ಕರ್ನಾಟಕದಲ್ಲಿ ಕಸ್ತೂರಿ ರಂಗನ್‌ ವರದಿ ಜಾರಿಗೆ ಸಮ್ಮತಿ, ಕೆಲವು ಷರತ್ತುಗಳು ಅನ್ವಯ; ಪಶ್ಚಿಮಘಟ್ಟ ಭಾಗದ ಜನಪ್ರತಿನಿಧಿಗಳ ಸಲಹೆ ಏನು-environment news karnataka to accept partial kasturi rangan report on western ghats decided in ministers mla meeting kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ ಕಸ್ತೂರಿ ರಂಗನ್‌ ವರದಿ ಜಾರಿಗೆ ಸಮ್ಮತಿ, ಕೆಲವು ಷರತ್ತುಗಳು ಅನ್ವಯ; ಪಶ್ಚಿಮಘಟ್ಟ ಭಾಗದ ಜನಪ್ರತಿನಿಧಿಗಳ ಸಲಹೆ ಏನು

ಕರ್ನಾಟಕದಲ್ಲಿ ಕಸ್ತೂರಿ ರಂಗನ್‌ ವರದಿ ಜಾರಿಗೆ ಸಮ್ಮತಿ, ಕೆಲವು ಷರತ್ತುಗಳು ಅನ್ವಯ; ಪಶ್ಚಿಮಘಟ್ಟ ಭಾಗದ ಜನಪ್ರತಿನಿಧಿಗಳ ಸಲಹೆ ಏನು

ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿ ಕಸ್ತೂರಿ ರಂಗನ್‌ ವರದಿ ಜಾರಿಗೆ ಕುರಿತಂತೆ ಬೆಂಗಳೂರಿನಲ್ಲಿ ಪ್ರಮುಖ ಸಭೆ ನಡೆಯಿತು. ಈ ಕುರಿತು ಪಶ್ಚಿಮ ಘಟ್ಟಗಳ ಭಾಗದ ಸಚಿವರು, ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಸ್ತೂರಿ ವರದಿ ಜಾರಿ ಸಂಬಂಧಿಸಿ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.,
ಕಸ್ತೂರಿ ವರದಿ ಜಾರಿ ಸಂಬಂಧಿಸಿ ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.,

ಬೆಂಗಳೂರು: ಕರ್ನಾಟಕದಲ್ಲಿ ಪಶ್ಚಿಮ ಘಟ್ಟಗಳ ಸಂರಕ್ಷಣೆ ನಿಟ್ಟಿನಲ್ಲಿ ಕಸ್ತೂರಿ ರಂಗನ್‌ ವರದಿ ಜಾರಿಗೆ ಸಂಬಂಧಿಸಿ ಜನಪ್ರತಿನಿಧಿಗಳ ಸಮ್ಮತಿ ದೊರಕಿದೆ. ಕೆಲವು ಷರತ್ತುಗಳೊಂದಿಗೆ ವರದಿಯನ್ನು ಕರ್ನಾಟಕದಲ್ಲಿ ಜಾರಿಗೊಳಿಸಿ ಪಶ್ಚಿಮ ಘಟ್ಟಗಳ ಶ್ರೇಣಿಯನ್ನು ಉಳಿಸಿಕೊಳ್ಳಬಹುದು ಎನ್ನುವ ಸಲಹೆಯನ್ನೂ ನೀಡಲಾಗಿದೆ.ರಾಜ್ಯದ ವಿವಿಧ ಅರಣ್ಯ ಮತ್ತು ವನ್ಯಜೀವಿ ತಾಣಗಳ ಸುತ್ತ 16,114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶವನ್ನು ಈಗಾಗಲೇ ಸಂರಕ್ಷಿಸಲಾಗಿದ್ದು, ಈ ಮಿತಿಗೆ ಒಳಪಟ್ಟು ಕಸ್ತೂರಿ ರಂಗನ್ ವರದಿಯನ್ನು ಸಮ್ಮತಿಸಬಹುದು ಎನ್ನುವುದು ಪ್ರಮುಖ ನಿರ್ಣಯ ಈ ಸಂಬಂಧ ಸಚಿವ ಸಂಪುಟ ಉಪಸಮಿತಿಯಲ್ಲಿ ಈ ಕುರಿತು ಚರ್ಚಿಸಿ ಅನುಮತಿಯೊಂದಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಕೇಂದ್ರ ಸರ್ಕಾರ ಆ.2ರಂದು 6ನೇ ಅಧಿಸೂಚನೆ ಹೊರಡಿಸಿರುವ ಹಿನ್ನೆಲೆಯಲ್ಲಿ ಈ ಮಾಸಾಂತ್ಯದೊಳಗೆ ರಾಜ್ಯ ಸರ್ಕಾರದ ನಿಲುವು ಸಲ್ಲಿಸಬೇಕಿರುವ ಹಿನ್ನೆಲೆಯಲ್ಲಿ ನಡೆದ 11 ಜಿಲ್ಲೆಗಳ ಜನಪ್ರತಿನಿಧಿಗಳ (ಬಾಧ್ಯಸ್ಥರ) ಸಭೆ ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಡಾ.ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೋಳಿ, ಮಧು ಬಂಗಾರಪ್ಪ, ಮಂಕಾಳ ವೈದ್ಯ, ವಿಧಾನಪರಿಷತ್ ಉಪ ಸಭಾಪತಿ ಪ್ರಾಣೇಶ್ ,ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಶಾಸಕರಾದ ಆರಗ ಜ್ಞಾನೇಂದ್ರ, ನಯನ ಮೋಟಮ್ಮ, ರಾಜೇಗೌಡ, ಹರೀಶ್ ಪೂಂಜಾ, ಸಂಸದರಾದ ಶ್ರೇಯಸ್ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು. ಪಶ್ಚಿಮಘಟ್ಟ ವ್ಯಾಪ್ತಿಯ 11 ಜಿಲ್ಲೆಗಳ ಸಚಿವರ, ಶಾಸಕರ ಮತ್ತು ಸಂಸತ್ ಸದಸ್ಯರು ಕಸ್ತೂರಿ ರಂಗನ್‌ ವರದಿ ಜಾರಿಗೆ ಸಮ್ಮತಿ ಸೂಚಿಸಿದರು.

ಸಭೆಯ ಬಳಿಕ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು

ಇಂದು ನಡೆದ ಸಭೆಯಲ್ಲಿಅಭಿಪ್ರಾಯ ಪಡೆಯಲಾಗಿದೆ. ಆ ಎಲ್ಲ ಅಭಿಪ್ರಾಯವನ್ನು ನಾಳೆ ನಡೆಯಲಿರುವ ಸಚಿವ ಸಂಪುಟದ ಉಪ ಸಮಿತಿ ಸಭೆಯಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ, ಸಂಪುಟದ ಅನುಮೋದನೆ ಪಡೆದು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದು ಈಶ್ವರ ಖಂಡ್ರೆ ಹೇಳಿದರು.

ಸಭೆಯ ನಡಾವಳಿ ಏನು

  • ಹಲವು ಜನಪ್ರತಿನಿಧಿಗಳು ಈಗಾಗಲೇ ರಾಜ್ಯದಲ್ಲಿ 16114 ಚ.ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಇದ್ದು, ಇನ್ನು ಹೆಚ್ಚಳ ಮಾಡಿದರೆ ಅರಣ್ಯದಂಚಿನ ಜನರ ಬದುಕೇ ದುಸ್ತರವಾಗುತ್ತದೆ. ಹೀಗಾಗಿ ಬಫರ್ ವಲಯವನ್ನು ಶೂನ್ಯಕ್ಕೆ ತರಬೇಕು ಎಂದು ಸಲಹೆ ನೀಡಿದ್ದಾರೆ. ಹಾಲಿ ಇರುವ 16114 ಚ.ಕಿ.ಮೀ. ಮಿತಿಗೆ ನಾವು ಸಮ್ಮತಿಸಿದರೆ ಶೂನ್ಯ ಬಫರ್ ಆಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
  • ಕಸ್ತೂರಿ ರಂಗನ್ ಸಮಿತಿ ವರದಿಯಲ್ಲಿ ರಾಜ್ಯದಲ್ಲಿ 20,668 ಚದರ ಕಿ.ಮೀ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಈ ಬಗ್ಗೆ ಭೌತಿಕ ಸರ್ವೆ ನಡೆಸಿದರೆ ಈ ಪ್ರದೇಶ ಇನ್ನೂ ಹೆಚ್ಚಳವಾಗಲಿದೆ ಎಂಬ ಅಭಿಪ್ರಾಯವನ್ನೂ ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು
  • ಹಲವು ತಲೆಮಾರುಗಳಿಂದ ಅರಣ್ಯ ಪ್ರದೇಶದಲ್ಲೇ ಜೀವನ ನಡೆಸುತ್ತಿರುವವರನ್ನು ಒಕ್ಕಲೆಬ್ಬಿಸುವುದು ಸೂಕ್ತವಲ್ಲ. ಅವರಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿದರೂ ಅವರು ಅಲ್ಲಿಗೆ ಹೋಗುವುದಿಲ್ಲ ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿದೆ. ನಾಳೆಯ ಸಭೆಯಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಸಲಾಗುವುದು.

    ಇದನ್ನೂ ಓದಿರಿ: World Environment day 2024: ಯುನೆಸ್ಕೋ ಮಾನ್ಯತೆ ಪಡೆದ ಭಾರತದ 8 ಹಸಿರು ತಾಣಗಳು, ಕರ್ನಾಟಕ ಪಶ್ಚಿಮಘಟ್ಟವೂ ಉಂಟು photos
  • ಈಗಾಗಲೇ ಇರುವ 16114 ಚ.ಕಿ.ಪ್ರದೇಶಕ್ಕೆ ಅಂಗೀಕಾರ ನೀಡಿದರೂ ಈ ಪ್ರದೇಶದಲ್ಲಿರುವ 1576 ಗ್ರಾಮಗಳ ಜನರ ಜೀವನೋಪಾಯಕ್ಕೆ ಅನಾನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂಬ ಒತ್ತಾಯ ಮಾಡಬಹುದು.
  • ಪಶ್ಚಿಮ ಘಟ್ಟ ಕೇವಲ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿಗೆ ಮಾತ್ರ ಸಂಬಂಧಿಸಿದ್ದಲ್ಲ. ಈ ಘಟ್ಟ ಪ್ರದೇಶ ಹಲವು ನದಿಗಳ ಉಗಮ ಸ್ಥಾನವಾಗಿದೆ ಮಿಗಿಲಾಗಿ ಮಳೆಯ ಮಾರುತಗಳನ್ನು ತಡೆಯುವ ಕಾರಣ ದೇಶಾದ್ಯಂತ ವ್ಯಾಪಕ ಮಳೆಯಾಗುತ್ತದೆ. ಹೀಗಾಗಿ ಈ ಪಶ್ಚಿಮಘಟ್ಟ ಸಂರಕ್ಷಣೆಯ ಹೊಣೆ ಕೇಂದ್ರದ್ದೂ ಆಗಿದೆ. ಆದ ಕಾರಣ ವಿಶೇಷ ಪ್ಯಾಕೇಜ್ ಘೋಷಿಸಬೇಕು..
  • ಒತ್ತುವರಿ ತೆರವಿನ ಬಗ್ಗೆ ನೀಡಿರುವ ಟಿಪ್ಪಣಿಗಳು ಸ್ಪಷ್ಟವಾಗಿವೆ. 2015ರ ನಂತರದ ಒತ್ತುವರಿ ಮಾತ್ರ ತೆರವು ಮಾಡಲು ಸೂಚಿಸಲಾಗಿದೆ. ಜೊತೆಗೆ 2015ರ ಸರ್ಕಾರದ ಆದೇಶ ಮತ್ತು ನಡವಳಿಯಂತೆ 3 ಎಕರೆಗಿಂತ ಮೇಲ್ಪಟ್ಟ ದೊಡ್ಡ ಒತ್ತುವರಿ ತೆರವು ಮಾಡಲಾಗುತ್ತಿದ್ದು, ಬಡ ರೈತರ ಒತ್ತುವರಿಯನ್ನು (ಪಟ್ಟಾಭೂಮಿ ಮತ್ತು ಒತ್ತುವರಿ ಸೇರಿ 3 ಎಕರೆ) ತೆರವು ಮಾಡಿಸುವುದಿಲ್ಲ.

mysore-dasara_Entry_Point