Explainer: ಎತ್ತಿನ ಹೊಳೆ ಯೋಜನೆ ಕೊನೆಗೂ ಜಾರಿ, ಬೆಂಗಳೂರು ಭಾಗ ಸೇರಿ 7 ಜಿಲ್ಲೆಗಳಿಗೆ ಸಿಗಲಿದೆ ನೀರು; ಮನೆಗೆ ನೀರು ಬರಲು ಕಾಯಬೇಕು 3 ವರ್ಷ
ಪಶ್ವಿಮಾಭಿಮುಖವಾಗಿ ಹರಿಯುವ ನದಿಗಳ ವಾರ್ಷಿಕ 24.01 ಟಿ.ಎಂ.ಸಿ ಪ್ರವಾಹದ ನೀರನ್ನು ಸಕಲೇಶಪುರದಿಂದ ಕರ್ನಾಟಕದ ಪೂರ್ವಭಾಗಕ್ಕೆ ತಿರುಗಿಸಿ, ಕುಡಿಯುವ ನೀರಿನ ತೀವ್ರ ಆಭಾವ ಎದುರಿಸುತ್ತಿರುವ ಹಾಸನ, ಚಿಕ್ಕಮಗಳೂರು, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಿಗೆ ನೀರು ಒದಗಿಸುವ ಯೋಜನೆಯೇ ಎತ್ತಿನಹೊಳೆ( Ettinahole project)
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ದಟ್ಟಾರಣ್ಯ, ಹಸಿರ ನಡುವೆ ಹುಟ್ಟಿ ಕರಾವಳಿ ಕಡೆಗೆ ಹರಿಯುವ ಎತ್ತಿನ ಹೊಳೆ ಎಂಬ ನದಿಯ ನೀರನ್ನು ಬರದ ನಾಡಿಗೆ ತರುವ ಯೋಜನೆಯೇ ಎತ್ತಿನ ಹೊಳೆ ಯೋಜನೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು, ತುಮಕೂರು, ರಾಮನಗರ ಜಿಲ್ಲೆಗಳ ಸಹಿತ ಹಲವು ಭಾಗಗಳಿಗೆ ಎತ್ತಿನ ಹೊಳೆ ಯೋಜನೆಯಿಂದ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯಿಂದಾಗಿ ಮುಂದಿನ ಮೂರು ವರ್ಷದೊಳಗೆ ಮಲೆನಾಡು, ಬಯಲುಸೀಮೆ ಭಾಗದ ಜನರಿಗೆ ಪಶ್ಚಿಮ ಘಟ್ಟಗಳ ಸಾಲಿನ ಕುಡಿಯುವ ನೀರು ಸಿಗಲಿದೆ. ಎತ್ತಿನ ಹೊಳೆ ಏತನೀರಾವರಿ ಯೋಜನೆಯಿಂದಲೂ ಹಾಸನ, ಚಿಕ್ಕಮಗಳೂರು ಭಾಗದವರ ನೀರಾವರಿಗೂ ನೆರವಾಗಲಿದೆ. ಹಲವಾರು ದಶಕಗಳ ಹಿಂದೆಯೇ ಯೋಜಿಸಿದ್ದ ಈ ಯೋಜನೆಗೆ ಹತ್ತು ವರ್ಷದ ಹಿಂದೆ ಅಂದರೆ 2014ರಲ್ಲಿ ಚಾಲನೆ ಸಿಕ್ಕಿತ್ತು. ಆಗ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಈಗ ಅವರೇ ಎರಡನೇ ಬಾರಿ ಸಿಎಂ. ಅವರ ಅವಧಿಯಲ್ಲಿಯೇ ಎತ್ತಿನಹೊಳೆ ಯೋಜನೆ ಬಳಕೆಗೆ ಬರುತ್ತಿದೆ.ಅಂದರೆ ಮೊದಲನೇ ಹಂತದ ಕಾಮಗಾರಿಗೆ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿಯಲ್ಲಿ ಶುಕ್ರವಾರ ಚಾಲನೆ ಸಿಗುವ ಸಂತಸ. 8 ಸಾವಿರ ಕೋಟಿ ರೂ.ಗಳಿಂದ ಆರಂಭಗೊಂಡ ಯೋಜನೆ ಈಗ 24 ಸಾವಿರ ಕೋಟಿ ರೂ.ಗೆ ತಲುಪಿದೆ.
ಅಂತರ್ಜಲ ಮರುಪೂರಣಕ್ಕಾಗಿ ಈ ಭಾಗಗಳಲ್ಲಿನ ಸುಮಾರು 527 ಸಣ್ಣ ನೀರಾವರಿ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ 50 ರಷ್ಟು ನೀರು ತುಂಬಿಸುವ ಉದ್ದೇಶಿತ ಯೋಜನೆಯೂ ಹೌದು.
ಎತ್ತಿನ ಹೊಳೆ ಎಂಬ ಕಿರು ನದಿ
ಎತ್ತಿನಹೊಳೆ ಎನ್ನುವುದು ಕಿರು ನದಿ. ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಕರಾವಳಿ ಭಾಗದಲ್ಲಿ ಸೇರುವ ನದಿ. ಎತ್ತಿನಹೊಳೆ ನೇತ್ರಾವತಿ ನದಿಯ ಪ್ರಮುಖ ಉಪನದಿಗಳಲ್ಲೊಂದು. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಉಗಮಿಸುವ ನದಿ ಅಲ್ಲಿಂದ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಿ ಗುಂಡ್ಯ ಮತ್ತು ಕುಮಾರಧಾರಾ ನದಿಯ ಮೂಲಕ ನೇತ್ರಾವತಿಯಲ್ಲಿ ವಿಲೀನವಾಗುತ್ತದೆ. ಎತ್ತಿನಹೊಳೆ ನದಿಯ ಜಲಾನಯನ ಪ್ರದೇಶ 65.80 ಚ.ಕಿ.ಮಿ.
ಮರಕಡಿತ, ಪುನರ್ ಹಸುರೀಕರಣ
ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ಮುಖ್ಯ ಕಾರಣ ಅರಣ್ಯ ನಾಶ. ಪರಿಸರವಾದಿಗಳು ಕಾಳಜಿ ವ್ಯಕ್ತಪಡಿಸಿ ವಿರೋಧ ದಾಖಲಿಸಿದ್ದರು. ಪಶ್ಚಿಮ ಘಟ್ಟದ ಒಂದು ಭಾಗವನ್ನೇ ಹಾಳು ಮಾಡುವುದು ಬೇಡ ಎನ್ನುವ ಆಕ್ಷೇಪವಿತ್ತು. ಯೋಜನೆಗಾಗಿ 20,185 ಮರಗಳನ್ನು ಕಡಿಯಲಾಗಿದೆ. ಇದಕ್ಕೆ ಪರಿಹಾರವಾಗಿ ಅಲ್ಲಲ್ಲಿ ನೆಡುತೋಪುಗಳನ್ನು ಬೆಳೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಕಡಿತ ಮಾಡಿದ ಮರಗಳ ಬದಲಿಗೆ 28 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಪರಿಹಾರಾತ್ಮಕವಾಗಿ ನೆಡುತೋಪು ಬೆಳೆಸಲಾಗಿದೆ. 40 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಪೀನಲ್ ಪರಿಹಾರಾತ್ಮಕ ನೆಡುತೋಪು ನೆಡಲಾಗಿದೆ.ಇದಕ್ಕಾಗಿ 2020-21 ನೇ ಸಾಲಿನ ಅಂತ್ಯದ ವರೆಗೆ 32.16 ಲಕ್ಷ ಹಾಗೂ 37.66 ಲಕ್ಷ ವೆಚ್ಛ ಭರಿಸಲಾಗಿದೆ ಎನ್ನುವುದು ಅರಣ್ಯ ಇಲಾಖೆಯ ವಿವರಣೆ.
ಯೋಜನೆ ಪೂರ್ವಾಪರ
- ಎತ್ತಿನಹೊಳೆ ಯೋಜನೆಯ ಒಟ್ಟು ಉದ್ದ 290 ಕಿಲೋಮೀಟರ್. ಇದರಲ್ಲಿ 261 ಕಿ.ಮೀ ಯೋಜನೆಯಲ್ಲಿ ನೀರು ಹರಿಯೋ ಕಾಲುವೆಯ ಉದ್ದ. ಅದರಲ್ಲಿ ಗುರುತ್ವಾಕರ್ಷಣೆ ಬಲದ ಮೂಲವೇ 261 ಕಿ.ಮೀ ವರೆಗೂ ಸಕಲೇಶಪುರ ತಾಲ್ಲೂಕಿನ ಹೆಬ್ಬನಹಳ್ಳಿ ಬಳಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ವರೆಗೆ ನೀರು ಹರಿಯಲಿದೆ.
- ಈಗಾಗಲೇ ಮೂಲದಿಂದ ಬೇಲೂರು ತಾಲ್ಲೂಕಿನ ಐದಳ್ಳ ಕಾವಲುವೆರೆಗೂ ಸುಮಾರು 42 ಕಿ.ಮೀ ನೀರು ಸರಾಗವಾಗಿ ಹರಿಯಲು ಅಗತ್ಯ ಕಾಮಗಾರಿ ಮುಗಿದಿದೆ. ಆದರೆ ಐದಳ್ಳ ಕಾವಲು ಬಳಿ ಐದು ಕಿಲೋಮೀಟರ್ ಅರಣ್ಯ ಭೂಮಿಯಲ್ಲಿ ಕಾಲುವೆ ಹೋಗಬೇಕಿರುವುದರಿಂದ ಅಲ್ಲಿ ಕಾಮಗಾರಿ ಆಗಿಲ್ಲ.
- 32ನೇ ಕಿ.ಮೀನಲ್ಲಿ ನೀರನ್ನ ಬೇರೆಡೆ ತಿರುಗಿಸಿ ಚಿತ್ರದುರ್ಗ ಜಿಲ್ಲೆಯ ವಾಣಿವಿಲಾಸ ಸಾಗರದತ್ತ ಹರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
- ಈ ಯೋಜನೆಯಡಿ 126 ಕಿಲೋಮೀಟರ್ ಪೈಪ್ ಲೈನ್ ಮೂಲಕ ನೀರು ಹರಿದರೆ ಉಳಿದಂತೆ 140 ಕಿ.ಮೀ ನಷ್ಟು ಪ್ರಮಾಣದಲ್ಲಿ ತೆರೆದ ಕಾಲುವೆಗಳ ಮೂಲಕ ನೀರು ಹರಿದು ಗುರಿಮುಟ್ಟಲಿದೆ. ಈಗ 162 ಕಿಲೋಮೀಟರ್ ಕಾಲುವೆ ಕೆಲಸ ಸಂಪೂರ್ಣವಾಗಿ ಮುಗಿದಿದ್ದರೆ, 25 ಕಿ.ಮೀ ಕೆಲಸ ಪ್ರಗತಿಯಲ್ಲಿದೆ.
- 50 ಕಿ,ಮೀ, ಪ್ರದೇಶದಲ್ಲಿ 19 ಕಿ.ಮೀ ಅರಣ್ಯ ಪ್ರದೇಶದಲ್ಲಿದ್ದು ಆ ಪ್ರದೇಶದ ಕೆಲಸ ಕೂಡ ಬಾಕಿ ಇದ್ದು 502 ಎಕರೆ ಬದಲಿ ಭೂಮಿ ನೀಡಿ ಅರಣ್ಯ ಪ್ರದೇಶದಲ್ಲಿ ಕೆಲಸ ಆರಂಭಿಸುವ ಪ್ರಯತ್ನ ಮುಂದುವರಿದಿದೆ.ನೀರು ಮೇಲೆತ್ತಲು ಬೇಕಾದ 9 ಪಂಪ್ ಹೌಸ್, 8 ಸಬ್ ಸ್ಟೇಷನ್‌ಗಳನ್ನು ರಚಿಸಲಾಗಿದೆ.
- 5.75 ಟಿ.ಎಂ.ಸಿ ಸಂಗ್ರಹಣಾ ಸಾಮರ್ಥ್ಯದ ಭೈರಗೊಂಡ್ಲು ಜಲಾಶಯ ನಿರ್ಮಾಣ ಕಾಮಗಾರಿಯೂ ಅಡೆತಡೆಗಳ ನಡುವೆ ನಡೆದಿದೆ. ಇದರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಕೊರಟಗೆರೆ ತಾಲ್ಲೂಕಿನ ರೈತರು ದೊಡ್ಡಬಳ್ಳಾಪುರ ತಾಲ್ಲೂಕಿನ ರೈತರಿಗೆ ನೀಡುವ ಪರಿಹಾರ ದರದಂತೆ ಅವರಿಗೂ ಸಹಾ ಏಕರೂಪ ಪರಿಹಾರ ದರ ನೀಡಲು ಒತ್ತಾಯಿಸಿದ್ದರಿಂದ ಕಾಮಗಾರಿಗಳಿಗೆ ಅಡತಡೆ ಉಂಟಾಗಿದೆ. ಈ ಕಾರಣದಿಂದಾಗಿ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ವಿಳಂಬವಾಗಿದೆ. ಈ ಕುರಿತು ಸೂಕ್ತ ಪ್ರಸ್ತಾವನೆಯನ್ನು ತುಮಕೂರು ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಸಲ್ಲಿಸಿದ್ದು, ಪ್ರಸ್ತಾವನೆಯು ಸರ್ಕಾರದ ಮಟ್ಟದಲ್ಲಿ ಪರಿಶೀಲನೆ ಹಂತದಲ್ಲಿದೆ.
- ಇದಲ್ಲದೇ ಭೈರಗೊಂಡ್ಲು ಜಲಾಶಯದಿಂದ ನೀರನ್ನು ಎತ್ತಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಫೀಡರ್‌ಗಳಿಗೆ ನೀರನ್ನು ಒದಗಿಸುವ ಲಿಫ್ಟ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಕೋಲಾರ, ಶ್ರೀನಿವಾಸಪುರ (ಚಿಕ್ಕಬಳ್ಳಾಪುರ ಫೀಡರ್ ಕಾಲುವೆ ಸೇರಿದಂತೆ) ಫೀಡರ್ ಕಾಲುವೆಗಳ ಕೆಲಸವೂ ಮುಂದುವರಿದಿದೆ.
- ಇಡೀ ಯೋಜನೆಯನ್ನು ನೀರೆತ್ತೋ ತೊಟ್ಟಿಗಳು, ಗುರುತ್ವ ಕಾಲುವೆ, ಸಮತೋಲನ ಜಲಾಶಯ ಮತ್ತು ಪೈಪ್ ಲೈನ್ಗಳಾಗಿ ನಾಲ್ಕು ಭಾಗವಾಗಿ ವಿಂಗಡಿಸಿ ಯೋಜನೆ ಜಾರಿ ಮಾಡಲಾಗುತ್ತಿದೆ. ಇದಕ್ಕಾಗಿ ವಿವಿಧ ಭಾಗದ ಎಂಟು ಜಲ ಮೂಲಗಳಿಂದ ನೀರು ಹರಿಸಲು ಎಂಟು ಪೈಪ್ ಲೈನ್ ರಚಿಸಲಾಗಿದೆ. ಅಧಿಕಾರಿಗಳ ನೀಡುವ ಮಾಹಿತಿ ಪ್ರಕಾರ 2027ರ ವೇಳೆಗೆ ಈ ಯೋಜನೆ ಸಂಪೂರ್ಣ ಮುಗಿದು ಉದ್ದೇಶಿತ ಜಿಲ್ಲೆಗಳಿಗೆ ನೀರು ಹರಿಯಲಿದೆ ಎನ್ನುವ ನಿರೀಕ್ಷೆಯಿದೆ.