Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟ, 2ಎ ಮೀಸಲಾತಿ ಮತ್ತು ರಾಜಕೀಯ, ಯಾರು ಏನು ಹೇಳಿದರು ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಕರ್ನಾಟಕ  /  Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟ, 2ಎ ಮೀಸಲಾತಿ ಮತ್ತು ರಾಜಕೀಯ, ಯಾರು ಏನು ಹೇಳಿದರು ಇಲ್ಲಿದೆ ವಿವರ

Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟ, 2ಎ ಮೀಸಲಾತಿ ಮತ್ತು ರಾಜಕೀಯ, ಯಾರು ಏನು ಹೇಳಿದರು ಇಲ್ಲಿದೆ ವಿವರ

Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟದ ಕಾವು ಹೆಚ್ಚಳವಾಗುತ್ತಿದ್ದು, 2 ಎ ಮೀಸಲಾತಿ ಮತ್ತು ರಾಜಕೀಯ ಅಂಶಗಳು ಗಮನಸೆಳೆಯುತ್ತಿವೆ. ಈ ಹೋರಾಟಕ್ಕೆ ಸಂಬಂಧಿಸಿದ ಲೆಕ್ಕಾಚಾರ ಮತ್ತು ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಪಂಚಮಸಾಲಿ ಲಿಂಗಾಯತರ ಹೋರಾಟ ಮುಂದುವರಿದಿದ್ದು, ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಇಷ್ಟಕ್ಕೂ 2ಎ ಮೀಸಲಾತಿ ಮತ್ತು ರಾಜಕೀಯದ ವಿವರ ಏನು,, ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.
ಪಂಚಮಸಾಲಿ ಲಿಂಗಾಯತರ ಹೋರಾಟ ಮುಂದುವರಿದಿದ್ದು, ಬಸವ ಜಯಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಇಷ್ಟಕ್ಕೂ 2ಎ ಮೀಸಲಾತಿ ಮತ್ತು ರಾಜಕೀಯದ ವಿವರ ಏನು,, ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

Panchamasali Lingayat; ಪಂಚಮಸಾಲಿ ಲಿಂಗಾಯತರ ಹೋರಾಟ ಮುಂದುವರಿದಿದೆ. ಅವರ 2ಎ ಮೀಸಲಾತಿ ವಿಚಾರ ರಾಜಕೀಯವಾಗಿ ಪ್ರಾಮುಖ್ಯವಾಗಿ ಪರಿಗಣಿಸಲ್ಪಟ್ಟಿದೆ. ಪಂಚಮಸಾಲಿ ಲಿಂಗಾಯತರ ಕೂಡಲಸಂಗಮ ಪಂಚಮಸಾಲಿ ಮಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ಹೋರಾಟದ ನೇತೃತ್ವವಹಿಸಿದ್ದು, ಪ್ರತಿಭಟನೆಯ ಕಾವನ್ನು ಉಳಿಸಿಕೊಂಡು ಮುಂದುವರಿಸಿದ್ದಾರೆ. ಸರ್ಕಾರ ಈ ಪ್ರತಿಭಟನೆಯ ಕಾವು ತಗ್ಗಿಸುವುದಕ್ಕೆ ನಾನಾ ರೀತಿಯಲ್ಲಿ ಪ್ರಯತ್ನಿಸಿರುವುದು ಕೂಡ ಗಮನಸೆಳೆದಿದೆ. ಕರ್ನಾಟಕದಲ್ಲಿ ರಾಜಕೀಯವಾಗಿ ಲಿಂಗಾಯತ ಸಮಾಜ ಪ್ರಭಾವಿಯಾಗಿದ್ದು, ಈ ಪೈಕಿ ಪಂಚಮಸಾಲಿಗಳು ಕೃಷಿಕರು. ಲಿಂಗಾಯತ ಸಮಾಜದ ಶೇಕಡ 70ರಷ್ಟು ಇವರಿದ್ದು, ಜನಸಂಖ್ಯೆ 85 ಲಕ್ಷ ಎಂದು ಹೇಳಿಕೊಳ್ಳುತ್ತಾರೆ. ಇದು ಕರ್ನಾಟಕದ ಜನಸಂಖ್ಯೆಯ ಶೇಕಡ 14 ಆಗಿದ್ದು, ಕರ್ನಾಟಕದ ವಿಧಾಸಭೆಯ 224 ಸ್ಥಾನಗಳ ಪೈಕಿ ಕನಿಷ್ಠ 90-100 ಸ್ಥಾನಗಳಲ್ಲಿ ನಿರ್ಣಾಯಕರು.

ಪಂಚಮಸಾಲಿಗಳಿಗೆ 2ಎ ಮೀಸಲಾತಿ; ಪರಿಸ್ಥಿತಿ ಏನಿದೆ, 4 ಅಂಶಗಳು

1) ಭಾರತದಲ್ಲಿ ಹಿಂದುಳಿದವರಿಗೆ (ಒಬಿಸಿ) ಮೀಸಲಾತಿ ಶೇಕಡ 27 ಇದೆ. ಕರ್ನಾಟಕದಲ್ಲಿ ಮುಸ್ಲಮರಿಗೂ ಶೇಕಡ 4 ಮೀಸಲಾತಿ ಸೇರಿದಾಗ ಒಬಿಸಿ ಮೀಸಲಾತಿ ಶೇಕಡ 32. ಇದರಲ್ಲಿ ಶೇಕಡ 17 ಎಸ್‌ಸಿಗೆ, ಶೇಕಡ 7 ಎಸ್‌ಟಿಗೆ ಮೀಸಲು ಸೇರಿಸಿ ಒಟ್ಟು ಮೀಸಲಾತಿ ಪ್ರಮಾಣ ಶೇಕಡ 56 ಇದೆ. ಇದು ಸುಪ್ರೀಂ ಕೋರ್ಟ್‌ ವಿಧಿಸಿದ ಮಿತಿಗಿಂತ ಶೇಕಡ 6 ಹೆಚ್ಚು.

2) ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಒಬಿಸಿ ಮೀಸಲಾತಿ ಶೇಕಡ 32ರಲ್ಲಿ ಕೆಟಗರಿ 1ರ ಹಿಂದುಳಿದ ಜಾತಿಗೆ 4, 2ಎಗೆ 15, 2ಬಿ ಮುಸಲ್ಮಾನರ ಕೋಟಾ ರದ್ದುಗೊಳಿಸಿ, 2 ಸಿ ಒಕ್ಕಲಿಗ ಮತ್ತು ಇತರೆ 6+, 2ಡಿ ಲಿಂಗಾಯತ ಇತರೆ 7+ ಎಸ್‌ಸಿ 17, ಇಡಬ್ಲ್ಯುಎಸ್‌ 4 ಸೇರಿ ಒಟ್ಟು ಶೇಕಡ 66 ಮೀಸಲಾತಿ ರಚನೆ ಮರುಹೊಂದಿಸಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್ ತಡೆ ಹಿಡಿದಿದೆ. ಹಾಗಾಗಿ ಹಳೆ ವ್ಯವಸ್ಥೆ ಮುಂದುವರಿದಿದೆ.

3) 2ಎ ವರ್ಗದಲ್ಲಿ ಮೀಸಲಾತಿಗೆ ಒತ್ತಾಯಿಸಿ ಪಂಚಮಸಾಲಿ ಸಮುದಾಯದವರು ಮಂಗಳವಾರ (ಡಿಸೆಂಬರ್ 10) ಕರ್ನಾಟಕದ ಬೆಳಗಾವಿಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ದಾಟಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

4) ಪಂಚಮಸಾಲಿ ಲಿಂಗಾಯತ ಸಮುದಾಯದವರ ಹೋರಾಟದಲ್ಲಿ ಈ ಸಮುದಾಯದ ಶಾಸಕರೂ ಪಾಲ್ಗೊಂಡಿದ್ದು, ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದಾಗ ಕೆಲವರಿಗೆ ಗಾಯಗಳಾಗಿದ್ದವು. ಈ ಘಟನೆ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಪೊಲೀಸರು ಸ್ವತಃ ಕಲ್ಲುತೂರಾಟ ನಡೆಸಿ ಪ್ರತಿಭಟನೆಯ ಹಾದಿ ತಪ್ಪಿಸಿದರು ಎಂದು ಜಯಮೃತ್ಯುಂಜಯ ಸ್ವಾಮೀಜಿ ಆರೋಪಿಸಿದರು. ಸ್ವಾಮೀಜಿಗೂ, ಸಿಎಂಗೂ ಕಾನೂನು ಒಂದೇ. ತಪ್ಪಿತಸ್ಥರ ವಿರುದ್ಧ ಶಿಕ್ಷೆ ಆಗುತ್ತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಂಚಮಸಾಲಿಗಳಿಗೆ 2ಎ ಮೀಸಲಾತಿ; ಇತ್ತೀಚೆಗೆ ಯಾರು ಏನು ಹೇಳಿದ್ದಾರೆ

1) "ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಶಾಸಕರಾದ ಬಾಬಾಸಾಹೇಬ ಪಾಟೀಲ, ರಾಜು ಕಾಗೆ, ಚನ್ನರಾಜ ಹಟ್ಟಿಹೊಳಿ 2ಎ ಮೀಸಲಾತಿಗೆ ಆಗ್ರಹಿಸಿ ನಾವು ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಆ ಕಾಂಗ್ರೆಸ್ ನಾಯಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೇಳಿ. ನಿಮ್ಮ ತಾಕತ್ತು ತೋರಿಸಿ" ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

2) ಪಂಚಮಸಾಲಿ ಮೀಸಲಾತಿ ಹೋರಾಟವು ಬಿಜೆಪಿಯವರ ನಾಟಕ. ಬಿಜೆಪಿಯವರು ಪಂಚಮಸಾಲಿ ಸಮುದಾಯಕ್ಕೆ ಟೋಪಿ ಹಾಕಿದೆ. ಪಂಚಮಸಾಲಿ ಮೀಸಲಾತಿ ಹೋರಾಟ ಅಸಾಂವಿಧಾನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

3) ಬಸವಣ್ಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹೊಗಳುವ ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿತ್ತು. ಆದರೆ, ಕಳೆದ 2 ವರ್ಷಗಳಿಂದ ನಮ್ಮ ಮೀಸಲಾತಿ ಬೇಡಿಕೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡುವ ಮೂಲಕ ಅದು ತಪ್ಪು ಎಂದು ಸಾಬೀತುಪಡಿಸುತ್ತಿದ್ದಾರೆ. ನಮಗೆ ಮೀಸಲಾತಿ ನೀಡಲು ಬಯಸದಿದ್ದರೆ, ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ಸಿಎಂ ಆಗಿ ಬೇರೆ ಯಾರಾದರೂ ಬರುತ್ತಾರೆ. ಅವರ ಬಳಿ ಕೇಳುತ್ತೇವೆ. ಅದೇ ರೀತಿ ನ್ಯಾಯ ಸಿಗಲು ಬೇರೆ ದಾರಿ ಹುಡುಕುತ್ತೇವೆ. ನಾವು ಜನರ ಬಳಿಗೆ ಹೋಗುತ್ತೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

4) ಪಂಚಮಸಾಲಿ ಮೀಸಲಾತಿ ಹೋರಾಟದ ವೇಳೆ ಹೋರಾಟಗಾರರ ಮೇಲೆ ಗೋಲಿ ಬಾರ್ ಮಾಡಲು ಸಂಚು ಮಾಡಿದ್ದರು. ಜಯ ಮೃತ್ಯುಂಜಯ ಸ್ವಾಮೀಜಿಯವರ ಹತ್ಯೆಗೆ ಪೊಲೀಸರು ಸಂಚು ರೂಪಿಸಿದರು ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾಗಿ ಸುವರ್ಣ ನ್ಯೂಸ್ ಶನಿವಾರ ವರದಿ ಮಾಡಿದೆ.

Whats_app_banner