CT Ravi: ಹಾಸನದಲ್ಲಿ ನಡೆಯುತ್ತಿರುವ ಜಗಳ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಜೆಡಿಎಸ್‌ ವಿರುದ್ಧ ಸಿ.ಟಿ. ರವಿ ಕಿಡಿ
ಕನ್ನಡ ಸುದ್ದಿ  /  ಕರ್ನಾಟಕ  /  Ct Ravi: ಹಾಸನದಲ್ಲಿ ನಡೆಯುತ್ತಿರುವ ಜಗಳ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಜೆಡಿಎಸ್‌ ವಿರುದ್ಧ ಸಿ.ಟಿ. ರವಿ ಕಿಡಿ

CT Ravi: ಹಾಸನದಲ್ಲಿ ನಡೆಯುತ್ತಿರುವ ಜಗಳ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ: ಜೆಡಿಎಸ್‌ ವಿರುದ್ಧ ಸಿ.ಟಿ. ರವಿ ಕಿಡಿ

ಚಿಕ್ಕಮಗಳೂರಿನಲ್ಲಿ ನಿನ್ನೆ(ಮಾ.04-ಶನಿವಾರ) ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ 'ಯುವ ಸಂಗಮ' ಸಮಾವೇಶ ಉದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂವಿಧಾನದ ಆಶಯಗಳನ್ನು ಜೆಡಿಎಸ್‌ ಪಕ್ಷ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂದು ಬದಲಾಯಿಸಿಕೊಂಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಿ.ಟಿ ರವಿ (ಸಂಗ್ರಹ ಚಿತ್ರ)
ಸಿ.ಟಿ ರವಿ (ಸಂಗ್ರಹ ಚಿತ್ರ) (Verified Twitter)

ಚಿಕ್ಕಮಗಳೂರು: ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಜಗಳ ನಡೆಯುತ್ತಿರುವುದು ಒಂದು ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ. ಕುಟುಂಬವೇ ಸರ್ವಸ್ವ ಎಂದುಕೊಂಡಿರುವವರು ದೇಶಕ್ಕಾಗಿ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಜೆಡಿಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ನಿನ್ನೆ(ಮಾ.04-ಶನಿವಾರ) ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ 'ಯುವ ಸಂಗಮ' ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿ.ಟಿ. ರವಿ, ಜೆಡಿಎಸ್‌ ಸಂವಿಧಾನದ ಆಶಯಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಕಿಡಿಕಾರಿದರು.

'ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ಸಂವಿಧಾನದ ಆಶಯವನ್ನು, ಜೆಡಿಎಸ್‌ ಕುಟುಂಬದಿಂದ, ಕುಟುಂಬಕ್ಕಾಗಿ, ಕುಟುಂಬಕ್ಕೋಸ್ಕರ ಎಂದು ಬದಲಾಯಿಸಿಕೊಂಡಿದೆ. ಹೆಚ್‌ಡಿ ಕುಮಾರಸ್ವಾಮಿ ಅವರ ಪಕ್ಷಕ್ಕೂ, ದೇಶಕ್ಕೂ ಸಂಬಂಧವೇ ಇಲ್ಲವಾಗಿದೆ..' ಎಂದು ಸಿ.ಟಿ. ರವಿ ಹರಿಹಾಯ್ದರು.

ಇದೇ ವೇಳೆ ಹಾಸನ ಟಿಕೆಟ್ ವಿಚಾರವಾಗಿ ಜೆಡಿಎಸ್‌ನಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಮಾತನಾಡಿದ ಸಿ.ಟಿ. ರವಿ, ಹಾಸನದಲ್ಲಿ ನಡೆಯುತ್ತಿರುವ ಜಗಳ ಕುಟುಂಬಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ. ಜೆಡಿಎಸ್‌ ಎಂದಿಗೂ ದೇಶದ ಬಗ್ಗೆ ಚಿಂತಿಸುವುದಿಲ್ಲ. ಅದೇನಿದ್ದರೂ ಕುಟುಂಬ ರಾಜಕಾರಣಕ್ಕೆ ಸಿಮೀತವಾಗಿರುವ ಪಕ್ಷ ಎಂದು ಗುಡುಗಿದರು.

ಕುಮಾರಸ್ವಾಮಿ ಅವರ ಕುಟುಂಬದಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವಷ್ಟು ಸದಸ್ಯರಿಲ್ಲ. ಹಾಗೇನಾದರೂ ಇಷ್ಟೊಂದು ಜನ ಒಂದೇ ಕುಟುಂಬದಲ್ಲಿ ಇದ್ದಿದ್ದರೆ, ಖಂಡಿತವಾಗಿಯೂ ಹೆಚ್‌ಡಿಕೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಕುಟುಂಬ ಸದಸ್ಯರನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದರು ಎಂದು ಸಿ.ಟಿ. ರವಿ ಲೇವಡಿ ಮಾಡಿದರು.

ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಜೆಡಿಎಸ್‌ ಕೊಡುಗೆ ಶೂನ್ಯ ಎಂದು ಆರೋಪಿಸಿದ ಸಿ.ಟಿ. ರವಿ, ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಬೆಳವಾಡಿ, ಮತ್ತಾವರದಲ್ಲಿ ಮಲಗಿ ಎದ್ದು ಹೋಗಿದ್ದೇ ಹೆಚ್‌ಡಿ ಕುಮಾರಸ್ವಾಮಿ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಅತ್ಯವಶ್ಯ ಎಂದು ಸಿ.ಟಿ. ರವಿ ಇದೇ ವೇಳೆ ಅಭಿಪ್ರಾಯಪಟ್ಟರು.

ಇನ್ನು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ, ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ ಎಂದು ಕಾಲೆಳೆದರು.‌ ರಾಜ್ಯದ ಜನ ಬಿಜೆಪಿ ಪರವಾಗಿದ್ದು, ಮುಂದಿನ ವಿಧಾನಸಭೆ ಚುನಾವಣೆ ಬಳಿಕವೂ ಬಿಜೆಪಿಯೇ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ವಿಜಯೇಂದ್ರ ಭರವಸೆ ವ್ಯಕ್ತಪಡಿಸಿದರು.

ಆಡಳಿತ ನಡೆಸುವುದಕ್ಕಿಂತ ಹೆಚ್ಚಾಗಿ ರಾಷ್ಟ್ರದ ಹಿತಾಸಕ್ತಿ ಮೇಲೆ ಸವಾರಿ ಮಾಡುವುದಕ್ಕೆ ಕಾಂಗ್ರೆಸ್‌ ಪ್ರಾಶಸ್ತ್ಯ ನೀಡಿತ್ತು. ಇದೇ ಕಾರಣಕ್ಕೆ ಕಾಂಗ್ರೆಸ್‌ ಪಕ್ಷವನ್ನು ಈ ದೇಶದ ಜನ ತಿರಸ್ಕರಿಸಿದರು. ಈಶಾನ್ಯ ರಾಜ್ಯಗಳ ಇತ್ತೀಚಿನ ವಿಧಾನಸಭಾ ಚುನಾವಣೆಯ ಫಲಿತಾಂಶವೇ ಇದಕ್ಕೆ ಸಾಕ್ಷಿ ಎಂದು ಬಿವೈ ವಿಜಯೇಂದ್ರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ದೇಶ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದೆ. ರಾಜ್ಯದಲ್ಲೂ ಬಿಜೆಪಿ ಪರ ಅಲೆ ಇದ್ದು, ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ. ರಾಜ್ಯದ ಜನತೆ ಕಾಂಗ್ರೆಸ್-ಜೆಡಿಎಸ್‌ ಮಾತಿಗೆ ಮರುಳಾಗದೇ, ಅಭಿವೃದ್ಧಿ ಪರ ಇರುವ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಬಿವೈ ವಿಜಯೇಂದ್ರ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್‌ ಕೊಟ್ಯಾನ್‌, ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ಶಾಸಕರಾದ ಬೆಳ್ಳಿ ಪ್ರಕಾಶ್‌, ಎಂ.ಪಿ.ಕುಮಾರಸ್ವಾಮಿ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಆನಂದ್‌, ಕೆ.ಪಿ ವೆಂಕಟೇಶ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Whats_app_banner