ಕನ್ನಡ ಸುದ್ದಿ  /  Karnataka  /  Family Politics Who Will Get Jds Ticket In Hassan This Is What Hd Revanna Said About Family Politics Karnataka Election 2023

Family politics: ಹಾಸನದಲ್ಲಿ ಟಿಕೆಟ್‌ ಯಾರಿಗೆ?; ವಂಶ ರಾಜಕಾರಣದ ಬಗ್ಗೆ ಮಾತನಾಡಿದ ಎಚ್‌.ಡಿ.ರೇವಣ್ಣ ಹೇಳಿದ್ದು ಇಷ್ಟು

Family politics: ರೇವಣ್ಣ ರಾಜಕೀಯ ಏನಿದ್ದರೂ ಈಗ ಹಾಸನ ಜಿಲ್ಲೆಗೆ ಸೀಮಿತವಾಗಿದೆ. ರೇವಣ್ಣ ಪುತ್ರರಾದ ಪ್ರಜ್ವಲ್‌ ಹಾಸನ ಕ್ಷೇತ್ರದ ಸಂಸದ. ಸೂರಜ್‌ ಎಂಎಲ್‌ಸಿ. ಈಗ ಹಾಸನದಿಂದ ಪತ್ನಿ ಭವಾನಿಯನ್ನು ಕಣಕ್ಕೆ ಇಳಿಸುವ ಇರಾದೆ ರೇವಣ್ಣ ಅವರದ್ದು. ಕುಮಾರಸ್ವಾಮಿ ಲೆಕ್ಕಾಚಾರವೇ ಬೇರೆ ಇದ್ದಂತಿದೆ. ಹೀಗಿರುವಾಗಲೇ ಫ್ಯಾಮಿಲಿ ಪಾಲಿಟಿಕ್ಸ್‌ ಬಗ್ಗೆ ಮಾತನಾಡಿದ್ದಾರೆ ರೇವಣ್ಣ.

ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ (@hd_revanna)

ವಿಧಾನಸಭೆ ಚುನಾವಣೆ ಘೋಷಣೆ ಆಗಿರುವ ಹೊತ್ತಿನಲ್ಲಿ ಫ್ಯಾಮಿಲಿ ಪಾಲಿಟಿಕ್ಸ್‌ ಬಗ್ಗೆ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಮಾತನಾಡಿದ್ದಾರೆ. ಹಾಸನ ಮತ್ತು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿರುವುದಾಗಿ ರೇವಣ್ಣ ಹೇಳಿಕೊಂಡಿದ್ದಾರೆ.

ಕುಮಾರಸ್ವಾಮಿಯವರಿಗೆ ಇರುವಷ್ಟು ವರ್ಚಸ್ಸು ರೇವಣ್ಣ ಅವರಿಗೆ ಇಲ್ಲ. ಅವರು ತಮ್ಮ ವಿಚಿತ್ರ ನಂಬಿಕೆ, ವಿಶ್ವಾಸ ಮತ್ತು ನಡವಳಿಕೆಗಳೊಂದಿಗೆ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ರೇವಣ್ಣ ರಾಜಕೀಯ ಏನಿದ್ದರೂ ಈಗ ಹಾಸನ ಜಿಲ್ಲೆಗೆ ಸೀಮಿತವಾಗಿದೆ. ರೇವಣ್ಣ ಪುತ್ರರಾದ ಪ್ರಜ್ವಲ್‌ ಹಾಸನ ಕ್ಷೇತ್ರದ ಸಂಸದರಾಗಿದ್ದರೆ, ಸೂರಜ್‌ ವಿಧಾನಪರಿಷತ್‌ ಸದಸ್ಯ. ಈಗ ಹಾಸನದಿಂದ ಪತ್ನಿ ಭವಾನಿಯನ್ನು ಕಣಕ್ಕೆ ಇಳಿಸಲು ರೇವಣ್ಣ ಇಚ್ಛಿಸಿದರೆ, ಕುಮಾರಸ್ವಾಮಿಯವರ ಲೆಕ್ಕಾಚಾರವೇ ಬೇರೆ ಇದ್ದಂತಿದೆ. ಈ ಮೂಲಕ ಹಾಸನ ಕ್ಷೇತ್ರಕ್ಕೆ ಸಂಬಂಧಿಸಿ ಈಗ ಕುಟುಂಬದೊಳಗೆ ಭಿನ್ನಮತ ಏರ್ಪಟ್ಟಿದೆ.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಹೋದರ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಕುಟುಂಬದ ನಡುವಿನ ಭಿನ್ನಮತ ಬಹಿರಂಗವಾಗಿರುವಾಗಲೇ ಡೆಕ್ಕನ್‌ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಫ್ಯಾಮಿಲಿ ಪಾಲಿಟಿಕ್ಸ್‌ ವಿಚಾರವಾಗಿ ಮಾತನಾಡಿದ್ದಾರೆ.

ನಮ್ಮದು ಒಂದು ಸಣ್ಣ ಪ್ರಾದೇಶಿಕ ಪಕ್ಷವಷ್ಟೆ. ನಮ್ಮಲ್ಲಿರುವ ಸಂಪನ್ಮೂಲವೂ ಸೀಮಿತ. ಜನಸೇವೆಗಾಗಿ ಪಕ್ಷವನ್ನು ಬೆಳೆಸಲು ಪ್ರಯತ್ನಿಸುತ್ತೇವೆ. ನಮ್ಮ ಕುಟುಂಬದಲ್ಲಿ ಯಾರೂ ನಾಮ ನಿರ್ದೇಶಿತ ಸದಸ್ಯರಲ್ಲ. ನಾವು ಹಿಂಬಾಗಿಲ ರಾಜಕಾರಣ ಮಾಡುತ್ತಿಲ್ಲ. ಚುನಾವಣೆಯಲ್ಲಿ ಗೆದ್ದು ಜನರಿಂದಲೇ ಆಯ್ಕೆಯಾಗಿದ್ದೇವೆ. ನಮ್ಮ ಸ್ವಂತ ಅರ್ಹತೆಯಿಂದಲೇ ರಾಜಕೀಯ ಪ್ರವೇಶ ಮಾಡಿರುವಂಥದ್ದು. ಫ್ಯಾಮಿಲಿ ಪಾಲಿಟಿಕ್ಸ್‌ ಅನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರೊಮೋಟ್‌ ಮಾಡ್ತಾ ಇವೆ. ಅವುಗಳ ನಾಯಕರು ವಂಶ ರಾಜಕಾರಣ ಬಿಡುತ್ತೇವೆ ಎಂದು ಘೋಷಿಸಲಿ, ನಾವು ಕೂಡ ಘೋಷಿಸುತ್ತೇವೆ. ಇನ್ನೂ ಹೇಳಬೇಕು ಎಂದರೆ ಕುಟುಂಬ ಅಥವಾ ವಂಶ ರಾಜಕಾರಣವನ್ನು ನಿಷೇಧಿಸುವ ಕಾನೂನು ಜಾರಿಗೊಳಿಸಲಿ. ನಾವೂ ಅದನ್ನು ಪಾಲಿಸುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.

ಭವಾನಿ ರೇವಣ್ಣ ಅವರಿಗೆ ಹಾಸನ ಟಿಕೆಟ್‌ ನೀಡಬೇಕು ಎಂಬ ವಿಚಾರವನ್ನು ಪಕ್ಷದ ವೇದಿಕೆಯಲ್ಲೇ ನಾವು ಚರ್ಚಿಸುತ್ತೇವೆ. ಕ್ಷೇತ್ರದಲ್ಲಿರುವ ಪಕ್ಷದ ಕಾರ್ಯಕರ್ತರ ಜತೆಗೆ ಸಮಾಲೋಚನೆ ನಡೆಸಿ ಒಂದು ತೀರ್ಮಾನಕ್ಕೂ ಬರುವವರಿದ್ದೇವೆ. ಕನ್‌ಫ್ಯೂಶನ್‌ ಏನೂ ಇಲ್ಲ. ನಮ್ಮ ಟಾರ್ಗೆಟ್‌ 123 ಸ್ಥಾನಗಳು. ಅಷ್ಟು ಸ್ಥಾನಗಳಲ್ಲಿ ಗೆದ್ದು ಜೆಡಿಎಸ್‌ ಸರ್ಕಾರ ರಚನೆ ಮಾಡುತ್ತೆ.

ಕರ್ನಾಟಕದ ಜನರಿಗೆ ಕುಮಾರಸ್ವಾಮಿ ಅವರ ಆಡಳಿತ ಏನೆಂಬ ಅರಿವು ಇದೆ. ಕುಮಾರಸ್ವಾಮಿ ಎರಡು ಸಲ ಮುಖ್ಯಮಂತ್ರಿ ಆದವರು. ಈ ಸಲ ರಾಜ್ಯದ ಜನತೆ ಜೆಡಿಎಸ್‌ಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ನಮ್ಮಲ್ಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ನಾವು ಈ ಸಲ ಸಮಾನ ಅಂತರ ಕಾಪಾಡಿಕೊಳ್ಳುತ್ತೇವೆ. ಒಂದೊಮ್ಮೆ ಬಹುಮತ ಬರದೇ ಇದ್ದರೆ, ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುತ್ತೇವೆ.

ಇನ್ನು ಹೊಳೆನರಸೀಪುರದ ಬಗ್ಗೆ ಹೇಳುವುದಾದರೆ ತಂದೆ ದೇವೇಗೌಡರ ಕ್ಷೇತ್ರ ಇದು. ನಾನು ಇಲ್ಲಿ 5 ಸಲ ಗೆಲುವು ಕಂಡಿದ್ದೇನೆ. ಒಮ್ಮೆ ಸೋಲು ಅನುಭವಿಸಿದ್ದೇನೆ. ಕ್ಷೇತ್ರದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸ ಮುಂದುವರಿದಿದೆ. ಹೊಳೆನರಸೀಪುರ ಪಟ್ಟಣ ಈಗ ಶಿಕ್ಷಣ ಕಾಶಿಯಾಗಿ ರೂಪುಗೊಂಡಿದೆ. ಇಷ್ಟಾಗ್ಯೂ ಜನಾದೇಶ ನೀಡುವ ಕೆಲಸ ಮತದಾರರದ್ದು. ಇನ್ನು ಅವರ ಇಚ್ಛೆ ಏನಿದೆಯೋ ಅದು ಎಂದು ರೇವಣ್ಣ ಹೇಳಿಕೊಂಡಿದ್ದಾರೆ.

IPL_Entry_Point