KSRTC Cargo: ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಬುಕ್ ಮಾಡುವುದು ಹೇಗೆ? ಏನೆಲ್ಲಾ ಸೌಲಭ್ಯ ಲಭ್ಯ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Ksrtc Cargo: ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಬುಕ್ ಮಾಡುವುದು ಹೇಗೆ? ಏನೆಲ್ಲಾ ಸೌಲಭ್ಯ ಲಭ್ಯ? ಇಲ್ಲಿದೆ ವಿವರ

KSRTC Cargo: ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಬುಕ್ ಮಾಡುವುದು ಹೇಗೆ? ಏನೆಲ್ಲಾ ಸೌಲಭ್ಯ ಲಭ್ಯ? ಇಲ್ಲಿದೆ ವಿವರ

ಕರ್ನಾಟಕದಲ್ಲಿ ಮತ್ತು ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಸಾರ್ವಜನಿಕರಿಗೆ ಬಸ್ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಸರಕು ಸಾಗಣೆ ಕ್ಷೇತ್ರವನ್ನು ಪ್ರವೇಶಿಸಿದೆ. ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಹೆಸರಿನ ಕಾರ್ಗೋ ಟ್ರಕ್ ಸೇವೆಯನ್ನು ಪರಿಚಯಿಸಲಾಗಿದ್ದು, ಈ ಸೇವೆ ಬುಕ್ ಮಾಡುವುದು ಹೇಗೆ, ದರ ಎಷ್ಟು ಎಂಬಿತ್ಯಾದಿ ವಿವರ ಇಲ್ಲಿದೆ.

ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಸೇವೆ (ಸಾಂಕೇತಿಕ ಚಿತ್ರ)
ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಸೇವೆ (ಸಾಂಕೇತಿಕ ಚಿತ್ರ)

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ದ ಹೊಸ ಉದ್ಯಮ “ನಮ್ಮ ಕಾರ್ಗೋ” ಟ್ರಕ್ ಸೇವೆ ಆರಂಭವಾಗಿದೆ. 20 ಹೊಸ ಕಾರ್ಗೋ ಟ್ರಕ್‌ಗಳೊಂದಿಗೆ ಹೊಸ ಸೇವೆ ಶುರುಮಾಡಿರುವ ಕೆಎಸ್‌ಆರ್‌ಟಿಸಿ, ಈ ಸೇವೆಯನ್ನು ರಾಜ್ಯ ಪ್ರಮುಖ ನಗರಗಳಲ್ಲಿ ಲಭ್ಯವಾಗುವಂತೆ ಮಾಡಿದೆ.

ಕರ್ನಾಟಕ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶನಿವಾರ (ಡಿ.23) ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಸೇವೆಗೆ ಚಾಲನೆ ನೀಡಿದರು. ಇನ್ನೊಂದು ತಿಂಗಳಲ್ಲಿ ಟ್ರಕ್‌ಗಳ ಸಂಖ್ಯೆ 10ಕ್ಕೆ ಏರಲಿದೆ. ಒಂದು ವರ್ಷದ ಅವಧಿಯಲ್ಲಿ 500 ಟ್ರಕ್‌ಗಳು ನಮ್ಮ ಕಾರ್ಗೋ ಸೇವೆಗೆ ಸೇರ್ಪಡೆಯಾಗಲಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಇದೇ ವೇಳೆ ಹೇಳಿದರು.

ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣವನ್ನು ಈ ಟ್ರಕ್‌ಗಳ ಕಾರ್ಯಾಚರಣೆಗೆ, ನಿರ್ವಹಣೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಉಳಿದ ಜಾಗವನ್ನು ಸರ್ಕಾರದ ವಿವಿಧ ಕಂಪನಿಗಳಿಗೆ ನೀಡಿ ಸರ್ಕಾರಕ್ಕೆ ಬರುವ ವಾಣಿಜ್ಯ ಆದಾಯ ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ವಿವರಿಸಿದ್ದಾರೆ.

ನಮ್ಮ ಕಾರ್ಗೋ ಟ್ರಕ್‌ಗಳ ನಿರ್ವಹಣೆಗಾಗಿ ಕೆಎಂಎಸ್‌ ಕೋಚ್‌ ಬಿಲ್ಡರ್ಸ್‌ ಪ್ರೈವೇಟ್ ಲಿಮಿಟೆಡ್‌ ಜತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಎರಡು ತಿಂಗಳ ಅವಧಿಗೆ ಬಾಡಿಗೆಗೆ ಟ್ರಕ್‌ ಸರ್ವೀಸ್‌ ಅನ್ನು ಕಂಪನಿಯಿಂದ ಪಡೆಯಲಾಗುತ್ತಿದೆ. ಇದೇ ರೀತಿ ಎಸ್.ಎಂ.ಕಣ್ಣಪ್ಪ ಆಟೋಮೊಬೈಲ್ಸ್ ಜತೆಗೂ ಒಡಂಬಡಿಕೆ ಮಾಡಿಕೊಂಡು ಈ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಾದ್ಯಂತ ಕೆಎಸ್ಆರ್‌ಟಿಸಿ ನಮ್ಮ ಕಾರ್ಗೋ ಸೇವೆ ಲಭ್ಯವಿದೆ. ಸದ್ಯ ಬೆಂಗಳೂರು, ಮೈಸೂರು, ತುಮಕೂರು, ಹಾಸನ, ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಕೋಲಾರ ಮತ್ತು ದಾವಣಗೆರೆಗಳಿಂದ ಕರ್ನಾಟಕದ ವಿವಿಧ ಭಾಗಗಳಿಗೆ ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೊ ಸೇವೆ ಲಭ್ಯವಿದೆ. ಟ್ರಕ್‌ಗಳು ಮುಚ್ಚಿದ ಕಂಟೇನರ್‌ಗಳಾಗಿದ್ದು, ಸರಕು ಸಾಗಣೆಗೆ ಅಗತ್ಯ ವೈಶಿಷ್ಟ್ಯ, ಸುರಕ್ಷಿತ ವ್ಯವಸ್ಥೆಯನ್ನು ಹೊಂದಿದೆ. ಜಿಪಿಎಸ್ ಟ್ರ್ಯಾಕಿಂಗ್ ಕೂಡ ಇದ್ದು, ವೇಗದ ಮತ್ತು ವಿಶ್ವಾಸಾರ್ಹ ರೀತಿಯ ಸರಕು ಸಾಗಣೆ ಸೇವೆಯೇ ನಮ್ಮ ಕಾರ್ಗೊ ಸೇವೆಯ ಗಮನಸೆಳೆಯುವ ಅಂಶ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಟ್ರಕ್‌ ಸೇವೆಗೆ ನಿಗದಿಪಡಿಸಿರುವ ಸರಕುಸಾಗಣೆ ದರವು ಹೀಗಿದೆ-

ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಸೇವೆಗೆ ಒಂದು ಕಿ.ಮೀ. ನಿಂದ 100 ಕಿ.ಮೀ. ತನಕ ಸೇವೆಗೆ ಕನಿಷ್ಠ ದರ 5,000 ರೂಪಾಯಿ ನಿಗದಿ ಮಾಡಲಾಗಿದೆ. ಈ ಸೇವೆಯ ಗರಿಷ್ಠ ಅವಧಿ 12 ಗಂಟೆ ಆಗಿದ್ದು, ಕನಿಷ್ಠ ಸಾಗಣೆ ದೂರ 100 ಕಿ.ಮೀ. ನಿಗದಿ ಮಾಡಲಾಗಿದೆ. ಪ್ರತಿ ಕಿ.ಮೀ.ಗೆ 50 ರೂಪಾಯಿ ದರ ನಿಗದಿ ಮಾಡಿದೆ.

ಇದೇ ರೀತಿ, 1ರಿಂದ 200 ಕಿ.ಮೀ. ತನಕದ ಸರಕು ಸಾಗಣೆಗೆ ಪ್ರತಿ ಕಿ.ಮೀ. 40 ರೂಪಾಯಿ ಮತ್ತು ಕನಿಷ್ಠ ಸಂಚಾರ ದೂರ 200 ಕಿ.ಮೀ. ಈ ಸಂಚಾರದ ಪ್ರಯಾಣದ ಅವಧಿ 24 ಗಂಟೆ (ಹೊರಟ ಸಮಯದಿಂದ 24 ಗಂಟೆ ಅವಧಿ) ಆಗಿದ್ದು, ಕನಿಷ್ಠ ಬಾಡಿಗೆ 8,000 ರೂಪಾಯಿ ಎಂದು ನಿಗದಿ ಮಾಡಿದೆ.

ಇನ್ನು 200 ಕಿ.ಮೀ.ಗಿಂತ ಹೆಚ್ಚಿನ ದೂರದ ಸರಕು ಸಾಗಣೆ ಸೇವೆಗೆ ಕನಿಷ್ಠ ಬಾಡಿಗೆ ದರ 8,000 ರೂಪಾಯಿ ಇರಲಿದ್ದು, ಬಾಡಿಗೆ ಪ್ರತಿ ಕಿ.ಮೀ. 35 ರೂಪಾಯಿ ಇರಲಿದೆ. ಇಲ್ಲಿ ಕನಿಷ್ಠ ಕಿ.ಮೀ. ಲೆಕ್ಕ ಇರುವುದಿಲ್ಲ.

ಕೆಎಸ್ಆರ್‌ಟಿಸಿ ನಮ್ಮ ಕಾರ್ಗೋ ಸೇವೆ ಬುಕ್ ಮಾಡುವುದು ಹೇಗೆ

ಕೆಎಸ್‌ಆರ್‌ಟಿಸಿ ನಮ್ಮ ಕಾರ್ಗೋ ಸೇವೆ ಬುಕ್‌ ಮಾಡುವುದಕ್ಕೆ ಮತ್ತು ಹೆಚ್ಚಿನ ಮಾಹಿತಿ ಪಡೆಯುವುದಕ್ಕೆ ಜನರು ಕೆಎಸ್‌ಆರ್‌ಟಿಸಿ ಕಾಲ್‌ ಸೆಂಟರ್‌ನ ದೂರವಾಣಿ ಸಂಖ್ಯೆ 080-26252625 ಕ್ಕೆ ಕರೆ ಮಾಡಬಹುದು. ಅಥವಾ logistics@ksrtc.org ಈ ಇಮೇಲ್‌ ಐಡಿಗೆ ಮಿಂಚಂಚೆ ಕೂಡ ಮಾಡಬಹುದು.

Whats_app_banner