ಅರಣ್ಯ ಒತ್ತುವರಿ: ವಿಚಾರಣೆಗೆ ಹಾಜರಾಗುವಂತೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್‌ಗೆ ಅರಣ್ಯ ಇಲಾಖೆ ನೋಟಿಸ್
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿಗಳಿಸಲಾಗಿದೆ.ವರದಿ:ಎಚ್.ಮಾರುತಿ.ಬೆಂಗಳೂರು

ಕೋಲಾರ: ಅರಣ್ಯ ಒತ್ತುವರಿ ಪ್ರಕಣದಲ್ಲಿ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಶ್ರೀನಿವಾಸಪುರ ವಲಯದ ಅರಣ್ಯಾಧಿಕಾರಿಗೆ ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಸಹುಡ್ಯ ಗ್ರಾಮದ ಸರ್ವೆ ನಂಬರ್ 1 ಮತ್ತು 2ರ ಅರಣ್ಯ ಜಮೀನಿನಲ್ಲಿ 60.23 ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಜಂಟಿ ಸಮೀಕ್ಷೆ ತಂಡವು ಗುರುತಿಸಿ ವರದಿ ನೀಡಿದ ಬೆನ್ನಲ್ಲೇ ಮುಂದಿನ ಕ್ರಮಕ್ಕಾಗಿ ನೋಟಿಸ್ ನೀಡಿದ್ದಾರೆ. ಫೆಬ್ರವರಿ 20 ರ ಮಧ್ಯಾಹ್ನ 3 ಗಂಟೆಗೆ ಮೇಲ್ಮನವಿ ಪ್ರಾಧಿಕಾರದಿಂದ ಮೇಲ್ಮನವಿಯ ವಿಚಾರಣೆ ನಿಗದಿಪಡಿಸಿದ್ದು, ತಪ್ಪದೇ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ.
ರಿಟ್ ಅರ್ಜಿ ಪ್ರಕರಣದಲ್ಲಿ ಹೈಕೋರ್ಟ್ ಆದೇಶದಂತೆ ಮೇಲ್ಮನವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ಮೋಜಣಿ ಕಾರ್ಯವು ಮುಕ್ತಾಯಗೊಂಡು ವರದಿ ಹಾಗೂ ನಕಾಶೆಯು ಸ್ವೀಕೃತವಾಗಿದೆ. ಈ ಹಿನ್ನೆಲೆಯಲ್ಲಿ ಮೇಲ್ಮನವಿ ವಿಚಾರಣೆ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ. ರಮೇಶ್ ಕುಮಾರ್ ಅವರು ಹೈಕೋರ್ಟ್‌ನಲ್ಲಿ ದಾಖಲಿಸಿದ್ದ 2010 ಮತ್ತು 2012ರ ರಿಟ್ ಅರ್ಜಿ ಸಂಬಂಧ 2013ರಲ್ಲಿ ಹೈಕೋರ್ಟ್ ತೀರ್ಪು ನೀಡಿತ್ತು.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಜಂಟಿ ಸಮೀಕ್ಷೆ ವರದಿಯನ್ನು ಈಗಾಗಲೇ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ. ಸರ್ವೆ ನಂಬರ್ 1ರಲ್ಲಿ 6 ಎಕರೆ ಹಾಗೂ ಸರ್ವೆ ನಂಬರ್ 2ರಲ್ಲಿ 54.23 ಎಕರೆ ಒತ್ತುವರಿ ಆಗಿದೆ ಎನ್ನುವುದು ವರದಿಯಲ್ಲಿ ಉಲ್ಲೇಖವಾಗಿದೆ. ಹೈಕೋರ್ಟ್ ಸೂಚನೆಯಂತೆ ರಮೇಶ್ ಕುಮಾರ್ ಉಪಸ್ಥಿತಿಯಲ್ಲೇ ಜಂಟಿ ಸಮಿಕ್ಷೆ ನಡೆದಿತ್ತು. ಸರ್ವೆಗೆ 9ನೇ ಪ್ರತಿವಾದಿಯಾಗಿದ್ದ ಅವರೂ ಸಹಕಾರ ನೀಡಿದ್ದರು.
ಜ.15 ಹಾಗೂ 16ರಂದು ಸತತ ಎರಡು ದಿನ ಜಿಲ್ಲಾಧಿಕಾರಿ ಎಂ.ಆರ್.ರವಿ, ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸರೀನಾ ಸಿಕ್ಕಲಿಗಾರ್ ಹಾಗೂ ಭೂಮಾಪನ ಇಲಾಖೆ ಉಪನಿರ್ದೇಶಕ (ಡಿಡಿಎಲ್‌ಆರ್) ಸಂಜಯ್ ಅವರನ್ನು ಒಳಗೊಂಡ ತಂಡ ಜಂಟಿ ಸರ್ವೆ ನಡೆಸಿತ್ತು. ವರದಿಗೆ ಮೂವರೂ ಸಹಿ ಹಾಕಿ ಜಂಟಿ ನಕ್ಷೆ ಮತ್ತು ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಕೋಲಾರದ ಹಿಂದಿನ ಡಿಸಿಎಫ್ ವಿ.ಏಡುಕೊಂಡಲು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡವು ಒತ್ತುವರಿ ತೆರವು ವಿಚಾರವಾಗಿ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು.
ರಮೇಶ್‌ಕುಮಾರ್ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಲಯ ಅರಣ್ಯ ವ್ಯಾಪ್ತಿಯ ಜಿಂಗಲಕುಂಟೆ ಪ್ರದೇಶದಲ್ಲಿ ಜಮೀನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. 62 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವುಗೊಳಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿತ್ತು. ಆನಂತರ ಇದು ನ್ಯಾಯಾಲಯದ ಮೆಟ್ಟಿಲೂ ಏರಿತ್ತು. ಹೈಕೋರ್ಟ್ ಕೂಡ ಒತ್ತುವರಿ ತೆರವುಗೊಳಿಸಬೇಕು ಎನ್ನುವ ಸೂಚನೆ ನೀಡಿತ್ತು. ರಮೇಶ್‌ಕುಮಾರ್ ಅವರು ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ.
ಇದರ ನಡುವೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯವು ಒತ್ತುವರಿ ತೆರವು ಮಾಡಲು ವಿಳಂಬ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಶ್ರೀನಿವಾಸಪುರ ವಲಯ ವ್ಯಾಪ್ತಿಯಲ್ಲಿ ಕೆ.ಆರ್.ರಮೇಶ್ ಕುಮಾರ್ ಅವರು ಮಾಡಿಕೊಂಡಿರುವ ಒತ್ತುವರಿಯನ್ನು ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ತೆರವುಗೊಳಿಸಿ ಒಂದು ತಿಂಗಳೊಳಗೆ ಪ್ರಕ್ರಿಯೆ ಮುಗಿಸಬೇಕು ಎಂದು ಸೂಚಿಸಿತ್ತು. ಈ ಹಿಂದೆ ಪರಿಸರ ಇಲಾಖೆಯು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು, ಅಪರ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿತ್ತು. ಅಲ್ಲಿಂದ ಯಾವುದೇ ಪ್ರಕ್ರಿಯೆಗಳು ಆಗದಿರುವ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿಗೆ ಅಂತಿಮ ಪತ್ರ ಬರೆದಿತ್ತುಈ ಪತ್ರ ಬರೆದ ಒಂದು ತಿಂಗಳ ಒಳಗೆ ಒತ್ತುವರಿ ತೆರವು ಮಾಡಬೇಕು. ಆನಂತರ ಕ್ರಮ ಕೈಗೊಂಡ ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಬೇಕು. ಎರಡು ತಿಂಗಳ ಒಳಗೆ ವರದಿ ನಮ್ಮ ಕೈ ಸೇರಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಈ ಕುರಿತು ಅರಣ್ಯ ಇಲಾಖೆಯ ಸಹಾಯಕ ಮಹಾನಿರ್ದೇಶಕ ಸಂಜಯಕುಮಾರ್ ಚೌಹಾಣ್ ಅವರು ಪತ್ರವನ್ನು ರವಾನಿಸಿತ್ತು. ಇದಾದ ಬಳಿಕ ಅರಣ್ಯ ಒತ್ತುವರಿ ಸಮೀಕ್ಷೆ ನಡೆಸಿ ಹೈಕೋರ್ಟ್‌ಗೆ ವರದಿ ಸಲ್ಲಿಸಲಾಗಿತ್ತು. ಈಗ ವಿಚಾರಣೆ ನಿಗದಿಯಾಗಿದೆ.
ವರದಿ: ಎಚ್. ಮಾರುತಿ, ಬೆಂಗಳೂರು

ವಿಭಾಗ