ಬಂದರು ನಿರ್ಮಾಣದಿಂದ ಮೀನುಗಾರರು ನೆಲೆ ಕಳೆದುಕೊಳ್ಳುವ ಆತಂಕ: ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಸಂಘಟನೆಗಳು
ಕನ್ನಡ ಸುದ್ದಿ  /  ಕರ್ನಾಟಕ  /  ಬಂದರು ನಿರ್ಮಾಣದಿಂದ ಮೀನುಗಾರರು ನೆಲೆ ಕಳೆದುಕೊಳ್ಳುವ ಆತಂಕ: ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಸಂಘಟನೆಗಳು

ಬಂದರು ನಿರ್ಮಾಣದಿಂದ ಮೀನುಗಾರರು ನೆಲೆ ಕಳೆದುಕೊಳ್ಳುವ ಆತಂಕ: ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಸಂಘಟನೆಗಳು

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಪರಿಸರ ಸೂಕ್ಷ್ಮ ಕಡಲ ತೀರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಹಾಗೂ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಜನವಿರೋಧಿಯಾಗಿದೆ ಎಂದು ಆರೋಪಿಸಿರುವ ಮೀನುಗಾರ ಸಂಘಟನೆಗಳು, ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದೆ (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಸಂಘಟನೆಗಳು
ಸಿಎಂ ಮಧ್ಯಪ್ರವೇಶಕ್ಕೆ ಒತ್ತಾಯಿಸಿರುವ ಸಂಘಟನೆಗಳು (siddaramaiahofficial/instagram)

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಪರಿಸರ ಸೂಕ್ಷ್ಮ ಕಡಲ ತೀರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ನಿರ್ಮಾಣ ಯೋಜನೆಯನ್ನು ಹಾಗೂ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಜನವಿರೋಧಿಯಾಗಿದೆ ಎಂದು ಆರೋಪಿಸಿರುವ ಮೀನುಗಾರ ಸಂಘಟನೆಗಳು, ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದೆ. ಬಂದರು ವಿರೋಧಿ ಹೋರಾಟಗಾರರ ಮೇಲೆ ಪೊಲೀಸರು ಈವರೆಗೆ ದಾಖಲಿಸಿರುವ ಎಲ್ಲ ಪ್ರಕರಣಗಳನ್ನು ಕೈಬಿಡಲು ಸಿಎಂ ಸಿದ್ಧರಾಮಯ್ಯ ಬಳಿ ಸಂಘಟನೆ ಮನವಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಸ್ಥಾಪನೆ ಮತ್ತು ಚತುಷ್ಪಥ ರಸ್ತೆ ಹಾಗೂ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ರಾಷ್ಟ್ರೀಯ ಮೀನುಗಾರರ ಸಂಘಟನೆಯ ನಿಯೋಗದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿ, ಮನವಿಪತ್ರ ಸಲ್ಲಿಸಿದ್ದಾರೆ. ರಾಷ್ಟ್ರೀಯ ಮೀನುಗಾರರ ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ ನಿಯೋಗದ ನೇತೃತ್ವ ವಹಿಸಿದ್ದರು.

ಆಮೆಗಳು ಮರಿ ಇಡುವ ಕಾಸರಕೋಡ ಟೊಂಕ

ಕಾಸರಕೋಡ ಟೊಂಕ ಆಮೆಗಳ ತವರು ಎಂದೇ ಪ್ರಸಿದ್ಧ. ಕಡಲಾಮೆಗಳು ಇಲ್ಲಿನ ಸಮುದ್ರ ತೀರಕ್ಕೆ ಬಂದು ಮೊಟ್ಟೆ ಇಡುತ್ತವೆ. ಕಳೆದಷ ವರ್ಷ ಡಿಸೆಂಬರ್ ನಲ್ಲಿ ಕಡಲಾಮೆಯೊಂದು ತೀರಕ್ಕೆ ಬಂದು 124 ಮೊಟ್ಟೆ ಇಟ್ಟಿತ್ತು. ಅರಣ್ಯ ಇಲಾಖೆ ಸಹಯೋಗದಲ್ಲಿ ಗೂಡು ನಿರ್ಮಾಣ ಮಾಡಿ, ಸ್ಥಳೀಯರು ಆಮೆಮೊಟ್ಟೆಗಳನ್ನು ಸಂರಕ್ಷಿಸಿದ್ದರು. ಅಳಿವಿನಂಚಿನಲ್ಲಿರುವ ಆಮೆಗಳು ಟೊಂಕದಲ್ಲಿ ಆಶ್ರಯ ಪಡೆದು, ಮೊಟ್ಟೆ ಇಡುತ್ತವೆ ಹೀಗಾಗಿ ಈ ಪರಿಸರವನ್ನು ರಕ್ಷಿಸುವುದೂ ಅಗತ್ಯವಾಗಿದೆ ಎಂದು ಪರಿಸರವರ ಹೊನ್ನಾವರ ಫೌಂಡೇಶನ್ ಅಭಿಪ್ರಾಯಪಟ್ಟಿದೆ.

ಪ್ರತಿಭಟನೆಗಳಿಗೆ ಲೆಕ್ಕವಿಲ್ಲ

ಪರಿಸರಸೂಕ್ಷ್ಮ ಪ್ರದೇಶವಾದ ಕಾಸರಕೋಡ ಟೊಂಕ ಪರಿಸರ ಕೇವಲ ಕಡಲಾಮೆಗಳಿಗಷ್ಟೇ ಅಲ್ಲ, ಮೀನುಗಾರರಿಗೂ ಅತಿಪ್ರಿಯವಾದ ಜಾಗ. ಇದನ್ನು ತೆರವುಗೊಳಿಸಿದರೆ ಹೋಗುವುದು ಎಲ್ಲಿಗೆ ಎಂಬ ಪ್ರಶ್ನೆಯನ್ನು ಅವರಿಡುತ್ತಾರೆ.ಇಲ್ಲಿ ಸರ್ವೆ ಮಾಡಿದಾಗಲೇ ಭಾರಿ ಪ್ರತಿಭಟನೆ ನಡೆದಿತ್ತು. ಆ ಸಂದರ್ಭ ಹಲವರ ಬಂಧನವೂ ಆಗಿತ್ತು. ಮೀನುಗಾರಿಕೆ ಬಂದ್ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಆದರೂ ಬಂದರು ನಿರ್ಮಾಣಕ್ಕೆ ಅಧಿಕಾರಿಗಳು ಅಷ್ಟೊಂದು ಹಠ ಹಿಡಿದಿರುವುದು ಯಾಕೆ ಎಂಬ ಅಚ್ಚರಿ ಮೀನುಗಾರರದ್ದು.

ಹಠ ಹಿಡಿದು ಸರ್ವೆ ನಡೆಸಿದ್ದ ಅಧಿಕಾರಿಗಳು

ಒಂದೆಡೆ ಮೀನುಗಾರರ ಪ್ರಬಲ ವಿರೋಧವಿದ್ದರೆ, ಇನ್ನೊಂದೆಡೆ ಅಧಿಕಾರಿಗಳು ಹಠ ಹಿಡಿದು ಸರ್ವೆ ಕಾರ್ಯ ನಡೆಸಿದ್ದರು. ಈ ಸಂದರ್ಭ ಪ್ರತಿಭಟನೆಯೂ ನಡೆದಿತ್ತು. ವಿದ್ಯಾರ್ಥಿಗಳೂ ಪ್ರತಿಭಟನಾ ಕಣಕ್ಕಿಳಿದಿದ್ದರು. ಶಾಲೆ, ಕಾಲೇಜು ವಿದ್ಯಾರ್ಥಿಗಳೂ ಸಾಥ್ ನೀಡಿದ್ದರು. ಮೀನುಗಾರಿಕೆ ನಡೆಸುವವರ ಮತ್ತು ಪೊಲೀಸರ ಮಧ್ಯೆ ತಳ್ಳಾಟ ನೂಕಾಟ ಉಂಟಾಗಿತ್ತು.

ಸಿಎಂಗೆ ನೀಡಿದ ಮನವಿಯಲ್ಲಿ ಏನಿದೆ?

ಮೀನುಗಾರರ ಜೀವನೋಪಾಯಕ್ಕೆ ಮೀನುಗಾರಿಕೆಗೆ ಮತ್ತು ಸ್ಥಳೀಯ ಪರಿಸರಕ್ಕೆ ಮಾರಕವಾಗಿರುವ ಹಾಗೂ ಸಾವಿರಾರು ಮೀನುಗಾರರು ತಮ್ಮ ವಸತಿ ನೆಲೆಗಳನ್ನು ಕಳೆದುಕೊಳ್ಳುವ ಆತಂಕ ಇರುವ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕದ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರು ಯೋಜನೆಯನ್ನು ಮತ್ತು ಈ ಯೋಜನೆಗಾಗಿ ಇಲ್ಲಿನ ಪರಿಸರ ಸೂಕ್ಷ್ಮ ಕಡಲ ತೀರದ 5 ಕಿ.ಮೀ. ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪತ ರಸ್ತೆ ಮತ್ತು ರೈಲು ಮಾರ್ಗದ ನಿರ್ಮಾಣ ಯೋಜನೆಯನ್ನು ಕೈ ಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈಗಾಗಲೇ ಮೀನುಗಾರರು ಹಲವು ತ್ಯಾಗ ಮಾಡಿದ್ದಾರೆ

ಉತ್ತರ ಕನ್ನಡ ಜಿಲ್ಲೆ ವಿಭಿನ್ನ ಪರಿಸರ ಹಾಗೂ ಅಪಾರ ನೈಸರ್ಗಿಕ ಸಂಪನ್ಮೂಲ ಮತ್ತು ಸುಂದರ ಕಡಲ ತೀರಗಳನ್ನು ಹೊಂದಿರುವ ಜಿಲ್ಲೆ. ಆದರೆ ರಾಜ್ಯ ಮತ್ತು ರಾಷ್ಟಕ್ಕಾಗಿ ಸಮರ್ಪಿತವಾದ ಬೃಹತ್ ಯೋಜನೆಗಳಿಂದ ಜಿಲ್ಲೆಯ ಜನತೆ ಈಗಾಗಲೇ ಬಹಳ ತ್ಯಾಗವನ್ನು ಮಾಡಿದ್ದಾರೆ. ಬೃಹತ್ ಜಲ ವಿದ್ಯುತ ಯೋಜನೆಗಳು, ಅಣು ವಿದ್ಯುತ್, ಸೀ ಬರ್ಡ ನೌಕಾ ನೆಲೆ, ರೈಲು/ ಹೆದ್ದಾರಿ/ ಬಂದರುಗಳ ನಿರ್ಮಾಣದಿಂದ ಬಹಳಷ್ಟು ಜನರು ನಿರ್ಗತಿಕರಾಗಿದ್ದು ಅವರಿಗೆ ಈವರೆಗೆ ಸಮರ್ಪಕ ಪುನರರ್ವಸತಿ ಮತ್ತು ಉದ್ಯೋಗವಕಾಶಗಳು ದೊರಕಿಸಿಕೊಡುವಲ್ಲಿ ಹಿಂದಿನ ಸರ್ಕಾರಗಳು ವಿಫಲವಾಗಿವೆ. ಸಾವಿರಾರು ಜನರು ತಮ್ಮ ವಸತಿ ನೆಲೆಗಳನ್ನು ಕಳೆದುಕೊಂಡಿರುತ್ತಾರೆ. ಕರಾವಳಿಯಲ್ಲಿ ಸೀ ಬರ್ಡ ನೌಕಾನೆಲೆ, ಕಾರವಾರ ಮತ್ತು ಬೇಲೆಕೇಶ ವಾಣಿಜ್ಯ ಬಂದರುಗಳ ನಿರ್ಮಾಣದಿಂದ ಜಿಲ್ಲೆಯ ಮೀನುಗಾರಿಕೆ ಮತ್ತು ಪರಿಸರದ ಮೇಲೆ ಈಗಾಗಲೇ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದೆ ಎಂದು ಸಂಘಟನೆಗಳು ಆಪಾದಿಸಿವೆ.

ಉತ್ತರ ಕನ್ನಡ ಜಿಲ್ಲೆಯ ಕಡಲ ತೀರಗಳಲ್ಲಿ ಮೀನುಗಾರಿಕೆಯೊಂದಿಗೆ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ಪ್ರಯತ್ನಗಳು ನಡೆಯುತ್ತಿದ್ದವು ಕರಾವಳಿಯ ಧಾರಣಾಶಕ್ತಿಯನ್ನು ಮೀರಿ ಪರಿಸರ, ಜೀವ ವೈವಿಧ್ಯತೆ ಮತ್ತು ಮೀನುಗಾರಿಕೆಗೆ ಆತಂಕವಾಗುವಂತೆ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವ ಪರಿಸರ ವಿರೋಧಿ ಅವೈಜ್ಞಾನಿಕ ತಪ್ಪು ನೀತಿಯಿಂದ ಕರಾವಳಿಯ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ ಎಂದು ಮೀನುಗಾರಿಕಾ ಸಂಘಟನೆ ಆಪಾದಿಸಿದೆ.

ಸ್ಥಳೀಯರ ತೀವ್ರ ಆಕ್ಷೇಪ ಹಾಗೂ ವಿರೋಧದ ನಡುವೆಯು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸರಕೋಡ ಟೋಂಕದ ಕಡಲಾಮೆಗಳು ಮೊಟ್ಟೆ ಇಡುವ ಇಲ್ಲಿನ ಪರಿಸರ ಸೂಕ್ಷ್ಮ ಸುಂದರ ಕಡಲ ತೀರದಲ್ಲಿ ಸರಕಾರವು ಆರಂಭಿಸಲು ಉದ್ದೇಶಿಸಿದ್ದ ಖಾಸಗಿ ಮೂಲದ ವಾಣಿಜ್ಯ ಬಂದರು ಯೋಜನೆಯ ವಿರುದ್ದ ಮತ್ತು ಈ ಯೋಜನೆಗಾಗಿ ಅಲ್ಲಿನ 5 ಕಿ.ಮೀ ಉದ್ದದ ಮೀನುಗಾರರ ವಸತಿ ನೆಲೆಯಲ್ಲಿ ಚತುರ್ಷತ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣ ಮಾಡುವುದರ ವಿರುದ್ಧ ಹಲವು ವರ್ಷಗಳಿಂದ ಈ ಯೋಜನೆಯನ್ನು ಕೈ ಬೀಡುವಂತೆ ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರು ಶಾಂತಿಯುತ ಪ್ರತಿಭಟನೆಯ ಮೂಲಕ ಸರ್ಕಾರದ ಗಮನ ಸೆಳೆದದ್ದನ್ನು ಉಲ್ಲೇಖಿಸಲಾಗಿದೆ.

ಶಿವಕುಮಾರ್, ವೈದ್ಯ ಭರವಸೆ ನೀಡಿದ್ದರು:

ಕಳೆದ ವಿಧಾನಸಭೆಯ ಚುನಾವಣಾ ಪೂರ್ವದಲ್ಲಿ ಇಂದಿನ ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯರು ಮತ್ತು ಈಗೀನ ಉಪ ಮುಖ್ಯ ಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ ಅವರು ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಅಹವಾಲುಗಳನ್ನು ಸ್ವೀಕರಿಸಿದ್ದು ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದರೆ ಮೀನುಗಾರರ ಜೀವನೋಪಾಯಕ್ಕೆ ಹಾಗೂ ಸ್ಥಳೀಯ ಪರಿಸರಕ್ಕೆ ಮಾರಕವಾಗಿರುವ ಈ ಉದ್ದೇಶಿತ ವಾಣಿಜ್ಯ ಬಂದರು ಯೋಜನೆಯನ್ನು ಮತ್ತು ಈ ಯೋಜನೆಗಾಗಿ ಇಲ್ಲಿನ ಕಡಲ ತೀರದ ಮೀನುಗಾರರ ವಸತಿ ನೆಲೆಯಲ್ಲಿ ಚತುಷ್ಪತ ರಸ್ತೆ ನಿರ್ಮಿಸುವ ಉದ್ದೇಶಿತ ಯೋಜನೆಯನ್ನು ಕೈ ಬಿಟ್ಟು ಈ ಭಾಗದ ಮೀನುಗಾರರ ಹಿತ ರಕ್ಷಣೆ ಮಾಡುವದಾಗಿ ಭರವಸೆ ನೀಡಿದ್ದರು.

ಟೊಂಕ ಕಟ್ಟಿ ನಿಂತ ಆಧಿಕಾರಿಗಳು

ಈ ನಡುವೆ ಉದ್ದೇಶಿತ ಖಾಸಗಿ ಬಂದರು ಯೋಜನೆಗಾಗಿ ಸಾಗರ ಮಾಲಾ ಯೋಜನೆಯಡಿ ಚತುಷ್ಪತ ರಸ್ತೆ ನಿರ್ಮಿಸುವ ಸಿದ್ದತೆಗೆ ಕಾಸರಕೋಡ ಟೊಂಕದ ಮೀನುಗಾರರ ವಸತಿ ನೆಲೆಯಲ್ಲಿರುವ ಸುಮಾರು 300 ಕ್ಕೂ ಹೆಚ್ಚು ಬಡ ಮೀನುಗಾರರ ಮನೆಗಳನ್ನು ನೆಲಸಮಗೊಳಿಸುವ ಹುನ್ನಾರ ಖಾಸಗಿ ಕಂಪನಿಯವರೊಂದಿಗೆ ಸೇರಿ ಬಂದರು ಇಲಾಖೆಯು ನಡೆಸುತ್ತಿದ್ದು ಮೀನುಗಾರರ ಹೋರಾಟವನ್ನು ಹತ್ತಿಕ್ಕಲು ಇಲ್ಲಿ ಪೋಲೀಸ್ ಬಲ ಪ್ರಯೋಗಿಸಲಾಗಿದೆ ಎಂದು ಮೀನುಗಾರರು ಆಪಾದಿಸಿದ್ದಾರೆ.

ಮೀನುಗಾರರನ್ನು ಒಕ್ಕಲೆಬ್ಬಿಸಿ ಬಂದರು ಬೇಡ

ಅಭಿವೃದ್ಧಿಯ ನೆಪದಲ್ಲಿ ಜಿಲ್ಲೆಯ ಧಾರಣಾ ಶಕ್ತಿಗೆ ಮೀರಿ ಉತ್ತರ ಕನ್ನಡ ಜಿಲ್ಲೆಯ ಪರಿಸರ ಸೂಕ್ಷ್ಮ ಕಡಲ ತೀರಗಳಲ್ಲಿ ಅಲ್ಲಿನ ಸಾವಿರಾರು ಮೀನುಗಾರರನ್ನು ಒಕ್ಕಲೆಬ್ಬಿಸಿ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳನ್ನು ನಿರ್ಮಿಸುವದರಿಂದ ಆಗುವ ದುಷ್ಪರಿಣಾಮಗಳ ಕುರಿತು ಅಗತ್ಯ ಅಧ್ಯಯನ ಮಾಡದೇ ಹಾಗೂ ಪರಿಸರ ಜೀವ ವೈವಿಧ್ಯತೆ ಮೀನುಗಾರಿಕೆ ಮತ್ತು ಮೀನುಗಾರರ ಜೀವನೋಪಾಯ ಹಾಗೂ ಜಿಲ್ಲೆಯ ಕಡಲ ತೀರಗಳ ಉದ್ದಕ್ಕೂ ಇರುವ ಮೀನುಗಾರರ ವಸತಿ ನೆಲೆಗಳಿಗೆ ಮಾರಕವಾಗುವಂತೆ/ಆತಂಕವಾಗುವಂತೆ ಪೋಲಿಸ್ ಬಲದ ವ್ಯಾಪಕ ದುರ್ಬಳಕೆಯಿಂದ ಅಗತ್ಯಕ್ಕಿಂತ ಹೆಚ್ಚು ವಾಣಿಜ್ಯ ಬಂದರುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತಿರುವ ಅವೈಜ್ಞಾನಿಕ ಜನ ವಿರೋಧಿ ನೀತಿಯನ್ನು ಕೂಡಲೇ ಕೈ ಬಿಡಲು ಸರಕಾರ ಸಹನುಭೂತಿಯಿಂದ ಪರಿಶೀಲಿಸಬೇಕಾಗಿ ವಿನಂತಿಸಲಾಗಿದೆ.

Suma Gaonkar

eMail
Whats_app_banner