ಕನ್ನಡ ಸುದ್ದಿ  /  Karnataka  /  Even The President Of India Wears A Pallu Says Cm Ibrahim Over Hijab Row

CM Ibrahim on Hijab: ಹಿಜಾಬ್‌, ಗೂಂಗಟ್‌ ಏಕ್‌ ಹೀ ಹೈ: ಭಾರತೀಯ ಸಂಸ್ಕೃತಿ ಅವಹೇಳನ ಬೇಡವೆಂದ ಸಿಎಂ ಇಬ್ರಾಹಿಂ!

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಹಿಜಾಬ್‌, ಗೂಂಗಟ್‌, ಪಲ್ಲು ಇವೆಲ್ಲಾ ಭಾರತೀಯ ಸಂಸ್ಕೃತಿಯ ಲಕ್ಷಣಗಳು ಎಂದು ಹೇಳಿದ್ದಾರೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಲೆಯ ಮೇಲೆ ಸೆರಗು ಹಾಕಿಕೊಳ್ಳುತ್ತಿದ್ದರು. ಭಾರತದ ಪ್ರಸ್ತುತ ರಾಷ್ಟ್ರಪತಿ ಕೂಡ ತಲೆಯ ಮೇಲೆ ಸೆರಗು ಹಾಕಿಕೊಳ್ಳುತ್ತಾರೆ. ಇದು ಭಾರತದ ಸಂಸ್ಕೃತಿ ಎಂದು ಇಬ್ರಾಹಿಂ ಹೇಳಿದ್ಧಾರೆ.

ಸಿಎಂ ಇಬ್ರಾಹಿಂ
ಸಿಎಂ ಇಬ್ರಾಹಿಂ (ANI)

ಬೆಂಗಳೂರು: ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದದಕ್ಕೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಹಿಜಾಬ್‌, ಗೂಂಗಟ್‌, ಪಲ್ಲು ಇವೆಲ್ಲಾ ಭಾರತೀಯ ಸಂಸ್ಕೃತಿಯ ಲಕ್ಷಣಗಳು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಸೆ.20-ಮಂಗಳವಾರ) ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ತಲೆಯ ಮೇಲೆ ಸೆರಗು ಹಾಕಿಕೊಳ್ಳುತ್ತಿದ್ದರು. ಭಾರತದ ಪ್ರಸ್ತುತ ರಾಷ್ಟ್ರಪತಿ ಕೂಡ ತಲೆಯ ಮೇಲೆ ಸೆರಗು ಹಾಕಿಕೊಳ್ಳುತ್ತಾರೆ. ಇದು ಭಾರತದ ಸಂಸ್ಕೃತಿ. ಇದನ್ನೂ ಪಿಎಫ್‌ಐ ಪಿತೂರಿ ಎಂದು ಹೇಳಲು ಬರುತ್ತದೆಯೇ ಎಂದು ಪ್ರಶ್ನಿಸಿದರು.

ಹಿಜಾಬ್‌, ಗೂಂಗಟ್‌, ಸೆರಗು, ಪಲ್ಲು, ದುಪ್ಪಟ್ಟಾ ಹೀಗೆ ಇದನ್ನು ನಾಇವು ಯಾವ ಶಬ್ಧದಿಂದಾದರೂ ಕರೆಯಿರಿ. ಇದರ ಅರ್ಥ ಮಾತ್ರ ಒಂದೇ, ಅದು ನಮ್ಮ ಹೆಣ್ಣುಮಕ್ಕಳು ಭಾರತೀಯ ಸಂಸ್ಕೃತಿಯ ಪರಿಪಾಲಕರು ಎನ್ನುವುದು. ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಾಷೆಯಲ್ಲಿ ವ್ಯತ್ಯಾಸವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿ ಮಾತ್ರ ದೇಶಾದ್ಯಂತ ಒಂದೇ ರೀತಿಯಲ್ಲಿದೆ ಎಂದು ಸಿಎಂ ಇಬ್ರಾಹಿಂ ಹೇಳಿದರು.

ಕೆಲವರು ರಾಜಕೀಯ ಲಾಭಕ್ಕಾಗಿ ಹಿಜಾಬ್‌ ವಿವಾದವನ್ನು ಸೃಷ್ಟಿಸಿದ್ಧಾರೆ. ಎರಡೂ ಕಡೆಯವರು ಈ ವಿವಾದದ ಬೆಂಕಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಸಲಿಗೆ ಇವರು ಭಾರತೀಯ ಸಂಸ್ಕೃತಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ತೀವ್ರ ವಾಗ್ದಾಳಿ ನಡೆಸಿದರು.

ಈಗ ನಮ್ಮ ಮುಂದಿರುವ ಸಮಸ್ಯೆ ಹಿಜಾಬ್‌ ಅಲ್ಲ, ದುಪ್ಪಟ್ಟಾ ಅಲ್ಲ. ನಿರುದ್ಯೋಗ, ಕೋಮುಗಳ ನಡುವಿನ ವೈಮನಸ್ಸು, ಭ್ರಷ್ಟಾಚಾರ ಇವುಗಳೇ ನಮ್ಮ ಮುಂದಿರುವ ಜ್ವಲಂತ ಸಮಸ್ಯೆಗಳು. ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಇವುಗಳ ಬಗ್ಗೆ ಮಾತನಾಡಬೇಕೆ ಹೊರತು, ನಮ್ಮ ಹೆಣ್ಣುಮಕ್ಕಳ ದುಪ್ಪಟ್ಟಾ, ಹಿಜಾಬ್‌ ಬಗ್ಗೆ ಅಲ್ಲ ಎಂದು ಸಿಎಂ ಇಬ್ರಾಹಿಂ ಮಾರ್ಮಿಕವಾಗಿ ನುಡಿದರು.

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದಕ್ಕೆ ಅವಕಾಶ ನೀಡಬೇಕೋ ಬೇಡವೋ ಎಂಬುದರ ಕುರಿತು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಸುಪ್ರೀಂಕೋರ್ಟ್‌ ಏನು ತೀರ್ಪು ನೀಡುತ್ತದೆಯೋ ಅದನ್ನು ಎಲ್ಲರೂ ಒಪ್ಪಲೇಬೇಕು. ಆದರೆ ಈ ಕುರಿತು ರಾಜಕೀಯ ಪಕ್ಷಗಳು ಮತ್ತು ಕೆಲವು ಸಂಘಟನೆಗಳು ಉದ್ರೇಕಕಾರಿ ಹೇಳಿಕೆ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಎಂ ಇಬ್ರಾಹಿಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಭಾರತೀಯ ಸಂಸ್ಕೃತಿಯನ್ನು ಪೋಷಿಸುತ್ತಿರುವ ಹೆಣ್ಣುಮಕ್ಕಳ ಮೇಲೆ ನಮಗೆ ಗೌರವ ಇರಬೇಕು. ಆಕೆ ಯಾವುದೇ ಧರ್ಮಕ್ಕೆ ಸೇರಿದವಳಾಗಿರಲಿ, ಆಕೆ ಮೊದಲು ಭಾರತೀಯಳು ಎಂಬುದನ್ನು ನಾವು ಮನಗಾಣಬೇಕು. ತಲೆ ಮೇಲೆ ಹಿಜಾಬ್, ಗೂಂಗಟ್‌, ದುಪ್ಪಟ್ಟಾ ಯಾವುದಿದ್ದರೂ, ಆಕೆ ನಮ್ಮ ಮನೆಯ ಹೆಣ್ಣುಮಗಳು ಎಂಬುದನ್ನು ನಾವು ಮರೆಯಬಾರದು ಎಂದು ಸಿಎಂ ಇಬ್ರಾಹಿಂ ನುಡಿದರು.

ಸದ್ಯ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಆದರೆ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಈ ಕುರಿತು ನ್ಯಾಮೂರ್ತಿಗಳಾದ ಹೇಮಂತ್‌ ಗುಪ್ತಾ ಮತ್ತು ಸುಧಾಂಶು ಧುಲಿಯಾ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ.

ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್‌ ವಿವಾದ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಹಿಜಾಬ್‌ ವಿವಾದದ ಬಗ್ಗೆ ಹಿಂದೂ ಪರ ಸಂಘಟನೆಗಳ ವಾದ ಒಂದಾಗಿದ್ದರೆ, ಮುಸ್ಲಿಂ ಸಂಘಟನೆಗಳ ವಾದ ಮತ್ತೊಂದಾಗಿದೆ. ಈ ಮಧ್ಯೆ ರಾಜಕೀಯ ಪಕ್ಷಗಳೂ ಕೂಡ ಹಿಜಾಬ್‌ ವಿವಾದದ ಬಗ್ಗೆ ತಮ್ಮದೇ ಆದ ಅಬಿಪ್ರಾಯ ಹೊರಹಾಕುತ್ತಿವೆ. ಸುಪ್ರೀಂಕೋರ್ಟ್‌ ಈ ವಿವಾದದ ಬಗ್ಗೆ ಏನು ತೀರ್ಪು ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

IPL_Entry_Point

ವಿಭಾಗ