Explainer: ಕರ್ನಾಟಕ ತಮಿಳುನಾಡು ನಡುವೆ ಕಾವೇರಿ ವಿವಾದ 1700 ರಿಂದ 2023ರ ತನಕ ಏನೇನಾಯಿತು, ಇತಿಹಾಸದ ಕಡೆಗೊಂದು ಇಣುಕುನೋಟ
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರಿನ ವಿವಾದ ಇಂದು ನಿನ್ನೆಯದಲ್ಲ. ಇದಕ್ಕೆ ಶತಮಾನದ ಇತಿಹಾಸವಿದೆ. 1700ರಿಂದ 2023ರ ತನಕದ ಪ್ರಮುಖ ವಿದ್ಯಮಾನಗಳ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಮಳೆಯ ಕೊರತೆ ಕಾರಣ ಬಹುತೇಕ ತಾಲೂಕುಗಳಲ್ಲಿ ಬರಪರಿಸ್ಥಿತಿ ಇರುವಂತಹ ಸನ್ನಿವೇಶದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಮಂಗಳವಾರ (ಸೆ.26) ಬೆಂಗಳೂರು, ರಾಮನಗರ ಮತ್ತು ಇತರ ಕೆಲವು ಕಡೆ ಬಂದ್ ಮತ್ತು ಪ್ರತಿಭಟನೆ ನಡೆಯಿತು. ಆದಾಗ್ಯೂ ಈ ಕಾವೇರಿ ನೀರು ವಿವಾದ ಇಂದು ನಿನ್ನೆಯದಲ್ಲ.
ಕಾವೇರಿ ವಿವಾದ ಈಗ ತಾರಕಕ್ಕೇರಿದ್ದು ಯಾಕೆ ಎಂಬ ಪ್ರಶ್ನೆಯನ್ನು ಅವಲೋಕಿಸುವುದಾದರೆ, ಈ ವರ್ಷ ಮಳೆಯ ಕೊರತೆ ಕಾಡಿದೆ. ಜಲಾಶಯಗಳಲ್ಲಿ ನೀರು ಭರ್ತಿಯಾಗಿಲ್ಲ. ಈ ನಡುವೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 21ರಂದು ಎತ್ತಿಹಿಡಿಯಿತು. ಅದಾಗಿ, ಸೆಪ್ಟೆಂಬರ್ 27ರ ತನಕ ನಿತ್ಯವೂ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತ್ತು.
ಇದರೊಂದಿಗೆ ಕಾವೇರಿ ಕೊಳ್ಳದ ಜನರಲ್ಲಿ ಆತಂಕ ಶುರುವಾಯಿತು. ಬೆಂಗಳೂರಲ್ಲಿ ಕುಡಿಯುವ ನೀರಿನ ಚಿಂತೆಗೂ ಕಾರಣವಾಯಿತು. ಸರ್ಕಾರವನ್ನು ಎಚ್ಚರಿಸುವುದಕ್ಕಾಗಿ ಪ್ರತಿಭಟನೆಗಳು ಶುರುವಾದವು. ಬೆಂಗಳೂರು ಬಂದ್ ಆಯಿತು. ಕರ್ನಾಟಕ ಬಂದ್ ಕೂಡ ಆಯಿತು ಎನ್ನಿ.
ಈಗಾಗಲೇ ಹೇಳಿದಂತೆ ಈ ವಿವಾದಕ್ಕೆ ಹೆಚ್ಚು ಕಡಿಮೆ 150 ವರ್ಷಗಳ ಇತಿಹಾಸವಿದೆ. ತಮಿಳುನಾಡು ಮತ್ತು ಕರ್ನಾಟಕದವರು ತಮ್ಮ ವಾದವನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಭೌಗೋಳಿಕತೆ ಮತ್ತು ಜಲವಿಜ್ಞಾನದ ನೆಲೆಯಲ್ಲಿ ಹುಟ್ಟಿಕೊಂಡ ವಿವಾದ ಇದು. ಹವಾಮಾನ ಬಿಕ್ಕಟ್ಟು ಉಲ್ಬಣವಾದಂತೆ ಈ ವಿವಾದ ತೀವ್ರವಾಗುತ್ತ ಹೋಗುತ್ತಿದೆ.
ಕಾವೇರಿ ವಿವಾದವನ್ನು ನೋಡುವಾಗ ಗಮನಿಸಬೇಕಾದ ಭೌಗೋಳಿಕ ವಿಚಾರ
ಕಾವೇರಿಯು ಕೊಡಗು ಜಿಲ್ಲೆಯ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಗಳ ಜಲಾನಯನ ಪ್ರದೇಶದಿಂದ ಪ್ರಾರಂಭವಾಗುತ್ತದೆ. ಧರ್ಮಪುರಿ ಜಿಲ್ಲೆಯಲ್ಲಿ ತಮಿಳುನಾಡಿಗೆ ಪ್ರವೇಶಿಸುವ ಮೊದಲು ಕರ್ನಾಟಕದ ನಾಲ್ಕು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಕಾವೇರಿ ನದಿಗೆ ಕರ್ನಾಟಕದಲ್ಲಿ 9, ತಮಿಳುನಾಡಿನಲ್ಲಿ 12 ಉಪನದಿಗಳು ಸೇರಿ 21 ಪ್ರಮುಖ ಉಪನದಿಗಳನ್ನು ಹೊಂದಿದೆ. ಗೋದಾವರಿ ಮತ್ತು ಕೃಷ್ಣಾ ನಂತರ ದಕ್ಷಿಣ ಭಾರತದ ಮೂರನೇ ಅತಿದೊಡ್ಡ ನದಿ ಕಾವೇರಿ. ತಮಿಳುನಾಡಿನ ದೊಡ್ಡ ನದಿಯೂ ಹೌದು.
ಕಾವೇರಿ ನದಿ ಮುಖಜ ಭೂಮಿಯಲ್ಲಿ ಭತ್ತ ಮುಖ್ಯ ಬೆಳೆಯಾಗಿರುವ ಎರಡು ರಾಜ್ಯಗಳ ರೈತರಿಗೆ ಈ ನದಿ ನೀರು ನಿರ್ಣಾಯಕ ಜಲಸಂಪನ್ಮೂಲ. ಕರ್ನಾಟಕದಲ್ಲಿ ಖಾರಿಫ್ (ಮುಂಗಾರು ಬಿತ್ತನೆ) ಮತ್ತು ರಬಿ (ಚಳಿಗಾಲ) ಎರಡು ಋತುಗಳಿದ್ದರೆ, ತಮಿಳುನಾಡಿನ ರೈತರು ಕುರುವೈ (ಜೂನ್-ಸೆಪ್ಟೆಂಬರ್), ತಾಲಾಡಿ (ಅಕ್ಟೋಬರ್-ಡಿಸೆಂಬರ್), ಮತ್ತು ಸಾಂಬಾ (ಆಗಸ್ಟ್-ಜನವರಿ) ಮೂರು ಬೆಳೆಗಳನ್ನು ಹೊಂದಿದ್ದಾರೆ ಎಂದು ಮಂಡ್ಯದ 71 ವರ್ಷದ ಲಕ್ಷ್ಮಣ ಗೌಡ ಕೃಷಿ ವ್ಯವಸ್ಥೆಯ ಚಿತ್ರಣ ನೀಡಿದರು.
ಕಾವೇರಿ ನೀರು ನಿರ್ವಹಣಾ ಸಮಿತಿಯು ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಅಂದಿನಿಂದ ಅಂದರೆ, ಆಗಸ್ಟ್ 17ರಿಂದಲೇ ಮಂಡ್ಯದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಪೈಕಿ ಲಕ್ಷ್ಮಣಗೌಡರೂ ಒಬ್ಬರು.
ನೀರು ಹಂಚಿಕೆಯ ವಿವಾದದ ಇತಿಹಾಸ
ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನದಿ ನೀರು ಹಂಚಿಕೆ ವಿವಾದ ತೀವ್ರವಾಗಿದೆ. ನದಿ ನೀರು ಹಂಚಿಕೆಯ ವಿವಾದ ಇದೊಂದು ಮಾತ್ರ ಅಲ್ಲ. ಭಾರತದಲ್ಲಿ ನದಿ ನೀರು ಹಂಚಿಕೆ ಕುರಿತ ವಿವಾದ ಇನ್ನಷ್ಟು ಇವೆ. ಪಂಜಾಬ್ ಮತ್ತು ಹರಿಯಾಣ ನಡುವೆ ಸಟ್ಲೆಜ್ ನದಿ ನೀರು ಹಂಚಿಕೆ ವಿವಾದ, ಒಡಿಶಾ ಮತ್ತು ಛತ್ತೀಸ್‌ಗಡ ನಡುವೆ ಮಹಾನದಿ ನೀರು ಹಂಚಿಕೆ ವಿವಾದ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ನಡುವೆ ಗೋದಾವರಿ ನದಿ ನೀರು ಹಂಚಿಕೆ, ಕೇರಳ ಮತ್ತು ತಮಿಳುನಾಡು ನಡುವೆ ಪೆರಿಯಾರ್ ನದಿ ನೀರು ಹಂಚಿಕೆ, ಕರ್ನಾಟಕ ಮತ್ತು ಗೋವಾ ನಡುವೆ ಮಹದಾಯಿ ನದಿ ನೀರು ಹಂಚಿಕೆಗಳು ಪ್ರಮುಖ.
ಕೇಂದ್ರ ಸರ್ಕಾರವು ಈ ಎಲ್ಲ ನದಿ ವಿವಾದಗಳನ್ನು ಬಗೆಹರಿಸಲು 1956ರಲ್ಲಿ ಅಂತಾರಾಜ್ಯ ಜಲವಿವಾದ ಇತ್ಯರ್ಥ ಕಾರ್ಯದೆಯನ್ನು ಜಾರಿಗೆ ತಂದಿತ್ತು. ಆದರೆ ಕಾವೇರಿ ಜಲ ವಿವಾದ ಈ ಕಾನೂನು ಅಂಗೀಕರಿಸುವ ಕನಿಷ್ಠ 75 ವರ್ಷ ಮುಂಚಿತವಾಗಿಯೆ ಚಾಲ್ತಿಯಲ್ಲಿತ್ತು ಎಂಬುದನ್ನು ಗಮನಿಸಬೇಕು.
ಬ್ರಿಟಿಷರ ಆಳ್ವಿಕೆ ಇದ್ದಾಗ, 19 ನೇ ಶತಮಾನದ ಮಧ್ಯಭಾಗದಲ್ಲಿ ಮೈಸೂರು ಮತ್ತು ಮದ್ರಾಸ್ ರಾಜ್ಯಗಳ ಮೇಲೆ ನಿಯಂತ್ರಣ ಸಾಧಿಸಿದರು. ಈ ಅವಧಿಯಲ್ಲಿ ಕಾವೇರಿ ನೀರನ್ನು ಬಳಸಿಕೊಳ್ಳಲು ಹಲವು ಪ್ರಸ್ತಾವನೆಗಳು ಬಂದಿದ್ದವು. ಆದಾಗ್ಯೂ, 1870 ರ ದಶಕದ ಮಧ್ಯಭಾಗದಲ್ಲಿ ತೀವ್ರ ಬರ ಮತ್ತು ನಂತರದ ಕ್ಷಾಮದಿಂದಾಗಿ ಈ ಯೋಜನೆಗಳನ್ನು ಸ್ಥಗಿತವಾದವು.
ಮೈಸೂರು ಸಾಮ್ರಾಜ್ಯದಲ್ಲಿ ನೀರಾವರಿ ಯೋಜನೆಗಳು
ಮೈಸೂರು ಸಾಮ್ರಾಜ್ಯ 1881 ರಲ್ಲಿ ಈ ನೀರಾವರಿ ಯೋಜನೆಗಳ ಬೇಡಿಕೆಯನ್ನು ಪುನರುತ್ಥಾನಗೊಳಿಸಲು ನಿರ್ಧರಿಸಿತು. ಆ ಹೊತ್ತಿಗೆ, ಮೈಸೂರಲ್ಲಿ ಸ್ಥಳೀಯ ಅರಸರ ಆಳ್ವಿಕೆ ಇತ್ತು. ಆದರೆ ತಮಿಳುನಾಡು ಮದ್ರಾಸ್ ಪ್ರೆಸಿಡೆನ್ಸಿಯ ಆಡಳಿತದಲ್ಲಿ ಉಳಿದಿತ್ತು. ನೀರಾವರಿ ಯೋಜನೆಗಳನ್ನು ಪುನರುಜ್ಜೀವನಗೊಳಿಸುವ ಮೈಸೂರಿನ ಯೋಜನೆಗಳು ಮದ್ರಾಸ್ ಪ್ರೆಸಿಡೆನ್ಸಿಯ ಪ್ರತಿರೋಧಕ್ಕೆ ಒಳಗಾಯಿತು.
“ಯಾವುದೇ ಜಲಾಶಯ ನಿರ್ಮಾಣವು ಮದ್ರಾಸ್ ಪ್ರೆಸಿಡೆನ್ಸಿಯ ಹಿತಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಭಯ ಬ್ರಿಟಿಷರಲ್ಲಿ ಯಾವಾಗಲೂ ಇತ್ತು. ವಾಸ್ತವವಾಗಿ, ಈ ಭಯ ಕೇವಲ ಬ್ರಿಟಿಷರಿಗಷ್ಟೇ ಅಲ್ಲ, ಚೋಳರ ಕಾಲದಲ್ಲಿ ಅವರಿಗೂ ಇತ್ತು. ಅವರ ಸೈನಿಕರು ಕೂಡ ರೈತರು ನಿರ್ಮಿಸಿದ ಅಣೆಕಟ್ಟುಗಳನ್ನು ನಾಶಪಡಿಸುತ್ತಿದ್ದರು. 1701 ರಲ್ಲಿ, ಕನ್ನಂಬಾಡಿ ಅಣೆಕಟ್ಟನ್ನು ಚಿಕ್ಕ ದೇವರಾಜ ಒಡೆಯರ್ ಮೊದಲು ನಿರ್ಮಿಸಿದರು. ಇದು ಸುಮಾರು 30 ಅಡಿ ಎತ್ತರವಿತ್ತು. ಆದರೆ ತಮಿಳಿಗರು ಅದನ್ನು ಹಾಳು ಮಾಡಿದರು. ಮೈಸೂರು ಸಾಮ್ರಾಜ್ಯದಲ್ಲಿ ಜಲಾಶಯಗಳ ಬೇಡಿಕೆ ಹಳೆಯದು. 1794 ರ ಹಿಂದಿನ ಪರ್ಷಿಯನ್ ಶಾಸನವಿದೆ. ಅಲ್ಲಿ ಟಿಪ್ಪು ಸುಲ್ತಾನ್ ಕಾವೇರಿಗೆ ಅಡ್ಡಲಾಗಿ ಮೊಹಿ ಅಣೆಕಟ್ಟಿನ ಅಡಿಪಾಯವನ್ನು ಹಾಕಿದ್ದ ಎಂಬ ಉಲ್ಲೇಖವಿದೆ ಎಂದು ನೀರಾವರಿ ತಜ್ಞ ಎನ್.ನರಸಿಂಹಪ್ಪ ಹೇಳಿದ್ದಾಗಿ HT ಕನ್ನಡದ ಮಾತೃತಾಣ ಹಿಂದೂಸ್ತಾನ್ ಟೈಮ್ಸ್ ವರದಿ ಹೇಳಿದೆ.
ಮದ್ರಾಸ್ ಪ್ರೆಸಿಡೆನ್ಸ್ ಮತ್ತು ಮೈಸೂರು ಸಂಸ್ಥಾನದ ನಡುವೆ 1892ರ ಒಪ್ಪಂದ
ಬ್ರಿಟಿಷರ ಆಳ್ವಿಕೆಯ ವೇಳೆ 1890ರಲ್ಲಿ ಸರಣಿ ಸಭೆಗಳನ್ನು ಕರೆಯಲಾಯಿತು. ಇದು ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಆಡಳಿತಗಾರರ ನಡುವೆ 1892 ರ ಒಪ್ಪಂದಕ್ಕೆ ಕಾರಣವಾಯಿತು. ಇದು ಕರ್ನಾಟಕ ಮತ್ತು ತಮಿಳುನಾಡು ನಡುವಿನ ನೀರಿನ ಹಂಚಿಕೆ ಮಾತುಕತೆಗಳ ಆಧಾರವಾಗಿ ಉಳಿದಿದೆ.
ಈ ಒಪ್ಪಂದವು ಕಾವೇರಿಯ ಐದು ಉಪನದಿಗಳ ಮೇಲೆ ಕೆಲವು ಹೊಸ ನೀರಾವರಿ ಯೋಜನೆಗಳನ್ನು ನಿರ್ಮಿಸಲು ಮೈಸೂರಿಗೆ ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, ಮದ್ರಾಸ್‌ನ ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳ ಹಿತಾಸಕ್ತಿಗಳನ್ನು ಕಾಪಾಡಲಾಗುವುದು ಎಂಬುದನ್ನು ಒಪ್ಪಂದ ಖಚಿತಪಡಿಸಿತು. ಅಲ್ಲದೆ, ಕಾವೇರಿ ಅಥವಾ ಅದರ ಉಪನದಿಗಳಲ್ಲಿ ಹೊಸ ನೀರಾವರಿ ಯೋಜನೆಗಳನ್ನು ಕೈಗೊಳ್ಳಬೇಕಾದರೆ ಮದ್ರಾಸ್ ಪ್ರೆಸಿಡೆನ್ಸಿಯ ಪೂರ್ವಾನುಮತಿ ಅಗತ್ಯ ಎಂಬುದು ಒಪ್ಪಂದದ ಪ್ರಮುಖ ಅಂಶವಾಗಿ ಸೇರ್ಪಡೆಯಾಗಿತ್ತು.
ಈ ಒಪ್ಪಂದದ ಮೂರು ಷರತ್ತುಗಳು ಹೀಗಿವೆ
- ಮೈಸೂರು ಸರ್ಕಾರವು ಯಾವುದೇ 'ಹೊಸ ನೀರಾವರಿ ಜಲಾಶಯ' ಅಥವಾ ಯಾವುದೇ ಹೊಸ ಅಣೆಕಟ್ಟು ನಿರ್ಮಿಸಲು ಮುಂದಾದರೆ, ಹಿಂದಿನ ನಿಯಮ ಪ್ರಕಾರ ಮದ್ರಾಸ್ ಸರ್ಕಾರದ ಪೂರ್ವಾನುಮತಿ ಪಡೆಯಬೇಕು.
- ಉದ್ದೇಶಿತ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ನೀಡಬೇಕು.
- ಯೋಜನೆ ಅನುಷ್ಠಾನಗೊಳಿಸಬೇಕಾದರೆ ಮೊದಲು ಮದ್ರಾಸ್ ಸರ್ಕಾರದ ಒಪ್ಪಿಗೆಯನ್ನು ಪಡೆಯಬೇಕು.
ಮದ್ರಾಸ್ ಪ್ರೆಸಿಡೆನ್ಸಿ ಜತೆಗೆ ಮೈಸೂರು ಸಂಸ್ಥಾನದ ಮೊದಲ ಸಮರ
ಅದು 1910ರ ಕಾಲಘಟ್ಟ. ಮೈಸೂರು ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಮುಖ್ಯ ಇಂಜಿನಿಯರ್ ಕ್ಯಾಪ್ಟನ್ ನಿಕೋಲಸ್ ದಾವೆಸ್ ಅವರ ನೇತೃತ್ವದಲ್ಲಿ ಗಣನೀಯ 41.5 ಟಿಎಂಸಿ (ಸಾವಿರ ಮಿಲಿಯನ್ ಘನ ಅಡಿ) ನೀರನ್ನು ಸಂಗ್ರಹಿಸಲು ಗ್ರಾಮದಲ್ಲಿ ಅಣೆಕಟ್ಟು ನಿರ್ಮಿಸುವ ಪ್ರಸ್ತಾಪವನ್ನು ಘೋಷಿಸಿದಾಗ ಎರಡೂ ರಾಜ್ಯಗಳ ನಡುವೆ ಉದ್ವಿಗ್ನತೆ ಉಂಟಾಯಿತು.
ಮೈಸೂರು ಸಂಸ್ಥಾನದ ಈ ಯೋಜನೆಗೆ ಮದ್ರಾಸ್‌ನಿಂದ ತೀವ್ರ ವಿರೋಧ ವ್ಯಕ್ತವಾಯಿತು. ಮದ್ರಾಸ್ ಪ್ರೆಸಿಡೆನ್ಸಿ ತನ್ನದೇ ಆದ ಮಹತ್ವಾಕಾಂಕ್ಷೆಯ ಮೆಟ್ಟೂರು ಅಣೆಕಟ್ಟು ಯೋಜನೆ ಜಾರಿಗೊಳಿಸಿತು. ಇದು 80 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಮೆಟ್ಟೂರು ಅಣೆಕಟ್ಟಿಗೆ ಸಾಕಷ್ಟು ನೀರು ಬಿಡುತ್ತಿಲ್ಲ ಎಂಬ ಆರೋಪವನ್ನು ಮದ್ರಾಸ್ ಪ್ರೆಸಿಡೆನ್ಸಿ ಮಾಡಿತು.
ಈ ವಿಷಯವನ್ನು ಭಾರತದ ಬ್ರಿಟಿಷ್ ಸರ್ಕಾರದ ಗಮನಕ್ಕೆ ತಂದ ನಂತರ, ಮೈಸೂರು ಸಂಸ್ಥಾನಕ್ಕೆ ಅದಕ್ಕಿಂತ 11 ಟಿಎಂಸಿ ಕಡಿಮೆ ಸಂಗ್ರಹ ಸಾಮರ್ಥ್ಯದ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡಲಾಯಿತು. ಆದಾಗ್ಯೂ, ನಿಜವಾದ ನಿರ್ಮಾಣ ಪ್ರಕ್ರಿಯೆಯಲ್ಲಿ, ಮೂಲತಃ ಬಯಸಿದ ಸಂಪೂರ್ಣ ಶೇಖರಣಾ ಸಾಮರ್ಥ್ಯವನ್ನು ಸರಿಹೊಂದಿಸಲು ಅಡಿಪಾಯವನ್ನು ಹಾಕಲಾಯಿತು. ಈ ವಿಚಾರ ಮದ್ರಾಸ್ ಪ್ರೆಸಿಡೆನ್ಸ್ ಜತೆಗಿನ ವಿವಾದವನ್ನು ತೀವ್ರಗೊಳಿಸಿತು. ಇದರ ಪರಿಣಾಮ, ಭಾರತದ ಬ್ರಿಟಿಷ್ ಸರ್ಕಾರವು ಈ ವಿವಾದಾತ್ಮಕ ಸಮಸ್ಯೆಯನ್ನು ಮಧ್ಯಸ್ಥಿಕೆಯ ಮೂಲಕ ಪರಿಹರಿಸಲು ನಿರ್ಧರಿಸಿತು. ಈ ಮೂಲಕ ನಡೆಯುತ್ತಿರುವ ಕಾವೇರಿ ಜಲವಿವಾದದಲ್ಲಿ ಮೊದಲ ಮಧ್ಯಸ್ಥಿಕೆ ಪ್ರಕ್ರಿಯೆ ಎಂದು ಗುರುತಿಸಲಾಗಿದೆ.
ಕನ್ನಂಬಾಡಿ ಮತ್ತು ಮೆಟ್ಟೂರು ಅಣೆಕಟ್ಟು ನಿರ್ಮಿಸಲು ನೆರವಾಯಿತು 1924ರ ಕಾವೇರಿ ಒಪ್ಪಂದ
ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ನಡುವೆ ಕಾವೇರಿ ನೀರು ಹಂಚಿಕೆ ಸಂಬಂಧ, 1910 ರಿಂದ 1924 ರವರೆಗೆ ಸರಣಿ ಸಭೆಗಳು ಮತ್ತು ಚರ್ಚೆಗಳು ನಡೆದವು. ಇದಾಗಿ, ಮೈಸೂರು ಮತ್ತು ಮದ್ರಾಸ್ ಎರಡೂ ಒಮ್ಮತವನ್ನು ತಲುಪಿದವು. ಹಾಗೆ, ಎರಡೂ ರಾಜ್ಯಗಳು 1924 ರ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದವು ದೀರ್ಘಾವಧಿಯ ಅಂದರೆ 50 ವರ್ಷಗಳ ತನಕ ಅನ್ವಯವಾಗುವಂತೆ ಇತ್ತು.
ಈ ಒಪ್ಪಂದವು ಮೈಸೂರು ಮತ್ತು ಮದ್ರಾಸ್ ಎರಡೂ ರಾಜ್ಯಗಳಿಗೆ ತಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಅನುವು ಮಾಡಿಕೊಟ್ಟಿತು. ಮೈಸೂರು ಕನ್ನಂಬಾಡಿಯಲ್ಲಿ ಕೃಷ್ಣ ರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿ, 45 ಟಿಎಂಸಿ ಸಾಮರ್ಥ್ಯದ ಹೆಗ್ಗಳಿಕೆಗೆ ಪಾತ್ರವಾಯಿತು. ಆದರೆ, ಮದ್ರಾಸ್ ಮೆಟ್ಟೂರು ಅಣೆಕಟ್ಟಿನ ನಿರ್ಮಾಣವನ್ನು ಕೈಗೆತ್ತಿಕೊಂಡಿತು. ಈ ಅಣೆಕಟ್ಟಿನ ಸಾಮರ್ಥ್ಯ 93.5 ಟಿಎಂಸಿ.
"ವಾಸ್ತವವಾಗಿ, ಈ ಒಪ್ಪಂದದ ಮೊದಲು, ಕೋಲಾರದಲ್ಲಿ ಚಿನ್ನದ ಗಣಿಗಾರಿಕೆಗಾಗಿ ಜಾನ್ ಟೇಲರ್ ಕಂಪನಿಗೆ ವಿದ್ಯುತ್ ನೀಡಲು ಜಲಾಶಯವು ಮುಖ್ಯವಾಗಿದೆ ಎಂದು ಜಲಾಶಯದ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದ ಎಂ ವಿಶ್ವೇಶ್ವರಯ್ಯ ಮದ್ರಾಸ್ ಪ್ರೆಸಿಡೆನ್ಸಿಗೆ ಮನವರಿಕೆ ಮಾಡಿದರು. ಅದರ ಪರಿಣಾಮವಾಗಿ ನೀರಾವರಿಗೆ ಅನುಮತಿ ಸಿಕ್ಕಿತು’ ಎಂಬ ಅಂಶದ ಕಡೆಗೂ ನರಸಿಂಹಪ್ಪ ಗಮನಸೆಳೆದರು.
ಕರ್ನಾಟಕ, ತಮಿಳುನಾಡು, ಕೇರಳಕ್ಕೆ ಕಾವೇರಿ ನೀರು ಹಂಚಿಕೆ, ಯಾವ ರಾಜ್ಯಕ್ಕೆ ಎಷ್ಟು ಪಾಲು
ಎರಡೂ ರಾಜ್ಯಗಳ ನಡುವಿನ 1924 ರ ಒಪ್ಪಂದವು ಒಂದಷ್ಟು ನಿರ್ದಿಷ್ಟ ಮಿತಿಗಳನ್ನು, ಚೌಕಟ್ಟನ್ನು ಹೊಂದಿತ್ತು. ಮೈಸೂರಿಗೆ 110,000 ಎಕರೆಗಳಷ್ಟು ನೀರಾವರಿ ಭೂಮಿಯನ್ನು ಹಂಚಲಾಯಿತು. ಮದ್ರಾಸ್ ಸರ್ಕಾರವು ಮೆಟ್ಟೂರು ಯೋಜನೆಯಿಂದ 301,000 ಎಕರೆಗಳಿಗೆ ಹೊಸ ನೀರಾವರಿ ಪ್ರದೇಶಗಳಿಗೆ ನಿರ್ಬಂಧಿಸುವ ಅಂಶ ಒಪ್ಪಂದದಲ್ಲಿದೆ. ಇದರ ಪರಿಣಾಮ ಎರಡು ವಿಭಿನ್ನ ಬೆಳೆ ಋತುಗಳಿಗೆ ಮದ್ರಾಸ್ ಹೆಚ್ಚುವರಿ ನೀರಾವರಿ ಪಡೆಯಿತು.
"ಐದು ದಶಕದ ಅನುಭವದ ಬೆಳಕಿನಲ್ಲಿ ಮರುಪರಿಶೀಲನೆಯ ಬಳಿಕ ಮತ್ತು ಆಯಾ ಸರ್ಕಾರಗಳ ಪ್ರಾಂತ್ಯಗಳಲ್ಲಿ ನೀರಾವರಿಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳ ಪರಿಶೀಲನೆ ಮತ್ತು ಪರಸ್ಪರ ಒಪ್ಪಿಗೆ ನೀಡಬಹುದಾದಂತಹ ಮಾರ್ಪಾಡು ಮತ್ತು ಸೇರ್ಪಡೆಗಳಿಗೆ ಅವಕಾಶ ಇದೆ" ಎಂಬ ಅಂಶ ಒಪ್ಪಂದದಲ್ಲಿದೆ. ಸರಳವಾಗಿ ಹೇಳಬೇಕು ಎಂದರೆ 50 ವರ್ಷಗಳ ನಂತರ ನೀರಾವರಿ ಪ್ರದೇಶಗಳ ಒಪ್ಪಂದದಲ್ಲಿ ವಿವರಿಸಿರುವ ಮಿತಿಗಳನ್ನು ಮರುಪರಿಶೀಲಿಸಬಹುದು ಎಂಬ ಉಲ್ಲೇಖ ಒಪ್ಪಂದದಲ್ಲಿದೆ.
ಮೈಸೂರು ಸಂಸ್ಥಾನ ಮತ್ತು ಮದ್ರಾಸ್ ಪ್ರೆಸಿಡೆನ್ಸಿ ನಡುವಿನ 1892 ಮತ್ತು 1924 ರ ಒಪ್ಪಂದಗಳು ಕೃಷ್ಣ ರಾಜ ಸಾಗರ ಅಣೆಕಟ್ಟು ಮತ್ತು ಮೆಟ್ಟೂರು ಅಣೆಕಟ್ಟಿನ ನಡುವಿನ ಕಾವೇರಿ ನದಿಯ ವಿಸ್ತರಣೆಯನ್ನು ಕಾವೇರಿ ಜಲ ವಿವಾದದ ಮುಂಚೂಣಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದವು. 1924ರ ಒಪ್ಪಂದದ ಪ್ರಕಾರ ತಮಿಳುನಾಡಿಗೆ ಶೇ.75ರಷ್ಟು ನೀರು, ಕರ್ನಾಟಕಕ್ಕೆ ಶೇ.23 ಮತ್ತು ಕೇರಳಕ್ಕೆ ಉಳಿದ ನೀರು ಸಿಗಬೇಕು ಎಂಬ ಆಶಯ ಹೊಂದಿತ್ತು.
ಭಾಷಾವಾರು ಪ್ರಾಂತ್ಯ ರಚನೆ ಮತ್ತು ನೀರು ಹಂಚಿಕೆ ವಿವಾದ ಇತ್ಯರ್ಥ ಕಾನೂನು
ತಮಿಳುನಾಡು ಮತ್ತು ಮೈಸೂರು ರಾಜ್ಯದ ನಡುವಿನ ಕಾವೇರಿ ನೀರು ಹಂಚಿಕೆ ವಿವಾದ ಸ್ವಾತಂತ್ರ್ಯಾನಂತರವೂ ಮುಂದುವರಿಯಿತು. ಮುಂದೆ 1956ರಲ್ಲಿ ಸಂಸತ್ತು ಭಾಷಾವಾರು ಪ್ರಾಂತ್ಯ ರಚನೆ ಮಾಡಿತು. ಅದೇ ರೀತಿ ಅಂತಾರಾಜ್ಯ ಜಲ ವಿವಾದ ಬಗೆಹರಿಸಲು ಕಾಯ್ದೆಯನ್ನೂ ಜಾರಿಗೆ ತಂದಿತು. ಕಾವೇರಿಯ ಶೇಕಡ 75 ಪಾಲು ನೀರು ಪಡೆದ ತಮಿಳುನಾಡು ತನ್ನ ನೀರಾವರಿ ಪ್ರದೇಶವನ್ನು ವಿಸ್ತರಿಸಿತು. ಇದೇ ವೇಳೆ, 1924ರ ಒಪ್ಪಂದ ಪ್ರಕಾರ ಕರ್ನಾಟಕ ತೀವ್ರ ನಿರ್ಬಂಧವನ್ನು ಎದುರಿಸುತ್ತ ಬಂತು. ಘರ್ಷಣೆ, ಪ್ರತಿಭಟನೆಗಳ ಹೊರತಾಗಿಯೂ ಎರಡೂ ರಾಜ್ಯಗಳು ಒಪ್ಪಂದದ ಅಂಶಗಳನ್ನು ಪಾಲಿಸುತ್ತ ಬಂದಿವೆ.
ಎರಡೂ ರಾಜ್ಯಗಳ ನಡುವಿನ 1924ರ ಒಪ್ಪಂದ 1960ರ ದಶಕದ ಕೊನೆಗೆ ಅಂತ್ಯವಾಗುತ್ತಿರುವುದನ್ನು ಗಮನಿಸಿದ ಕೇಂದ್ರ ಸರ್ಕಾರ, ಎರಡೂ ರಾಜ್ಯಗಳ ನಡುವೆ ಮಾತುಕತೆ ಏರ್ಪಡಿಸಿತು. 1924ರ ಒಪ್ಪಂದ ಮುಗಿಯುವುದಕ್ಕೆ ಎರಡು ವರ್ಷ ಮುಂಚಿತವಾಗಿ ಮಳೆ ಕೊರತೆ ಕಾಡಿ ಜಲಾಶಯದ ನೀರಿನ ಮಟ್ಟ ಕುಸಿದಿತ್ತು. ಕೆಆರ್‌ಎಸ್ ಅಣೆಕಟ್ಟಿನಿಂದ ತಂಜಾವೂರು ಪ್ರದೇಶದ ಬೆಳೆಗೆ ನೀರು ಹರಿಸುವಂತೆ ತಮಿಳುನಾಡು ಮನವಿ ಮಾಡಿತ್ತು. ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಮಧ್ಯಪ್ರವೇಶಕ್ಕೆ ಪ್ರಯತ್ನಿಸಿ ಹೊಸ ಕರಡು ಒಪ್ಪಂದ ಪ್ರಸ್ತಾಪಿಸಿದ್ದರು. ಆದಾಗ್ಯೂ, ತುರ್ತುಪರಿಸ್ಥಿತಿ ಹೇರಿಕೆ ಆದ ಕಾರಣ ಈ ವಿಚಾರ ಮೂಲೆಗುಂಪಾಯಿತು.
ಕೋರ್ಟ್ ಮೆಟ್ಟಿಲೇರಿದ ಕಾವೇರಿ ವಿವಾದ
ತಮಿಳುನಾಡಿನ ತಂಜಾವೂರಿನ ರೈತ ಸಂಘವು 1983 ರಲ್ಲಿ, ಸುಪ್ರೀಂ ಕೋರ್ಟ್‌ಗೆ (ತಮಿಳುನಾಡು 1987 ರಲ್ಲಿ ತನ್ನದೇ ಆದ ದಾವೆಯನ್ನು ಹೂಡಿತು) ಮೊರೆಹೋಗಿ ಸಮಸ್ಯೆಯನ್ನು ನಿರ್ಣಯಿಸಲು ನ್ಯಾಯಾಧಿಕರಣವನ್ನು ಸ್ಥಾಪಿಸಲು ಒತ್ತಾಯಿಸಿತು. ಆರಂಭದಲ್ಲಿ ಕಕ್ಷಿದಾರರಿಗೆ ಮಾತುಕತೆ ನಡೆಸುವಂತೆ ನ್ಯಾಯಾಲಯ ಸೂಚಿಸಿತ್ತು. ಆದಾಗ್ಯೂ, 1990ರ ಏಪ್ರಿಲ್‌ನಲ್ಲಿ ಮಾತುಕತೆ ವಿಫಲವಾದ ನಂತರ, ಸುಪ್ರೀಂಕೋರ್ಟ್ ಅಂತಿಮವಾಗಿ ನ್ಯಾಯಾಧಿಕರಣವನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು.
1991ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರು ಕಾವೇರಿ ನದಿ ನೀರು ನ್ಯಾಯಾಧಿಕರಣದ ಅಧ್ಯಕ್ಷತೆ ವಹಿಸಿ ಬರ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಇದರ ಆಧಾರದ ಮೇಲೆ, ಅದು ಜೂನ್ 25, 1991 ರಂದು ಮಧ್ಯಂತರ ನಿರ್ಧಾರವನ್ನು ನೀಡಿತು. ಈ ನಿರ್ಧಾರವು ತಮಿಳುನಾಡಿಗೆ ವಾರ್ಷಿಕ 205 ಟಿಎಂಸಿ ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಿತು ಮತ್ತು ನೀರಾವರಿ ಭೂಮಿಯನ್ನು ವಿಸ್ತರಿಸುವ ತನ್ನ ಯೋಜನೆಗಳನ್ನು ಸ್ಥಗಿತಗೊಳಿಸಿತು.
ನ್ಯಾಯಾಧಿಕರಣದ ತೀರ್ಪಿಗೆ ಕರ್ನಾಟಕದಿಂದ ಪ್ರತಿರೋಧ ಎದುರಾಗಿದ್ದು, ಎರಡೂ ರಾಜ್ಯಗಳಲ್ಲಿ ಗಲಭೆಗೆ ಕಾರಣವಾಯಿತು. ಕರ್ನಾಟಕವು ನ್ಯಾಯಮಂಡಳಿಯ ತೀರ್ಪನ್ನು ರದ್ದುಗೊಳಿಸಲು ಆಗ್ರಹಿಸಿತು. ಆದರೆ ಸುಪ್ರೀಂ ಕೋರ್ಟ್ ಅದನ್ನು ಎತ್ತಿಹಿಡಿಯಿತು, ಇದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಯಿತು. ವಿವಾದಗಳು ಉದ್ಭವಿಸುತ್ತಲೇ ಇದ್ದವು ಮತ್ತು 1993 ರಲ್ಲಿ ಮುಖ್ಯಮಂತ್ರಿ ಜೆ ಜಯಲಲಿತಾ ನೇತೃತ್ವದಲ್ಲಿ ತಮಿಳುನಾಡು ರೈತರು ಹೆಚ್ಚಿನ ನೀರಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದು ಗಮನಸೆಳೆದಿತ್ತು.
ಕಾವೇರಿ ನೀರು ವಿವಾದ ಹೆಚ್ಚಾದ ಬಳಿಕ 1995 ರಲ್ಲಿ, ನ್ಯಾಯಮಂಡಳಿಯು 230 ಟಿಎಂಸಿ ಎಫ್‌ಟಿ ನೀರನ್ನು ತಮಿಳುನಾಡಿಗೆ ಹಂಚಿಕೆ ಮಾಡಿತು. ಈ ನಡುವೆ, ಕರ್ನಾಟಕದ ನೀರಾವರಿ ಯೋಜನೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿತು. ಕರ್ನಾಟಕವು ಅಸಮಾನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೆ ನ್ಯಾಯಮಂಡಳಿಯ ಆದೇಶಗಳೆಲ್ಲವೂ ಮಧ್ಯಂತರ ತೀರ್ಪುಗಳಾಗಿದ್ದವು.
ಹಿಂದಿನ 17 ವರ್ಷಗಳ ಅವಧಿಯಲ್ಲಿ, ಟ್ರಿಬ್ಯೂನಲ್ 502 ಸಿಟ್ಟಿಂಗ್‌ಗಳನ್ನು ನಡೆಸಿತು ಮತ್ತು ಐವತ್ತು ಸಾವಿರ ಪುಟಗಳವರೆಗಿನ ದೊಡ್ಡ ಪ್ರಮಾಣದ ಸಾಕ್ಷ್ಯಗಳ ಕುರಿತು ಆಲೋಚಿಸಿದೆ. ಇದು ತನ್ನ ಅಂತಿಮ ತೀರ್ಪನ್ನು 2007ರ ಫೆಬ್ರವರಿ 5 ರಂದು ನೀಡಿತ್ತು. 1924 ರ ಒಪ್ಪಂದದ ಸಿಂಧುತ್ವವನ್ನು ಎತ್ತಿಹಿಡಿಯಿತು. ಆದರೆ ಕರ್ನಾಟಕ ಪ್ರಸ್ತಾಪಿಸಿದ ಐತಿಹಾಸಿಕ ಲೋಪಗಳನ್ನು ಪರಿಹರಿಸಲು ಆಗ್ರಹಿಸಿದ ಬಳಿಕ, ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ ನೀರು ಹಂಚಿಕೆಯಾಗಿದೆ.
ಸಂಕಷ್ಟದ ಸಮಯದಲ್ಲಿ ಕಾವೇರಿ ನೀರು ಹಂಚಿಕೆ ಕುರಿತು ಸ್ಪಷ್ಟತೆ ಒದಗಿಸದ ನ್ಯಾಯಾಧಿಕರಣ
ನ್ಯಾಯಾಧಿಕರಣವು ಅಂತಾರಾಜ್ಯ ಗಡಿಯಾದ ಬಿಳಿಗುಂಡ್ಲುವಿನಲ್ಲಿ ಮಾಸಿಕ ನೀರು ಬಿಡುಗಡೆ ಪ್ರಮಾಣಗಳನ್ನು ನಿರ್ದಿಷ್ಟಪಡಿಸಿತು. ಆದಾಗ್ಯೂ, ಸಂಕಷ್ಟದ ವರ್ಷಗಳಲ್ಲಿ ನ್ಯಾಯಮಂಡಳಿಯ ಹಂಚಿಕೆಯಲ್ಲಿ ಸ್ಪಷ್ಟತೆಯ ಕೊರತೆಯಿತ್ತು. ಇದು ನೀರು ಹಂಚಿಕೆಯ ವ್ಯವಸ್ಥೆಗಳ ವಿವಾದವನ್ನು ಹೆಚ್ಚಿಸಿತು. 2013ರಲ್ಲಿ ಕೇಂದ್ರ ಸರ್ಕಾರ ಅಂತಿಮ ತೀರ್ಪನ್ನು ಉಲ್ಲೇಖಿಸಿ ಅಧಿಸೂಚನೆ ಹೊರಡಿಸಿತ್ತು. ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ವಿಶೇಷವಾಗಿ ಅಸಮರ್ಪಕ ಮಳೆಯ ವರ್ಷಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿದರು. ಆದರೆ ಈ ಮನವಿಯು ಈಡೇರಲಿಲ್ಲ. ವಿವಾದಗಳು ಮುಂದುವರಿದಿವೆ.
ಕಾವೇರಿ ವಿವಾದ ಕುರಿತು ಸುಪ್ರೀಂ ಕೋರ್ಟ್ 2018ರಲ್ಲಿ ನೀಡಿದ ತೀರ್ಪು
ಸುಪ್ರೀಂ ಕೋರ್ಟ್‌ನಲ್ಲಿ 2012-13 ಮತ್ತು 2015-16ರಲ್ಲಿ ಸಲ್ಲಿಸಲಾದ ಮೇಲ್ಮನವಿಗಳ ನಂತರ, ನೀರು ವಿತರಣೆಗೆ ಸಂಬಂಧಿಸಿದಂತೆ ಮಧ್ಯಂತರ ತೀರ್ಪು ಪ್ರಕಟವಾಯಿತು. ಇವು ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಬಂತು. ಹೀಗಾಗಿ ಕರ್ನಾಟಕದಲ್ಲಿ ವ್ಯಾಪಕ ಪ್ರತಿಭಟನೆಗೆ ಕಾರಣವಾಯಿತು. ಅಂತಿಮವಾಗಿ, ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ಮೇಲ್ಮನವಿಗಳನ್ನು ಪರಿಹರಿಸಲು ಮತ್ತು ಸಮಸ್ಯೆಯನ್ನು ಪರಿಹರಿಸಲು ನಿರ್ಧರಿಸಿತು. ನ್ಯಾಯಾಲಯವು ಅಭೂತಪೂರ್ವ 28 ದಿನಗಳ ಕಾಲ ವಿಚಾರಣೆ ನಡೆಸಿ 25,000 ಪುಟಗಳ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿತು.
ಕೊನೆಗೆ, 2018ರ ಫೆಬ್ರವರಿ 16ರಂದು ತನ್ನ ಏಕಪಕ್ಷೀಯ ತೀರ್ಪಿನಲ್ಲಿ ಕರ್ನಾಟಕದ ಮನವಿಗೆ ಭಾಗಶಃ ಅನುಮೋದನೆ ನೀಡಿತು. ಈ ನಿರ್ಧಾರವು ಕರ್ನಾಟಕದ ವಾರ್ಷಿಕ ನೀರಿನ ಬಿಡುಗಡೆಯನ್ನು 192 ಟಿಎಂಸಿಯಿಂದ 177.25 ಟಿಎಂಸಿಗೆ ಇಳಿಸಲು ಕಾರಣವಾಯಿತು.
ಕಾವೇರಿ ಜಲಾನಯನ ಪ್ರದೇಶದ ಮೂರನೇ ಒಂದು ಭಾಗದಷ್ಟು ಭೂಪ್ರದೇಶ ಮಾತ್ರ ಸೇರಿದೆ ಎಂಬ ಅಂಶವನ್ನು ಆಧರಿಸಿ ಬೆಂಗಳೂರು ನಗರದ ನೀರಿನ ಅಗತ್ಯತೆಯ ಮೂರನೇ ಒಂದು ಭಾಗಕ್ಕೆ ಸೀಮಿತಗೊಳಿಸಿದೆ ಎಂಬ ನ್ಯಾಯಮಂಡಳಿಯ ನಿಲುವನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು 4.75 ಟಿಎಂಸಿ ಮತ್ತು ಬರಪೀಡಿತ ಪ್ರದೇಶಗಳಲ್ಲಿ ನೀರಾವರಿಗಾಗಿ ಉಳಿದ 10 ಟಿಎಂಸಿಯೊಂದಿಗೆ ಬೆಂಗಳೂರಿಗೆ 14.75 ಟಿಎಂಸಿ ಹೆಚ್ಚುವರಿ ಹಂಚಿಕೆಯನ್ನು ಮಾಡಿತು.
"ನೀರು ಹರಿಯುವ ಸ್ಥಿತಿಯಲ್ಲಿರುವುದರಿಂದ, ಯಾವುದೇ ರಾಜ್ಯವು ಅಂತಹ ನೀರಿನ ವಿಶೇಷ ಮಾಲೀಕತ್ವವನ್ನು ಪಡೆಯಲು ಅಥವಾ ಇತರ ರಾಜ್ಯಗಳ ಸಮಾನ ಪಾಲನ್ನು ಹೊಂದುವ ಪೂರ್ವಾಪೇಕ್ಷಿತ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಿಲ್ಲ" ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತನ್ನ ಆದೇಶದಲ್ಲಿ ಪ್ರತಿಪಾದಿಸಿತು.
ನ್ಯಾಯಾಲಯದ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರವು 2018ರ ಜೂನ್ 1ರಂದು ಸುಪ್ರೀಂ ಕೋರ್ಟ್ ತೀರ್ಪನ್ನು ಜಾರಿಗೆ ತರಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಸ್ಥಾಪಿಸಿತು.
ಕರ್ನಾಟಕ ಮತ್ತು ತಮಿಳುನಾಡು ನಡುವೆ 2023ರ ಕಾವೇರಿ ವಿವಾದ ಏನು?
ಕರ್ನಾಟಕದ ಮಟ್ಟಿಗೆ 2023ರ ಮುಂಗಾರು ಹಂಗಾಮು ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಮಳೆಯ ಕೊರತೆ ಕಾಡಿದ್ದು, ಬಹಳಷ್ಟು ತಾಲೂಕುಗಳು ಬರಪೀಡಿತವಾಗಿವೆ. ಜಲಾಶಯಗಳು ಭರ್ತಿಯಾಗಿಲ್ಲ. ಈ ನಡುವೆ, ಆಗಸ್ಟ್ 14 ರಂದು, ತಮಿಳುನಾಡು ಸರ್ಕಾರವು ತನ್ನ ಜಲಾಶಯಕ್ಕೆ 24,000 ಕ್ಯೂಸೆಕ್ ನೀರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿತ್ತು. ಕಾವೇರಿ ಜಲವಿವಾದ ನ್ಯಾಯಮಂಡಳಿಯ (ಸಿಡಬ್ಲ್ಯುಡಿಟಿ) 2007 ರ ಅಂತಿಮ ತೀರ್ಪಿನ ಪ್ರಕಾರ 2023ರ ಸೆಪ್ಟೆಂಬರ್‌ನಲ್ಲಿ ಈಗಾಗಲೇ ನಿಗದಿಪಡಿಸಿದಂತೆ 36.76 ಟಿಎಂಸಿ ನೀರು ಬಿಡುಗಡೆಗೆ ಬದ್ಧವಾಗಿರುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕೆಂದು ತಮಿಳುನಾಡು ನ್ಯಾಯಾಲಯವನ್ನು ಒತ್ತಾಯಿಸಿತು.
ಕೇರಳದ ಪ್ರದೇಶಗಳು ಸೇರಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಡಿಮೆ ಮಳೆಯ ಪರಿಣಾಮ ತನ್ನ ಜಲಾಶಯಗಳಿಗೆ ಸಾಕಷ್ಟು ಒಳಹರಿವು ಆಗಿಲ್ಲ ಎಂದು ಕರ್ನಾಟಕ ವಾದಿಸಿತು. ಐತಿಹಾಸಿಕವಾಗಿ ಜಲಾಶಯಗಳಲ್ಲಿ ಹೆಚ್ಚುವರಿ ನೀರು ಇದ್ದಾಗಲೆಲ್ಲ ಕರ್ನಾಟಕ ಇಚ್ಛೆಯಿಂದ ತಮಿಳುನಾಡಿಗೆ ಬಿಡುಗಡೆ ಮಾಡಿದೆ. ಆದರೆ, ಈ ವರ್ಷ, ಪ್ರತಿಕೂಲ ಪರಿಸ್ಥಿತಿಗಳಿಂದಾಗಿ, ಕರ್ನಾಟಕವು ಹಾಗೆ ಮಾಡಲು ಸಾಧ್ಯವಾಗಲಿಲ್ಲ ಎಂದು ಕರ್ನಾಟಕ ಸರ್ಕಾರ ವಿವರಿಸಿದೆ.
ಮಳೆಯ ಕೊರತೆಯನ್ನು ಅನುಭವಿಸುತ್ತಿರುವ ಕೊಡಗು ಜಿಲ್ಲೆಯಲ್ಲಿ (ಕಾವೇರಿ ನದಿಯ ಮೂಲ) ಜೂನ್ 1 ರಿಂದ ಆಗಸ್ಟ್ 15 ರ ನಡುವೆ ನಿರೀಕ್ಷೆಗಿಂತ 44 ಪ್ರತಿಶತ ಕಡಿಮೆ ಮಳೆಯಾಗಿದೆ. ಆದಾಗ್ಯೂ, ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಗುರುವಾರ (ಸೆ.28) ನಿರಾಕರಿಸಿದೆ.
ಕಾವೇರಿ ನೀರು ನಿಯಂತ್ರಣ ಸಮಿತಿ ಸೆಪ್ಟೆಂಬರ್ 26ರ ಸಭೆಯಲ್ಲಿ ಅ. 15ರವರೆಗೆ ದಿನನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶ ನೀಡಿತ್ತು.
ಇದಕ್ಕೂ ಮುನ್ನ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು 15 ದಿನಗಳವರೆಗೆ ತಮಿಳುನಾಡಿಗೆ 5,000 ಕ್ಯೂಸೆಕ್ (ಸೆಕೆಂಡಿಗೆ ಕ್ಯೂಬಿಕ್ ಅಡಿ) ನೀರು ಬಿಡುವುದನ್ನು ಮುಂದುವರಿಸಬೇಕು ಎಂದು ಸೆಪ್ಟೆಂಬರ್ 18 ರಂದು ಕರ್ನಾಟಕಕ್ಕೆ ಹೇಳಿತು. ಆ ಮೂಲಕ ಕಾವೇರಿ ನೀರು ನಿಯಂತ್ರಣ ಸಮಿತಿಯ (ಸಿಡಬ್ಲ್ಯೂಆರ್‌ಸಿ) ಸೆಪ್ಟೆಂಬರ್ 12 ರ ಆದೇಶವನ್ನು ಎತ್ತಿಹಿಡಿಯಿತು.
ಅಕ್ಟೋಬರ್ 15ರ ತನಕ 3000 ಕ್ಯೂಸೆಕ್ ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡಿದ ಪ್ರಾಧಿಕಾರ
ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು, ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ ನಡೆಸಿದವು. ಇದಾಗಿ, ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್ ನಡೆಸಿದವು. ಇದೇ ದಿನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಇತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಈ ಸಭೆಯಲ್ಲಿ ತಮಿಳುನಾಡಿಗೆ ಅ. 15ರವರೆಗೆ ದಿನಕ್ಕೆ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿದೆ.
ಸೆ. 26ರಂದು ನಡೆದಿದ್ದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು ಸೆ. 27ರಿಂದ ಅ. 15ರವರೆಗೆ ದಿನನಿತ್ಯ 3 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶ ಹೊರಡಿಸಿತ್ತು. ಇದರಿಂದ ಅಸಮಾಧಾನಗೊಂಡಿದ್ದ ಕರ್ನಾಟಕ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊರೆ ಹೋಗಿ, ನಿಯಂತ್ರಣ ಸಮಿತಿ ಆದೇಶ ಮರುಪರಿಶೀಲಿಸುವಂತೆ ಕೇಳಿತ್ತು.
ತಮಿಳುನಾಡು ಕೂಡ ಪ್ರಾಧಿಕಾರದ ಮೊರೆಹೋಗಿ, ದಿನಕ್ಕೆ 12,500 ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಅಹವಾಲು ಸಲ್ಲಿಸಿತ್ತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ಪ್ರಾಧಿಕಾರ, ಸೆ. 26ರಂದು ನಿಯಂತ್ರಣ ಸಮಿತಿ ನೀಡಿದ್ದ ಆದೇಶ ಪಾಲಿಸುವಂತೆ ಎರಡೂ ರಾಜ್ಯಗಳಿಗೆ ಸೂಚಿಸಿದೆ.
