವ ಸಾಧ್ಯತೆಯನ್ನು ತಡೆಗಟ್ಟುವ ಗುಣವನ್ನು ಹೊಂದಿದ್ದು ಮಾನವ ಕುಲದ ಬದುಕು ಬದಲಾಗುತ್ತಿರುವ ಜೀವನದಲ್ಲಿ ಪರಿಣಾಮಕಾರಿಯಾದ ಪಾತ್ರವನ್ನು ವಹಿಸುವುದನ್ನು ಕಂಡುಕೊಳ್ಳಲಾಗುತ್ತಿದೆ. ಇದರಿಂದಾಗಿಯೇ ಅದರ ಬೆಲೆಯೂ ಎರುತ್ತಲೇ ಇದೆ. ಹೀಗೆ ಧೀರ್ಘ ಕಾಲದ ಸಮಸ್ಯೆಗಳ ನಿಭಾಯಿಸುತ್ತಾ ಮಾನವಕುಲಕ್ಕೆ ಬೆಂಬಲವಾಗಿರುವ ನೇರಳೆಯ ನೆನಪಿನಲ್ಲಿ ಉಳಿಯಲು ಇದು ಸಕಾಲ, ಎಲ್ಲೆಲ್ಲೂ ಸಿಗುತ್ತಿರುವ ಹಣ್ಣಿನ ಸವಿಗೆ ರೆಡಿಯಾಗುವುದಷ್ಟೇ ಈಗ ನಮ್ಮ ಮುಂದಿರುವುದು.

ಹೀಗೆ ಸಮಸ್ಯೆಗಳನ್ನು ಮುಂದೂಡಿ, ಬದುಕನ್ನು ವಿಸ್ತರಿಸುವ, ಆಶಯವನ್ನು ತನ್ನೊಳಗೆ ಇಟ್ಟುಕೊಂಡ ಗುಣವನ್ನು ನೇರಳೆಯಲ್ಲಿ ಸಾಕ್ಷಿಯಾಗಿಸಿದ ಚಿತ್ರವನ್ನು ನೋಡಿ. ಗುಂಡ್ಲುಪೇಟೆ – ಬಂಡಿಪುರದ ಮಾರ್ಗದಲ್ಲಿ ಸಾಯಲು ಒಪ್ಪದ ನೇರಳೆ ಮರವೊಂದರ ಚಿತ್ರ ಅದು. ಈ ಗುಣ ಈ ಕುಟುಂಬಕ್ಕೇ ಇರುವ ವಿಶೇಷ! ನೀಲಗಿರಿಯೂ ಅಷ್ಟೇ. ಪೇರಲೆಯೂ ಅಷ್ಟೇ! ಕಡಿದರೂ ರೆಂಬೆ-ಕೊಂಬೆಗಳು ಮತ್ತೆ ಚಿಗುರುತ್ತವೆ. ಬುಡಕ್ಕೆ ಕೊಡಲಿ ಹಾಕಿ ನೆಲಮಟ್ಟದಲ್ಲಿ ಕತ್ತರಿಸಿದ ನೀಲಗಿರಿಯಿಂದ ಸುತ್ತಲೂ ಮತ್ತೇಳುವ ಚಿಗುರು ಕೊಂಬೆಗಳನ್ನು ಕಂಡಿರಬಹುದು. ಮಾನವ ಕುಲವಂತೂ ಸಾವನ್ನೆ ಬಯಸದು! ಸಾಧ್ಯವಾದಷ್ಟೂ ಸಾವನ್ನು ಮುಂದೂಡುವ ಆಶಯವಂತೂ ನಮಗೆ ಬೇಕಾದಷ್ಟು ಇದೆ. ಇದನ್ನೇ ತನ್ನೊಳಗೂ ತುಂಬಿಕೊಂಡು ಮಾನವ ಕುಲದ ಆರೋಗ್ಯದ ಜೀವನಕ್ಕೆ -ರೂಪಕ ಹಾಗೂ ಬೆಂಬಲ-ವಾಗಿಯೂ ಇರುವ ನೇರಳೆ… ನಮ್ಮ ಬದುಕಿನಾಸೆಯ ನೆರಳೇ ಹೌದು!

-ಡಾ.ಚನ್ನೇಶ್, ವಿಜ್ಞಾನ ಲೇಖಕ