Raichur: ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಅಗ್ನಿ ದುರಂತ; ಎಲ್ಲೆಡೆ ಪಸರಿಸಿದ ಬೆಂಕಿಯಿಂದ ಅಪಾರ ಹಾನಿ
ಕನ್ನಡ ಸುದ್ದಿ  /  ಕರ್ನಾಟಕ  /  Raichur: ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಅಗ್ನಿ ದುರಂತ; ಎಲ್ಲೆಡೆ ಪಸರಿಸಿದ ಬೆಂಕಿಯಿಂದ ಅಪಾರ ಹಾನಿ

Raichur: ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಅಗ್ನಿ ದುರಂತ; ಎಲ್ಲೆಡೆ ಪಸರಿಸಿದ ಬೆಂಕಿಯಿಂದ ಅಪಾರ ಹಾನಿ

ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ನಾಲ್ಕನೇ ಘಟಕದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದೆ. ಪರಿವರ್ತಕ ಸುಟ್ಟು ಕರಕಲಾಗಿದ್ದು, ಉಳಿದ ಉಪಕರಣಗಳಿಗೂ ಹಾನಿಯಾಗಿದೆ.

ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಅಗ್ನಿ ದುರಂತ
ರಾಯಚೂರು ಉಷ್ಣವಿದ್ಯುತ್ ಸ್ಥಾವರದಲ್ಲಿ ಅಗ್ನಿ ದುರಂತ (ಸಾಂಕೇತಿಕ ಚಿತ್ರ - Canva)

ರಾಯಚೂರು: ಶಕ್ತಿನಗರದಲ್ಲಿರುವ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್‌ಟಿಪಿಎಸ್) ನಾಲ್ಕನೇ ಘಟಕದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದೆ. ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಹಾನಿ ಸಂಭವಿಸಿದೆ. ವಿದ್ಯುತ್ ಪರಿವರ್ತಕದಲ್ಲಿ ಹೊತ್ತಿಕೊಂಡ ಬೆಂಕಿ ನೋಡನೋಡುತ್ತಿದ್ದಂತೆಯೇ ಎಲ್ಲೆಡೆ ಹರಡುತ್ತಾ ಹೋಗಿದೆ. ಘಟಕದಲ್ಲಿದ್ದ ಕಾರ್ಮಿಕರು ಬೆಂಕಿ ನಂದಿಸಲು ಎಲ್ಲ ರೀತಿ ಪ್ರಯತ್ನ ಮಾಡಿದರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ. ಪರಿವರ್ತಕ ಸುಟ್ಟು ಕರಕಲಾಗಿದ್ದು, ಉಳಿದ ಉಪಕರಣಗಳಿಗೂ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬೆಂಕಿ ತಗುಲುತ್ತಿದ್ದಂತೆಯೇ ವಿದ್ಯುತ್ ಕೇಂದ್ರದ ಅಧಿಕಾರಿಗಳು ಅಗ್ನಿಶಾಮಕ ದಳದ ಗಮನಕ್ಕೆ ತಂದು ಬೆಂಕಿ ಆರಿಸುವ ಕಾರ್ಯ ಮಾಡಿದ್ದಾರೆ. ಆರ್‌ಟಿಪಿಎಸ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಬೆಂಕಿಗೆ ಕಾರಣ ತಿಳಿದುಬಂದಿಲ್ಲ. ಅಲ್ಲದೆ, ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿ ಅವಘಡದಿಂದ ಎಷ್ಟು ನಷ್ಟವಾಗಿದೆ ಎನ್ನುವುದು ಇದುವರೆಗೂ ಸ್ಪಷ್ಟವಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಇನ್ನೂ ಪರಿಶೀಲನೆ ಮಾಡುತ್ತಿದ್ದಾರೆ. ಸದ್ಯಕ್ಕೆ 210 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಘಟಕವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ.

ಆರ್‌ಟಿಪಿಎಸ್‌ನಲ್ಲಿ ಒಟ್ಟು ಎಂಟು ಘಟಕಗಳಿವೆ. ಆ ಘಟಕಗಳ ಪೈಕಿ ಒಂದು ಇದುವರೆಗೆ ಕಾರ್ಯನಿರ್ವಹಿಸುತ್ತಿಲ್ಲ. ಮೂರು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಮಾಡುತ್ತಿಲ್ಲ. ಅಲ್ಲಿ ನಿರ್ವಹಣೆಯ ಕೆಲಸ ನಡೆದಿದೆ. ಯರಮರಸ್ ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಎರಡನೇ ಘಟಕವೂ ಉತ್ಪಾದನೆ ನಿಲ್ಲಿಸಿದ್ದು, ಕಲ್ಲಿದ್ದಲು ಆಧಾರಿತ ವಿದ್ಯುತ್ ಕೇಂದ್ರಗಳ ಉತ್ಪಾದನೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.

ಬೆಂಕಿ ಅವಘಡ ಕುರಿತು ಪ್ರತಿಕ್ರಿಯೆ ಪಡೆಯಲು ಆರ್‌ಟಿಪಿಎಸ್‌ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಎಷ್ಟರ ಮಟ್ಟಿಗೆ ಹಾನಿಯಾಗಿದೆ ಎಂಬ ಸಂಪೂರ್ಣ ವಿವರ ಇದುವರೆಗೆ ಲಭ್ಯವಾಗಿಲ್ಲ. ಆದರೆ, ದುರಂತ ಸಂಭವಿಸಿ ಹಾನಿಯಾಗಿದೆ.

Suma Gaonkar

eMail
Whats_app_banner