ಏರೋ ಇಂಡಿಯಾ 2025 ಹಿನ್ನೆಲೆ; ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ
ಕನ್ನಡ ಸುದ್ದಿ  /  ಕರ್ನಾಟಕ  /  ಏರೋ ಇಂಡಿಯಾ 2025 ಹಿನ್ನೆಲೆ; ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

ಏರೋ ಇಂಡಿಯಾ 2025 ಹಿನ್ನೆಲೆ; ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ

ಫೆಬ್ರುವರಿ 10ರಿಂದ 14ರವರೆಗೆ ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ (File)
ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರು ಏರ್‌ಪೋರ್ಟ್ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯ (File)

ಉದ್ಯಾನ ನಗರಿ ಬೆಂಗಳೂರಿನಲ್ಲಿ ಏರೋ ಇಂಡಿಯಾ 2025 ಏರೋಸ್ಪೇಸ್‌ ಪ್ರದರ್ಶನದ ಹಿನ್ನೆಲೆಯಲ್ಲಿ ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗೆ ತಾತ್ಕಾಲಿಕ ಅಡಚಣೆ ಉಂಟಾಗಲಿದೆ ಎಂದು ವರದಿಯಾಗಿದೆ. ಏಷ್ಯಾದ ಪ್ರಮುಖ ಮಿಲಿಟರಿ ವಾಯುಯಾನ ಕಾರ್ಯಕ್ರಮದಿಂದಾಗಿ, 10 ದಿನಗಳ ಅವಧಿಯಲ್ಲಿ ಒಟ್ಟು 47 ಗಂಟೆಗಳ ಕಾಲ ವಿಮಾನ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ.‌

ಏರೋ ಇಂಡಿಯಾದ 15ನೇ ಆವೃತ್ತಿಯು ಫೆಬ್ರುವರಿ 10ರಿಂದ 14ರವರೆಗೆ ಯಲಹಂಕ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಹೀಗಾಗಿ ಪೂರ್ವಾಭ್ಯಾಸ ಮತ್ತು ಬಹುನಿರೀಕ್ಷಿತ ವೈಮಾನಿಕ ಪ್ರದರ್ಶನಗಳು ಸೇರಿದಂತೆ ಮಹತ್ವದ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆಯಬೇಕಿದೆ. ಇದು ವಾಯುಪ್ರದೇಶ ನಿರ್ಬಂಧಗಳಿಗೆ ಪ್ರಾಥಮಿಕ ಕಾರಣವಾಗಿದೆ. ಏಕೆಂದರೆ ಈ ಪ್ರದೇಶವು ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದಲ್ಲೇ ಇದೆ.

ಸುದ್ದಿಸಂಸ್ಥೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಏರ್‌ಮೆನ್‌ ಆಂತರಿಕವಾಗಿ ಹಂಚಿಕೊಳ್ಳಲಾದ ನೋಟಿಸ್ ಪ್ರಕಾರ ಈ ದಿನಗಳಲ್ಲಿ ವಿಮಾನಸಂಚಾರದಲ್ಲಿ ವ್ಯತ್ಯಯಗಳಾಗಬಹುದು.

  • ಫೆಬ್ರುವರಿ 5ರಿಂದ 8: ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5ರವರೆಗೆ
  • ಫೆಬ್ರುವರಿ 9: ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ
  • ಫೆಬ್ರುವರಿ 10: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2ರಿಂದ 4ರವರೆಗೆ
  • ಫೆಬ್ರುವರಿ 11 ಹಾಗೂ 12: ಮಧ್ಯಾಹ್ನ 12ರಿಂದ 3ರವರೆಗೆ
  • ಫೆಬ್ರವರಿ 13 ರಿಂದ 14: ಬೆಳಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮತ್ತು ಮಧ್ಯಾಹ್ನ 2 ರಿಂದ 5ರವರೆಗೆ ಕೆಐಎನಲ್ಲಿ ವಾಯುಪ್ರದೇಶವನ್ನು ಪ್ರವೇಶಿಸಲಾಗುವುದಿಲ್ಲ.

ಪ್ರಯಾಣಿಕರು ಯೋಜಿಸುವುದು ಒಳಿತು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್) ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳಿಗೆ ತಮ್ಮ ವೇಳಾಪಟ್ಟಿಯನ್ನು ಸರಿಹೊಂದಿಸಲು ಸಹಾಯ ಮಾಡಲು ಹೆಚ್ಚಿನ ವಿವರಗಳ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಪ್ರಯಾಣಿಸಲು ಯೋಜಿಸುವ ಪ್ರಯಾಣಿಕರು, ಯಾವುದೇ ರೀತಿಯ ಅನಾನುಕೂಲತೆಯನ್ನು ತಪ್ಪಿಸಲು ತಮ್ಮ ವಿಮಾನ ಪ್ರಯಾಣದ ವಿವರಗಳನ್ನು ಮುಂಚಿತವಾಗಿ ದೃಢೀಕರಿಸುವುದು ಉತ್ತಮ.

ಏರೋ ಇಂಡಿಯಾದ ದ್ವೈವಾರ್ಷಿಕ ಏರೋಸ್ಪೇಸ್ ಪ್ರದರ್ಶನವು, ಭಾರತದ ಮಿಲಿಟರಿ ವಿಮಾನಗಳು, ಹೆಲಿಕಾಪ್ಟರ್‌ಳು, ಉಪಕರಣಗಳು ಮತ್ತು ಹೊಸ ಯುಗದ ಏವಿಯಾನಿಕ್ಸ್ ತಯಾರಿಕೆಯ ಕೇಂದ್ರ ಎಂಬುದನ್ನು ತೋರಿಸುತ್ತದೆ. ಈ ಕಾರ್ಯಕ್ರಮದಲ್ಲಿ ಏರೋಸ್ಪೇಸ್ ವಲಯದ ದೊಡ್ಡ ಶ್ರೇಣಿಯ ಮಿಲಿಟರಿ ವಾಯು ಪ್ರದರ್ಶನಗಳನ್ನು ಒಳಗೊಂಡಿರುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಎರಡು ದಿನ ಸಾರ್ವಜನಿಕರಿಗೆ ಅವಕಾಶ

'ರನ್ ವೇ ಟು ಎ ಬಿಲಿಯನ್ ಆಪರ್ಚುನಿಟೀಸ್' ಎಂಬ ಥೀಮ್‌ನೊಂದಿಗೆ, ಈ ಕಾರ್ಯಕ್ರಮ ನಡೆಯುತ್ತಿದೆ. ಐದು ದಿನಗಳ ಈ ಕಾರ್ಯಕ್ರಮದಲ್ಲಿ 'ರಕ್ಷಣಾ ಸಚಿವರ ಸಮಾವೇಶ, ಸಿಇಒಗಳ ದುಂಡು ಮೇಜಿನ ಸಭೆ ಮತ್ತು ಇಂಡಿಯಾ ಪೆವಿಲಿಯನ್ ಮತ್ತು ಏರೋಸ್ಪೇಸ್ ಕಂಪನಿಗಳ ವ್ಯಾಪಾರ ಮೇಳ ಇರಲಿದೆ. ಫೆಬ್ರವರಿ 13 ಮತ್ತು 14ರಂದು ಪ್ರದರ್ಶನವನ್ನು ವೀಕ್ಷಿಸಲು ಜನರಿಗೆ ಅವಕಾಶ ನೀಡಲು ಸಾರ್ವಜನಿಕ ದಿನಗಳಾಗಿ ನಿಗದಿಪಡಿಸಲಾಗಿದೆ.

Whats_app_banner