SM Krishna: ಅಜಾತಶತ್ರುವಿನ ಅಂತಿಮಯಾತ್ರೆ; ಬೆಂಗಳೂರು ಮೈಸೂರು ಮಾರ್ಗದುದ್ದಕ್ಕೂ ಕೃಷ್ಣರಿಗೆ ಅಭಿಮಾನದ ನಮನ ಸಲ್ಲಿಸಿದ ಜನತೆ
ಕನ್ನಡ ಸುದ್ದಿ  /  ಕರ್ನಾಟಕ  /  Sm Krishna: ಅಜಾತಶತ್ರುವಿನ ಅಂತಿಮಯಾತ್ರೆ; ಬೆಂಗಳೂರು ಮೈಸೂರು ಮಾರ್ಗದುದ್ದಕ್ಕೂ ಕೃಷ್ಣರಿಗೆ ಅಭಿಮಾನದ ನಮನ ಸಲ್ಲಿಸಿದ ಜನತೆ

SM Krishna: ಅಜಾತಶತ್ರುವಿನ ಅಂತಿಮಯಾತ್ರೆ; ಬೆಂಗಳೂರು ಮೈಸೂರು ಮಾರ್ಗದುದ್ದಕ್ಕೂ ಕೃಷ್ಣರಿಗೆ ಅಭಿಮಾನದ ನಮನ ಸಲ್ಲಿಸಿದ ಜನತೆ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ತರುವ ಮಾರ್ಗದುದ್ದಕ್ಕೂ ಅವರ ಅಭಿಮಾನಿಗಳು ಆತ್ಮೀಯವಾಗಿ ಗೌರವ ಸಲ್ಲಿಸಿದರು.

ಬೆಂಗಳೂರಿನಿಂದ ಮದ್ದೂರಿಗೆ ಎಸ್‌ಎಂ ಕೃಷ್ಣ ಅವರ ಅಂತಿಮ ಯಾತ್ರೆ ನಡೆಯುವಾಗ ಎಲ್ಲೆಡೆ ಗೌರವ ಸಲ್ಲಿಸಲಾಯಿತು.
ಬೆಂಗಳೂರಿನಿಂದ ಮದ್ದೂರಿಗೆ ಎಸ್‌ಎಂ ಕೃಷ್ಣ ಅವರ ಅಂತಿಮ ಯಾತ್ರೆ ನಡೆಯುವಾಗ ಎಲ್ಲೆಡೆ ಗೌರವ ಸಲ್ಲಿಸಲಾಯಿತು.

ಬೆಂಗಳೂರು: ಅಗಲಿದ ಅಜಾತಶತ್ರು ನಾಯಕರಿಗೆ ಬೆಂಗಳೂರಿನಿಂದ ಮದ್ದೂರಿನವರೆಗೆ ಆಶ್ರುತರ್ಪಣದೊಂದಿಗೆ ಅಭಿಮಾನಿಗಳು ಗೌರವ ಸಲ್ಲಿಸಿದರು. ಮಾರ್ಗದುದ್ದಕ್ಕೂ ಕಾದು ನಿಂತುಕೊಂಡು ಅಂತಿಮ ವಿದಾಯವನ್ನು ಹೇಳಿದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಮೈಸೂರು ರಸ್ತೆಯ ಮೂಲಕ ಕೆಂಗೇರಿ, ಬಿಡದಿ, ರಾಮನಗರ, ಚನ್ನಪಟ್ಟಣದ ಮೂಲಕ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಗೆ ತರಲಾಯಿತು. ಹುಟ್ಟೂರಿಗೆ ಬರುವ ಮಾರ್ಗದಲ್ಲಿ ಯುವಕರು,ಹಿರಿಯರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವರ್ಗದವರೂ ಗೌರವ ಸಲ್ಲಿಸಿದರು. ವಿಶೇಷವಾಗಿ ಅಲಂಕರಿಸಿದ್ದ ಪುಷ್ಪರಥದಲ್ಲಿ ಇರಿಸಿ ಎಸ್‌.ಎಂ.ಕೃಷ್ಣ ಅವರ ಪಾರ್ಥಿವ ಶರೀರ ಆಗಮಿಸಿದಾಗ ಎಲ್ಲೆಡೆ ಗೌರವ ಸಲ್ಲಿಸಿದ್ದು ಕಂಡು ಬಂದಿತು. ಎರಡೂ ಬದಿಯಲ್ಲೂ ನಿಂತುಕೊಂಡು ಗೌರವಯುತವಾಗಿ ಅಂತಿಮ ದರ್ಶನ ಮಾಡಲು ವ್ಯವಸ್ಥೆಯನ್ನೂ ಮಾಡಿಕೊಡಲಾಗಿತ್ತು.

ಅಂತಿಮ ದರ್ಶನಕ್ಕೆ ದಂಡು

ಸೋಮವಾರ ಮಧ್ಯರಾತ್ರಿ ಮೃತಪಟ್ಟಿದ್ದ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಮಂಗಳವಾರ ರಾತ್ರಿವರೆಗೂ ಗಣ್ಯರು, ಜನತೆ ಆಗಮಿಸಿ ಅಂತಿಮ ದರ್ಶನ ಪಡೆದರು. ಬುಧವಾರ ಬೆಳಿಗ್ಗೆಯೂ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ವ್ಯವಸ್ಥೆ ಮಾಡಿಕೊಂಡಿದ್ದರಿಂದ ಮೆರವಣಿಗೆ ಮೂಲಕವೇ ಅವರ ಪಾರ್ಥಿವ ಶರೀರವನ್ನು ತರಲು ನಿರ್ಧರಿಸಲಾಗಿತ್ತು.

ಬೆಂಗಳೂರಿನ ಸದಾಶಿವನಗರದಲ್ಲಿರುವ ಶ್ರೀ ಎಸ್.ಎಂ. ಕೃಷ್ಣ ಅವರ ನಿವಾಸದಲ್ಲಿ ಇ‌ಂದು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನೆರವೇರಿಸಲಾಯಿತು. ನಂತರ ಕೃಷ್ಣ ಅವರ ಪಾರ್ಥಿವ ಶರೀರವನ್ನು ಮದ್ದೂರಿನ ಸೋಮನಹಳ್ಳಿ ಕಡೆ ಕೊಂಡೊಯ್ಯಲಾಯಿತು.

ಅದರಂತೆ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಮೆರವಣಿಗೆ ನಡೆಯಿತು. ವಿಶೇಷವಾಗಿ ಅಲಂಕರಿಸಿದ್ದ ಪುಷ್ಪವಾಹನದಲ್ಲಿ ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಹೊರಟಿತು. ಮಾರ್ಗದುದ್ದಕ್ಕೂ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದ ನೂರಾರು ಜನ ಅಲ್ಲಲ್ಲಿಯೇ ನಿಂತುಕೊಂಡು ಗೌರವ ಸಲ್ಲಿಸಿದರು.

ರಾಮನಗರ,ಚನ್ನಪಟ್ಟಣ

ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನವು ಮದ್ದೂರಿಗೆ ತೆರಳುವ ವೇಳೆ‌ ರಾಮನಗರದಲ್ಲಿ ಅಪಾರ ಸಂಖ್ಯೆಯ ಜನರು ಅಂತಿಮ ದರ್ಶನ ಪಡೆದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ಕಂಡು ಬಂದಿತು. ಅಲ್ಲಿಂದ ಎಸ್.ಎಂ. ಕೃಷ್ಣ ಅವರ ಪಾರ್ಥಿವ ಶರೀರ ಹೊತ್ತ ವಾಹನವು ಮದ್ದೂರಿಗೆ ತೆರಳುವ ವೇಳೆ‌ ಚನ್ನಪಟ್ಟಣದಲ್ಲಿ ಅಪಾರ ಸಂಖ್ಯೆಯ ಜನರು ಅವರ ಅಂತಿಮ ದರ್ಶನ ಪಡೆದರು.

ಚನ್ನಪಟ್ಟಣ, ರಾಮನಗರದಲ್ಲಂತೂ ರಸ್ತೆಯಲ್ಲಿ ಜಾಗ ಸಿಗದೇ ಕೆಲವರು ಅಂಗಡಿ, ಕಟ್ಟಡಗಳ ಮೇಲೆ ಏರಿ ದರ್ಶನ ಪಡೆದು ಅಭಿಮಾನವನ್ನು ಮೆರೆದಿದ್ದು ಕಂಡು ಬಂದಿತು.

ಹುಟ್ಟೂರಲ್ಲೂ ದರ್ಶನ

ಮಂಡ್ಯ ಜಿಲ್ಲೆ, ಮದ್ದೂರು ಭಾಗದ ಜನತೆ, ಹುಟ್ಟೂರಿನವರು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರದ ಅಂತಿಮದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗಿತ್ತು.ಮಂಡ್ಯ ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದವರು ಸೋಮನಹಳ್ಳಿಗೆ ಆಗಮಿಸಿ ಗೌರವ ಸಲ್ಲಿಸಿದರು. ಹುಟ್ಟೂರಿನವರು ಮನೆ ಮಗನಿಗೆ ಆಶ್ರುತರ್ಣದ ಮೂಲಕ ಗೌರವ ವಿದಾಯ ಹೇಳಿದರು.

ಮದ್ದೂರು ಪಟ್ಟಣದಲ್ಲೂ ಎಸ್‌.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಗೌರವಾರ್ಥವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು.

Whats_app_banner