2nd Puc Exams: ಈ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ ಪಿಯು ಪರೀಕ್ಷೆ 2:45 ಗಂಟೆ ಮಾತ್ರ-examinations news karnataka cut down 2nd puc examination time for 15 only 2 45 hour will be exam timings mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  2nd Puc Exams: ಈ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ ಪಿಯು ಪರೀಕ್ಷೆ 2:45 ಗಂಟೆ ಮಾತ್ರ

2nd Puc Exams: ಈ ವರ್ಷದಿಂದ ದ್ವಿತೀಯ ಪಿಯುಸಿ ಪರೀಕ್ಷಾ ಅವಧಿ 15 ನಿಮಿಷ ಕಡಿತ: ಇನ್ನು ಮುಂದೆ ಪಿಯು ಪರೀಕ್ಷೆ 2:45 ಗಂಟೆ ಮಾತ್ರ

ಕರ್ನಾಟಕದಲ್ಲಿ ದ್ವಿತೀಯ ಪರೀಕ್ಷೆಗಳ ಸಮಯದಲ್ಲಿ ಕಡಿತ ಮಾಡಲಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಈ ಸಂಬಂಧ ಸಮಯ ಬದಲಾವಣೆಯ ಸುತ್ತೋಲೆ ಹೊರಡಿಸಿದೆ.ವರದಿ: ಎಚ್‌.ಮಾರುತಿ. ಬೆಂಗಳೂರು

ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಸಮಯ ಕಡಿತವಾಗಿದೆ.
ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಸಮಯ ಕಡಿತವಾಗಿದೆ.

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷಾ ಅವಧಿಯನ್ನು 15 ನಿಮಿಷ ಕಡಿತಗೊಳಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ.ದ್ವಿತೀಯ ಪಿಯು ಲಿಖಿತ ಪರೀಕ್ಷೆಯಲ್ಲಿ ಮತ್ತೊಂದು ಪ್ರಯೋಗಕ್ಕೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮುಂದಾಗಿದೆ. ಹೊಸ ನಿಯಮ ಅನುಷ್ಠಾನಗೊಳಿಸಲು ಮಂಡಳಿ ಸಜ್ಜಾಗಿದ್ದು, ದ್ವಿತೀಯ ಪಿಯು ಪರೀಕ್ಷೆ ಅವಧಿ ಇಳಿಕೆ ಮಾಡಿ ಸುತ್ತೋಲೆ ಹೊರಡಿಸಿದೆ. ಈ ಮೂಲಕ ದ್ವಿತೀಯ ಪಿಯು ವಿದ್ಯಾರ್ಥಿಗಳ ಪರೀಕ್ಷೆ ಬರೆಯುವ ಸಮಯದ ಅವಧಿ ಕಡಿಮೆಯಾಗಲಿದೆ.

ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಪರೀಕ್ಷಾ ಅವಧಿ 2 ಗಂಟೆ 45 ನಿಮಿಷ ಇರಲಿದೆ. ಇದುವರೆಗೆ ಪರೀಕ್ಷಾ ಅವಧಿ 3 ಗಂಟೆ ಅವಧಿ ಇರುತ್ತಿತ್ತು.

ಪರೀಕ್ಷೆಗೆ ಉತ್ತರ ಬರೆಯುವ ಅವಧಿಯನ್ನು 2 ಗಂಟೆ 45 ನಿಮಿಷಗಳಿಗೆ ನಿಗದಿ ಮಾಡಿದ್ದರೂ, ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಓದಿಕೊಳ್ಳಲು ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುತ್ತದೆ. ಈ ಹಿಂದೆ ಪರೀಕ್ಷಾ ಅವಧಿ 3 ಗಂಟೆ ಇದ್ದಾಗಲೂ ಪ್ರಶ್ನೆಗಳನ್ನು ಓದಿಕೊಳ್ಳಲು ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗುತ್ತಿತ್ತು.

ಹಿಂದಿನ ಪರೀಕ್ಷೆಗಳಲ್ಲಿ ಪ್ರತಿ ವಿಷಯದ ಲಿಖಿತ ಪರೀಕ್ಷೆಯನ್ನು 100 ಅಂಕಗಳಿಗೆ ನಡೆಸಲಾಗುತ್ತಿತ್ತು. 2023-24 ನೇ ಸಾಲಿನಿಂದ ಪ್ರಾಯೋಗಿಕ ಪರೀಕ್ಷೆ ಮತ್ತು ಆಂತರಿಕ ಮೌಲ್ಯಮಾಪನಕ್ಕೆ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಿದ್ದ ಕಾರಣ ಲಿಖಿತ ಪರೀಕ್ಷೆಯ ಅಂಕಗಳನ್ನು ಕಡಿತ ಮಾಡಲಾಗಿತ್ತು. ಆದರೆ ಪರೀಕ್ಷಾ ಅವಧಿಯನ್ನು ಕಡಿತಗೊಳಿಸಿರಲಿಲ್ಲ.

ಭೌತ ಶಾಸ್ತ್ರ, ರಸಾಯನ ಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಗೃಹ ವಿಜ್ಞಾನ ಸೇರಿದಂತೆ ಪ್ರಾಯೋಗಿಕ ಪರೀಕ್ಷೆ ಇರುವ ಕೆಲವು ವಿಷಯಗಳಿಗೆ ಲಿಖಿತ ಪರೀಕ್ಷೆಯನ್ನು 70 ಅಂಕಗಳಿಗೆ ಹಾಗೂ ಪ್ರಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಲ್ಲಿ 80 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ.

ವಿದ್ಯಾರ್ಥಿಗಳು 80 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು ಒಟ್ಟು 120 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ 80 ಅಂಕಗಳಿಗೆ ಮಾತ್ರ ಉತ್ತರಿಸಬೇಕು. 70 ಅಂಕಗಳಿಗೆ ಉತ್ತರಿಸಬೇಕಾದ ವಿಷಯಗಳ ಪ್ರಶ್ನೆಪತ್ರಿಕೆಗಳು 105 ಅಂಕಗಳ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಅವುಗಳಲ್ಲಿ 70 ಅಂಕಗಳ ಪ್ರಶ್ನೆಗಳಿಗಷ್ಟೇ ಉತ್ತರಿಸಬೇಕು.

ಆದರೆ ಪರೀಕ್ಷೆ ಬರೆಯುವ ವಿದ್ಯಾರ್ಥಿಯು ಪರೀಕ್ಷಾ ಕೊಠಡಿಯಲ್ಲಿ ಮೂರು ಗಂಟೆ ಕಳೆಯಬೇಕಿದೆ. ಯಾಕೆಂದರೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಯನ್ನು ಓದಿಕೊಳ್ಳಲು 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಬಳಿಕ ಉತ್ತರಿಸಲು 2 ಗಂಟೆ 45 ನಿಮಿಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ.

ಎನ್.ಎಸ್.ಕ್ಯು.ಎಫ್ ಹಾಗೂ ಹಿಂದೂಸ್ತಾನಿ ಸಂಗೀತ ವಿಷಯಗಳಲ್ಲಿ 60/40 ಅಂಕಗಳ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಬೇಕಾದ ಅವಧಿಯನ್ನು ಈ ಹಿಂದಿನಂತೆ 2 ಗಂಟೆ 30 ನಿಮಿಷವನ್ನು ಮುಂದುವರಿಸಲಾಗಿದೆ.

ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸುವಾಗ ಪಠ್ಯ ಹೊರತಾದ ಪ್ರಶ್ನೆಗಳಿಗೆ ಅವಕಾಶ ನೀಡುವಂತಿಲ್ಲ. ಪಠ್ಯಕ್ರಮದಲ್ಲಿ ಇರುವ ವಿಷಯಗಳ ಮೇಲೆ ಮಾತ್ರ ಪ್ರಶ್ನೆಗಳನ್ನು ಸಿದ್ಧಪಡಿಸುವುದು ಕಡ್ಡಾಯ ಎಂದು ಮಂಡಳಿ ಸ್ಪಷ್ಟಪಡಿಸಿದೆ.

(ವರದಿ: ಎಚ್.ಮಾರುತಿ.ಬೆಂಗಳೂರು)

mysore-dasara_Entry_Point