Sparrow: ಚಿಂವ್ ಚಿಂವ್ ಗುಬ್ಬಚ್ಚಿ ಎಲ್ಲಿ ಹೋದಿರಿ, ತಂತ್ರಜ್ಞಾನದ ಮಹಿಮೆಗೆ ಮರೆಯಾದ ಪುಟ್ಟ ಜೀವಗಳು !
ಪರಿಸರದಲ್ಲಿ ಬೃಹದಾಕರದ ಆನೆಯಷ್ಟೇ ಪುಟ್ಟ ಗುಬ್ಬಚ್ಚಿಗೂ ಮಹತ್ವವಿದೆ. ಮನೆಯ ಅಂಗಳದಲ್ಲಿ ಆಡಿಕೊಂಡಿದ್ದ ಗುಬ್ಬಚ್ಚಿಗಳ ಸಂತತಿ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವಿದೆ.

ಇಂದು #ವಿಶ್ವ_ಗುಬ್ಬಚ್ಚಿ_ದಿನ. ಒಂದು ಕಾಲದಲ್ಲಿ ಮನೆಯಂಗಳದಲ್ಲಿ, ಮನೆಗಳಗಳ ಸೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾಣಸಿಗುತ್ತಿದ್ದ ಗುಬ್ಬಚ್ಚಿಗಳ ಸಂಖ್ಯೆ, ಇಂದು ಅಕ್ಷರಶಃ 'ಗುಬ್ಬಿಗಳ ಗಾತ್ರ'ದಂತೆ ಚಿಕ್ಕದಾಗಿದೆ. ಅದಕ್ಕೆ ಹಲವು ಕಾರಣಗಳನ್ನು ಪಟ್ಟಿಮಾಡಲಾಗುತ್ತದೆ. ಹೆಚ್ಚಿನ ಜನ 'ಮೊಬೈಲ್ ಟವರ್'ಗಳ ಕಡೆ ಮಾತ್ರ ಬೊಟ್ಟು ಮಾಡಿತ್ತಾರೆ. ಆದರೆ ಮೊಬೈಲ್ ಟವರ್ ಗಳಿಗಿಂತ ಹೆಚ್ಚಾಗಿ ನಮ್ಮ ಒಟ್ಟಾರೆ 'ಜೀವನಶೈಲಿ'ಯ ಬದಲಾವಣೆ ಅವುಗಳ 'ಜೀವ'ದ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ.
ಈ ಕುರಿತು ಕನ್ನಡದ ಖ್ಯಾತ ಪರಿಸರ ಲೇಖಕರಾದ ಪೂರ್ಣಚಂದ್ರ ತೇಜಸ್ವಿಯವರ ಒಂದು ಅಭಿಪ್ರಾಯ ಹೀಗಿದೆ. "ಗುಬ್ಬಚ್ಚಿ ಚಿಲಿಪಿಲಿ ಯಾಕೆ ಹೋಯ್ತು ಹೇಳಿ ನೋಡೋಣ? ಮೊದಲು ನಮ್ಮಮ್ಮ ಭತ್ತ ಕೇರ್ತಾ ಇರಬೇಕಾದರೆ, ಹಿಂಡಾಗಿ ಬಂದು ಕೂತಿರುತ್ತಿದ್ವು, ಮೈಸೂರಲ್ಲಿ. ಗುಬ್ಬಚ್ಚಿಗಳು ಮನುಷ್ಯನೊಂದಿಗೆ ಎಷ್ಟು ಅಡಾಪ್ಟ್ ಆಗಿದ್ದಾವೆ ಅಂತ ಹೇಳಿದರೆ ದೇ ಕಾಂಟ್ ಸರ್ವೈವ್ ಇನ್ ದಿ ವೈಲ್ಡ್ ಎನ್ವಿರಾನ್ಮೆಂಟ್. ನಮ್ಮಲ್ಲಿ, ಪೇಟೆಗಳಲ್ಲಿ ಆರ್ಕಿಟೆಕ್ಟಲ್ ಚೇಂಜಸ್ ಹೆಂಚಿನ ಮನೆಗಳು ಹೋದ ಮೇಲೆ ಅವಕ್ಕೆ ಗೂಡು ಕಟ್ಟೋಕೆ ಜಾಗ ಇಲ್ಲ! ಇಲ್ಲಿ ಜಾಗ ಕೊಡದಿದ್ದರೆ ಪರವಾಗಿಲ್ಲ ಅಂತ ಹೇಳಿದರೆ ಅವಕ್ಕೆ ಕಾಡಲ್ಲಿ ಗೂಡು ಕಟ್ಟೋಕೆ ಬರೋದಿಲ್ಲ. ಹಿಂದೆ ನೀವು ನೋಡರಲ್ಲ ಬಿಡಿ. ನೀವು ತುಂಬಾ ಈಚಿನೋರು ಗುಬ್ಬಚ್ಚಿಗಳು ಗೂಡು ಕಟ್ಟಲಿ ಅಂತಾನೆ ಮನೆಗಳಲ್ಲಿ ಸೂರಿನಡಿಯಲ್ಲಿ ಅಲ್ಲಿ ಇಲ್ಲಿ ಜಾಗ ಬಿಡೋರು. ಗುಬ್ಬಚ್ಚಿಗಳಿಂದ ಏನು ಉಪಯೋಗ ಆಗುತ್ತೆ ಅಂದರೆ ಅವು ಆ ಸೂರಿನ ಸಂದಿಯಲ್ಲಿ ಇನ್ಸ್‌ಪೆಕ್ಟ್ ಮಾಡಿ ಒಂದೇ ಒಂದು ಕೀಟಗಳು ಇಲ್ಲದ ಹಾಗೆ ಕ್ಲೀನ್ ಮಾಡ್ತಿದ್ದವು. ಅದಕ್ಕೋಸ್ಕರ ಗುಬ್ಬಚ್ಚಿಗಳು ಬಂದು ಗೂಡು ಕಟ್ಟಿಕೊಳ್ಳಲಿ ಅಂತ ಸೂರಿನಡಿಯಲ್ಲಿ ಸಣ್ಣ ಸಣ್ಣ ತೂತುಗಳನ್ನು ಮಾಡಿ ಬಿಟ್ಟಿರೋರು. ಈವಾಗ ಕಾಂಕ್ರೀಟ್ ರೂಫಿಂಗ್ ಬಂದ್ಬಿಟ್ಟು, ಅಲ್ಲೂ ಗೂಡು ಕಟ್ಟೋಕೆ ಅವಕ್ಕೆ ಜಾಗ ಇಲ್ಲ. ಈವಾಗ ಅಲ್ಲಿ ಇಲ್ಲಿ ರೈಸ್ ಮಿಲ್, ದಿನಸಿ ಅಂಗಡಿ ಹತ್ತಿರ ಎಲ್ಲಾ ಇರ್ತಾವೆ." (ಕೃತಿ: ಹೊಸ ವಿಚಾರಗಳು ಪುಟ ಸಂಖ್ಯೆ: 574)
ಬದಲಾದ ಮನೆಗಳ ಮಾದರಿಯಿಂದ ಗುಬ್ಬಿಗಳು ಗೂಡು ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಉದ್ಬವ ವಾದದ್ದು, ಕೈತೋಟಗಳ ಸಂಖ್ಯೆ ಕಡಿಮೆಯಾದದ್ದು, ನಗರ ಪ್ರದೇಶಗಳಲ್ಲಿ ಪಾರಿವಾಳಗಳ ಸಂಖ್ಯೆ ವ್ಯಾಪಕವಾಗಿ ವೃದ್ಧಿಯಾಗಿ ಗುಬ್ಬಿಗಳ ಜಾಗ ಆಕ್ರಮಿಸಿಕೊಂಡದ್ದು, ಮೊಬೈಲ್ ಟವರ್ ಗಳ ತರಂಗಗಳು, ಟ್ರಾಪಿಕ್ ನಲ್ಲಿನ ಶಬ್ದ ಹಾಗೂ ಇತರ ಮಾಲಿನ್ಯಗಳು ... ಇತ್ಯಾದಿ ಕಾರಣಗಳಿಂದ 2000 ನೇ ಇಸವಿಯ ಸಮಯದಲ್ಲಿ ಗುಬ್ಬಿಗಳ ಸಂಖ್ಯೆ ದೊಡ್ಡ ಮಟ್ಟದಲ್ಲಿ ಕ್ಷೀಣಿಸುತ್ತಾ ಸಾಗಿತ್ತು. ಇದು ಎಲ್ಲರ ಕಣ್ಣಿಗೆ ಕಾಣುವಂತಿತ್ತು.
ಆದ್ಯಾಗಿಯೂ ಇತ್ತೀಚಿಗೆ ಬಿಡುಗಡೆಯಾಗಿರುವ The State of India's birds 2020 ವರದಿ ಪ್ರಕಾರ ಕಳೆದ 25 ವರ್ಷಗಳಲ್ಲಿ ಗುಬ್ಬಿಗಳ ಸಂಖ್ಯೆ ಸ್ಥಿರವಾಗಿದೆಯಂತೆ. ಮುಖ್ಯವಾಗಿ ಇತ್ತೀಚಿನ ಕೆಲವು ವರ್ಷಗಳಲ್ಲಿ ಕೆಲವು ಪರಿಸರಾಸಕ್ತರು, ಪಕ್ಷಿಪ್ರೇಮಿಗಳು ಗುಬ್ಬಚ್ಚಿಗಳನ್ನು ಉಳಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ; ಮಾಡುತ್ತಿದ್ದಾರೆ.
ಮನೆಗಳ ಮಾದರಿಯಿಂದ ಅವುಗಳು ಗೂಡು ನಿರ್ಮಿಸಲು ಉಂಟಾದ ಸಮಸ್ಯೆ ನಿವಾರಿಸಲು, ಅವುಗಳು ವಾಸಿಸುವ ಜನವಸತಿ ಪ್ರದೇಶಗಳಲ್ಲಿನ ಮನೆಯಂಗಳ, ಶಾಲಾ-ಕಾಲೇಜು, ಕಛೇರಿಗಳ ಆವರಣಗಳಲ್ಲಿ ಕೃತಕ ಗೂಡುಗಳನ್ನು ಅಳವಡಿಸುವ ಕಾರ್ಯ ಮಾಡುತ್ತಿದ್ದಾರೆ. ಅವುಗಳಿಗೆ ಕಾಳು-ಕಡ್ಡಿ, ನೀರು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ. ಇದು ಅವುಗಳ ಸಂತತಿಯ ಉಳಿವು, ಬೆಳವಣಿಗೆಯಲ್ಲಿ ಸಾಕಷ್ಟು ಸಕಾರಾತ್ಮಕ ಪರಿಣಾಮ ಬೀರಿದೆ.
ವನ್ಯಜೀವಿಗಳಿಗೆ ಕಾಡಿನಲ್ಲಿ ಆಹಾರ ನೀಡಬಾರದು. ಆದರೆ ಗುಬ್ಬಿ, ಕಾಗೆಯಂತಹ ಕೆಲವು ವನ್ಯಜೀವಿಗಳು ಜನವಸತಿ ಪ್ರದೇಶದಲ್ಲಿ ಮಾತ್ರ ವಾಸಿಸುತ್ತವೆ. ಹಾಗಾಗಿ ಗುಬ್ಬಿಗಳ ಉಳಿವಿಗೆ ಕೃತಕ ಗೂಡುಗಳ ನಿರ್ಮಾಣ, ಆಹಾರ ನೀರು ಒದಗಿಸುವ ಕಾರ್ಯ, ಅವುಗಳ ಉಳಿವಿಗೆ ಅತ್ಯಂತ ಪರಿಣಾಮಕಾರಿ ಮಾರ್ಗ. ಅದನ್ನು ಸಾಧ್ಯವಿರುವ ಕಡೆ, ಸಾಧ್ಯವಿರುವ ಎಲ್ಲರೂ ಮಾಡೋಣ. ಗುಬ್ಬಿಗಳ ಸಂತತಿಯ ಉಳಿವು, ಬೆಳವಣಿಯಲ್ಲಿ ತೊಡಗೋಣ.
-ಸಂಜಯ್ ಹೊಯ್ಸಳ, ಪರಿಸರ ಪರಿವಾರ

ವಿಭಾಗ