ಕನ್ನಡ ಸುದ್ದಿ  /  Karnataka  /  Explained Is Census Necessary How Census Link To Womens Reservation Bill Need Of Census In Ls 2024 News In Kannada Mrt

Census: ಜನಗಣತಿಯ ಅಗತ್ಯ; 12 ವರ್ಷಗಳಲ್ಲಿ ಬದಲಾದ ನಗರ ಮತ್ತು ಗ್ರಾಮೀಣ ಚಿತ್ರಣ

2021ರಲ್ಲಿ ನಡೆಯದ ಜನಗಣತಿ. ಮಹಿಳಾ ಮೀಸಲಾತಿ ಮತ್ತು ದೇಶದ ಅಭಿವೃದ್ಧಿ ಕೆಲಸಗಳ ಜಾರಿಗೆ ಸಹಾಯಕ. ಕಳೆದ 12 ವರ್ಷಗಳಲ್ಲಿ ನಗರ ಮತ್ತು ಗ್ರಾಮೀಣ ಚಿತ್ರಣ ಬದಲಾಗಿದೆ. ಜನಗಣತಿ ಏಕೆ ಅನಿವಾರ್ಯ ಗೊತ್ತೇ? ಈ ಲೇಖನ ಓದಿ.

ಜನಗಣತಿಯ ಅಗತ್ಯ; 12 ವರ್ಷಗಳಲ್ಲಿ ಬದಲಾದ ನಗರ ಮತ್ತು ಗ್ರಾಮೀಣ ಚಿತ್ರಣ
ಜನಗಣತಿಯ ಅಗತ್ಯ; 12 ವರ್ಷಗಳಲ್ಲಿ ಬದಲಾದ ನಗರ ಮತ್ತು ಗ್ರಾಮೀಣ ಚಿತ್ರಣ

ಇತ್ತೀಚೆಗೆ ಸಂಸತ್‍ನಲ್ಲಿ ಮಹಿಳಾ ಮೀಸಲು ಮಸೂದೆ ಜಾರಿಯಾಗಿದೆ. ಆದರೆ ಈ ಮಸೂದೆ ಜಾರಿಯಾಗಲು ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಜನಗಣತಿ ನಡೆದ ನಂತರ ಮತ್ತು ಕ್ಷೇತ್ರ ಪುನರ್ ವಿಂಗಡನೆ ಪ್ರಕ್ರಿಯೆ ನಡೆದ ನಂತರ ಜಾರಿಯಾಗುತ್ತದೆ ಎಂಬ ಷರತ್ತುಗಳನ್ನು ವಿಧಿಸಲಾಗಿದೆ. ಬಹುಶಃ 2021ರಲ್ಲಿ ಜನಗಣತಿ ನಡೆದಿದ್ದರೆ 2024ರ ಲೋಕಸಭಾ ಚುನಾವಣೆಯಲ್ಲೇ ಶೇ.33ರಷ್ಟು ಸ್ಥಾನಗಳಲ್ಲಿ ಮಹಿಳಾ ಸದಸ್ಯರನ್ನು ಕಾಣಬಹುದಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಕೇವಲ ಇದೊಂದು ಕಾರಣಕ್ಕೆ ಜನಗಣತಿ ಆದಷ್ಟೂ ಬೇಗನೆ ನಡೆಯಬೇಕೆಂದು ಹೇಳುತ್ತಿಲ್ಲ. ದೇಶದ ಸರ್ವತೋಮುಖ ಏಳಿಗೆಗೆ ಈಗಲಾದರೂ ಜನಗಣತಿ ಬೇಗನೆ ನಡೆಸುವ ಅವಶ್ಯಕತೆ ಇದೆ. 1911 ರಿಂದ ನಿರಂತರವಾಗಿ ಜನಗಣತಿ ನಡೆದುಕೊಂಡು ಬರುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ನಿಂತಿಲ್ಲ. ಆದರೆ ಕೋವಿಡ್ ಕಾರಣಕ್ಕಾಗಿ 2021ರಲ್ಲಿ ನಡೆಯಬೇಕಾಗಿದ್ದ ಜನಗಣತಿಯನ್ನು ಮುಂದೂಡಲಾಗಿತ್ತು. ಕೋವಿಡ್ ಮುಗಿದು 3 ವರ್ಷಗಳಾದರೂ ಕೇಂದ್ರ ಸರ್ಕಾರ ಜನಗಣತಿ ನಡೆಸಲು ಮೀನಮೇಷ ಎಣ ಸುತ್ತಿರುವುದು ಏಕೆಂದು ತಿಳಿಯುತ್ತಿಲ್ಲ. ಇತ್ತ ಪ್ರತಿಪಕ್ಷಗಳೂ ಈ ವಿಷಯವನ್ನು ಗಂಭೀರವಾಗಿ ಪರಿಗಣ ಸದಿರುವುದು ದುರ್ದೈವದ ವಿಷಯವೇ ಸರಿ.

ಜನಗಣತಿ ನಡೆಸುವುದಕ್ಕೂ ಮುನ್ನ ಕೆಲವು ಪೂರ್ವಭಾವಿ ಪ್ರಕ್ರಿಯೆಗಳನ್ನು ಕೈಗೊಳ್ಳಬೇಕಾಗಿರುತ್ತದೆ. ಜನಗಣತಿ ನಡೆಸುವ ಹೊಣೆಗಾರಿಕೆ ಹೊತ್ತಿರುವ ರಿಜಿಸ್ಟ್ರಾರ್ ಜನರಲ್ ಕಚೇರಿಯು ಮನೆಗಳ ಪಟ್ಟಿಯನ್ನು ಸಿದ್ದಪಡಿಸುವ ಪಟ್ಟಿಯನ್ನು ಸಿದ್ದಪಡಿಸಿಲ್ಲ. ಸಿಬ್ಬಂದಿಗೆ ತರಬೇತಿ ನೀಡಿಲ್ಲ.

ಜನಗಣತಿ ಏಕೆ ಅವಶ್ಯಕ?

ಆಡಳಿತದ ವಿವಿಧ ಉದ್ದೇಶಗಳಿಗೆ, ವಿವಿಧ ವರ್ಗಗಳ ಅಭಿವೃದ್ಧಿಗೆ ಜನಗಣತಿ ಅತ್ಯಾವಶ್ಯಕ. ಇಡೀ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನಸಂಖ್ಯೆ ಎಷ್ಟು ಎಂದು ನಿಖರವಾಗಿ ತಿಳಿದುಬರುತ್ತದೆ. ಜನರಿಗೆ ಒದಗಿಸಿರುವ ಸೌಲಭ್ಯಗಳ ಮಾಹಿತಿ, ಅವರ ಜೀವನ ಕ್ರಮ, ಸಾಕ್ಷರತೆ, ಶುದ್ದ ಕುಡಿಯುವ ನೀರು, ಸಾಮಾಜಿಕ ಆರ್ಥಿಕ ಪರಿಸ್ಥಿತಿ, ಫಲವಂತಿಕೆ, ವಿವಿಧ ವಯೋಮಾನದ ಜನಸಂಖ್ಯೆಯ ಮಾಹಿತಿ ತಿಳಿಯಲು ಸಾಧ್ಯ. ಇದರಿಂದ ಸರ್ಕಾರ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯಕವಾಗುತ್ತದೆ. ಎಲ್ಲೆಲ್ಲಿ ಯಾವ ಯಾವ ಯೋಜನೆಗಳನ್ನು ಹಮ್ಮಿಕೊಳ್ಳಬೇಕು, ಯಾವ ಯಾವ ಸೌಲಭ್ಯಗಳನ್ನು ಒದಗಿಸಬೇಕೆಂದು ತಿಳಿದು ಬರುತ್ತದೆ. ಇದರಿಂದ ಸರ್ಕಾರಕ್ಕೂ ಸಹಾಯಕವಾಗುತ್ತದೆ.

ಈಗ ಎಲ್ಲ ಕಾರ್ಯಕ್ರಮಗಳಿಗೂ 2021ರ ಜನಸಂಖ್ಯೆಯ ದತ್ತಾಂಶಗಳನ್ನೇ ಮಾನದಂಡವನ್ನಾಗಿ ಅನುಸರಿಸಲಾಗುತ್ತಿದೆ. ವೈಜ್ಞಾನಿಕವಾಗಿ ಇದು ಸರಿಯಾದ ಕ್ರಮ ಅಲ್ಲ. ಕಳೆದ ಒಂದು ದಶಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿವೆ. ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು ನಗರ ಪ್ರದೇಶಗಳು ವಿಸ್ತಾರವಾಗಿವೆ. ಉದಾಹರಣೆಗೆ 2001-2011ರ ಅವಧಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶೇ.49.3ರಷ್ಟು ಬೆಳೆದಿದೆ. ಮುಂಬೈ ಪಾಲಿಕೆ ಶೇ. 11.9, ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಶೇ.11.7 ಮತ್ತು ಗ್ರೇಟ್ ಚೆನ್ನೈ ಕಾರ್ಪೋರೇಷನ್ ಶೇ.7ರಷ್ಟು ವಿಸ್ತಾರವಾಗಿ ಬೆಳೆದಿದೆ.

2011ರಿಂದ 2023ರವರೆಗೆ ಏನೆಲ್ಲಾ ಬದಲಾವಣೆಗಳಾಗಿರಬಹುದು?

ಇನ್ನು ಕೋವಿಡ್ ಸಮಯದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಎಂದು ಸ್ಪಷ್ಟವಾಗಿ ಯಾರೂ ಹೇಳುತ್ತಿಲ್ಲ. ಅದರಲ್ಲೂ ವೃದ್ಧರು ಹೆಚ್ಚಿನ ಪ್ರಮಾಣದಲ್ಲಿ ಮೃಪಟ್ಟಿರುವುದಂತೂ ಸತ್ಯ. ಈ ಎಲ್ಲ ಮಾಹಿತಿಗಳನ್ನು ತಿಳಿಯಬೇಕಾದರೆ ಜನಗಣತಿ ಅನಿವಾರ್ಯ ಮತ್ತು ಅತ್ಯಾವಶ್ಯಕವೂ ಹೌದು. ಒಂದು ಪ್ರದೇಶದಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕಾದರೆ ಜನಗಣತಿಯ ಮಾಹಿತಿ ಬೇಕಲ್ಲವೇ? ಆಸ್ಪತ್ರೆ, ಶಾಲಾ ಕಾಲೇಜುಗಳನ್ನು ಆರಂಭಿಸಲು, ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ಅವಶ್ಯಕ. ಇಂತಹ ಅನೇಕ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಜನಗಣತಿಯ ಆಧಾರದ ಮೇಲೆ ಮಾತ್ರ ಸಾಧ್ಯ. ತನ್ನ ಹುಳುಕುಗಳು ಬೆಳಕಿಗೆ ಬರುತ್ತವೆ ಎಂದು ಸರ್ಕಾರ ಜನಗಣತಿಯನ್ನು ಮುಂದೂಡುವುದು ತಪ್ಪು. ಮುಂದೆ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಹೊಸ ಜನಗಣತಿ ಅನಿವಾರ್ಯ.

ಮತ್ತೆ ಮಹಿಳಾ ಮೀಸಲು ವಿಷಯಕ್ಕೆ ಬರೋಣ. ಜನಗಣತಿ ನಡೆದು ಎಲ್ಲ ಅಂಶಗಳನ್ನು ಕ್ರೋಢೀಕರಿಸಿ ಅಂತಿಮ ವರದಿಯನ್ನು ಸಿದ್ಧಪಡಿಸಲು ವರ್ಷಗಳೇ ಹಿಡಿಯುತ್ತವೆ. ನಂತರ ಈ ಅಂಶಗಳ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡಣೆಯಾಗಬೇಕು. ತದನಂತರ ಮಹಿಳಾ ಮೀಸಲಾತಿ ಜಾರಿಗೆ ಬರುತ್ತದೆ. ಇಷ್ಟು ಪ್ರಕ್ರಿಯೆಗಳು ನಡೆಯಲು ಒಂದೆರಡು ವರ್ಷಗಳೂ ಸಾಕಾಗುವುದಿಲ್ಲ. ಬಹುಶಃ 2029ರ ಲೋಕಸಭಾ ಚುನಾವಣೆಯಲ್ಲೂ ಮಹಿಳಾ ಮೀಸಲಾತಿ ಜಾರಿಗೆ ಬಾರದು ಎಂಬ ಸಂಶಯ ಈಗಾಗಲೇ ಮೂಡಿದೆ. ಸರ್ಕಾರದ ನಡೆ ಸಂಶಯಗಳಿಗೆ ಆಸ್ಪದ ಮಾಡಿಕೊಡಬಾರದು. ನೇರ ಮತ್ತು ಸ್ಪಷ್ಟವಾಗಿರಬೇಕು. ನೆಪ ಮಾತ್ರಕ್ಕೆ ಮೀಸಲು ಮಸೂದೆ ಜಾರಿಗೊಳಿಸಿ ಕಡತದಲ್ಲೇ ಉಳಿಸಿಕೊಂಡರೆ ಏನು ಪ್ರಯೋಜನ? 2024ರ ಲೋಕಸಭಾ ಚುನಾವಣೆ ಮುಗಿದು ಹೊಸ ಸಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮೊದಲ ಆದೇಶ ಜನಗಣತಿ ನಡೆಸುವುದೇ ಆಗಿರಬೇಕು. ಇದು ದೇಶದ ಒತ್ತಾಯವೂ ಹೌದು!

(ವರದಿ: ಎಚ್.ಮಾರುತಿ)

ವಿಭಾಗ