ಬೆಂಗಳೂರು ಮಾಲ್‌ಗಳಲ್ಲಿ ಆಹಾರ ಉತ್ಪನ್ನ ಖರೀದಿಸಿದ್ರಾ, ಕಲಬೆರಕೆ ಡೌಟ್ ಬಂದ್ರೆ ಸುಮ್ನಿರಬೇಡಿ, ಅಲ್ಲೇ ಟೆಸ್ಟಿಂಗ್ ಕಿಯೋಸ್ಕ್ ಇದೆ ನೋಡಿ
ಬೆಂಗಳೂರು ಮಾಲ್‌ಗಳಲ್ಲಿ ಆಹಾರ ಉತ್ಪನ್ನ ಖರೀದಿಸಿದ್ರಾ, ಆಗ ಕಲಬೆರಕೆ ಡೌಟ್ ಬಂದ್ರೆ ಸುಮ್ನಿರಬೇಡಿ. ಮಾಲ್‌ನಲ್ಲೆ ಸ್ಥಾಪಿಸಿರುವ ಫುಡ್ ಟೆಸ್ಟಿಂಗ್ ಕಿಯೋಸ್ಕ್‌ಗೆ ಹೋಗಿ ಆಹಾರ ಉತ್ಪನ್ನ ಪರೀಕ್ಷಿಸಿ. ಗುಣಮಟ್ಟ ಖಾತರಿ ಮಾಡಿಕೊಳ್ಳಿ. ಬೆಂಗಳೂರಿನ 10 ಮಾಲ್‌ಗಳಲ್ಲಿ ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್ ಇದ್ದು, ಅವುಗಳ ವಿವರ ಇಲ್ಲಿದೆ.

ಬೆಂಗಳೂರು: ಮಾಲ್‌ಗಳಿಂದ ಅಕ್ಕಿ, ಬೇಳೆ, ಸಕ್ಕರೆ, ಹಾಲು, ಮಾಂಸ ಇತ್ಯಾದಿ ಆಹಾರ ಉತ್ಪನ್ನಗಳನ್ನು ಖರೀದಿಸಿದಾಗ ಅಥವಾ ಸ್ಥಳದಲ್ಲೇ ತಿನ್ನುವ ಖಾದ್ಯಗಳನ್ನು ಖರೀದಿಸಿ ತಿನ್ನುವಾಗ ಅದು ಕಲಬೆರಕೆ ಅಥವಾ ಕಳಪೆ ಅಂತ ಅನ್ನಿಸಿದ್ರೆ ಅಲ್ಲೇ ಇರುವ ಫುಡ್ ಟೆಸ್ಟಿಂಗ್ ಕಿಯೋಸ್ಕ್‌ಗೆ ಬೇಟಿ ಕೊಡಬಹುದು. ಆಹಾರ ಉತ್ಪನ್ನಗಳನ್ನು ಪರೀಕ್ಷಿಸುವಂತೆ ಹೇಳಿ ಖಚಿತಪಡಿಸಬಹುದು. ಕರ್ನಾಟಕ ಸರ್ಕಾರದ ಆಹಾರ ಸುರಕ್ಷತಾ ವಿಭಾಗವು ಶುಕ್ರವಾರ ನಗರದ ಪ್ರಮುಖ ಮಾಲ್‌ಗಳಲ್ಲಿ ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್‌ಗಳನ್ನು ಶುರುಮಾಡಿದೆ. ಬೆಂಗಳೂರಿನ ಪ್ರಮುಖ 10 ಮಾಲ್‌ಗಳಲ್ಲಿ ಈ ಕಿಯೋಸ್ಕ್‌ಗಳು ಕೆಲಸ ಶುರುಮಾಡಿವೆ. ಇನ್ನು ಬೆಂಗಳೂರಿಗರು ತಮ್ಮ ಆಹಾರದ ಗುಣಮಟ್ಟವನ್ನು ಸ್ಥಳದಲ್ಲೆ ಪರೀಕ್ಷಿಸಿ ಖಾತರಿಪಡಿಸಿಕೊಳ್ಳಬಹುದು. ಇದಕ್ಕಾಗಿ ಈ ಕಿಯೋಸ್ಕ್‌ಗಳಲ್ಲಿ ವಿಶೇಷ ಟೆಸ್ಟಿಂಗ್ ಕಿಟ್‌ಗಳನ್ನು ಇಟ್ಟುಕೊಂಡಿದ್ದು, ಬೇಳೆಕಾಳು, ಸಕ್ಕರೆ, ಮೊಟ್ಟೆ ಮುಂತಾದವುಗಳ ಗುಣಮಟ್ಟವನ್ನೂ ಪರಿಶೀಲಿಸಲು ಸಿಬ್ಬಂದಿ ಸಜ್ಜಾಗಿದ್ದಾರೆ.
ಬೆಂಗಳೂರಿನ 10 ಮಾಲ್‌ಗಳಲ್ಲಿ ಆಹಾರ ಗುಣಮಟ್ಟ ಪರಿಶೀಲಿಸುವ ಘಟಕ
ಬೆಂಗಳೂರು ಮಹಾನಗರದ 10 ಪ್ರತಿಷ್ಠಿತ ಮಾಲ್‌ಗಳಲ್ಲಿ ಆಹಾರ ಮಳಿಗೆ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಸಿಗುವ ಆಹಾರ ಮತ್ತು ಆಹಾರ ಉತ್ಪನ್ನಗಳ ಗುಣಮಟ್ಟ ಪರೀಕ್ಷೆ ಇನ್ನು ಸುಲಭ. ಗ್ರಾಹಕರು ಕೂಡಲೆ ಅವುಗಳನ್ನು ಪರೀಕ್ಷಿಸುವುದಕ್ಕೆ ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್‌ಗಳು ನೆರವಾಗಲಿವೆ. ಇದು ಉಚಿತಸೇವೆಯಾಗಿದ್ದು, ಭಾರತದಲ್ಲೇ ಮೊದಲ ಪ್ರಯತ್ನ ಎಂದು ಹೇಳಲಾಗಿದೆ. ಇದಕ್ಕೆ ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು. ಬಳ್ಳಾರಿ ರಸ್ತೆಯ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮಾಲ್‌ನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಮಾಲ್ ಸಹಯೋಗದಲ್ಲಿ ಸ್ಥಾಪಿಸಿರುವ ಎಫ್‌ಎಸ್‌ಎಸ್‌ಐ ಅನುಮೋದಿತ ಪರೀಕ್ಷಾ ಕಿಟ್‌ಗಳಿರುವ ಮಳಿಗೆಯನ್ನು ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.
ರಿಲಯನ್ಸ್, ಮೋರ್‌ಗಳಲ್ಲೂ ಬರಲಿದೆ ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್
ಶೀಘ್ರವೇ ಮೋರ್, ರಿಲಯನ್ಸ್ ಫ್ರೆಶ್ ಸೇರಿ ಪ್ರಮುಖ ಸೂಪರ್ ಮಾರುಕಟ್ಟೆ ಹಾಗೂ ಮೊಟ್ಟೆ, ಮಾಂಸ ಸಿಗುವ ಪ್ರಮುಖ ಮಳಿಗೆಗಳಲ್ಲಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಲಾಗಿದೆ. ಆರಂಭಿಕ ಹಂತದಲ್ಲಿ ಹತ್ತು ಮಾಲ್‌ಗಳಲ್ಲಿ ಈತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್‌ಗಳ ಮೂಲಕ ಪರೀಕ್ಷಾ ವ್ಯವಸ್ಥೆಯ ಸೌಲಭ್ಯ ಕಲ್ಪಿಸಲಾಗಿದೆ. ಸಾರ್ವಜನಿಕರು ತಮಗೆ ಅನುಮಾನ ಇರುವ ಆಹಾರ ಉತ್ಪನ್ನಗಳನ್ನು ಪರೀಕ್ಷೆ ಮಾಡಿಸಬಹುದು. ಇದಕ್ಕೆ ನೆರವಾಗಲು ನುರಿತ ಸಿಬ್ಬಂದಿಯೂ ಇರುತ್ತಾರೆ ಎಂದು ಸಚಿವ ಗುಂಡೂರಾವ್ ವಿವರಿಸಿದರು.
ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್ ಇರುವ ಬೆಂಗಳೂರಿನ 10 ಮಾಲ್‌ಗಳಿವು
ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್ ಇರುವಂತಹ ಬೆಂಗಳೂರಿನ 10 ಮಾಲ್‌ಗಳ ಪಟ್ಟಿಯಲ್ಲಿ, ಫೀನಿಕ್ಸ್ ಮಾಲ್ ಆಫ್ ಏಷ್ಯಾ ಮಾತ್ರವಲ್ಲದೆ ತುಮಕೂರು ರಸ್ತೆಯ ವೈಷ್ಣವಿ ಸಫೈರ್ ಸೆಂಟರ್, ಥಣಿಸಂದ್ರದ ಎಲಿಮೆಂಟ್ಸ್ ಮಾಲ್, ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ಮಾಲ್, ಚರ್ಚ್ ಸ್ಟೇಟ್‌ನ ಶೋಭಾ ಮಾಲ್, ಬೆಳ್ಳಂದೂರಿನ ಸೆಂಟ್ರಲ್ ಮಾಲ್, ಬೆನ್ನಿಗಾನಹಳ್ಳಿಯಲ್ಲಿನ ಗೋಪಾಲನ್ ಸಿಗ್ನಚರ್‌ಮಾಲ್, ಕೋರ ಮಂಗಲದ ನೆಕಸ್ ಫೋರಂ ಮಾಲ್, ಥಣಿಸಂದ್ರದ ಭಾರತೀಯ ವಾಲ್ ಆಫ್ ಬೆಂಗಳೂರು ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್ ಕೂಡ ಇದೆ. ಇಲ್ಲಿ, ಆಹಾರ ಕಲಬೆರಕೆ ಪತ್ತೆ, ಗುಣಮಟ್ಟ ಅರಿಯುವ ಕ್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್ಸ್ ಸೌಲಭ್ಯ ಗ್ರಾಹಕರಿಗೆ ಸಿಗುತ್ತದೆ.
ಏನಿದು ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್, ಅಲ್ಲೇನು ಮಾಡ್ತಾರೆ?, ಕಲಬೆರಕೆಯಾಗಿದ್ರೆ ಮುಂದೇನು
ಬೆಂಗಳೂರಿನ ಪ್ರಮುಖ ಮಾಲ್‌ಗಳಲ್ಲಿ ಸ್ಥಾಪಿಸಿರುವ ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್‌ಗಳಲ್ಲಿ ಏನು ಮಾಡ್ತಾರೆ? ಏನಿದು ತ್ವರಿತ ಆಹಾರ ಪರೀಕ್ಷಾ ಕಿಯೋಸ್ಕ್ ಎಂಬ ಕುತೂಹಲ ಸಹಜ. ಬೇಳೆ ಕಾಳು, ಸಕ್ಕರೆ, ಚಹಾಪುಡಿ, ಮೊಟ್ಟೆ ಮುಂತಾದ ಆಹಾರ ವಸ್ತುಗಳ ಬಗ್ಗೆ ಕಳಪೆ, ಕಲಬೆರಕೆ ಆಗಿದೆ ಎಂಬ ಸಂದೇಹ ಉಂಟಾದರೆ ಅವುಗಳನ್ನು ಈ ಕಿಯೋಸ್ಕ್‌ಗೆ ಗ್ರಾಹಕರು ಕೊಂಡೊಯ್ಯಬಹುದು. ಅಲ್ಲಿ ಒಂದು ಮ್ಯಾಜಿಕ್ ಬಾಕ್ಸ್ ಇದೆ. ಅದರೊಳಗೆ ರಾಪಿಡ್ ಟೆಸ್ಟ್ ಕಿಟ್‌ಗಳಿರುತ್ತವೆ. ಅದನ್ನು ಉಪಯೋಗಿಸಿಕೊಂಡು ಆಹಾರ ಉತ್ಪನ್ನಗಳ ಗುಣಮಟ್ಟ ನಿರ್ಧರಿಸಿ, ಗ್ರಾಹಕರಿಗೆ ಅದರ ಫಲಿತಾಂಶವನ್ನು ತಿಳಿಸುತ್ತಾರೆ. ಮ್ಯಾಜಿಕ್ ಬಾಕ್ಸ್‌ನಲ್ಲಿ ಹಾಲಿನ ನೀರಿನ ಮಟ್ಟ, ಕಲಬೆರಕೆ ವಸ್ತು ಯಾವುದು, ಎಷ್ಟು ಕಲಬೆರಕೆಯಾಗಿದೆ ಎಂಬುದನ್ನು ಗುರುತಿಸುವ ಕಿಟ್‌ಗಳಿವೆ ಎಂದು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ವಿವರಿಸಿದೆ.
ಒಂದೊಮ್ಮೆ ಆಹಾರ ಉತ್ಪನ್ನ ಕಲಬೆರಕೆ ಎಂದು ಕಂಡು ಬಂದರೆ ಕಿಯೋಸ್ಕ್ ಸಿಬ್ಬಂದಿ ಮಾಲ್‌ನ ಪ್ರತಿನಿಧಿ, ಅವುಗಳ ಬಗ್ಗೆ ಎಫ್‌ಎಸ್‌ಎಸ್‌ಎಐಗೆ ಮಾಹಿತಿ ನೀಡುತ್ತಾರೆ. ಹೆಚ್ಚುವರಿ ಮಾದರಿಯನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗೆ ಕಳುಹಿಸುತ್ತಾರೆ. ನಂತರ ಮಳಿಗೆಗಳ ವಿರುದ್ಧ ಕ್ರಮ ಜರುಗಿಸುತ್ತಾರೆ ಎಂದು ಕಿಯಾಸ್ಕ್‌ನ ಪ್ರತಿನಿಧಿ ತಿಳಿಸಿದ್ದಾಗಿ ವರದಿ ವಿವರಿಸಿದೆ.