2025ರಲ್ಲೂ ಮುಂದುವರೆಯುತ್ತಾ ಪಂಚ ಗ್ಯಾರಂಟಿಗಳು; ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಯುವನಿಧಿ ಯೋಜನೆಗಳ ಭವಿಷ್ಯ ಏನಾಗಬಹುದು
Guarantee Schemes: ಕರ್ನಾಟಕದಲ್ಲಿ ಒಂದೂವರೆ ವರ್ಷದ ಹಿಂದೆ ಘೋಷಣೆಯಾದಂತೆಯೇ ಜಾರಿಗೊಂಡು ಜನರ ಉಪಯೋಗಕ್ಕೂ ಬರುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು 2025ರಲ್ಲೂ ಮುಂದುವರೆಯುತ್ತವಾ, ನಿಯಮದಲ್ಲಿ ಬದಲಾಗಿ ಅಗತ್ಯ ಇರುವವರಿಗೆ ಸೌಲಭ್ಯ ಒದಗಿಸಲಾಗುತ್ತದೆಯೇ ಎನ್ನುವ ಚರ್ಚೆಗಳು ನಡೆದಿವೆ.
ಒಂದೂವರೆ ವರ್ಷದ ಹಿಂದೆ ವಿಧಾನಸಭೆ ಚುನಾವಣೆ. ವಿರೋಧ ಪಕ್ಷದ ಸ್ಥಾನದಲ್ಲಿ ಕಾಂಗ್ರೆಸ್ ಹೇಗಾದರೂ ಮಾಡಿ ಅಧಿಕಾರ ಹಿಡಿದೇ ತೀರಬೇಕು. ಬಿಜೆಪಿಯನ್ನು ಸೋಲಿಸಬೇಕು ಎನ್ನುವ ಪಣ ತೊಟ್ಟಿತ್ತು. ಚುನಾವಣೆ ಎದುರಿಸಲು ಅಣಿಯಾದ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನು ಒಂದರಂತೆ ಒಂದು ಘೋಷಿಸುತ್ತಾ ಹೋಯಿತು. ಮೊದಲು ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ ಹಾಗೂ ಯುವನಿಧಿ ಯೋಜನೆಗಳು ಘೋಷಣೆಯಾದವು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಲಿದೆ ಎನ್ನುವುದು ಕಾಂಗ್ರೆಸ್ ನೀಡಿದ್ದ ವಿಶ್ವಾಸವಾಗಿತ್ತು. ಬಿಜೆಪಿ ಮೇಲಿನ ಕಮಿಷನ್ ಆರೋಪ, ನಾಯಕತ್ವದ ಕಿತ್ತಾಟದ ನಡುವೆ ಜನರಿಗೆ ಗ್ಯಾರಂಟಿ ಯೋಜನೆಗಳು ನಮ್ಮ ಪರವಾಗಿ ಎನ್ನುವ ವಿಶ್ವಾಸ ಮೂಡಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬಿಟ್ಟಿತು. ಬಂದ ಎರಡು ತಿಂಗಳೊಳಗೆ ಮೂರು ಯೋಜನೆಗಳು ಜಾರಿಯಾದವು. ಆರು ತಿಂಗಳ ನಂತರ ಪಂಚ ಗ್ಯಾರಂಟಿಯೂ ಅನುಷ್ಠಾನಗೊಂಡವು. ಈ ಯೋಜನೆಗಳು 2025ರಲ್ಲೂ ಮುಂದುವರೆಯುತ್ತವಾ ಎನ್ನುವ ಪ್ರಶ್ನೆ ಜನರಲ್ಲಿ ಇದ್ದೇ ಇದೆ.
ಐದು ಯೋಜನೆಗಳಿಗೆ ಸುಮಾರು 58 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ವ್ಯಯಿಸುತ್ತಿದೆ. ಮೊದಲ ವರ್ಷ ಯೋಜನೆಗೆ ಹಣವನ್ನು ಮೀಸಲಿಡಲಾಗಿತ್ತು. ಎರಡನೇ ವರ್ಷದ ಆಯವ್ಯಯದಲ್ಲೂ ಸಿಎಂ ಸಿದ್ದರಾಮಯ್ಯ ಹಣ ತೆಗೆದಿಟ್ಟಿದ್ದರು. ಮೂರನೇ ವರ್ಷವೂ ಬಜೆಟ್ ಮೂಲಕವೇ ಗ್ಯಾರಂಟಿ ಯೋಜನೆಗಳ ಹಣ ನೀಡಲೇಬೇಕು. ಇದನ್ನು ಸಿದ್ದರಾಮಯ್ಯ ಹೇಗೆ ಒದಗಿಸುತ್ತಾರೆ, ಬಜೆಟ್‌ನಲ್ಲಿ ಮೀಸಲಿಡುವ ಮೊತ್ತ ಎಷ್ಟಿರಬಹುದು ಎನ್ನುವುದರ ಮೇಲೆ ಯೋಜನೆಗಳ ಭವಿಷ್ಯ ನಿರ್ಧಾರವಾಗಬಹುದು.
ಸಚಿವರು, ಶಾಸಕರ ಹೇಳಿಕೆ ಗೊಂದಲ
ಈಗಾಗಲೇ ಸಿಎಂ, ಡಿಸಿಎಂ ಆದಿಯಾಗಿ ಪ್ರತಿಯೊಬ್ಬರೂ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದಾರೆ. ಇಂತಹ ಅಭಿಪ್ರಾಯಗಳ ನಡುವೆಯೇ ಕಾಂಗ್ರೆಸ್‌ನ ಚುನಾಯಿತ ಪ್ರತಿನಿಧಿಗಳು ಗ್ಯಾರಂಟಿ ಯೋಜನೆಗಳ ಕೆಲವೊಮ್ಮೆ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ನೀಡಿರುವ ಹೇಳಿಕೆಗಳು ಜನರಲ್ಲಿ ಗೊಂದಲ ಮೂಡಿಸಿವೆ.
ಕಳೆದ ಲೋಕಸಭೆ ಚುನಾವಣೆ ವೇಳೆ ನಮಗೆ ಮತ ನೀಡದೇ ಇದ್ದರೆ ಗ್ಯಾರಂಟಿ ಯೋಜನೆಗಳು ನಿಲ್ಲಬಹುದು ಎನ್ನುವ ಹೇಳಿಕೆಯನ್ನು ಶಾಸಕರು ನೀಡಿದ್ದರು. ಚುನಾವಣೆ ಬಳಿಕವೂ ಯೋಜನೆಗಳಿಗೆ ನೀತಿ ನಿಯಮಗಳನ್ನು ಪರಿಷ್ಕರಣೆ ಮಾಡಬೇಕಿದೆ ಎನ್ನುವ ಅಭಿಪ್ರಾಯವೂ ಕೇಳಿ ಬಂದಿತ್ತು.
ಯೋಜನೆಗಳನ್ನು ಬಳಸಿಕೊಳ್ಳಲೂ ಪಡಿತರ ಕಾರ್ಡ್ ಕಡ್ಡಾಯವಿದೆ. ಒಂದು ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗೆ ಬದಲಿಸುವ ಕೆಲಸವೂ ಆಯಿತು. ಆದಾಯ ತೆರಿಗೆ ಪಾವತಿಸುವವರ ಅಂಶ ಆಧರಿಸಿ ಕಾರ್ಡ್ ಬದಲು ಮಾಡಲಾಗಿದೆ ಎನ್ನುವ ಸ್ಪಷ್ಟನೆಯನ್ನು ಸರ್ಕಾರ ನೀಡಿತ್ತು. ಇದಕ್ಕೆ ಬಲವಾದ ವಿರೋಧ ವ್ಯಕ್ತವಾದ ನಂತರ ಹಿಂದಿನಂತೆ ಕಾರ್ಡ್‌ಗಳನ್ನು ಬಿಪಿಎಲ್‌ಗೆ ಬದಲಾಯಿಸಲಾಯಿತು.
ಯಾವ ಯೋಜನೆ ಹೇಗಿದೆ
- ಶಕ್ತಿ ಯೋಜನೆಯಂತೂ ಸಮರ್ಪಕ ಬಳಕೆಯಲ್ಲಿದೆ. ಸಾರಿಗೆ ಸಂಸ್ಥೆಗಳು ನಷ್ಟ ಅನುಭವಿಸುತ್ತಿರುವ ನಡುವೆಯೂ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ. ಎಲ್ಲಾ ಮಹಿಳೆಯರು ಎನ್ನುವ ಬದಲು ಸೀಮಿತ ವೇತನ ಇರುವವರು, ಉದ್ಯೋಗದಲ್ಲಿರುವವರಲ್ಲಿ ಕಡಿಮೆ ವೇತನ ಇರುವವರು, ವಿದ್ಯಾರ್ಥಿಗಳು, ಹಿರಿಯರಿಗೆ ಉಚಿತವಾಗಿ ನೀಡಬೇಕು ಎನ್ನುವ ಸಲಹೆಗಳಿವೆ.
- ಗೃಹಜ್ಯೋತಿ ಯೋಜನೆಯೂ ಕೂಡ ಬಹುತೇಕ ಒಂದೂವರೆ ವರ್ಷದಿಂದ ಬಳಕೆಯಲ್ಲಿದೆ. ವಿದ್ಯುತ್ ವಿತರಣಾ ಕಂಪೆನಿಗಳು ನಷ್ಟದ ನಡುವೆಯೇ ಸೀಮಿತ ಆದಾಯ, ಸರ್ಕಾರದ ನೆರವಿನೊಂದಿಗೆ ಗೃಹಜ್ಯೋತಿ ಸೌಲಭ್ಯ ನೀಡುತ್ತಿವೆ. ಇಲ್ಲಿಯೂ ಬಳಕೆಗೆ ಮಿತಿಯಿದ್ದು, ಈ ಪ್ರಮಾಣದಲ್ಲಿ ಕಡಿಮೆ ಮಾಡುವ ಪ್ರಯತ್ನಗಳೂ ಆಗಬಹುದು.
- ಬಹುಜನರಿಗೆ ತಲುಪುತ್ತಿರುವ ಗೃಹಲಕ್ಷ್ಮಿ ಯೋಜನೆಯ ಹಣ ಸರಿಯಾಗಿ ಖಾತೆಗೆ ವರ್ಗವಾಗುತ್ತಿಲ್ಲ. ಈಗಾಗಲೇ ಎರಡು ತಿಂಗಳಿಗೊಮ್ಮೆ ಹಣ ಖಾತೆಗೆ ಜಮೆ ಆಗುತ್ತಿರುವ ಮಾಹಿತಿಯಿದೆ. ಕೆಲವರಿಗೆ ಬಂದಿಲ್ಲ ಎನ್ನುವ ದೂರುಗಳಿವೆ. ಎರಡು ತಿಂಗಳ ಹಿಂದೆ ಗೊಂದಲವಾದಾಗ ಸರ್ಕಾರವೂ ಸ್ಪಷ್ಟನೆ ನೀಡಿತ್ತು. ಈಗಲೂ ಅದೇ ಆಗಿರುವ ದೂರು ಬಂದಿವೆ. ಇದರಲ್ಲೂ ಕೆಲವು ಮಿತಿಗಳನ್ನು ಹೇರಿ ಅಗತ್ಯ ಇರುವವರಿಗೆ ಗೃಹಲಕ್ಷ್ಮಿ ನೆರವು ನೀಡುವ ಚರ್ಚೆಗಳು ನಡೆದಿವೆ.
- ಅನ್ನ ಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಅಕ್ಕಿ ಹಾಗೂ ರಾಜ್ಯ ಸರ್ಕಾರ ನೀಡುವ ಮಾಸಿಕ 175 ರೂ. ಪಾವತಿಯಾಗುತ್ತಿದೆ. ಇದರಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಹಾಗೂ ನೆರವು ಸಿಗುತ್ತಿದೆ. ಇಲ್ಲಿಯೂ ಅರ್ಹ ಹಾಗೂ ಅನರ್ಹ ಬಿಪಿಎಲ್ ಕಾರ್ಡ್‌ನ ಗೊಂದಲ ಬಗೆಹರಿಸಿ ಯೋಜನೆ ಬಲಪಡಿಸು ಸಲಹೆಯೂ ಇದೆ.
- ಕಾಲೇಜು ವಿದ್ಯಾರ್ಥಿಗಳು ಡಿಪ್ಲೊಮಾ ಮುಗಿಸಿದವರಿಗೆ ಮಾಸಿಕ ಮೂರು ಸಾವಿರ ಹಾಗೂ ಒಂದೂವರೆ ಸಾವಿರ ರೂ. ನೆರವನ್ನು ನೀಡಲಾಗುತ್ತಿದೆ. ಈಗಾಗಲೇ ಒಂದು ವರ್ಷದ ಪ್ರಕ್ರಿಯೆ ಮುಗಿದು ಎರಡನೇ ವರ್ಷದ ನಿರುದ್ಯೋಗಿಗಳ ನೋಂದಣಿ ಪ್ರಕ್ರಿಯೆ ಮುಗಿದಿದೆ. ಇಲ್ಲಿಯು ನಿರುದ್ಯೋಗಿಗಳಿಗ ಇರುವ ಮಾನದಂಡದಲ್ಲಿ ಬದಲಾವಣೆ ಮಾಡಿ ವರ್ಷದೊಳಗೆ ಉದ್ಯೋಗ ದೊರೆಯುವಂತೆ ಮಾಡಬೇಕೆನ್ನುವ ಅಭಿಪ್ರಾಯವೂ ಉಂಟು.
ಸಿದ್ದರಾಮಯ್ಯ ಆರ್ಥಿಕ ಸಮತೋಲನ ಪ್ರಯತ್ನ
ಸಿಎಂ ಸಿದ್ದರಾಮಯ್ಯ ಕನಿಷ್ಠ ಎರಡು ತಿಂಗಳಿಗೊಮ್ಮೆಯಾದರೂ ಆದಾಯ ತರುವ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿ ಗುರಿ ನಿಗದಿಪಡಿಸುತ್ತಲೇ ಇದ್ದಾರೆ. ಅಬಕಾರಿ ಇಲಾಖೆ ಮೂಲಕ ಆದಾಯ ಸಂಗ್ರಹದ ಒತ್ತಡ ಏರಿದೆ. ಗಣಿಗಾರಿಕೆ ಮೂಲಕ ಆದಾಯ ಹೆಚ್ಚಿಸುವ ಮಾರ್ಗೋಪಾಯದ ಹುಡುಕಾಟ ನಡೆದಿದೆ. ಇವೆಲ್ಲವೂ ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳು ಏರುಪೇರಾಗದಂತೆ ನೋಡಿಕೊಳ್ಳುವ ಕ್ರಮಗಳು ಎನ್ನಿಸಿವೆ
ಸಚಿವರು, ಅಧಿಕಾರಿಗಳು ಹಾಗೂ ಆರ್ಥಿಕ ತಜ್ಞರ ಹಂತದಲ್ಲೂ ಗ್ಯಾರಂಟಿ ಯೋಜನೆಗಳು ಉಳ್ಳವರು ಬಿಟ್ಟು ಅಗತ್ಯ ಇರುವವರಿಗೆ ಖಚಿತವಾಗಿ ಒದಗಿಸಿದರೆ ಸೂಕ್ತ ಎನ್ನುವ ಅಭಿಪ್ರಾಯಗಳಿವೆ. ಇದಕ್ಕೆ ಇನ್ನೂ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್ ಗಾಗಿ ಎರಡು ತಿಂಗಳು ಕಾಯಬೇಕು.
ಸಮ್ಮೇಳನದಲ್ಲಿ ಗ್ಯಾರಂಟಿ ಮೆಚ್ಚಿದ ಗೊರುಚ
ಮಂಡ್ಯದಲ್ಲಿ ಮುಕ್ತಾಯವಾದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಸಮ್ಮೇಳಾನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಕುರಿತ ಮೆಚ್ಚುಗೆಯ ಮಾತುಗಳನ್ನಾಡಿದರು.ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಇದನ್ನು ಉಲ್ಲೇಖಿಸಿದರು.
ಕರ್ನಾಟಕ ಸರ್ಕಾರವು 2023 ರಲ್ಲಿ ಘೋಷಿಸಿರುವ ಭರವಸೆ ಕಾರ್ಯಕ್ರಮಗಳು ದುಡಿಯುವ ವರ್ಗಕ್ಕೆ ಅಷ್ಟೋ ಇಷ್ಟೋ ಬದುಕನ್ನು ನೀಡಿವೆ. ಭರವಸೆ ಕಾರ್ಯಕ್ರಮ ಅಪ್ರತ್ಯಕ್ಷವಾಗಿ ದುಡಿಮಿಗೆ ಗೌರವ ಕಾರ್ಯಕ್ರಮ ಕ್ರಮವಾಗಿದೆ. ಇದು ಆರ್ಥಿಕ ಸಮೃದ್ದತೆಯನ್ನು ಜನರಿಗೆ ಹಂಚುವ ಕಾರ್ಯಯೋಜನೆಯೂ ಆಗಿದೆ. ಅಭಿವೃದ್ದಿಯಲ್ಲಿ ಉತ್ಪಾದನೆ ಎಷ್ಟು ಮುಖ್ಯವೋ ಹಂಚಿಕೆಯೂ ಅಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮುಖ್ಯ. ಆರ್ಥಿಕ ಸಮೃದ್ದತೆಯು ಜನರ ಬದುಕಿನ ಸಮೃದ್ದತೆಯಾಗಿ ಪರಿವರ್ತನೆಯಾಗದಿದ್ದರೆ ಅಂತಹ ಆರ್ಥಿಕ ಸಮೃದ್ದತೆಗೆ ಯಾವ ಅರ್ಥವೂ ಇರುವುದಿಲ್ಲ. ಭರವಸೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿನ ಕುಂದು ಕೊರತೆಗಳನ್ನು ಸರಿಪಡಿಸಿಕೊಂಡು ಅವುಗಳ ಯಶಸ್ಸಿಗೆ ನಾವೆಲ್ಲರೂ ಪ್ರಯತ್ನಿಸಬೇಕು ಎಂಬುದು ನನ್ನ ಪ್ರಾಮಾಣಿಕ ಅಭಿಪ್ರಾಯವಾಗಿದೆ. ಏಕೆಂದರೆ, ನಾನೂ ಕೂಡ ಇಂತಹ ಬಡತನದ, ಹಸಿವಿನ ನೆಲೆಯಿಂದಲೇ ಬಂದವನು. ಬಡತನ ಎಂದರೇನು ಎಂಬುದು ನನಗೆ ಗೊತ್ತಿದೆ ಎಂದು ಗೊರುಚ ವ್ಯಾಖ್ಯಾನಿಸಿದ್ದರು.