ಗ್ರೇಟರ್ ಬೆಂಗಳೂರು ಹಾಗಿರಲಿ, ಬಿಡದಿ ರಾಮನಗರ ಚನ್ನಪಟ್ಟಣ ನಡುವೆ ಅಗತ್ಯಕ್ಕೆ ತಕ್ಕಷ್ಟು ಬಿಎಂಟಿಸಿ ಬಸ್ ಓಡೋದು ಯಾವಾಗ; ಧನಂಜಯ ಕೆಎಸ್ ಬರಹ
ಗ್ರೇಟರ್ ಬೆಂಗಳೂರು ಕಡೆಗೆ ಎಲ್ಲರ ಗಮನ. ಆದರೆ, ಮೂಲಸೌಕರ್ಯ ಅಭಿವೃದ್ಧಿ, ಜನ ಜೀವನ ಸುಗಮಗೊಳಿಸುವ ಕ್ರಮಗಳ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಹೀಗಾಗಿ, ಗ್ರೇಟರ್ ಬೆಂಗಳೂರು ಹಾಗಿರಲಿ, ಬಿಡದಿ ರಾಮನಗರ ಚನ್ನಪಟ್ಟಣ ನಡುವೆ ಅಗತ್ಯಕ್ಕೆ ತಕ್ಕಷ್ಟು ಬಿಎಂಟಿಸಿ ಬಸ್ ಓಡೋದು ಯಾವಾಗ ಎಂದು ಧನಂಜಯ ಕೆಎಸ್ ಆಗ್ರಹಿಸಿದ್ದಾರೆ.

ಸದ್ಯ ಗ್ರೇಟರ್ ಬೆಂಗಳೂರು ವಿಚಾರ ಭಾರಿ ಚರ್ಚೆಗೆ ಒಳಗಾಗಿದೆ. ಆದರೆ ಮೂಲಸೌಕರ್ಯ ಅಭಿವೃದ್ಧಿ, ಜನ ಜೀವನ ಸುಗಮಗೊಳಿಸುವ ಕ್ರಮಗಳ ಬಗ್ಗೆ ಸರ್ಕಾರ ಸರಿಯಾಗಿ ಗಮನಹರಿಸುತ್ತಿಲ್ಲ ಎಂಬ ಕೂಗು ಕೂಡ ಸದಾ ಕೇಳುವಂಥದ್ದೇ. ಸರ್ಕಾರವನ್ನು, ಜನಪ್ರತಿನಿಧಿಗಳ ಗಮನಸೆಳೆಯುವ ಕೆಲಸ ಆಗುತ್ತಲೇ ಇರಬೇಕಾಗುತ್ತದೆ. ಧನಂಜಯ ಕೆಎಸ್ ಅವರು ಕೂಡ ಇಂಥದ್ದೇ ಕೆಲಸವನ್ನು ಮಾಡಿದ್ದು, ಬೆಂಗಳೂರು-ಬಿಡದಿ -ರಾಮನಗರ - ಚನ್ನಪಟ್ಟಣ ನಡುವೆ ಅಗತ್ಯಕ್ಕೆತಕ್ಕಷ್ಟು ಬಿಎಂಟಿಸಿ ಬಸ್ ಓಡೋದು ಯಾವಾಗ ಎಂದು ಪ್ರಶ್ನಿಸುತ್ತಾ, ಈ ಬಗ್ಗೆ ಗಮನಹರಿಸಲು ಆಗ್ರಹಿಸಿದ್ದಾರೆ. ಅವರ ಬರಹ ಇಲ್ಲಿದೆ.
ಬೆಂಗಳೂರು ಬಿಡದಿ ರಾಮನಗರ ಚನ್ನಪಟ್ಟಣ ನಡುವೆ ಅಗತ್ಯಕ್ಕೆತಕ್ಕಷ್ಟು ಬಿಎಂಟಿಸಿ ಬಸ್ ಓಡೋದು ಯಾವಾಗ
#ನಿನ್ನೆ ಮತ್ತು #ಇಂದು
ಸಂಜೆ ಎಂಟೂವರೆಯ ಸಮಯ. ಬಿಡದಿಯಿಂದ ರಾಮನಗರಕ್ಕೆ ಬರುವವನಿದ್ದೆ. ಜಿಟಿಜಿಟಿ ಮಳೆ ಸುರಿಯುತ್ತಿತ್ತು. ಎರಡೂ ಬಸ್ ಶೆಲ್ಟರ್ ನಲ್ಲಿ ಜನ ತುಂಬಿದ್ದರು. ಯಾವುದೇ ವಿದ್ಯುತ್ ದೀಪಗಳು ಉರಿಯುತ್ತಿರಲಿಲ್ಲ. ಅಷ್ಟೇ ಜನ ರಸ್ತೆಯಲ್ಲಿ ಬಸ್ ಗಾಗಿ ಎದುರು ನೋಡುತ್ತಿದ್ದರು. ಅದರಲ್ಲಿ ಮಹಿಳೆಯರು, ಹಿರಿಯ ವಯಸ್ಕರು, ವಿದ್ಯಾರ್ಥಿಗಳು, ಆಗ ತಾನೇ ಕಂಪೆನಿ/ಕೈಗಾರಿಕೆ ಕೆಲಸ ಮುಗಿಸಿಕೊಂಡು ಬಂದ ಉದ್ಯೋಗಿಗಳು ಅಲ್ಲಿದ್ದರು. ಸುಮಾರು ಅರ್ಧ ಗಂಟೆಯ ನಂತರ ಬೆಂಗಳೂರಿನ ಕಡೆಯಿಂದ ಎರಡು ಬಸ್ ಬಂದವು ನೂರು ಮೀಟರ್ ಮುಂಚೆಯೇ ಇಳಿಯಬೇಕಾದ ಜನರನ್ನು ಇಳಿಸಿ ಬಸ್ ನಿಲ್ದಾಣ ಬಂದಾಗ ಮತ್ತಷ್ಟು ವೇಗವಾಗಿ ಮುಂದೆ ಹೋದವು. ಅವು ಕ್ಕಿಕ್ಕಿರಿದು ತುಂಬಿದ್ದು ಕಾಣಿಸಿತು. ಆಟೋದವನು ಒಬ್ಬ ಬಂದು ಒಬ್ಬರಿಗೆ ನೂರು ರೂಪಾಯಿ ಕೇಳಿದ ಯಾರೂ ಹೋಗಲಿಲ್ಲ. ಒಬ್ಬ ವೃದ್ಧರು ಬರುವ ಎಲ್ಲಾ ವಾಹನಗಳಿಗೆ ನಿಲುಗಡೆಗೆ ಕೈ ಆಡಿಸುತ್ತಾ ನಿಂತಿದ್ದರು. ಪ್ರತಿ ನಿಮಿಷಕ್ಕೂ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಲೇ ಸಾಗಿತು. ಬಸ್ ಮಾತ್ರ ಬರುತ್ತಿರಲಿಲ್ಲ. ಸುಮಾರು ಒಂಬತ್ತೂವರೆ ಸಮಯಕ್ಕೆ ನನ್ನ ಪಕ್ಕ ನಿಂತಿದ್ದ ವೃದ್ಧರ ಬಳಿಗೆ ಒಂದು ಆಟೋ ಬಂದು ನಿಂತಿತು. ರಾಮನಗರಕ್ಕೆ ಅಂದ ತಕ್ಷಣ ಅವರು ಹತ್ತಿದರು, ಅವರ ಪಕ್ಕ ಇದ್ದ ನನಗೂ ಆಟೋದಲ್ಲಿ ಸೀಟು ಸಿಕ್ಕಿ, ಮಳೆಯಲ್ಲಿ ರಾಮನಗರ ತಲುಪಿದೆ. ಆಟೋದವ ಮೂವತ್ತು ರೂಪಾಯಿ ಕೇಳಿದ ಖುಷಿಯಿಂದ ಕೊಟ್ಟೆ. ಎರಡು ಬಸ್ ತುಂಬುವಷ್ಟು ಜನ ಅಲ್ಲೇ ಇದ್ದರು. ಯಾವ ಯಾವ ಸ್ಥಳಕ್ಕೊ ಹೋಗಬೇಕಾದವರು ಬಿಡದಿಯ ಬಸ್ ನಿಲ್ದಾಣದಲ್ಲಿ ಅಸಹಾಯಕರಾಗಿ ನಿಂತಿದ್ಜರು. ಮುಖದಲ್ಲಿ ಆತಂಕ, ಬೇಸರ, ಆಯಾಸ ತುಂಬಿದ್ದವು.
ಮೈಸೂರಿಗೆ ನಾನ್‌ಸ್ಟಾಪ್ ಬಸ್ಸುಗಳೇ ಹೆಚ್ಚು
#ಇಂದು
ನಮ್ಮ ಅಮ್ಮನನ್ನು ಬೆಂಗಳೂರಿನಿಂದ ರಾಮನಗರಕ್ಕೆ ಕರೆದುಕೊಂಡು ಬರುತ್ತಿದ್ದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬರಬೇಕಾದರೆ ಒಂದು ಸಂಪರ್ಕ ಬಸ್ ಹಿಡಿದು ಬರಬೇಕು. ಅಲ್ಲಿ ಇದ್ದದ್ದು ಒಂದೇ ಬಸ್, ಅದಕ್ಕೆ ಟಿಕೆಟ್ ಪಡೆದೇ ಹತ್ತಬೇಕಾದ್ದರಿಂದ ವಯಸ್ಸಾದ ಮಹಿಳೆಯರು ಸೇರಿದಂತೆ ಉದ್ದದ ಕ್ಯೂನಲ್ಲಿ ಸುಮಾರು ಮೂವತ್ತು ಜನ ಇದ್ದರು. ಬಸ್ ಆಗಲೇ ತುಂಬಿ ಹೋಗಿತ್ತು. ಇದು ಸಾಧ್ಯವಿಲ್ಲವೆಂದು ಬಿಎಂಟಿಸಿ ಬಸ್ ನಿಲ್ದಾಣಕ್ಕೆ ನಡೆಸಿಕೊಂಡು ಹೋಗಿ ಸ್ಯಾಟಲೈಟ್ ತಲುಪಿದೆವು. ಅಲ್ಲಿ ಬಂದಾಗ ಪರಿಸ್ಥಿತಿ ಹಿತಕರವಾಗಿರಲಿಲ್ಲ. ಅಲ್ಲಿದ್ದ ಅಷ್ಟೂ ಬಸ್ ಗಳು ಮೈಸೂರಿಗೆ ನಾನ್ ಸ್ಟಾಪ್ ಬೋರ್ಡ್ ಹಾಕಿಕೊಂಡು, ಕೂಗುತ್ತಿದ್ದರು. ಬಿಡದಿ, ರಾಮನಗರ, ಚನ್ನಪಟ್ಟಣರವರಿಗೆ ಅವಕಾಶವಿಲ್ಲವೆಂದು ಹೇಳುತ್ತಿದ್ದರು. ಮೂರು ನಾಲ್ಕು ಬಸ್‌ಗಳಿಗೆ ಆಗುವಷ್ಟು ರಾಮನಗರ ಚನ್ನಪಟ್ಟಣಕ್ಕೆ ಹೋಗಬೇಕಾದವರು ಇದ್ದಿದ್ದರಿಂದ ತಾಳ್ಮೆ ಕಳೆದುಕೊಂಡು ಟಿ ಸಿಗಳ ಮೇಲೆ ಗಲಾಟೆ ಪ್ರಾರಂಭಿಸಿದರು. ಟಿ ಸಿ ಜನರ ಸಂಖ್ಯೆಗೆ ಹೆದರಿ ಅಲ್ಲಿಗೆ ಬಂದ ಒಂದು ಬಸ್‌ಗೆ ಹೇಳಿ ಹೋಗಲು ತಿಳಿಸಿದ. ಪ್ರಯಾಣಿಕರು ಒಬ್ಬರಿಗೊಬ್ಬರು ತಳ್ಳಾಡುತ್ತಾ ಬಸ್ ಹತ್ತಿದರು. ಬಸ್ ಒಳಗಡೆ ಸೀಟಿಗಾಗಿ ಆಗಲೇ ಜಗಳಗಳು ಶುರುವಾಗಿದ್ದವು.
ಮೈಸೂರು-ಬೆಂಗಳೂರು ಹೊಸ ರಾಷ್ಟ್ರೀಯ ಹೆದ್ದಾರಿ ಪ್ರಾರಂಭವಾದ ಬಳಿಕ ಸಮಸ್ಯೆ ಹೆಚ್ಚಳ
#ಮೈಸೂರು-ಬೆಂಗಳೂರು ಹೊಸ ರಾಷ್ಟ್ರೀಯ ಹೆದ್ದಾರಿ ಪ್ರಾರಂಭ ಆದಮೇಲೆ ಬಸ್ ಗಳು ಈಗ ಬೈಪಾಸ್‌ನಲ್ಲಿ ಹೋಗುವುದರಿಂದ ಬಿಡದಿ, ರಾಮನಗರ, ಚನ್ನಪಟ್ಟಣ ಮತ್ತು ಮದ್ದೂರಿಗೆ ಹೋಗುವವರಿಗೆ ಮೊದಲು ಸಿಗುತ್ತಿದ್ದ ಬಸ್‌ಗಳು ಈಗ ಸಿಗುತ್ತಿಲ್ಲ. ಅದರಲ್ಲೂ ರಾಮನಗರ ಮತ್ತು ಚನ್ನಪಟ್ಟಣದ ಪ್ರಯಾಣಿಕರಿಗೆ ಸಂಜೆ ಮತ್ತು ಬೆಳಿಗ್ಗೆ ನರಕಯಾತನೆ.
ಈ ಒತ್ತಡದ ಪ್ರಮಾಣದಲ್ಲಿ ಕಂಡಕ್ಟರ್ -ಪ್ರಯಾಣಿಕರು ಮತ್ತು ಪ್ರಯಾಣಿಕ-ಪ್ರಯಾಣಿಕರ ಮಧ್ಯೆ ಬೇರೆ ಬೇರೆ ಕಾರಣಗಳಿಗಾಗಿ ಕೋಪ, ತಾಪ, ಜಗಳಗಳು ನಡೆಯುತ್ತಿವೆ.
ರಾಮನಗರ ಜಿಲ್ಲೆ ಗ್ರೇಟರ್ ಬೆಂಗಳೂರು ಆಗುತ್ತಿರುವ ಸಂದರ್ಭದಲ್ಲಿ ಪ್ರಯಾಣಿಕರು ಸರಾಗವಾಗಿ ಸಂಚರಿಸಲು ಮೊದಲು ಬಸ್ ವ್ಯವಸ್ಥೆ ಅಗತ್ಯವಾಗಿ ಬೇಕಾಗುತ್ತದೆ. ಒತ್ತಡದ ಪ್ರಯಾಣ ಮನಸ್ಸಿನ ಮೇಲೂ, ವರ್ತನೆಯ ಮೇಲೂ ಪ್ರಭಾವ ಬೀರುತ್ತಿರುವುದು ಸ್ಪಷ್ಟವಾಗುತ್ತಿದೆ. ಸಾರಿಗೆ ಸಂಸ್ಥೆ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಲು ಮುಂದಾದರೆ ಬಿಡದಿ, ರಾಮನಗರ ಮತ್ತು ಚನ್ನಪಟ್ಟಣ ಜನರ ಸುಲಲಿತ ಸಂಚಾರಕ್ಕೆ ಸಹಕರಿಸಿದಂತಾಗುತ್ತದೆ. ಜನಪ್ರತಿನಿಧಿಗಳು ಈ ಪ್ರಯಾಸದ ಪ್ರಯಾಣವನ್ನು ಹಗುರ ಮಾಡಲು ಕೂಡಲೇ ಕ್ರಮಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶಿಸಿ, ಸಮಸ್ಯೆ ಬಗೆಹರಿದರೆ ಜನರ ಪ್ರಶಂಸೆಗೆ ಪಾತ್ರರಾಗುವರು. ಬೆಳಿಗ್ಗೆ ಮತ್ತು ಸಂಜೆ ಹೆಚ್ಚು ಬಸ್ ಸಂಚರಿಸುವಂತೆ ಮಾಡುವುದು.
ಬರಹ - ಧನಂಜಯ ಕೆಎಸ್, ಬೆಂಗಳೂರು