ಕನ್ನಡ ಸುದ್ದಿ  /  Karnataka  /  Examinations News Iit Jee Exam Student Time Table Viral Rangaswamy Mookanahalli Article About Exams Preparations Kub

Exams: ಐಐಟಿ -ಜೆಇಇ ಪರೀಕ್ಷೆ ಈ ಪರಿ ತಯಾರಿ, ವೈರಲ್‌ ಆಯ್ತು ವಿದ್ಯಾರ್ಥಿ ಟೈಮ್‌ಟೇಬಲ್‌

ಪರೀಕ್ಷೆ ತಯಾರಿ ಎಂದರೆ ಅದು ಒತ್ತಡವೂ ಹೌದು. ಖುಷಿಯ ಕ್ಷಣವೂ ಹೌದು. ನಾವು ತೆಗೆದುಕೊಳ್ಳುವುದರ ಮೇಲೆ ಅವಲಂಬಿತವಾಗಿದೆ. ಆದರೂ ಬಹುಪಾಲು ವಿದ್ಯಾರ್ಥಿಗಳ ಒತ್ತಡ ಅವರು ಹಾಕಿಕೊಳ್ಳುವ ವೇಳಾಪಟ್ಟಿಯೇ ತಿಳಿಸಲಿದೆ ಎನ್ನುತ್ತಾರೆ ಬರಹಗಾರ ರಂಗಸ್ವಾಮಿ ಮೂಕನಹಳ್ಳಿ.

ವಿದ್ಯಾರ್ಥಿ ಓದಿನ ಟೈಂ ಟೇಬಲ್‌ ಹೀಗಿದೆ.
ವಿದ್ಯಾರ್ಥಿ ಓದಿನ ಟೈಂ ಟೇಬಲ್‌ ಹೀಗಿದೆ.

ಐಐಟಿ -ಜೆಇಇ ಪರೀಕ್ಷೆ ತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಯೊಬ್ಬನ ದಿನಚರಿ -ಟೈಮ್ ಟೇಬಲ್ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಮಿಶ್ರ ಪ್ರತಿಕ್ರಿಯೆ ಕೂಡ ಬಂದಿದೆ. ಕೆಲವರು ಸರಿ ಎಂದರೆ , ಕೆಲವರು ತಪ್ಪು ಎಂದಿದ್ದಾರೆ. ಎಂದಿನಂತೆ ಇದನ್ನು ಇನ್ನೊಂದು ದಿಕ್ಕಿಗೆ ಕೂಡ ತೆಗೆದುಕೊಂಡು ಹೋಗಲಾಗಿದೆ. ಮೆರಿಟ್ ಸ್ಟೂಡೆಂಟ್ ಅದರಲ್ಲೂ ಜನರಲ್ ಮೆರಿಟ್ ಸ್ಟೂಡೆಂಟ್ ಆಗಿದ್ದರೆ ಈ ರೀತಿ ಶ್ರಮ ಪಡುವುದು ಬಿಟ್ಟು ಬೇರೇನೂ ಮಾಡಲಾಗುವುದಿಲ್ಲ ಎನ್ನುವ ಮಾತುಗಳು ಕೆಲವರದು.

ನಮ್ಮದು ಅಗಣಿತ ಸಮಸ್ಯೆಗಳ ಸಮಾಜ. 145 ಕೋಟಿಗೂ ಹೆಚ್ಚಿರುವ ಜನಸಂಖ್ಯೆ. ಭಾರತವನ್ನು ಒಂದು ದೊಡ್ಡ ಟ್ರೈನ್ ಎಂದು ಕೊಂಡರೆ , ಮೊದಲ ಬೋಗಿಯಲ್ಲಿ ಕುಳಿತವರು ಯೂರೋಪು , ಅಮೇರಿಕಾ ದೇಶಗಳನ್ನು ಕೂಡ ಮೀರಿಸುವ ಜೀವನ ಶೈಲಿ , ಸಂಪತ್ತು ಹೊಂದಿದ್ದಾರೆ , ಕೊನೆಯ ಬೋಗಿಯ ಜನರ ಇಥಿಯೋಪಿಯಾ ದೇಶಕ್ಕಿಂತ ಬರ್ಬರ ಜೀವನವನ್ನು ನಡೆಸುತ್ತಿದ್ದಾರೆ. ಮಧ್ಯಮವರ್ಗ ಎನ್ನುವ ದೊಡ್ಡ ಬ್ಯಾಸ್ಕೆಟ್ನಲ್ಲಿ ಕೆಲವರು ಭಾರತ್ ಅಕ್ಕಿಗೆ ಸರದಿಯಲ್ಲಿ ಕಾದು ನಿಲ್ಲುತ್ತಾರೆ . ಕೆಲವರಿಗೆ ಉಂಡ ಊಟ ಅರಗುವುದೇ ಇಲ್ಲ. ಇರಲಿ , ಮತ್ತೆ ಶಿಕ್ಷಣದ ಕಡೆಗೆ ಬರೋಣ .

ಭಾರತ ಮಾತ್ರವಲ್ಲ , ಬಹುತೇಕ ಏಷ್ಯನ್ ದೇಶಗಳ ಕಥೆ -ವ್ಯಥೆ ಇದು. ಎಲ್ಲದರಲ್ಲೂ ಹುಚ್ಚು ಸ್ಪರ್ಧೆ . ಮಗು ಅಪ್ಪ ಅಮ್ಮನ ಕನಸಿನ ಕೋರ್ಸ್ ತೆಗೆದುಕೊಂಡು ಅದರಲ್ಲಿ ಮುಂದುವರಿಯಬೇಕು. ಇದು ನಾನು ಹುಡುಗನಾಗಿದ್ದಾಗಿನ ಕಥೆ ಕೂಡ. ಪೋಷಕರ ಕನಸನ್ನು ಧಿಕ್ಕರಿಸಿ ತಮ್ಮ ಕನಸನ್ನು ಬೆನ್ನೆತ್ತುವ ಛಲ ಅಂದಿಗೆ ನಮ್ಮಲ್ಲಿ ಕೆಲವರಿಗಾದರೂ ಇತ್ತು. ಇಂದು ಮಕ್ಕಳಿಗೆ ಇದು ಮಾಡು ಎಂದು ಹೇಳದಿದ್ದರೆ ನೆಮ್ಮದಿಯಾಗಿ ಮಲಗಿ ಬಿಡುತ್ತವೆ. ಇಲ್ಲ ಎದ್ದಿದ್ದರೆ ಮೊಬೈಲ್ ದಾಸ್ಯದಲ್ಲಿ ವೇಳೆಯನ್ನು ಕೊಲ್ಲುತ್ತವೆ. ಏನಾದರು ಮಾಡಬೇಕು , ಸಾಧಿಸಬೇಕು ಎನ್ನುವ ಹಸಿವು ಕಣ್ಮರೆಯಾಗುತ್ತಿದೆ.ಇಂತಹ ಕಾಲಘಟ್ಟದಲ್ಲಿ ಒಬ್ಬ ಹುಡುಗ ಕೇವಲ ನಾಲ್ಕೂವರೆ ಗಂಟೆ ಮಾತ್ರ ಮಲಗುತ್ತಾನೆ. ಒಂದು ಬಾರಿ 15 ನಿಮಿಷ , ಇನ್ನೊಂದು ಬಾರಿ 30 ನಿಮಿಷ ನ್ಯಾಪ್ ಗೆ ಮೀಸಲಿಟ್ಟಿದ್ದಾನೆ. ಅಂದರೆ ಒಟ್ಟಾರೆ ನಿದ್ದೆ -ವಿಶ್ರಾಂತಿಗೆ ತೆಗೆದಿರಿಸಿರುವ ಸಮಯ ಐದು ಕಾಲು ಗಂಟೆ ಮಾತ್ರ !

ಸೆಲ್ಫ್ ಮೋಟಿವೇಷನ್ ಇಲ್ಲದೆ ಇಂತಹ ಸಮಯ ಪಾಲನೆ ಸಾಧ್ಯವೇ ಇಲ್ಲ. ಹೊರಗಿನಿಂದ ಎಷ್ಟೇ ಪುಶ್ ಮಾಡಿದರೂ ಕೇವಲ ದೈಹಿಕವಾಗಿ ಒಂದೆರೆಡು ದಿನ ಈ ರೊಟಿನ್ ಪಾಲಿಸಬಹುದು ಅಷ್ಟೇ , ಆಂತರ್ಯದ ಕೂಗಾಗಿದ್ದರೆ ಇದು ಶ್ರಮ ಎನ್ನಿಸುವುದೇ ಇಲ್ಲ. ಒತ್ತಾಯಕ್ಕೆ ಅಥವಾ ಅವನ್ಯಾರೋ ಮಾಡಿದ ಎಂದು ಇಂತಹವುಗಳನ್ನು ಮಾಡಲು ಸಾಧ್ಯವಿಲ್ಲ. ಇದಕ್ಕೆ ಬೇಕಾಗಿರುವುದು ಇಚ್ಚಾಶಕ್ತಿ , ಮನೋಬಲ , ಜಗತ್ತನ್ನು ಗೆಲ್ಲಬಲ್ಲೆ ಎನ್ನುವ ಆತ್ಮವಿಶ್ವಾಸ. ಬದುಕಿನಲ್ಲಿ ಕೊರತೆಗಳನ್ನು ತುಂಬಿಕೊಳ್ಳುವ ಕನಸು , ಹೊಟ್ಟೆಯ ತಳದಿಂದ ಹುಟ್ಟುವ ಹಸಿವು ಇರುವರಿಂದ ಮಾತ್ರ ಇಂತಹ ಟೈಮ್ ಟೇಬಲ್ ಪಾಲಿಸಲು ಸಾಧ್ಯ. ಸೆಲ್ಫ್ ಮೇಡ್ ವ್ಯಕ್ತಿಗಳಲ್ಲಿ ಬಹುತೇಕರು ಸಾಯುವ ತನಕ ಇಂತಹ ಹಸಿವನ್ನು ಉಳಿಸಿಕೊಳ್ಳುತ್ತಾರೆ.

ಸರಿ -ತಪ್ಪುಗಳ ತಕ್ಕಡಿಯಲ್ಲಿ ಇದನ್ನು ತೂಗಲು ಸಾಧ್ಯವಿಲ್ಲ, ಅದರಲ್ಲೂ ಭಾರತದಂತಹ ದೇಶದಲ್ಲಿ ಈ ರೀತಿ ತುಲನೆಗೆ ಹಾಕೆವುದು ತಪ್ಪು. ಆದರೆ ನಮ್ಮ ಪೋಷಕರು ಗೊತ್ತಲ್ಲ , ಒಬ್ಬ ಮಾಡಿದ ಎಂದು ಲಕ್ಷಾಂತರ ಹುಡುಗರನ್ನು ಇದೆ ರೊಟಿನ್ ಪಾಲಿಸಿ ಎನ್ನುತ್ತಾರೆ. ಇದು ಹುಚ್ಚುತನ. ಭಾರತದಲ್ಲಿನ ಶಿಕ್ಷಣ ವ್ಯವಸ್ಥೆ ದಿನದಿಂದ ದಿನಕ್ಕೆ ಏಳುಸುತ್ತಿನ ಕೋಟೆಯನ್ನಾಗಿ ಮಾಡುತ್ತಿದ್ದಾರೆ. ಮಕ್ಕಳಿಗೆ ಅನವಶ್ಯಕ ಸ್ಟ್ರೆಸ್ ಸೃಷ್ಟಿಸಲಾಗುತ್ತಿದೆ. ಅದೇಕೋ ಗೊತ್ತಿಲ್ಲ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿದೆ. ನಿಮ್ಮ ಮಗು ವಿಜ್ಞಾನ ತೆಗೆದುಕೊಂಡಿಲ್ಲ ಎಂದರೆ ಆ ಮಗು ಎರಡನೇ ದರ್ಜೆ ಎನ್ನುವಂತೆ ಸಮಾಜ ಪಟ್ಟ ಕಟ್ಟುತ್ತದೆ. ಎಲ್ಲರೂ ವಿಜ್ಞಾನ ತೆಗೆದುಕೊಂಡರೆ ಬೇರೆ ಕೆಲಸಗಳಿಗೆ ಜನರನ್ನು ಎಲ್ಲಿಂದ ತರೋಣ ? ಒಂದು ವಲಯದಲ್ಲಿ ಒಂದಿಬ್ಬರು ಗೆದ್ದರೆ ಸಾಕು ಕುರಿಗಳಂತೆ ಮಕ್ಕಳನ್ನು ಅದೇ ಕೋರ್ಸ್ಗಳಿಗೆ ಮಕ್ಕಳನ್ನು ಸೇರಿಸಲು ಶುರು ಮಾಡುತ್ತಾರೆ. ನಮ್ಮ ಮಗುವಿನ ಶಕ್ತಿ , ಸಾಮರ್ಥ್ಯ , ಇಚ್ಚೆಗಳ ಬಗ್ಗೆ ನಾವು ಮಾತನಾಡುವುದಿಲ್ಲ.

ಶಾಲೆ ಕಾಲೇಜು ನಡೆಸುವರಿಗೆ ಬೇಕಾಗಿರುವುದು ಬುದ್ದಿಯನ್ನು ಒತ್ತೆ ಇಟ್ಟು , ಅವರು ಮಾಡಿದರು ಎಂದು ಕಣ್ಮುಚ್ಚಿ ಮಾಡುವ ಪೋಷಕರು ! ಹೀಗಾಗಿ ಇವೆಲ್ಲವೂ ಅವರಿಗೆ ಲಾಭದಾಯಕ. ಇಲ್ಲಿನ ಸಮಾಜದ ಹುಚ್ಚಾಟವನ್ನು ನೋಡಿ ನಾನು ಮತ್ತು ರಮ್ಯ , ಅನನ್ಯಳಿಗೆ ಕಾಮರ್ಸ್ ತೆಗೆದುಕೋ ಮಗಳೇ ಎಂದೆವು. ಅವಳಿಗೆ ವಿಜ್ಞಾನ ಓದುವ ಬಯಕೆ. ಯಾವುದನ್ನೂ ಇನ್ನೂ ನಿರ್ಧಾರ ಮಾಡದೆ ಉಳಿಸಿಕೊಂಡಿದ್ದೇವೆ. ಆದರೆ ವಿಜ್ಞಾನ ಮೊದಲ ದರ್ಜೆ , ಕಾಮರ್ಸ್ ಎಂದರೆ ದ್ವಿತೀಯ ಎನ್ನುವ ಸಮಾಜದ ಬಕ್ವಾಸ್ ನೋಟಗಳಿಗೆ ನಮ್ಮ ಮನೆಯಲ್ಲಿ ಕವಡೆ ಕಾಸಿನ ಕಿಮ್ಮತ್ತೂ ಇಲ್ಲ. ಯಾವುದನ್ನೇ ಆಗಲಿ ಇಷ್ಟಪಟ್ಟು , ಶ್ರದ್ದೆಯಿಂದ ಮಾಡಬೇಕು ಎನ್ನುವುದಷ್ಟೆ ನಾವು ಅನನ್ಯಳಿಗೆ ಹೇಳಿಕೊಡುತ್ತಿರುವ ಪಾಠ . ಜೊತೆಗೆ ಅವಳನ್ನು ಈ ಹುಚ್ಚು ಸ್ಪರ್ಧೆಯಲ್ಲಿ ಭಾಗವಹಿಸಲು ಬಿಟ್ಟಿಲ್ಲ , ಬಿಡುವುದೂ ಇಲ್ಲ. ಫಲಿತಾಂಶದ ಬಗ್ಗೆ ಯೋಚನೆ ಮಾಡಬಾರದು , ಮಾಡುವ ಕೆಲಸವನ್ನು ಸರಿಯಾಗಿ ಮಾಡಿದರೆ ಫಲಿತಾಂಶ ಪೂರಕವಾಗಿರುತ್ತದೆ , ಹೀಗಾಗಿ ಫಲಿತಾಂಶ ಬಗ್ಗೆ ಚಿಂತೆ ಬೇಡ ಎನ್ನುವುದನ್ನು ಅವಳಿಗೆ ಮನನ ಮಾಡಿಸಿದ್ದೇವೆ.

ಎಲ್ಲಕ್ಕೂ ಮುಖ್ಯವಾಗಿ ಅವಳಿಗೆ ತಿಳಿಸಿರುವುದು , (ಅದು ನಮ್ಮ ಜೀವನ ಮಂತ್ರವೂ ಆಗಿದೆ) ಬದುಕಿನ ಮೂಲ ಉದ್ದೇಶ ಖುಷಿಯಾಗಿರುವುದು , ಸಂತೋಷವಾಗಿರುವುದು . ಮೂಲ ಉದ್ದೇಶವನ್ನು ಮರೆತು ಬದುಕನ್ನು ಎತ್ತೆತ್ತಲೋ ಸಾಗಿಸಿಕೊಂಡು ಹೋಗುವುದರಿಂದ ಪ್ರಯೋಜನವಿಲ್ಲ ಎನ್ನುವುದು. ಮನಸ್ಸನ್ನು ಉಲ್ಲಾಸದಾಯಕವಾಗಿ , ಖುಷಿಯಾಗಿ ಇಟ್ಟು ಕೊಂಡರೆ ಅಲ್ಲಿಗೆ ಅರ್ಧ ಜಯ ಸಿಕ್ಕಂತೆ , ಉಳಿದರ್ಧ ಸಮಯದ ಆಟ .

ನೆನಪಿರಲಿ :ಸ್ವಸ್ಥ ಮನ ಗೆಲ್ಲುವುದೆಲ್ಲವನ್ನ !

( ಬರಹ: ರಂಗಸ್ವಾಮಿ ಮೂಕನಹಳ್ಳಿ, ಲೇಖಕರು, ಬೆಂಗಳೂರು)

IPL_Entry_Point